ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸಾಂತ್ಯಕ್ಕೆ ಬಿಬಿಎಂಪಿ ಬಜೆಟ್

Last Updated 15 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ 2011-12ನೇ ಸಾಲಿನ ಆಯವ್ಯಯ ಸಿದ್ಧಪಡಿಸುವ ಕಾರ್ಯ ಬಿರುಸಾಗಿ ನಡೆದಿದ್ದು, ಮಾಸಾಂತ್ಯ ಇಲ್ಲವೇ ಜುಲೈ ಮೊದಲ ವಾರದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.

ಕಳೆದ ವರ್ಷ ಮಂಡನೆಯಾದ 8,848 ಕೋಟಿ ರೂಪಾಯಿ ಭಾರಿ ಮೊತ್ತದ ಬಜೆಟ್ ಅನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿರುವ ಪಾಲಿಕೆ ಆಡಳಿತ, ಪ್ರಸಕ್ತ ವರ್ಷದ ಬಜೆಟ್ ಗಾತ್ರವನ್ನು ಕುಗ್ಗಿಸಲು ಚಿಂತಿಸಿದೆ.

ನಗರ ಯೋಜನೆ ಸ್ಥಾಯಿ ಸಮಿತಿಯನ್ನು ಹೊರತುಪಡಿಸಿದರೆ ಉಳಿದ ಎಲ್ಲ 11 ಸ್ಥಾಯಿ ಸಮಿತಿಗಳಿಗೆ ಹೊಸ ಸದಸ್ಯರೇ ಅಧ್ಯಕ್ಷರಾಗಿದ್ದು, ಬೇಡಿಕೆ ಹಾಗೂ ಅನುದಾನ ನಿರೀಕ್ಷೆಯ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ.

ದೂರ ಉಳಿದ ಹಿರಿಯ ಸದಸ್ಯರು!: ಈ ನಡುವೆ ಬಿಜೆಪಿಯ ಹಿರಿಯ ಸದಸ್ಯರು ಬಜೆಟ್ ಸಿದ್ಧತಾ ಕಾರ್ಯದಿಂದ ದೂರ ಉಳಿದಿದ್ದಾರೆ ಎಂದರೆ ತಪ್ಪಾಗಲಾರದು. ಏಕೆಂದರೆ, ಎಲ್ಲ ಸ್ಥಾಯಿ ಸಮಿತಿಗಳಿಗೆ ಹೊಸ ಸದಸ್ಯರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಬಳಿಕ ಹಿರಿಯ ಸದಸ್ಯರು ಪಾಲಿಕೆ ಕೇಂದ್ರ ಕಚೇರಿಯತ್ತ ಮುಖ ಮಾಡುವುದೇ ವಿರಳವೆನಿಸಿದೆ.

ಮೇಯರ್, ಉಪ ಮೇಯರ್ ಕೊಠಡಿ ಹಾಗೂ ಸ್ಥಾಯಿ ಸಮಿತಿಗಳ ಕಚೇರಿಗಳಲ್ಲೂ ಹಿರಿಯ ಸದಸ್ಯರು ಕಾಣುವುದು ಅಪರೂಪ. ಹಾಗಾಗಿ, ಹೊಸ ಸದಸ್ಯರು ಹಾಗೂ ಅಧಿಕಾರಿಗಳೇ ಬಜೆಟ್ ಸಿದ್ದಪಡಿಸುತ್ತಿದ್ದಾರೆ.

ವಾಸ್ತವಿಕ ಬಜೆಟ್: `ಬಜೆಟ್ ಕರಡು ಪ್ರತಿಯನ್ನು ಆಯುಕ್ತರು ಕಳೆದ ವಾರ ಸಮಿತಿಗೆ ಸಲ್ಲಿಸಿದ್ದಾರೆ. ಈವರೆಗೆ 17 ಇಲಾಖೆಗಳ ಮುಖ್ಯಸ್ಥರೊಂದಿಗೆ ವಿಸ್ತೃತ ಚರ್ಚೆ ನಡೆಸಲಾಗಿದೆ. ಉಳಿದ 11 ವಿಭಾಗಗಳ ಮುಖ್ಯಸ್ಥರೊಂದಿಗೂ ಸಮಗ್ರ ಚರ್ಚೆ ನಡೆಸಿದ ಬಳಿಕ ಆಯವ್ಯಯಕ್ಕೆ ಒಂದು ರೂಪ ಬರಲಿದೆ~ ಎಂದು ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು ಅವರು `ಪ್ರಜಾವಾಣಿ~ಗೆ ತಿಳಿಸಿದರು.

`ಈ ಬಾರಿ ಶಿಕ್ಷಣ, ಕಲ್ಯಾಣ, ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುವುದು. ಬಂಡವಾಳ ಕ್ರೋಡೀಕರಣಕ್ಕೆ ಒತ್ತು ನೀಡಲಾಗಿದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲಾಗಿದ್ದು, ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ. ಸುಮಾರು 800 ಕೋಟಿ ರೂಪಾಯಿ ಆದಾಯ ಸುಧಾರಣಾ ಶುಲ್ಕ ಸಂಗ್ರಹದಿಂದ ಬರುವ ಸಾಧ್ಯತೆ ಇದೆ~ ಎಂದು ಹೇಳಿದರು.

`ಕಳೆದ ವರ್ಷ ಸ್ಥಾಯಿ ಸಮಿತಿಗಳ ರಚನೆ ವಿಳಂಬವಾದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಬಜೆಟ್ ಕಾರ್ಯಕ್ರಮಗಳ ಅನುಷ್ಠಾನ ಸಾಧ್ಯವಾಗಲಿಲ್ಲ. ಆದರೆ, ಈ ಬಾರಿ ವಾಸ್ತವಿಕ ಬಜೆಟ್ ಮಂಡಿಸಲಾಗುವುದು.

ಪ್ರಸಕ್ತ ವರ್ಷದ ಅವಧಿಯಲ್ಲೇ ಘೋಷಿತ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಪ್ರಯತ್ನಿಸಲಾಗುವುದು. ಮಾಸಾಂತ್ಯಕ್ಕೆ ಬಜೆಟ್ ಮಂಡಿಸಲಾಗುವುದು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT