ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸದ ಮೆಲುಕು ಯಕ್ಷಗಾನ ಝಲಕ್

Last Updated 3 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯು ಪ್ರತಿ ತಿಂಗಳು ಆಯೋಜಿಸುವ ಮಾಸದ ಮೆಲುಕು ಸರಣಿಯ 24 ನೇ ಕಾರ್ಯಕ್ರಮದಲ್ಲಿ `ಸುಭದ್ರಾ ಕಲ್ಯಾಣ' ಯಕ್ಷಗಾನ ಪ್ರಸಂಗವನ್ನು ಇತ್ತೀಚೆಗೆ ನಗರದ ಚಿಕ್ಕಲಸಂದ್ರದ ಮನೋರಂಜಿನಿ ಸಾಂಸ್ಕೃತಿಕ ವೇದಿಕೆ ಪ್ರದರ್ಶಿಸಿತು.

ಶ್ರೀ ಸಿದ್ಧಿ ಗಣಪತಿ ದೇವಾಲಯದ ಸಾಂಸ್ಕೃತಿಕ ವಿಭಾಗದ ಸಹಯೋಗದೊಂದಿಗೆ ರಾಧಾಕೃಷ್ಣ ಉರಾಳ ಅವರ ಪರಿಕಲ್ಪನೆಯಲ್ಲಿ ಕಾರ್ಯಕ್ರಮ ನಡೆಯಿತು. ದಿ. ಹಟ್ಟಿಯಂಗಡಿ ರಾಮಭಟ್ಟ ರಚಿಸಿದ ಮಹಾಭಾರತದ ಯಕ್ಷಗಾನ ಪ್ರಸಂಗ `ಸುಭದ್ರಾ ಕಲ್ಯಾಣ' ಸಮಕಾಲೀನವಾಗಿ ಕಾಣುವಂತೆ ಮಾಡುವಲ್ಲಿ ಸಂಯೋಜಿಸಿ, ಬಲರಾಮನ ಪಾತ್ರವನ್ನೂ ನಿರ್ವಹಿಸಿದ ಅಂಬರೀಷ್ ಭಟ್ ಗಮನ ಸೆಳೆದರು. ಕೃಷ್ಣನ ಪಾತ್ರದಲ್ಲಿ ರಾಧಾಕೃಷ್ಣ ಉರಾಳ, ಸುಭದ್ರೆಯಾಗಿ ವಿಶ್ವನಾಥ ಉರಾಳ, ಅರ್ಜುನ ಸಂನ್ಯಾಸಿಯ ಪಾತ್ರದಲ್ಲಿ ದೇವರಾಜ್ ಕರಬ, ವನಪಾಲಕನ ಪಾತ್ರದಲ್ಲಿ ಗಣೇಶ್ ನಾಯಕ್ ಪ್ರತಿಭೆ ಪ್ರದರ್ಶಿಸಿದರು.

ಪ್ರಥಮ ಪ್ರಯೋಗದಲ್ಲಿ ಕಾಣಬಹುದಾದ ಕೆಲವೊಂದು ಹೊಂದಾಣಿಕೆಯ ಕೊರತೆ, ದೋಷಗಳ ಹೊರತಾಗಿಯೂ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರನ್ನು ಸುಭದ್ರ ಕಲ್ಯಾಣ ಪ್ರಸಂಗ ರಂಜಿಸಿತು. ಇತ್ತೀಚಿನ ದಿನಗಳಲ್ಲಿ ಕಾಣುತ್ತಿರುವ ಕಪಟ ಸನ್ಯಾಸಿಗಳ ಅವಾಂತರ, ದೇವರನ್ನು ಕಾಣುವ ಭಕ್ತಿಯ ಪರಾಕಾಷ್ಠೆಯಲ್ಲಿ ಪ್ರಾಣ ಕಳೆದುಕೊಂಡ ಸಂಸಾರ, ಮದುವೆಯ ದಿನವೇ ವಧೂವರರು ತಮ್ಮ ಅನ್ಯ ಪ್ರೇಮ ಪ್ರಸಂಗದ ಕಾರಣದಿಂದ ಮಂಟಪದಿಂದ ಓಡಿಹೋದ ಪ್ರಕರಣಗಳು ಪ್ರಸ್ತಾಪಗೊಂಡು, ಅಂದಿನ ಕಥೆ ಇಂದಿಗೂ ಎಷ್ಟು ಪ್ರಸ್ತುತ ಎಂಬುದರ ಮೇಲೆ ಬೆಳಕು ಚೆಲ್ಲಿತು.

ಅರ್ಜುನನ ಮೇಲೆ ಮನಸಿಟ್ಟ ಸುಭದ್ರೆಯನ್ನು ದುರ್ಯೋಧನನಿಗೆ ಕೊಟ್ಟು ಮದುವೆ ಮಾಡಿಸುವುದಕ್ಕೆ ಹೊರಟ ಬಲರಾಮನ ಭಕ್ತಿಯ ಪರಾಕಾಷ್ಠೆಯನ್ನು ಅರಿತ ಕೃಷ್ಣ ತಂತ್ರ ಹೂಡುತ್ತಾನೆ. ತೀರ್ಥಯಾತ್ರೆಗೆ ಬಂದ ಅರ್ಜುನನನ್ನೇ ಶ್ರೇಷ್ಠ ಸಂನ್ಯಾಸಿಯೆಂಬಂತೆ ಬಿಂಬಿಸುತ್ತಾನೆ. ಅರಮನೆಗೆ ಕರೆತಂದು ಸುಭದ್ರೆಯನ್ನೇ ಅವನ ಸೇವೆಗೆ ಬಲರಾಮ ನೇಮಿಸುತ್ತಾನೆ. ಮದುಮಗನಾಗಿ ದುರ್ಯೋಧನ ಬಂದಾಗ ವಧುವಾಗಬೇಕಿದ್ದ ಸುಭದ್ರೆ ಅರ್ಜುನನೊಂದಿಗೆ ಓಡಿಹೋಗಿರುತ್ತಾಳೆ. ನಾಟಕದ ಸೂತ್ರಧಾರಿ ಕೃಷ್ಣ ಅರ್ಜುನನೊಂದಿಗೆ ಯುದ್ಧಕ್ಕೆ ಸಿದ್ಧನಾದ ಬಲರಾಮನ ಮನವೊಲಿಸಿ ಸುಭದ್ರೆಗೆ ಅರ್ಜುನನೊಂದಿಗೆ ಮದುವೆ ಮಾಡಿಸುತ್ತಾನೆ.

ಯಕ್ಷಗಾನವನ್ನು ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ಹಿಮ್ಮೇಳದ ಪ್ರಬುದ್ಧತೆ ಅತಿ ಮುಖ್ಯವೆನಿಸಿತು. ಸಾಂಪ್ರದಾಯಿಕ ಶೈಲಿಗೆ ಹೊಸತನದ ಲೇಪ ಕೊಡುವ ಪ್ರಯತ್ನವನ್ನು ಭಾಗವತರಾಗಿ ಶಂಕರ್ ಬಾಳಕುದ್ರು ಮಾಡಿದರೆ, ಮದ್ದಲೆ ವಾದನದಲ್ಲಿ ರಾಜೇಶ್ ಸಾಗರ, ಚೆಂಡೆ ನುಡಿಸುವಲ್ಲಿ ಆದಿತ್ಯ ಜೊತೆಯಾದರು. ನೇಪಥ್ಯದಲ್ಲಿ ನಿತ್ಯಾನಂದ ನಾಯಕ್, ಮುರಳೀಧರ ನಾವಡ ಚಿದಾನಂದ ಕುಲಕರ್ಣಿ, ಸತ್ಯನಾರಾಯಣ್, ಪ್ರತಾಪ್, ಕೆ.ಎನ್. ಅಡಿಗ, ಅಶೋಕ ಉಡುಪ, ಮಮತ ಆರ್.ಕೆ ಅವರ ಸಹಕಾರವಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT