ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸಿಮಾಡುವಿನಲ್ಲಿ ವಿಜ್ಞಾನೇಶ್ವರ ಸ್ಮಾರಕ

Last Updated 28 ಫೆಬ್ರುವರಿ 2011, 6:45 IST
ಅಕ್ಷರ ಗಾತ್ರ

ಬೀದರ್: ಹಿಂದೂ ಕಾನೂನು ಗ್ರಂಥ ‘ಮಿತಾಕ್ಷರ’ ರಚಿಸಿದ ವಿಜ್ಞಾನೇಶ್ವರ ಹುಟ್ಟಿದ ಮಾಸಿಮಾಡುವಿನಲ್ಲಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಮಾರಕ ಭವನ ನಿರ್ಮಿಸಲಾಗುತ್ತದೆ ಎಂದು ಶಾಸಕ ಈಶ್ವರ ಖಂಡ್ರೆ ಪ್ರಕಟಿಸಿದರು. ಭಾಲ್ಕಿ ತಾಲ್ಲೂಕಿನ ಮಾಸಿಮಾಡದಲ್ಲಿ ನಡೆದ ಖಟಕ್‌ಚಿಂಚೋಳಿ ವಲಯ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನೇಶ್ವರನ ಸಾಧನೆ- ಕೊಡುಗೆಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವ ಅಗತ್ಯವಿದೆ ಎಂದ ಶಾಸಕರು ಸ್ಮಾರಕ ಭವನಕ್ಕಾಗಿ ಶಾಸಕರ ನಿಧಿಯಿಂದ ಐದು ಲಕ್ಷ ರೂಪಾಯಿ ನೀಡುವುದಾಗಿ ಪ್ರಕಟಿಸಿದರು. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ವಿ.ಎಂ. ಡಾಕುಳಗಿ ಅವರು ಮಾತನಾಡಿ ‘ಸ್ವಾತಂತ್ರ್ಯ ಬಂದು ಆರು ದಶಕಗಳ ನಂತರವೂ ಗಡಿನಾಡಿನಲ್ಲಿ ಕನ್ನಡ ಶಾಲೆಗಳಿಲ್ಲದ ಸ್ಥಿತಿ ಇದೆ. ಹಾಗೆಯೇ ಕನ್ನಡ ಶಾಲೆಗಳಿರುವ ಕಡೆಗಳಲ್ಲಿ ಶಿಕ್ಷಕರ ಕೊರತೆಯಿದೆ’ ಎಂದು ವಿಷಾದಿಸಿದರು.

ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಕೇಂದ್ರಗಳಾಗಿರುವುದರಿಂದ ಬಡವರಿಗೆ ಶಿಕ್ಷಣ ದೊರಕುತ್ತಿಲ್ಲ. ಶಿಕ್ಷಣ ರಾಷ್ಟ್ರೀಕರಣ ಮಾಡುವುದರಿಂದ ಮಾತ್ರ ರೈತರ ಮಕ್ಕಳಿಗೆ ಹಾಗೂ ಬಡವರಿಗೆ ಸೂಕ್ತ ಶಿಕ್ಷಣ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರಂಜಾ ಆಣೆಕಟ್ಟೆಗಾಗಿ ಐದುನೂರು ಕೋಟಿ ರೂಪಾಯಿ ಖರ್ಚಾದರೂ ಯೋಜನೆ ಪೂರ್ಣಗೊಂಡಿಲ್ಲ. ಒಂದೆಡೆರೈತರ ಹೊಲಗಳಿಗೆ ನೀರು ಹೋಗುತ್ತಿಲ್ಲ, ಮತ್ತೊಂದೆಡೆ ಹೊಲ ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ, ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀದೇವಿ ಪಾಟೀಲ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೆಂಕಟ ಮೇತ್ರೆ, ಶಾಂತಕುಮಾರ ಮುದಾಳೆ, ಗ್ರಾಮ ಪಂಚಾಯಿತಿ ಸದಸ್ಯ ವಿಜಯಕುಮಾರ ಸೋನಾರೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ವಿಜ್ಞಾನೇಶ್ವರನ ಕುರಿತು ಹಿರಿಯ ಸಾಹಿತಿ ಪ್ರೊ. ಬಿ.ಆರ್.ಕೊಂಡಾ, ಜಾನಪದ ಸಾಹಿತ್ಯ ಕುರಿತು ಎಚ್. ಕಾಶೀನಾಥರೆಡ್ಡಿ ವಿಶೇಷ ಉಪನ್ಯಾಸ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT