ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಟರ್ ಪ್ಲಾನ್: ಪರಿಹಾರಕ್ಕೆ ಜಿಲ್ಲಾ ಆಡಳಿತ ಸಮ್ಮತಿ

Last Updated 3 ಜನವರಿ 2012, 4:30 IST
ಅಕ್ಷರ ಗಾತ್ರ

ವಿಜಾಪುರ: ನಗರದಲ್ಲಿ ಮಾಸ್ಟರ್ ಪ್ಲಾನ್ ಜಾರಿಯಿಂದ ತೆರವುಗೊಳಿಸಲಿರುವ ಖಾಸಗಿ ಆಸ್ತಿಗಳಿಗೆ ಪರಿಹಾರ ನೀಡಲು ಜಿಲ್ಲಾ ಆಡಳಿತ ಕೊನೆಗೂ ಒಪ್ಪಿಕೊಂಡಿದೆ. ಆದರೆ, ಪರಿಹಾರದ ಮೊತ್ತ ಎಷ್ಟು? ಮತ್ತು ಅದನ್ನು ಯಾವಾಗ ಪಾವತಿಸಲಾಗುತ್ತದೆ? ಎಂಬ ಗೊಂದಲ ಇನ್ನೂ ಮುಂದುವರೆದಿದೆ.

`ನಗರ ಯೋಜನಾ ಪ್ರದೇಶದಲ್ಲಿರುವ ಖಾಸಗಿ ಆಸ್ತಿಗಳನ್ನು ನಾವೇ ಪ್ರಮಾಣಿಕರಿಸಿದ್ದೇವೆ. ಪರಿಹಾರ ಕೊಡದೇ ಅವುಗಳನ್ನು ತೆರವುಗೊಳಿಸುತ್ತೇವೆ ಎಂದು ಹೇಳಿದರೆ ತಪ್ಪಾಗುತ್ತದೆ. ಹೀಗಾಗಿ ಪರಿಹಾರ ನೀಡಲು ಜಿಲ್ಲಾ ಆಡಳಿತ ಸಮ್ಮತಿಸಿದೆ~ ಎಂದು ಸೋಮವಾರ ತಮ್ಮ ಕಚೇರಿಯಲ್ಲಿ ಕರೆದಿದ್ದ  ಆಸ್ತಿ ಮಾಲೀಕರ ಸಭೆಯಲ್ಲಿ ಪ್ರಭಾರ ಜಿಲ್ಲಾಧಿಕಾರಿ ಕಾಶಿನಾಥ ಪವಾರ ಪ್ರಕಟಿಸಿದರು.

`ಮಾಸ್ಟರ್ ಪ್ಲಾನ್ ಜಾರಿಯ ವ್ಯಾಪ್ತಿಯಲ್ಲಿರುವ ವಸತಿ, ವಾಣಿಜ್ಯ ನಿವೇಶನ, ಹಳೆಯ ಮತ್ತು ಹೊಸ ಕಟ್ಟಡಗಳಿಗೆ ದರ ನಿಗದಿ ಮಾಡಬೇಕು. ಎಷ್ಟು ಪ್ರದೇಶವನ್ನು ತೆರವುಗೊಳಿಸಲಾಗುವುದು ಮತ್ತು ಎಂದು ತೆರವುಗೊಳಿಸಲಾಗುವುದು ಎಂಬ ಬಗ್ಗೆ ಪ್ರತಿ ಆಸ್ತಿ ಮಾಲೀಕರಿಗೆ ಜಿಲ್ಲಾ ಆಡಳಿತ ನೋಟೀಸ್ ಜಾರಿಮಾಡಬೇಕು. ಮೊದಲು ಪರಿಹಾರ ನೀಡಿ. ನಮ್ಮ ಆಸ್ತಿಯನ್ನು ನಾವೇ ತೆರವುಗೊಳಿಸುತ್ತೇವೆ~ ಎಂದು ಸಭೆಯಲ್ಲಿದ್ದ ಗಾಂಧಿಚೌಕ್‌ನಿಂದ ಗೋಲಗುಮ್ಮಟ ಪೊಲೀಸ್ ಠಾಣೆ ವರೆಗಿನ ಮುಖ್ಯ ರಸ್ತೆಯ ಆಸ್ತಿಗಳ ಮಾಲೀಕರು ಪಟ್ಟು ಹಿಡಿದರು.

`ಪರಿಹಾರ ನೀಡುವುದು ಗ್ಯಾರಂಟಿ. ಆದರೆ, ಪರಿಹಾರ ನೀಡಿದ ನಂತರವೇ ಕೆಲಸ ಆರಂಭಿಸಬೇಕು ಎಂದು ಹೇಳುವುದು ಸರಿಯಲ್ಲ. ಎಲ್ಲಿಯೂ ಮೊದಲು ಪರಿಹಾರ ನೀಡಿಲ್ಲ.  ಮಾಸ್ಟರ್ ಪ್ಲಾನ್‌ನಿಂದ ಹಾನಿಯಾಗಲಿರುವ ಎಲ್ಲ ಆಸ್ತಿಗಳ ವಿವರ ಜಿಲ್ಲಾ ಆಡಳಿತದ ಬಳಿ ಇದೆ. ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಆದಷ್ಟು ಬೇಗ ಪರಿಹಾರ ಕೊಡಿಸಲಾಗುವುದು. ಸರ್ಕಾರದ ಮೇಲೆ ವಿಶ್ವಾಸವಿಟ್ಟು ಸ್ವಯಂ ಪ್ರೇರಿತರಾಗಿ ಕಟ್ಟಡ ತೆರವುಗೊಳಿಸಿಕೊಳ್ಳಬೇಕು~ ಎಂದು ಕಾಶಿನಾಥ ಮನವಿ ಮಾಡಿದರು.

ಈ ಹಿಂದೆ ಮಾಡಿರುವ ಮಾರ್ಕಿಂಗ್ ದೋಷ ಪೂರಿತವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆಸ್ತಿಗಳ ಮಾಲೀಕರ ಸಮ್ಮುಖದಲ್ಲಿ ಪಾರದರ್ಶಕವಾಗಿ ಆ ಮಾರ್ಕಿಂಗ್‌ನ್ನು ಪುನರ್ ಪರಿಶೀಲಿಸಲು ಮತ್ತು ತಪ್ಪಾಗಿದ್ದರೆ ಸರಿಪಡಿಸಲು ಡಿಸಿ ಭರವಸೆ ನೀಡಿದರು.

`ಮಾಸ್ಟರ್ ಪ್ಲಾನ್ ಜಾರಿಯ ಮಾತು 30 ವರ್ಷದಿಂದ ಜಾರಿಯಲ್ಲಿದೆ. ಅದರ ಜಾರಿಯಾದರೂ ಎಂದು?~, `ಈ ರಸ್ತೆ 100 ಅಡಿ ಬೇಡ. 80 ಅಡಿ ಸಾಕು~, `ಒಳಚರಂಡಿ ಕಾಮಗಾರಿಗೇ ಅನುಮತಿ ಪಡೆದಿಲ್ಲ. ಇದೂ ಅದರಂತೆ ಆಗುವುದು ಬೇಡ. ಮೊದಲು ಎಲ್ಲವನ್ನೂ ಸರಿಮಾಡಿಕೊಂಡು ಆ ಮೇಲೆ ಕೈ ಹಾಕಿ~ ಎಂಬಿತ್ಯಾದಿ ಸಲಹೆ-ಪ್ರಶ್ನೆಗಳು ತೂರಿ ಬಂದವು.

`ನೀವು ಹೇಳುವುದು ಸರಿ. ನಿಮ್ಮ ಜಾಗೆಯಲ್ಲಿ ಬೇರೆ ಅಧಿಕಾರಿ ಬಂದರೆ ಹೇಗೆ? ಪಟೇಲ್‌ಗಲ್ಲಿ ಹಾಳು ಮಾಡಿ ವರ್ಷವಾದರೂ ಅವರಿಗೆ ಪುನರ್ವಸತಿ ಕಲ್ಪಿಸಿಲ್ಲ. ನಮ್ಮ ಸ್ಥಿತಿಯೂ ಅವರಂತೆ ಆಗುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ?~ ಎಂದು ಆಸ್ತಿಗಳ ಮಾಲೀಕರು ಆತಂಕ ವ್ಯಕ್ತಪಡಿಸಿದರು.

`ವಿಜಾಪುರದಲ್ಲಿ ಮಾಸ್ಟರ್ ಪ್ಲಾನ್ ಜಾರಿ ಅನಿವಾರ್ಯ. ನನ್ನ ಕೈಲಾಗದಿದ್ದರೆ ಮುಂದಿನವರು ಮಾಡಲೇಬೇಕು. ಇದು ಬಿಡಲಾರದ ಕರ್ಮ.  ಮಾಸ್ಟರ್ ಪ್ಲಾನ್ ಜಾರಿಯಾದರೆ ಮೂಲಸೌಕರ್ಯಗಳು ಬರುತ್ತವೆ. ಯಾವುದೇ ಕಾರಣಕ್ಕೂ ಜಿಲ್ಲಾ ಆಡಳಿತ ಏಕಪಕ್ಷೀಯವಾಗಿ ವರ್ತಿಸುವುದಿಲ್ಲ. ಆಸ್ತಿಗಳ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಕೆಲಸ ಮಾಡುತ್ತೇವೆ~ ಎಂದು ಡಿಸಿ ಹೇಳಿದರು.

`ಅಭಿವೃದ್ಧಿ ಮಾಡುವಾಗ ಲಾಭ-ಹಾನಿ ಸಾಮಾನ್ಯ. ನಗರದಲ್ಲಿ ಬಹುಮಹಡಿ ಕಟ್ಟಡಗಳಿಗೆ ಅನುಮತಿ ಪಡೆಯುವ ಬಗ್ಗೆ ಪುರಾತತ್ವ ಸರ್ವೇಕ್ಷಣ ಇಲಾಖೆಯೊಂದಿಗೆ ಪ್ರಾಥಮಿಕ ಚರ್ಚಿ ನಡೆದಿದೆ. ಮಾಸ್ಟರ್ ಪ್ಲಾನ್‌ಗೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಪರಿಹಾರ ನೀಡಬೇಕು ಎಂಬುದು ನಮ್ಮದು ಮತ್ತು ಎಲ್ಲ ಜನಪ್ರತಿನಿಧಿಗಳ ಭಾವನೆ. ನಾವು ಯಾರನ್ನೂ ನಿರ್ಗತಿಕರನ್ನಾಗಿ ಮಾಡಲ್ಲ. ಈಗ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ~ ಎಂದರು.
ಅಧಿಕಾರಿಗಳಾದ ಗಂಗೂಬಾಯಿ ಮಾನಕರ, ರಾಜಶ್ರೀ ಜೈನಾಪುರ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT