ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನ ಬಂಪರ್ ಫಸಲು ನಿರೀಕ್ಷೆ

Last Updated 15 ಡಿಸೆಂಬರ್ 2012, 9:57 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಮುಂಬರುವ ಋತುವಿನಲ್ಲಿ ಮಾವಿನ ಬಂಪರ್ ಫಸಲನ್ನು ನಿರೀಕ್ಷಿಸಲಾಗಿದೆ.

ಈ ವರ್ಷ ರೈತರು ಹೇಳಿಕೊಳ್ಳುವಂತಹ ಫಸಲನ್ನು ಪಡೆಯಲಿಲ್ಲ. ಆದರೆ ಬರುವ ಋತುವಿನಲ್ಲಿ ಹೆಚ್ಚಿನ ಮಾವಿನ ಫಸಲು ಪಡೆಯುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಹಾಗೂ ರೈತರು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಲ್ಲಿ ಜಾಗೃತಿ ಉಂಟು ಮಾಡುವ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲು ಮುಂದಾಗಿದ್ದಾರೆ.

ಜಿಲ್ಲೆಯಲ್ಲಿ 1250 ಕ್ಕೂ ಹೆಚ್ಚು ರೈತರು 3517 ಹೆಕ್ಟೇರ್‌ನಲ್ಲಿ ಮಾವು ಬೆಳೆಯುತ್ತಿದ್ದಾರೆ. ಇವರಿಗೆ ಮಾವು ಬೇಸಾಯ ಹಾಗೂ ಸಮಗ್ರ ರೋಗ ಮತ್ತು ಕೀಟಗಳ ನಿವಾರಣೆ ಕುರಿತು ತಿಳಿವಳಿಕೆ ನೀಡಲು ಇಲಾಖೆ ಕಾರ್ಯಕ್ರಮವನ್ನು ಸಿದ್ಧಪಡಿಸುತ್ತಿದೆ.

ರೋಗ, ಕೀಟಬಾಧೆ ನಿಯಂತ್ರಣ:
ಡಿಸೆಂಬರ್ ಮಾವು ಹೂ ಬಿಡುವ ಕಾಲ. ಈ ವೇಳೆ ಚಳಿ ಅಧಿಕವಾಗಿರುತ್ತದೆ. ಇದರಿಂದ ಮಾವಿನ ಹೂವಿಗೆ ಬೂದಿರೋಗ ಮತ್ತು ಜಿಗಿಹುಳು ಕಾಟ ಹೆಚ್ಚಾಗಿರುತ್ತದೆ. ಇವುಗಳನ್ನು ನಿಯಂತ್ರಿಸದೇ ಹೋದರೆ ಇಳುವರಿಗೆ ದೊಡ್ಡ ಪ್ರಮಾಣದಲ್ಲಿ ಪೆಟ್ಟು ಬೀಳುವುದರಲ್ಲಿ ಅನುಮಾನವೇ ಇಲ್ಲ. ಆದ್ದರಿಂದ ಹೂ ಬಿಡುವುದಕ್ಕೆ ಮುಂಚೆ ಹಾಗೂ ಕಾಯಿ ಕಚ್ಚಿದ ಕೂಡಲೇ ಜಿಗಿಹುಳು ಮತ್ತು ಬೂದಿ ರೋಗದ ನಿಯಂತ್ರಣಕ್ಕಾಗಿ ಗಿಡಗಳಿಗೆ 4 ಗ್ರಾಂ ಕಾರ್ಬರಿಲ್, 2 ಎಂ.ಎಂ. ಎಂಡೋಸಲ್ಫಾನ್, ಇಮಿಡಾಕ್ಲೋಪ್ರಿಡ್ 0.5 ಮಿ.ಲೀ ಕೀಟನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು.

ಅವಶ್ಯವಿದ್ದಲ್ಲಿ ಇದೇ ಸಿಂಪಡಣೆ ಪುನರಾವರ್ತಿಸಬೇಕು. ಬೂದಿರೋಗ ನಿಯಂತ್ರಣಕ್ಕೆ ಎರಡು ಮತ್ತು ಮೂರು ಸಾರಿ  ಸಿಂಪಡಿಸುವಾಗ ನೀರಿನಲ್ಲಿ ಕರಗುವ ಗಂಧಕದ ಬದಲಿಗೆ 1 ಗ್ರಾಂ ಕಾರ್ಬೆಂಡಜಿಂ ಅಥವಾ 0.5 ಮಿ.ಲೀ. ಟ್ರೆಡೆಮಾರ್ಫ್ ಅನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಹಣ್ಣು ನೊಣದ ನಿಯಂತ್ರಣಕ್ಕಾಗಿ ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ 10 ಮೋಹಕ ಬಲೆಗಳನ್ನು ತೂಗುಹಾಕಬೇಕು. ಪ್ರತಿ ಬಲೆಗೆ 100 ಮಿ.ಲೀ. ಕೀಟನಾಶಕದ ದ್ರಾವಣ ಉಪಯೋಗಿಸಬೇಕು ಎನ್ನುವುದನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳು ವ್ಯಾಪಕವಾಗಿ ಪ್ರಚಾರ ಮಾಡುತ್ತಿದ್ದಾರೆ.

ರೈತರಿಗೆ ವಿಶೇಷ ತರಬೇತಿ: ಮಾವು ಹೆಚ್ಚು ಇಳುವರಿ ಕೊಡಬೇಕಾ ದರೆ ಕೆಲವೊಂದು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗಿದೆ. ಆದ್ದರಿಂದ ತೋಟಗಾರಿಕೆ ಇಲಾಖೆ ರೈತರಿಗೆ ವಿಶೇಷ ತರಬೇತಿಯನ್ನು ನೀಡಲಿದೆ.

ಹೂ ಬಿಡುವ ಮತ್ತು ಪೀಚು ಸಮಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ರಾಸಾಯನಿಕ ಪುಡಿಯನ್ನು ಬಳಸದೇ ಹಣ್ಣು ಮಾಡುವ ವಿಧಾನವನ್ನು ರೈತರಿಗೆ ಪರಿಚಯಿಸುವ ಉದ್ದೇಶವನ್ನು ಹೊಂದಿದೆ.

ಕಾಯಿಯನ್ನು ಹಣ್ಣು ಮಾಡಲು ಹೊಸ ವಿಧಾನವನ್ನು ಕಂಡುಹಿಡಿಯಲಾಗಿದ್ದು, ಈ ಬಗ್ಗೆ ಕರ್ಜನ್ ಪಾರ್ಕ್‌ನಲ್ಲಿ ರೈತರಿಗೆ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲು ಇಲಾಖೆ ಅಧಿಕಾರಿಗಳು ಆಸಕ್ತಿ ತೋರಿಸಿದ್ದಾರೆ.

ಬೂದಿರೋಗ ಮತ್ತು ಜಿಗಿಹುಳು ನಿಯಂತ್ರಣಕ್ಕಾಗಿ ರೈತರು ಖರೀದಿಸುವ ಕ್ರಿಮಿನಾಶಕಕ್ಕೆ ತೋಟಗಾರಿಕೆ ಇಲಾಖೆಯ ಪ್ರತಿ ಹೆಕ್ಟೇರ್‌ಗೆ ಶೇಕಡಾ 50 ರಷ್ಟು ಸಬ್ಸಿಡಿಯನ್ನು ನೀಡುತ್ತದೆ. ರೈತರು ಬಿಲ್, ಆರ್‌ಟಿಸಿ ಮತ್ತು ತಮ್ಮ ಬ್ಯಾಂಕ್ ಖಾತೆಯನ್ನು ಇಲಾಖೆ ಅಧಿಕಾರಿಗಳಿಗೆ ನೀಡಿದರೆ ಸಬ್ಸಿಡಿ ದೊರಕುತ್ತದೆ.

ಉತ್ತೇಜನಕ್ಕೆ ಕಾರ್ಯಕ್ರಮ
ಮುಂದಿನ ಋತುವಿನಲ್ಲಿ ಮಾವಿನ ಬಂಪರ್ ಫಸಲನ್ನು ನಿರೀಕ್ಷಿಸಿದ್ದೇವೆ. ಮಾವು ಬೆಳೆಯನ್ನು ಉತ್ತೇಜಿಸಲು ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಾವು ಋತುವಿನಲ್ಲಿ ಕರ್ಜನ್ ಪಾರ್ಕ್‌ನಲ್ಲಿ ದೊಡ್ಡ ಪ್ರಮಾಣ ಮಾವು ಮೇಳವನ್ನು ಆಯೋಜಿಸಲಾಗುವುದು. ಅಲ್ಲದೇ ಮೈಸೂರು- ಬೆಂಗಳೂರು ಹೆದ್ದಾರಿ, ಮೈಸೂರು-ಹುಣಸೂರು ಹೆದ್ದಾರಿ ಯಲ್ಲಿ ಮಾವು ಮಾರಾಟ ಕೇಂದ್ರಗಳನ್ನು ತೆರೆದು ರೈತರೇ ನೇರವಾಗಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುವುದು. ಈ ಮೂಲಕ ಮಾವು ಬೆಳೆಯುವರನ್ನು ಉತ್ತೇಜಿಸುವುದು ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಣ್ಣುಗಳು ದೊರಕುವಂತೆ ಮಾಡಲಾಗುವುದು.

ಎಚ್.ಎಂ.ನಾಗರಾಜ್,
ಸಹ ನಿರ್ದೇಶಕ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT