ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸಾಶನದ ಆಗಮನದಲ್ಲಿ ಕಲಾವಿದನ ಬದುಕು ಮುಸ್ಸಂಜೆ

Last Updated 12 ನವೆಂಬರ್ 2011, 6:20 IST
ಅಕ್ಷರ ಗಾತ್ರ

ಗಜೇಂದ್ರಗಡ: ತಮ್ಮ ಕಲಾ ಕೌಶಲದಿಂದ ಪ್ರೇಕ್ಷಕರಿಗೆ ಸಂತೋಷ, ನೆಮ್ಮದಿ ನೀಡುವ ಹಲವು ಕಲಾವಿದರ ಬದುಕು ಶೋಚನೀಯ ಸ್ಥಿತಿಯಲ್ಲಿದೆ. ಕಲಾ ಪ್ರಿಯರಿಗೆ ಸಿಹಿ ನೀಡುವ ಕಲಾವಿದರ ಬದುಕು ಕಹಿಯಾದರೆ ಕಲಾ ಪೋಷಣೆ ಹೇಗೆ ಸಾಧ್ಯವಾದೀತು? ಇದಕ್ಕೆ ಸೂಕ್ತ ನಿದರ್ಶನ ಇಲ್ಲಿದೆ.

ಹೌದು, ಸಮೀಪದ ಸೂಡಿ ಗ್ರಾಮದ ಎಂಬತ್ತೊಂದು ವರ್ಷದ ಹಿರಿಯ ಕಲಾ ಕಲಾವಿದ, ಸಂಗೀತ ಸಂಯೋಜಕ ಹಾಗೂ ನಿರ್ದೇಶಕ ಜುಮ್ಮಣ್ಣ ಭಜಂತ್ರಿ ರಂಗಭೂಮಿಗಾಗಿ ಜೀವನವನ್ನೆ ತೇಯ್ದರು. ಸರ್ಕಾರದ ಮಾಸಾಶನದ ಭಾಗ್ಯ ಇವರಿಗಿಲ್ಲ. ಈಗಲೋ ಆಗಲೋ ಬಿದ್ದು ಹೋಗುವ ಮುರುಕಲು ಮನೆಯಲ್ಲಿ ಮುಸ್ಸಂಜೆಯ ಬದುಕು ಸಾಗಿಸುತ್ತಿದ್ದಾರೆ.

ಇವರ ಆರೈಕೆಗೆ ಪತ್ನಿಯನ್ನು ಹೊರತು ಪಡಿಸಿದರೆ ಬೇರಾರೂ ಇಲ್ಲ. ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ. ಬದುಕಿನ ಮುಸ್ಸಂಜೆಯಲ್ಲಿ ಮಾಸಾಶನ ಪಡೆಯಬೇಕೆಂಬ ಅದಮ್ಯ ಬಯಕೆ... ಅದಕ್ಕಾಗಿ ತಿರುಗದೆ ಇರುವ ಕಚೇರಿಯಿಲ್ಲ.

ನಾಡಿನ ಉದ್ದಗಲಕ್ಕೂ ಆರು ದಶಕಗಳಲ್ಲಿ ಸುಮಾರು 2500 ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ಸಂಯೋಜನೆ, ನಿರ್ದೇಶನದ ಜೊತೆಗೆ ಕೆಲ ನಾಟಕಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡು ಭಜಂತ್ರಿ ಜುಮ್ಮಣ್ಣ ಮಾಸ್ತರ್ ಎಂದೇ ಖ್ಯಾತಿ ಪಡೆದಿದ್ದಾರೆ. ಆದರೂ ಇವರಿಗೆ ಉನ್ನತ ಕಲಾ ಪ್ರಶಸ್ತಿಗಳು ದೊರಕದೆ ಇರುವುದು ವಿಪರ್ಯಾಸ.

ಜುಮ್ಮಣ್ಣ ಅವರು ಹಾರ್ಮೋನಿಯಂ ಹಾಗೂ ಜಲತರಂಗ ಎಂಬ ಸಂಗೀತ ವಾದ್ಯದಲ್ಲಿ ಪರಿಣಿತರು. ರಂಗಭೂಮಿಗೆ ತಮ್ಮದೇ ಆದ ಸೇವೆ ಸಲ್ಲಿಸಿದರು. ಕೆ.ಬಿ.ಆರ್. ಡ್ರಾಮಾ, ಕಮತಗಿ ಹೊಳೆ ಹುಚ್ಚೇಶ್ವರ ನಾಟ್ಯ ಸಂಘ,  ಚಿಂದೋಡಿ ಲೀಲಾ, ಅರಶಿಣಗೋಡಿ, ಕೊಟ್ರೇಶ್ವರ, ಭಾರತಿ, ಹುಚ್ಚೇಶ್ವರ, ಶ್ರೀರಂಜನ ಕರ್ನಾಟಕ, ಶ್ರೀಶೈಲ ನಾಟ್ಯ ಸಂಘಗಳ ಸಾವಿರಾರು ನಾಟಕಗಳಿಗೆ ಸಂಗೀತ ನೀಡಿದ ಕೀರ್ತಿ ಇವರದ್ದಾಗಿದೆ.

ಜುಮ್ಮಣ್ಣ ಭಜಂತ್ರಿ ಸಂಗೀತದಲ್ಲಿ ಆಸಕ್ತರಾಗಿ ಗದುಗಿನ  ಪಂಡಿತ ಪಂಚಾಕ್ಷರಿ ಗವಾಯಿಗಳ ಆಶ್ರಮದಲ್ಲಿ ಸಂಗೀತ ವಿದ್ಯೆ ಪಡೆದರು. 18ನೇ ವಯಸ್ಸಿನಲ್ಲಿಯೇ ನಾಟಕಗಳಿಗೆ ಹಾರ್ಮೋನಿಯಂ, ರಂಗ ವಾದಕರಾಗಿ ಸೇವೆ ಆರಂಭಿಸಿದರು. ತೀರಾ ಬಡತನದ ಕುಟುಂಬದರಾಗಿದ್ದರಿಂದ ಅವರ ಸಂಗೀತಕ್ಕೆ ಸೂಕ್ತ ಮಾನ್ಯತೆ ದೊರೆಕಲೇ ಇಲ್ಲ.

ಇವರಿಗೆ ಮೂವರು ಹೆಣ್ಣು ಮಕ್ಕಳು. ಆದರೆ ಇಳಿವಯಸ್ಸಿನ ಜುಮ್ಮಣ್ಣ ಎಪ್ಪತ್ನಾಲ್ಕು ವರ್ಷದ ಗಂಗಮ್ಮ ದಂಪತಿಗಳು ಸಂಪೂರ್ಣ ನಿಶ್ಶಕ್ತರಾಗಿದ್ದಾರೆ. ದುಡಿಯಲು ತೋಳಲ್ಲಿ ಶಕ್ತಿಯಿಲ್ಲ. ಜುಮ್ಮಣ್ಣ ಅವರಿಗೆ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ಪತ್ನಿ ಗಂಗಮ್ಮಳ ಸಹಾಯದಿಂದಲೇ ನಿತ್ಯದ ಕರ್ಮಾಧಿಗಳು ನಡೆಯಬೇಕು. ಹೀಗಿದ್ದರೂ ಮಕ್ಕಳಾಗಲಿ, ಮೊಮ್ಮಕ್ಕಳಾಗಲಿ ಈ ದಂಪತಿಗಳನ್ನು ತಿರುಗಿ ನೋಡದಿರುವುದು ಶೋಚನಿಯ ಸಂಗತಿ.

ಸಂಗ್ಯಾ ಬಾಳ್ಯಾ, ಗೌಡರ ದರ್ಪ, ಬಸ್ ಕಂಡಕ್ಟರ್, ಎಚ್ಚರ ತಂಗಿ ಎಚ್ಚರ, ಗೌಡ್ರಗದ್ಲ, ರಕ್ತ ರಾತ್ರಿಯ ಭಾನಾಮತಿ, ಅಶ್ವತ್ಥಾಮದ ದುರ್ಯೋಧನ ಹೀಗೆ ಪೌರಾಣಿಕ, ಸಾಮಾಜಿಕ, ಧಾರ್ಮಿಕ ಸಾವಿರಾರು ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿದಲ್ಲದೇ, ನಾಡಿನ ಹೆಸರಾಂತ ಗುಡಗೇರಿ ಬಸವರಾಜ, ಏಣಗಿ ಬಾಳಪ್ಪ, ಚಿಂದೋಡಿ ಲೀಲಾ, ಬಿ.ಆರ್. ಅರಿಶಿಣಗೋಡಿ, ಪಂ. ಬಸವರಾಜ ರಾಜಗುರು, ಧೀರೇಂದ್ರ ಗೋಪಾಲ, ರಾಜೇಶ, ಸುಧೀರ್, ಶ್ರೀನಿವಾಸ ಮೂರ್ತಿ, ಬ್ರಹ್ಮಾವರ ಕುಮಾರದಾಸ, ವೆಂಕಟೇಶ ಕುಮಾರ ಖ್ಯಾತರಾಮರೊಂದಿಗೆ ಒಡನಾಟವನ್ನು ಮೆಲುಕು ಹಾಕುತ್ತಾರೆ. ಇವರ ಸಂಗೀತ ಎಷ್ಟೋಂದು ಪ್ರಸಿದ್ದಿ ಪಡೆದಿತ್ತೆಂದರೆ 1993 ರಲ್ಲಿ ಕೊಪ್ಪಳದಲ್ಲಿ ನಡೆದ 62ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಖ್ಯಾತ ನಾಮರಾದ ಕುಮಾರದಾಸ. ವೆಂಕಟೇಶ ಕುಮಾರರೊಂದಿಗೆ ಸಂಗೀತ ಕಾರ್ಯಕ್ರಮ ನೀಡಿದ್ದನ್ನು ಸ್ಮರಿಸಬಹುದಾಗಿದೆ.

ಜುಮ್ಮಣ್ಣ ಭಜಂತ್ರಿ ಅವರಿಗೆ ಈಗ 81ರ ಇಳಿ ವಯಸ್ಸು. ಸಧ್ಯ ದುಡಿಮೆ ಈ ವೃದ್ಧ ದಂಪತಿಗಳಿಗೆ ಅಸಾಧ್ಯ. ಯಾವುದೇ ಆದಾಯವೂ ಇಲ್ಲ. ಸರ್ಕಾರ 60 ವರ್ಷ ಮೇಲ್ಪಟ್ಟವರಿಗೆ ನೀಡುತ್ತಿರುವ 400 ರೂಪಾಯಿ ವೃದ್ಧಾಪ್ಯ ವೇತನ ದೊರೆಯುತ್ತಿದೆ. ಆದರೆ, ತಿಂಗಳ ಪೂರ್ತಿ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊಟ್ಟೆ ತುಂಬಿಸಿಕೊಳ್ಳು ವುದು ಹೇಗೆ? ಎಂಬ ಚಿಂತೆಯಲ್ಲಿ ಕಲಾವಿದ ದಂಪತಿಗಳು ದಿನ ಕಳೆಯುವಂತಾಗಿದೆ.

ಸಂಗೀತ ಕಲೆಯನ್ನೇ ಉಸಿರಾಗಿಸಿಕೊಂಡ ಜುಮ್ಮಣ ಭಜಂತ್ರಿ ಅವರಿಗೆ ಸರ್ಕಾರ ಕಲಾವಿದರಿಗೆ ನೀಡುವ ಗೌರವ ಧನ ನೀಡಬೇಕು, ಜನಪ್ರತಿನಿಧಿಗಳು ಕಲಾವಿದನ ಉಳಿದ ಜೀವನ ನೆಮ್ಮದಿಯಿಂದ ಕಳೆಯುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಕಲಾಪ್ರಿಯರ ಆಶಯ.

ಕಳೆದ 15 ವರ್ಷಗಳಿಂದ ಸರ್ಕಾರದ ಕಲಾವಿದರ ಮಾಸಾಶನ ಸೌಲಭ್ಯಕ್ಕಾಗಿ ಸ್ಥಳೀಯ ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಮನೆ, ಸರ್ಕಾರಿ ಕಚೇರಿಗಳ ಬಾಗಿಲು ತಟ್ಟಿದ್ದಾರೆ. ಹೀಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
`ಕಲಾವಿದರ ಬದುಕೇ ಹೀಗೆ ವಯಸ್ಸಾದ ಮ್ಯಾಲ್ ತುತ್ ಕೂಳಿಗೂ ಬರಾ. ಕಲಾವಿದರಾಗಿ ಹುಟ್ಟ ಬಾರದ್ರೀಪಾ ಎಪ್ಪಾ...~ಎಂದು ಜುಮ್ಮಣ್ಣ ದಂಪತಿಗಳು ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT