ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವುತರ ಆರೈಕೆಯಲ್ಲಿ ಮರಿಯಾನೆ

Last Updated 12 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕುಶಾಲನಗರ: ಈ ಆನೆಯ ಊಟದ ಮೆನು ನೋಡಿ. ಇದು ದಿನಕ್ಕೆ 15 ಲೀಟರ್ ಹಾಲು ಕುಡಿಯುತ್ತದೆ. ಲೀಟರ್‌ಗಟ್ಟಲೆ ರಾಗಿ ಅಂಬಲಿ ಕುಡಿಯುತ್ತದೆ. ಮತ್ತೂ ಬೇಕು ಎನ್ನಿಸಿದರೆ ಹಾರ್ಲಿಕ್ಸ್ ಕುಡಿಯುತ್ತದೆ. ಜೊತೆಗೆ ಲ್ಯಾಕ್ಟಾಲ್ ಪುಡಿ ಸೇವಿಸುತ್ತದೆ.

ಜನಿಸಿದ 15 ದಿನಗಳಲ್ಲಿಯೇ ತನ್ನ ತಾಯಿಯನ್ನು ಕಳೆದುಕೊಂಡಿರುವ ಗಂಡು ಮರಿಯಾನೆಯ ಕಥೆ ಇದು.
ಮಡಿಕೇರಿ - ಕುಶಾಲನಗರ ರಾಜ್ಯ ಹೆದ್ದಾರಿಯಲ್ಲಿನ ಆನೆಕಾಡು ಮೀಸಲು ಅರಣ್ಯದಲ್ಲಿನ ಆನೆ ಶಿಬಿರದಲ್ಲಿ ಮಾವುತರಿಂದ ಆರೈಕೆ ಪಡೆಯುತ್ತಿರುವ ಏಳು ತಿಂಗಳ ತಬ್ಬಲಿ ಗಂಡು ಮರಿಯಾನೆಗೆ ಮಾವುತರೇ ತಂದೆ ತಾಯಿ. ಮಾವುತರ ಮಕ್ಕಳೇ ಸಹಪಾಠಿಗಳು.

ಮಾವುತ ಕುಮಾರ ಮತ್ತು ಗೀತಾ ದಂಪತಿ ಈ ಮರಿಯಾನೆಗೆ ~ಶಿವ~ ಎಂದು ಹೆಸರಿಟ್ಟಿದ್ದಾರೆ. ಮಾವುತರ ಮನೆಯಂಗಳದಲ್ಲಿ ಬುಡಕಟ್ಟು ಜನಾಂಗದ ಮಕ್ಕಳೊಂದಿಗೆ ಚೆಲ್ಲಾಟವಾಡುತ್ತಾ ಬೇಕೆಂದಾಗ ಹಾಲನ್ನು ಕುಡಿಯುತ್ತಾ ರಾಗಿಮುದ್ದೆ ಮೆಲ್ಲುವ ~ಶಿವ~ ಪ್ರವಾಸಿಗರ ಆಕರ್ಷಣೆಯಾಗಿದೆ. ಉತ್ತರ ಕೊಡಗಿನ ಹಾರಂಗಿ ಜಲಾಶಯದ ಯಡವನಾಡು ಭಾಗದ ಹಿನ್ನೀರಿನ ಪ್ರದೇಶದಲ್ಲಿ ಅನಾರೋಗ್ಯದಿಂದ ಬಳಲುತ್ತಾ ಫೆಬ್ರುವರಿ 17ರಂದು ಮೃತಪಟ್ಟ ಹೆಣ್ಣು ಕಾಡಾನೆಯ ತಬ್ಬಲಿ ಮರಿಯಾನೆಯೇ ~ಶಿವ~.

ಮೃತಪಟ್ಟ ತನ್ನ ತಾಯಿಯಿಂದ ಎರಡು ದಿನಗಳ ಮೊದಲೇ ಆಕಸ್ಮಿಕವಾಗಿ ಬೇರ್ಪಟ್ಟು ಕಾಡಿನಲ್ಲಿ ಒಂಟಿಯಾಗಿದ್ದ  ಮರಿಯಾನೆಯನ್ನು  ಯಡವನಾಡು ಗ್ರಾಮಸ್ಥರು  ಸೋಮವಾರಪೇಟೆಯ ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು.

ಕುಶಾಲನಗರ ವಲಯದ ಅಂದಿನ ಆರ್‌ಎಫ್‌ಓ ಎಂ.ಎಸ್.ಚಿಣ್ಣಪ್ಪ ಮತ್ತು ಸಿಬ್ಬಂದಿ ಮರಿಯಾನೆಯನ್ನು ತಕ್ಷಣ ಆನೆಕಾಡು ಮೀಸಲು ಅರಣ್ಯ ಶಿಬಿರಕ್ಕೆ ತಂದು ಅದರ ಆರೈಕೆಯಲ್ಲಿ ತೊಡಗಿದರು. 

 ತಾಯಿಯ ಎದೆಹಾಲಿನಿಂದ ವಂಚಿತಗೊಂಡು ಸಾವು ಬದುಕಿನೊಂದಿಗೆ ಹೋರಾಟ ನಡೆಸುತ್ತಿದ್ದ ಹಸುಗೂಸನ್ನು ಜೀವಂತವಾಗಿ ಉಳಿಸುವುದು ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿತು. ಆಗ ಆರ್‌ಎಫ್‌ಓ ಚಿಣ್ಣಪ್ಪ ಮತ್ತು ಆನೆಕಾಡಿನ ಮಾವುತರು ಮರಿಯಾನೆಯ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಿ ಅದನ್ನು ಎಳೆಯ ಮಗುವಿನಂತೆ ವಿಶೇಷ ಕಾಳಜಿಯಿಂದ ಬೆಳೆಸಿದರು. ಇಲ್ಲಿಗೆ ಬರುವಾಗ 50 ಕೆಜಿ ಇದ್ದ ಆನೆಮರಿ ಈಗ 146 ಕೆಜಿ ಗೆ ಏರಿದೆ.

~ಶಿವ~ನಿಗೆ ಮೊದಲು ಐದಾರು ಲೀಟರ್ ಹಾಲಿನೊಂದಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿತ್ತು. ಈಗ  ದಿನಕ್ಕೆ 15 ಲೀಟರ್ ಹಾಲಿನೊಂದಿಗೆ ರಾಗಿಮುದ್ದೆ, ಹಾರ್ಲಿಕ್ಸ್ ನೀಡಲಾಗುತ್ತಿದೆ.  ಈಗ  ~ಶಿವ~ ಮಾವುತರ ಅಚ್ಚುಮೆಚ್ಚಿನ ಮರಿಯಾನೆಯಾಗಿದೆ. ಕೂಡಿಗೆಯ ಪಶುವೈದ್ಯ ಡಾ ನಾರಾಯಣ ಆಗಿಂದಾಗ್ಗೆ ಆನೆಕಾಡಿಗೆ ಭೇಟಿ ನೀಡಿ ~ಶಿವ~ನ ಆರೋಗ್ಯವನ್ನು ಪರೀಕ್ಷಿಸಿ ಔಷಧೋಪಚಾರ ನೀಡುತ್ತಿದ್ದಾರೆ.

ದುಬಾರೆ ಅರಣ್ಯ ಸೇರಿದಂತೆ ಮತ್ತಿತರ ಕಾಡಿನಲ್ಲಿ ಹುಟ್ಟಿದ 15 ರಿಂದ 30 ದಿನಗಳಲ್ಲಿ  ತಮ್ಮ ತಾಯಿಯಿಂದ ಬೇರ್ಪಟ್ಟ ಮರಿಯಾನೆಗಳು ಬದುಕಿರುವುದು ಬಹಳ ವಿರಳ ಎನ್ನುವ ಅರಣ್ಯಾಧಿಕಾರಿಗಳು ~ಶಿವ~ ಬದುಕಿರುವುದು ವಿಶೇಷ ಎನ್ನುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT