ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನ ಬಂಪರ್ ಬೆಳೆ ನಿರೀಕ್ಷೆ

Last Updated 8 ಫೆಬ್ರುವರಿ 2011, 9:00 IST
ಅಕ್ಷರ ಗಾತ್ರ

ಕಾರವಾರ:  ಜಿಲ್ಲೆಯಲ್ಲಿ ಈ ಬಾರಿ ಬಂಪರ್ ಮಾವಿನ ಫಸಲು ಬರುವ ನಿರೀಕ್ಷೆ ಇದೆ. ಮಾವಿನ ಮರತುಂಬ ಹೂವು ಬಿಟ್ಟಿದ್ದರಿಂದ ಮರದಲ್ಲಿ ಎಲೆಗಳೇ ಕಾಣುತ್ತಿಲ್ಲ. ಹೂವುಗಳಿಂದ ತುಂಬಿರುವ ಸಾಲುಸಾಲು ಮರಗಳು ಜನಸಾಮಾನ್ಯರ ಮನಸ್ಸಿಗೆ ಹಿತವುಂಟು ಮಾಡಿದರೆ. ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

ಹವಾಮಾನ ವೈಪರಿತ್ಯದಿಂದ ದುಷ್ಪರಿಣಾಮ ಆಗುತ್ತಿದೆ ಎನ್ನುವು ಕೂಗು ಒಂದೆಡೆ ಕೇಳಿ ಬರುತ್ತಿದ್ದರೆ. ಆದರೆ ಇದರಿಂದ ಒಳ್ಳೆಯ ಪರಿಣಾಮವೂ ಆಗಿದೆ. ಇದಕ್ಕೆ ಉತ್ತಮ ಉದಾಹರಣೆ ಮಾವಿನ ಮರದಲ್ಲಿ ಹೂವು ಬಿಟ್ಟಿರುವುದು. ಈ ಋತುವಿನಲ್ಲಿ ಚಳಿ ಹೆಚ್ಚಿನ ಪ್ರಮಾಣದಲ್ಲಿ ಬಿದ್ದಿರುವುದು ಮಾವಿನ ಬೆಳೆಗೆ ವರದಾನವಾಗಿದೆ. ಬೆಳಿಗ್ಗೆ ವಾತಾವರಣ ತಂಪಾಗಿದ್ದು ನಂತರ ನಿಧಾನವಾಗಿ ಉಷ್ಣಾಂಶ ಹೆಚ್ಚಾಗುವುದರಿಂದ ಮಾವಿನ ಗಿಡಗಳಿಗೆ ಅತ್ಯಂತ ಅನುಕೂಲಕರ ವಾತಾವರಣ ಕಲ್ಪಿಸಿದೆ ಎನ್ನುವುದು ರೈತರ ಅಭಿಪ್ರಾಯ.

ರಫ್ತು ಗುಣಮಟ್ಟದ ಅಲ್ಫಾನ್ಸೊ, ರತ್ನಾಗಿರಿ, ಆಪೂಸ್ ಬೆಳೆಗೆ ರೈತರು ಈ ಬಾರಿ ಹೆಚ್ಚು ಒತ್ತು ನೀಡಿದ್ದಾರೆ. ಕರಿಶ್ಯಾಡೋ, ಬಿಳಿಶ್ಯಾಡೋ, ನೀಲಂ, ಮಲ್ಲಿಕಾ ಮಾವು ಸಹ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು ಎರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ಬೆಳೆ ಬೆಳೆಯಲಾಗುತ್ತಿದೆ.ಮುಂಡಗೋಡದಲ್ಲಿ 700, ಹಳಿಯಾಳದಲ್ಲಿ 500 ಹಾಗೂ ಶಿರಸಿಯಲ್ಲಿ 300 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಘಟ್ಟದ ಮೇಲಿನ ಪ್ರದೇಶಗಳಾದ ಮುಂಡಗೋಡ ಹಾಗೂ ಹಳಿಯಾಳ ತಾಲ್ಲೂಕಿನ ಪ್ರದೇಶಗಳು ಮಾವು ಬೆಳೆಗೆ ಉತ್ತಮವಾಗಿದೆ.

ಮುಂಡಗೋಡ ತಾಲ್ಲೂಕಿನ ಮಳಗಿ, ಪಾಳಾ, ಕಲಕೊಪ್ಪ ಕಪ್ಪಸಿಕೊಪ್ಪ ಗೋಟಗೋಡಿಕೊಪ್ಪ, ಕಾತೂರ, ಓಣಿಗೇರಿ ಪ್ರದೇಶದ ಶೇ 70 ರಷ್ಟು ಜನರೆಲ್ಲ ಈಗ ಮಾವು ಬೆಳೆಯುತ್ತಿದ್ದು ಕೆಲವರು ಭತ್ತದ ಗದ್ದೆಗಳ ಮದ್ಯೆ ಮಾವು ಬೆಳೆಸಿ ಮಿಶ್ರ ಕೃಷಿ ಮಾಡುತ್ತಿದ್ದಾರೆ. ಹಳಿಯಾಳ ತಾಲ್ಲೂಕಿನ ತೇರಗಾಂವ ಹಾಗೂ ಮುಂಡಗೋಡದ ಪಾಳಾ ಗ್ರಾಮದಲ್ಲಿ ಮಾವು ಕಸಿ ಕಾಯಕ ಭರ್ಜರಿಯಾಗಿ ನಡೆಯುತ್ತಿದ್ದು ಹೊರ ಜಿಲ್ಲೆಗಳಿಂದ ಹಾಗೂ ಹೊರರಾಜ್ಯಗಳಿಂದ ಕಸಿ ಗಿಡಗಳಿಗೆ ಬೇಡಿಕೆ ಬರುತ್ತಿದೆ.‘ಕಳೆದ ವರ್ಷ ಐದು ಟನ್ ಮಾವಿನ ಫಸಲು ಬಂದಿತ್ತು. ಈ ಬಾರಿ 8ರಿಂದ 10 ಟನ್ ಮಾವಿನ ನಿರೀಕ್ಷೆ ಇದೆ. ಇಬ್ಬನಿ ಬೀಳದೆ ಇರುವುದು ಸುದೈವ’ ಎನ್ನುತ್ತಾರೆ ಪಾಳಾದ ಚನ್ನವೀರ ಗಿರಿಯಪ್ಪ ಹಿರೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT