ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಳ್ಳಿಪುರ ತ್ಯಾಜ್ಯದಿಂದ ವಿದ್ಯುತ್

Last Updated 1 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಹೆಚ್ಚು- ಕಡಿಮೆ ಒಂದು ವರ್ಷದಿಂದ ಬಂದ್ ಆಗಿದ್ದ ಮಾವಳ್ಳಿಪುರ ತ್ಯಾಜ್ಯ ಸಂಗ್ರಹ ಘಟಕ ಶೀಘ್ರ ಮತ್ತೆ ಕಾರ್ಯಾರಂಭ ಮಾಡಲಿದೆ. ರಾಮ್ಕಿ ಎನ್ವಿರಾನ್ ಎಂಜಿನಿಯರ್ಸ್‌ ಸಂಸ್ಥೆಯು ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕವನ್ನು ಇಲ್ಲಿ ಆರಂಭಿಸಲಿದೆ.
`ಮಾವಳ್ಳಿಪುರ ಘಟಕದಲ್ಲಿ ಸಂಗ್ರಹವಾದ ತ್ಯಾಜ್ಯದ ಶೇ 90ರಷ್ಟು ಭಾಗವನ್ನು ದಹಿಸಿ, ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.

ಹೊಗೆಯ ಪ್ರಮಾಣವನ್ನು ಸಾಧ್ಯವಾದಷ್ಟು ತಗ್ಗಿಸಲು ಆಧುನಿಕ ತಂತ್ರಜ್ಞಾನವನ್ನು ಈ ಘಟಕದಲ್ಲಿ ಅಳವಡಿಕೆ ಮಾಡಿಕೊಳ್ಳಲಾಗುತ್ತದೆ. ಮಿಕ್ಕ ಶೇ 10ರಷ್ಟು ಕಸವನ್ನು `ಪರಿಸರಸ್ನೇಹಿ ಇಟ್ಟಿಗೆ' ನಿರ್ಮಿಸಲು ಬಳಸಲಾಗುತ್ತದೆ' ಎಂದು ಬಿಬಿಎಂಪಿ ಮೂಲಗಳು  ತಿಳಿಸಿವೆ.

ಪರಿಸರ ರಕ್ಷಣೆಯ ನಿಯಮ ಉಲ್ಲಂಘಿಸಲಾಗಿದೆ ಎಂಬ ಆರೋಪದ ಮೇಲೆ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ವರ್ಷದ ಹಿಂದೆ ಮಾವಳ್ಳಿಪುರ ಘಟಕವನ್ನು ಬಂದ್ ಮಾಡಿಸಿತ್ತು. ಘಟಕದ ನಿರ್ವಹಣೆ ಮಾಡುತ್ತಿದ್ದ ರಾಮ್ಕಿ ಸಂಸ್ಥೆ ಸ್ಥಳೀಯರ ಭಾವನೆಗಳನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂಬ ದೂರು ಸಹ ಕೇಳಿಬಂದಿತ್ತು.

ತ್ಯಾಜ್ಯ ಸಂಗ್ರಹದಿಂದ ನಮ್ಮ ಬದುಕು ಯಾತನೆಯಾಗಿದೆ ಎಂದು ಮಾವಳ್ಳಿಪುರ ನಿವಾಸಿಗಳು ಕಳೆದ 5- 6 ವರ್ಷಗಳಿಂದ ಪ್ರತಿಭಟನೆ ನಡೆಸುತ್ತಲೇ ಇದ್ದರು. ಸೊಳ್ಳೆಗಳ ಕಾಟ ಹೆಚ್ಚಾಗಿದ್ದಲ್ಲದೆ, ಚರ್ಮರೋಗದ ಸಮಸ್ಯೆ ಕೂಡ ಕಾಡುತ್ತಿದೆ ಎನ್ನುವುದು ಪ್ರತಿಭಟನಾಕಾರರ ದೂರಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಕೆಎಸ್‌ಪಿಸಿಬಿ ಘಟಕವನ್ನೇ ಬಂದ್ ಮಾಡಲು ಆದೇಶ ಹೊರಡಿಸಿತ್ತು.

ಹಳೆಯ ತಪ್ಪುಗಳಿಂದ ಪಾಠ ಕಲಿತಿರುವ ಬಿಬಿಎಂಪಿ ಈ ಸಲ ಮಾವಳ್ಳಿಪುರ ಘಟಕಕ್ಕೆ ಮತ್ತೆ ಕಸ ಒಯ್ಯುವ ಮುನ್ನ ಅದನ್ನು ಸಂಸ್ಕರಿಸುವ ಕೆಲಸಕ್ಕೆ ಚಾಲನೆ ನೀಡಿದೆ. ಆಯಾ ದಿನ ಉತ್ಪಾದನೆಯಾಗುವ ಕಸವನ್ನು ಅಂದೇ ಸಂಸ್ಕರಿಸುವ ಮೂಲಕ ಸ್ವಿಜರ್‌ಲೆಂಡ್‌ನ ಮಾದರಿಯನ್ನು ಬಳಸಲಾಗುತ್ತಿದೆ. ನಿತ್ಯ 30 ಮೆಗಾ ವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. 13 ವರ್ಷದ ಸಂಗ್ರಹವನ್ನೂ ಈ ಘಟಕ ಕರಗಿಸಬೇಕಿದೆ.

ಯೋಜನೆ ಅನುಷ್ಠಾನಕ್ಕೆ ಒಟ್ಟಾರೆ ರೂ150 ಕೋಟಿ ಅಗತ್ಯವಿದ್ದು, ರಾಮ್ಕಿ ಸಂಸ್ಥೆ ಬ್ಯಾಂಕ್‌ಗಳಿಗೆ ಮನವಿ ಸಲ್ಲಿಸಿದೆ ಎಂದು ಬಿಬಿಎಂಪಿ ಮೂಲಗಳು ಹೇಳಿವೆ. ಷರತ್ತಿನ ಪ್ರಕಾರ ನಿತ್ಯ ಸಾವಿರ ಟನ್ ಕಸವನ್ನು ಬಿಬಿಎಂಪಿ, ಈ ಘಟಕಕ್ಕೆ ಒದಗಿಸಬೇಕು. ಪ್ರತಿ ಟನ್‌ಗೆ ರೂ 144 ಸಾಗಾಟ ವೆಚ್ಚವನ್ನು ಭರಿಸಲು ಸಹ ಬಿಬಿಎಂಪಿ ಸಮ್ಮತಿಸಿದೆ.

ಪ್ರಸ್ತಾವ ರಾಜ್ಯ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಹಣಕಾಸು ಇಲಾಖೆ ಕೇಳಿದ್ದ ಕೆಲವು ಪ್ರಶ್ನೆಗಳಿಗೆ ಬಿಬಿಎಂಪಿ ಅಧಿಕಾರಿಗಳು ಆಗಲೇ ಸ್ಪಷ್ಟನೆ ನೀಡಿದ್ದಾರೆ. ಆದಷ್ಟು ಬೇಗ ಯೋಜನೆಗೆ ಅನುಮತಿ ಸಿಗುವ ಸಾಧ್ಯತೆ ಇದೆ.

ಮಂಡೂರು ಘಟಕ ಪರಿಶೀಲಿಸಿದ ತಜ್ಞರ ತಂಡ

ಬೆಂಗಳೂರು: ವಿದೇಶದ ಪರಿಸರ ವಿಜ್ಞಾನಿಗಳ ತಂಡವೊಂದು ಇಲ್ಲಿನ ಕಸದ ಸಮಸ್ಯೆ ಬಗ್ಗೆ ಅಧ್ಯಯನ ನಡೆಸಿ ಅಗತ್ಯ ಸಲಹೆ- ಸೂಚನೆಗಳನ್ನು ನೀಡಿ ಅದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸುವುದಕ್ಕಾಗಿ ಬೆಂಗಳೂರಿಗೆ ಮೂರು ದಿನಗಳ ಭೇಟಿ ನೀಡಿದೆ.
ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷ ಸಿ.ಎಂ. ಧನಂಜಯ್ ಈ ತಂಡವನ್ನು ಕರೆ ತಂದಿದ್ದಾರೆ.

ಗ್ರೀನ್ ಎನರ್ಜಿ ಸಲ್ಯುಷನ್ (ಎಲ್‌ಎಲ್‌ಸಿ) ಸಂಸ್ಥೆಯ ನಿರ್ದೇಶಕ ಜ್ಯೂರಿಚ್‌ನ ಪೀಟರ್ ಸ್ಪಿಲ್‌ಮನ್, ಮ್ಯೂನಿಚ್‌ನ ಡಾ. ಆರ್ನ್ಡ್ ಸೇಫರ್ಟ್, ಕೆನಡಾದ ಅನಿತಾ ಸೌಯಿನ್ ಮತ್ತು ಜಕಾರಿಯಾ ನೂರಿ ಅವರು ಗುರುವಾರ ಮಂಡೂರಿನ ತ್ಯಾಜ್ಯ ವಿಲೇವಾರಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ತಂಡ ದುಬೈನಲ್ಲಿ ಇದ್ದ ಇಂತಹುದೇ ಪರಿಸ್ಥಿತಿಗೆ ಮುಕ್ತಿ ಕಾಣಿಸಿದೆ. ಜನವರಿ 2012ರಿಂದ ಜನವರಿ 2013ರ ಒಂದೇ ವರ್ಷದಲ್ಲಿ ದುಬೈನಲ್ಲಿ ಕಸದ ರಾಶಿಯನ್ನು ವೈಜ್ಞಾನಿಕ ವಿಲೇವಾರಿ ಮಾಡಿ ಅದರಿಂದ ವಿದ್ಯುತ್ ಉತ್ಪಾದಿಸಿದ ಸಾಧನೆ ಈ ತಂಡದ್ದಾಗಿದೆ.
ಶುಕ್ರವಾರ ಮಾವಳ್ಳಿಪುರದ ತ್ಯಾಜ್ಯ ವಿಲೇವಾರಿ ಘಟಕಕ್ಕೂ ಭೇಟಿ ನೀಡಲಿರುವ ತಂಡ ಅಲ್ಲಿನ ಸ್ಥಿತಿ-ಗತಿಯನ್ನೂ ಕೂಡ ಅರಿಯಲಿದೆ. ಬಳಿಕ ಸೂಕ್ತ ಸಲಹೆ-ಸೂಚನೆಗಳನ್ನು ನೀಡಲಿದೆ.

ಸದ್ಯ ಮಂಡೂರಿಗೆ ಪ್ರತಿನಿತ್ಯ 160ರಿಂದ 180 ಲಾರಿಗಳಲ್ಲಿ ಕಸ ಬರುತ್ತದೆ. ಎರಡು ಯಂತ್ರಗಳಿಂದ ಕಸವನ್ನು ಬೇರ್ಪಡಿಸಲಾಗುತ್ತಿದ್ದರೂ ಇದಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ. ಒಟ್ಟು 50 ಎಕರೆ ವ್ಯಾಪ್ತಿಯ ಪ್ರದೇಶದಲ್ಲಿ 30 ಎಕರೆ ಕಸ ಹರಡಿಕೊಂಡಿದೆ. ಅಂದಾಜು 18 ಸಾವಿರ ಮೆಟ್ರಿಕ್ ಟನ್‌ನಷ್ಟು ಕಸ ಇಲ್ಲಿದೆ. 2008ರಿಂದ ಮಂಡೂರು ಘಟಕಕ್ಕೆ ತ್ಯಾಜ್ಯ ವಿಲೇವಾರಿಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT