ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು ಇಳುವರಿ ಕುಸಿತ: ಸಂಕಷ್ಟದಲ್ಲಿ ರೈತ

Last Updated 21 ಏಪ್ರಿಲ್ 2013, 9:00 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಹಾನಗಲ್ ತಾಲ್ಲೂಕಿನ ಮಾವು ಈ ಬಾರಿ ರೈತನ ಕೈ ಹಿಡಿದಿಲ್ಲ. ಕಳೆದ ಬಾರಿ ಉತ್ತಮ ಫಸಲು ಪಡೆದು ಲಾಭದ ಸಿಹಿ ಉಂಡ ರೈತರೀಗ ಮಾವಿನ ಇಳುವರಿ ವೈಫಲ್ಯದಿಂದ ಕಂಗಾಲಾಗಿದ್ದಾರೆ. ಭೂಮಿಯಲ್ಲಿ ತೇವಾಂಶ ಹೆಚ್ಚುಗೊಂಡಿರುವುದು ಸೇರಿದಂತೆ ಇನ್ನೂ ಹಲವಾರು ಕಾರಣಗಳಿಂದ ಮಾವಿನ ಇಳುವರಿಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದ್ದು, ಹಣ್ಣುಗಳ ರಾಜ ಮಾವಿನ ಬೆಲೆ ಈ ಬಾರಿ ದುಬಾರಿಯಾಗಲಿದೆ.

ಮಾರುಕಟ್ಟೆಯಲ್ಲಿ ಮಾವಿನ ಬೆಲೆ ಈ ಬಾರಿ ಗಗನಮುಖಿಯಾಗುವ ಲಕ್ಷಣಗಳಿವೆ. ಆದರೆ ಇಳುವರಿ ಇಲ್ಲದೇ ರೈತರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಕೃಷಿ ಕಾರ್ಮಿಕರ ಕೊರತೆ ಸೇರಿದಂತೆ ಇನ್ನಿತರ ಕಾರಣಗಳಿಂದ ಹಾನಗಲ್ ತಾಲ್ಲೂಕಿನ ರೈತರು ತೋಟಗಾರಿಕೆ ಬೆಳೆಗಳತ್ತ ಮುಖ ಮಾಡಿದ್ದಾರೆ. ಪರಿಣಾಮ ಆರೇಳು ವರ್ಷಗಳ ಅವಧಿಯಲ್ಲಿ ಹಾನಗಲ್ಲ ತಾಲ್ಲೂಕಿನ ಸಾವಿರಾರು ಹೆಕ್ಟೆರ್ ಕೃಷಿ ಭೂಮಿ ತೋಟಗಾರಿಕಾ ಪ್ರದೇಶವಾಗಿ ಬದಲಾಗಿದೆ. ತೋಟಗಾರಿಕೆ ಬೆಳೆಯಲ್ಲಿಯೂ ಇಲ್ಲಿಯ ರೈತರು ಮಾವಿನ ಬೆಳೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.

ಅಕ್ಕಿಆಲೂರ, ಡೊಳ್ಳೇಶ್ವರ, ಸುರಳೇಶ್ವರ, ಗಿರಿಸಿನಕೊಪ್ಪ, ಹಾವಣಗಿ, ಅರಳೇಶ್ವರ ಹೀಗೆ ಸುತ್ತಮುತ್ತಲಿನ ಗ್ರಾಮಗಳು ಮಲೆನಾಡಿನ ಅಂಚಿಗೆ ಹೊಂದಿಕೊಂಡಿವೆ.  ಬೆಳೆ ನಿರ್ವಹಣೆಯ ಕನಿಷ್ಟ ವೆಚ್ಚವಾದರೂ ಫಸಲು ಮಾರಾಟದಿಂದ ದೊರೆಯಬಹುದು ಎಂಬ ರೈತನ ಲೆಕ್ಕಾಚಾರ ತಲೆಕೆಳಗಾಗಿದೆ. ಇಬ್ಬನಿ   ಮಾವು ಬೆಳೆಗಾರರಿಗೆ ಶಾಕ್ ನೀಡಿದ್ದು, ಅಲ್ಪಸ್ವಲ್ಪ ಫಸಲು ಕೂಡ ರೈತನ ಕೈ ಬಿಟ್ಟಿದೆ. ಆರ್ಥಿಕ ಲಾಭ ಗಳಿಕೆಯ ಉತ್ಸಾಹದಿಂದ ರೈತರು ಈ ಬಾರಿ ತಮ್ಮ ಮಾವಿನ ತೋಟವನ್ನು ಲಕ್ಷಾಂತರ ರೂಪಾಯಿ ವ್ಯಾಪಾರಸ್ಥರಿಗೆ ಗುತ್ತಿಗೆ ನೀಡಿ ಮುಂಗಡ ಹಣವನ್ನೂ ಸಹ ಸ್ವೀಕರಿಸಿದ್ದರು. ಆದರೆ ಇಳುವರಿ ಕುಸಿತದಿಂದಾಗಿ ಗುತ್ತಿಗೆ ಪಡೆದಿರುವ ವ್ಯಾಪಾಸ್ಥರು ತೋಟದತ್ತ ಮುಖ ಮಾಡುತ್ತಿಲ್ಲ.

ಚಳಿಗಾಲ ಈ ಬಾರಿ ಸುಧೀರ್ಘವಾಗಿ ಕಂಡಿರುವುದು ಒಂದೆಡೆ ಮಾವಿನ ಫಸಲಿಗೆ ಮಾರಕವಾಗಿದ್ದರೆ ಇನ್ನೊಂದೆಡೆ ಇಬ್ಬನಿಯೂ ಸಂಕಷ್ಟ ತಂದೊಡ್ಡಿದೆ. ಮಾವಿನ ಗಿಡದಲ್ಲಿ ಹೂವಾಗುವ ಒಳ್ಳೆಯ ಸಮಯದಲ್ಲಿಯೇ ಇಬ್ಬನಿ ಬಿದ್ದು ಫಸಲು ಹುಲುಸಾಗಲು ಸಾಧ್ಯವಾಗಿಲ್ಲ ಎಂಬುದು ತಜ್ಞರ ಅಭಿಮತ.

ಶೇ 20ರಷ್ಟು ಮಾತ್ರ ಫಸಲು
ವಾರ್ಷಿಕ ಇಳುವರಿಯಲ್ಲಿ ಅಲ್ಪಸ್ವಲ್ಪ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದರೆ ಅಷ್ಟು ವ್ಯಥೆ ಪಡುವ ಅವಶ್ಯಕತೆ ಇರಲಿಲ್ಲ. ಆದರೆ ಈ ಸಲದ ಇಳುವರಿಯಲ್ಲಿ ಶೇ 80 ರಷ್ಟು ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದ್ದು, ಕೇವಲ ಶೇ 20 ರಷ್ಟು ಪ್ರಮಾಣದ ಇಳುವರಿ ಮಾತ್ರ ರೈತನ ಕೈ ಸೇರಿದೆ.

ಈ ಕುರಿತು `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಡೊಳ್ಳೇಶ್ವರ ಗ್ರಾಮದ ಮಾವು ಬೆಳೆಗಾರ ಬಸವಣ್ಣೆಪ್ಪ ಬಾಳೂರ, `ರೈತನ ಪರಿಸ್ಥಿತಿ ಹಿಂಗ ನೋಡ್ರಿ, ಒಂದ ವರ್ಷ ಛಲೋ ಬೆಳಿ ಬಂದ್ರ ಮಾರನೇ ವರ್ಷ ಬೆಳಿ ಬರದಂಗಾಗೈತಿ. ಹೋದ ಸಲಾ ಮಾವಿನ ಪೀಕು ಬಾಳ ಛಲೋ ಬಂದು ರೈತನ ಕೈ ಹಿಡಿದಿತ್ರಿ. ಆದ್ರ ಈ ವರ್ಷ ಪರಿಸ್ಥಿತಿ ಕೆಟ್ಟ ಹೋಗೇತ್ರಿ. ಹೂ ಬಿಡೋ ಹೊತ್ತಿನ್ಯಾಗ ಇಬ್ಬನಿ ಬಿದ್ದು ಎಲ್ಲಾನು ಹಾಳ ಆಗೈತ್ರಿ. ಈ ವರ್ಷ ಸರ್ಕಾರ ರೈತರಿಗೆ ಪರಿಹಾರ ಕೊಡದಿದ್ರ ಪರಿಸ್ಥಿತಿ ಬಾಳ ವಜ್ಜಾಕೇತಿ' ಎಂದು ಅಳಲು ತೋಡಿಕೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT