ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನ ಮಡಿಲಲ್ಲಿ ದೀಪಾವಳಿ ವಿಶೇಷ

Last Updated 27 ಅಕ್ಟೋಬರ್ 2011, 8:00 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ದೀಪಾವಳಿ ಹಬ್ಬವನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲಾಗುತ್ತದೆ. ಬೇರೆ ಕಡೆಗಳಂತೆ ಒಂದೇ ದಿನ ದೀಪಾವಳಿ ಹಬ್ಬವನ್ನು ಆಚರಿಸುವುದಿಲ್ಲ. ಕಾರ್ತೀಕ ಮಾಸದ ಯಾವುದಾದರೂ ಒಂದು ಸೋಮವಾರ ಹಬ್ಬವನ್ನು ಆಚರಿಸುವುದು ರೂಢಿಯಲ್ಲಿದೆ.

ತಾಲ್ಲೂಕಿನ ಉತ್ತರ ಭಾಗದ ಗಡಿ ಗ್ರಾಮಗಳಲ್ಲಿ ವೈಕುಂಠ ಏಕಾದಶಿಯಂದು ದೀಪಾವಳಿ ಆಚರಿಸುವುದು ವಾಡಿಕೆಯಲ್ಲಿದೆ. ಸುಗ್ಗಿಯ ಕಾಲವಾದ್ದರಿಂದ ಬಿಡುವಿಲ್ಲದ ದುಡಿತ ಸಾಮಾನ್ಯ. ಹಬ್ಬದ ಹಿಂದಿನ ದಿನ ರಾತ್ರಿ ಕಚ್ಚಾಯ ಮಾಡಿ ಇಡಲಾಗುತ್ತದೆ. ಹಬ್ಬದ ದಿನ ಈ ಪ್ರದೇಶದ ಗ್ರಾಮಗಳಲ್ಲಿ ಹಬ್ಬದ ವಾತಾವರಣ ಕಂಡುಬರುವುದಿಲ್ಲ. ಜನ ಎಂದಿನಂತೆ ಕೃಷಿ ಕೆಲಸಗಳಲ್ಲಿ ತಲ್ಲೆನರಾಗಿರುತ್ತಾರೆ.

ಸಂಜೆ ಹೊತ್ತಿಗೆ ಹೊಲ ಗದ್ದೆಗಳಿಂದ ಹಿಂದಿರುಗುವ ರೈತರು ಸ್ನಾನ ಮಾಡಿದ ಬಳಿಕ ಹಬ್ಬದ ಆಚರಣೆಯಲ್ಲಿ ತೊಡಗುತ್ತಾರೆ. ಇಲ್ಲಿ ಮಹಾಬಲಿ ಅಥವಾ ನರಕಾಸುರನ ಕತೆಗೆ ಮನ್ನಣೆ ಇಲ್ಲ. ಪ್ರತಿ ಮನೆಯಲ್ಲೂ ಕೆಲವೊಮ್ಮೆ ನಾಲ್ಕೈದು ಮನೆಗಳಿಗೊಂದು ಮನೆಯಲ್ಲಿ ಕಬ್ಬಿನ ಜಲ್ಲೆಗಳಿಂದ ಮಂಟಪ ಕಟ್ಟಿ ಕಳಸವಿಟ್ಟು ಗೌರಿಯನ್ನು ಪೂಜಿಸುತ್ತಾರೆ. ಕಬ್ಬಿನ ಮಂಟಪಕ್ಕೆ ರಾಗಿ, ಭತ್ತ, ನವಣೆ ಮುಂತಾದ ತೆನೆಗಳನ್ನು ಗೊಂಚಲು ಕಟ್ಟಿ ತೂಗುಹಾಕುತ್ತಾರೆ. ಸ್ಥಳೀಯವಾಗಿ ದೊರೆಯುವ ಹೂಗಳಿಂದ ಶೃಂಗರಿಸುತ್ತಾರೆ.

ಮಂಟಪ ಸಿದ್ಧಗೊಂಡ ನಂತರ ಮನೆಯ ಹಿರಿಯರು ಕಚ್ಚಾಯ, ನೋಮುದಾರ, ನೋಮು ಅಡಕೆ ಅಕ್ಷತೆ ಮತ್ತು ವೀಳ್ಯದೆಲೆಯನ್ನು ಕಾಯಿ ಕರ್ಪೂರ ಸಹಿತ ತಟ್ಟೆಯಲ್ಲಿ ತಂದು ಮಂಟಪದ ಮುಂದೆ ಇಡುತ್ತಾರೆ. ಕಳೆದ ವರ್ಷ ಬಳಸಿದ ನೋಮುದಾರಗಳನ್ನು ಮಂಟಪದ ಹಿಂದೆ ಮತ್ತು ಹೊಸ ನೋಮುದಾರಗಳನ್ನು ಮಂಟಪದ ಮುಂಭಾಗದಲ್ಲಿ ಕಟ್ಟುತ್ತಾರೆ. ಹಿಂದುಗಳು ಆಚರಿಸುವ ದೀಪಾವಳಿಗೆ ಮುಸ್ಲಿಂ ಜನಾಂಗದವರು ನೋಮುದಾರ ತಯಾರಿಸಿ ಮಾರುವುದು ಇಲ್ಲಿನ ವಿಶೇಷ.

ಇಷ್ಟಾದ ಮೇಲೆ ಕುಟುಂಬದ ವಿದ್ಯಾವಂತ ಸದಸ್ಯರೊಬ್ಬರು ಪುಸ್ತಕ ಹಿಡಿದು ಬಂದು ದೀಪಾವಳಿ ಹಬ್ಬದ ಮಹತ್ವವನ್ನು ಸಾರುವ ಕೇದಾರನಾಥ ವ್ರತದ ಕತೆಯನ್ನು ಓದುತ್ತಾರೆ. ಅದನ್ನು ಮನೆ ಮಂದಿಯೆಲ್ಲಾ ಶ್ರದ್ಧಾಭಕ್ತಿಯಿಂದ ಕುಳಿತು ಕೇಳಿಸಿಕೊಳ್ಳುತ್ತಾರೆ. ಕತೆಯಲ್ಲಿ ಸಾಂದರ್ಭಿಕವಾಗಿ ಗೌರಿ ವಿಗ್ರಹದ ಮೇಲೆ ಅಕ್ಷತೆ ಹಾಕುತ್ತಾರೆ. ಕಾಯಿ ಹೊಡೆದು ಮಂಗಳಾತಿ ಮಾಡಿದ ಮೇಲೆ ಪೂಜೆ ಮುಗಿಯುತ್ತದೆ. ಎಲ್ಲರೂ ನೋಮುದಾರವನ್ನು ಕಟ್ಟಿಕೊಂಡು ಸಾಮೂಹಿಕವಾಗಿ ಊಟ ಮಾಡುತ್ತಾರೆ. ಅಲ್ಲಿಗೆ ದೀಪಾವಳಿ ಆಚರಣೆ ಮುಗಿಯುತ್ತದೆ.

ಈ ಹಬ್ಬಕ್ಕೆ ನೆಂಟರಿಷ್ಟರನ್ನು ಆಹ್ವಾನಿಸುವುದುಂಟು. ಆದರೆ ಅವರು ಸ್ಥಳೀಯ ಅಚರಣೆಗೆ ಹೊಂದಿಕೊಂಡು ಹೋಗಬೇಕಾಗುತ್ತದೆ. ಇಲ್ಲಿನ ಜನ ತಮ್ಮ ಕಾಯಕದ ನಡುವೆ ಹಬ್ಬದ ಸಡಗರದ ಸವಿಯನ್ನು ಸವಿಯುತ್ತಾರೆ. ಇಲ್ಲಿನ ಆಚರಣೆ ಸರಳವೆನಿಸಿದರೂ ಅರ್ಥಪೂರ್ಣ. ದವಸ ಧಾನ್ಯಗಳಲ್ಲಿ ದೇವರನ್ನು ಕಾಣುವ ಸಂಸ್ಕೃತಿ ಇಲ್ಲಿ ಮುಂದುವರೆದಿದೆ.

ಗ್ರಾಮಗಳಲ್ಲಿ ಜಾನುವಾರುಗಳು ಬೆದರುವ ಅಪಾಯ ಇದ್ದುದರಿಂದ, ಹಿಂದೆ ಪಟಾಕಿ ಸಿಡಿತಕ್ಕೆ ಆಸ್ಪದ ಇರಲಿಲ್ಲ. ಆದರೆ ಈಗ ಯುವಕರು ಪಟಾಕಿ ಸಿಡಿಸುವುದನ್ನು ರೂಢಿಸಿಕೊಂಡಿದ್ದಾರೆ. ಹಿರಿಯರ ಆಕ್ಷೇಪಣೆಯ ನಡುವೆಯೂ ಪಟಾಕಿ ಸದ್ದು ಕೇಳಿಸುತ್ತದೆ.

ಇನ್ನೊಂದು ವಿಶೇಷವೆಂದರೆ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಬೋವಿ ಜನಾಂಗದವರು ದೀಪಾವಳಿಯನ್ನು ಆಚರಿಸುವುದಿಲ್ಲ.

ಆ ಜನಾಂಗದ ಹಿರಿಯರು ಹೇಳುವಂತೆ ಎಂದೋ ದೀಪಾವಳಿ ಆಚರಣೆಗೆ ಅಗತ್ಯವಾದ ವಸ್ತುಗಳನ್ನು ತರಲು ಹೋದವರು ಊರಿಗೆ ಹಿಂದಿರುಗಲಿಲ್ಲವಂತೆ. ಅಂದಿನಿಂದ ದೀಪಾವಳಿ ತಮಗೆ ಆಗಿಬರುವುದಿಲ್ಲ ಎಂದು ಆಚರಣೆಯನ್ನು ಬಿಟ್ಟರಂತೆ. ಆದರೆ ಇತರ ಜನಾಂಗಗಳೊಂದಿಗೆ ನಗರ ಪ್ರದೇಶದಲ್ಲಿ ವಾಸಿಸುವವರು ಇತ್ತೀಚಿನ ವರ್ಷಗಳಲ್ಲಿ ಹಬ್ಬವನ್ನು ಆಚರಿಸುತ್ತಿದ್ದಾರೆ.
-ಆರ್.ಚೌಡರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT