ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಆಯೋಗದ ನಾಯಕ

Last Updated 12 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕರ್ನಾಟಕ ಮಾಹಿತಿ ಆಯೋಗದ ನೂತನ ಮುಖ್ಯಮಾಹಿತಿ ಆಯುಕ್ತರಾಗಿ ಈಚೆಗೆ ಅಧಿಕಾರ ಸ್ವೀಕರಿಸಿರುವ ಎ.ಕೆ.ಎಂ.ನಾಯಕ್ ಅವರು ಸುಮಾರು 36 ವರ್ಷಗಳ ಕಾಲ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ಅನುಭವಿ. ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ  ನಿವೃತ್ತರಾದವರು.  ದಕ್ಷ ಆಡಳಿತಗಾರ. ನಾಯಕ್ ಉತ್ತರ ಕನ್ನಡ ಜಿಲ್ಲೆಯ ಕುಮಟಾದವರು. ಬಿಎಸ್ಸಿ, ಎಲ್‌ಎಲ್‌ಬಿ (ಸ್ಪೆಷಲ್), ಎಲ್‌ಎಲ್‌ಎಂ ಪದವಿ ಪಡೆದು ನಂತರ ಭಾರತೀಯ ಆಡಳಿತ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 1974ರಲ್ಲಿ ಐಎಎಸ್ ಅಧಿಕಾರಿಯಾಗಿ (ಕರ್ನಾಟಕ ಕೇಡರ್) ನೇಮಕಗೊಂಡರು. ಕೇಂದ್ರ ಸರ್ಕಾರದ ಸೇವೆಗೆ ತೆರಳದೆ ರಾಜ್ಯದಲ್ಲಿ ತಮ್ಮ ಸೇವಾವಧಿಯನ್ನು ಪೂರ್ಣಗೊಳಿಸಿದವರು.

ಸಾಮಾನ್ಯವಾಗಿ ಐಎಎಸ್ ಅಧಿಕಾರಿಗಳು ಪ್ರತಿ 2-3 ವರ್ಷಕ್ಕೊಮ್ಮೆ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ವರ್ಗಾಣೆಯಾಗುವುದು ಸಾಮಾನ್ಯ. ಆದರೆ ನಾಯಕ್ ಜಲಸಂಪನ್ಮೂಲ ಇಲಾಖೆಯಲ್ಲಿ ಐದು ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ್ದು ವಿಶೇಷ. ಕಾವೇರಿ ಮತ್ತು ಕೃಷ್ಣಾ ನದಿಗಳ ನೀರು ಹಂಚಿಕೆ ವಿವಾದ ಬಗೆ ಹರಿಸುವ ಪ್ರಯತ್ನದಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.

ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ವಕೀಲರು ಮತ್ತು ತಾಂತ್ರಿಕ ಸಿಬ್ಬಂದಿಗೆ ಕಾಲ ಕಾಲಕ್ಕೆ ಸೂಕ್ತ ಮಾಹಿತಿ ಒದಗಿಸುವ ಮೂಲಕ ನ್ಯಾಯಮಂಡಳಿಯ ಮುಂದೆ ವಾದ ಮಂಡಿಸಲು ನೆರವಾಗಿದ್ದನ್ನು ಅವರು ಈಗಲೂ ಸ್ಮರಿಸಿಕೊಳ್ಳುತ್ತಾರೆ. ಜಲಸಂಪನ್ಮೂಲ ಇಲಾಖೆಯಲ್ಲಿ ಮಾಡಿದ ಕೆಲಸ ನನಗೆ ಹೆಚ್ಚು ತೃಪ್ತಿ ತಂದಿದೆ ಎನ್ನುತ್ತಾರೆ ನಾಯಕ್. ಈಗ ಕರ್ನಾಟಕ ರಾಜ್ಯ ಮಾಹಿತಿ ಆಯೋಗವನ್ನು ಮುನ್ನಡೆಸುವ ಜವಾಬ್ದಾರಿ ಅವರ ಹೆಗಲ ಮೇಲಿದೆ. ಈ ಹಿನ್ನೆಲೆಯಲ್ಲಿ ನಾಯಕ್ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಮಾತುಕತೆಗಳ ಸಾರಾಂಶ ಇಲ್ಲಿದೆ.

* ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ತಂದ ಉದ್ದೇಶ ಈಡೇರಿದೆಯೇ?
ಕಾಯ್ದೆ ತುಂಬಾ ಒಳ್ಳೆಯದು. ಆದರೆ ಅರ್ಜಿದಾರರಿಗೆ 30 ದಿನಗಳಲ್ಲಿ ಮಾಹಿತಿ ನೀಡಬೇಕು ಎಂಬ ಅರಿವು ಬಹುತೇಕ ಅಧಿಕಾರಿಗಳಿಗೆ ಇಲ್ಲ ಎಂಬುದು ನನ್ನ ಅನುಭವಕ್ಕೆ ಬಂದಿದೆ. ರಾಯಚೂರಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರಿಗೆ ಅರ್ಜಿದಾರರೊಬ್ಬರು ಮೂರು ವರ್ಷಗಳ ಆಡಿಟ್ ವರದಿ ನೀಡುವಂತೆ ಕೇಳಿದ್ದರು. ಆದರೆ ಆ ಮಾಹಿತಿಯನ್ನು ನೀಡಬೇಕು ಎಂಬುದೇ ಆ ಅಧಿಕಾರಿಗೆ ಗೊತ್ತಿಲ್ಲ.

ಅಧಿಕಾರಿಗಳು ಜನರಿಗೆ ಬೇಕಾದ ಮಾಹಿತಿಗಳನ್ನು ಕೊಡಬೇಕು. ಇಲ್ಲವಾದರೆ ಅರ್ಜಿ ಹಾಕಿ ಸಣ್ಣ,ಪುಟ್ಟ ಮಾಹಿತಿ ಕೊಡಿ ಎಂದು ಜನರು ಆಯೋಗದ ಮುಂದೆ ಬರುತ್ತಾರೆ. ಇದರಿಂದ ಎಲ್ಲರಿಗೂ ತೊಂದರೆ. ಅರ್ಜಿದಾರರಿಗೆ ಮಾಹಿತಿ ಕೊಡಲು ವಿಳಂಬ ಮಾಡಬಾರದು. ಒಂದೆರಡು ವರ್ಷಗಳ ನಂತರ ಮಾಹಿತಿ ಕೊಟ್ಟರೆ ಏನು ಪ್ರಯೋಜನ? ಹೀಗಾಗಿ ಕಾಲ ಕಾಲಕ್ಕೆ ಬಂದ ಅರ್ಜಿಗಳನ್ನು ಗಮನಿಸಿ ವಿಲೇವಾರಿ ಮಾಡಬೇಕು. ಈ ವ್ಯವಸ್ಥೆಯನ್ನು ಪರಿಶೀಲಿಸಲು  ತಾಲ್ಲೂಕು, ಉಪ ವಿಭಾಗ, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ  ತುರ್ತು ಗಮನ ಕೊಡಬೇಕು.

ಕೆಳಹಂತದಲ್ಲಿ ಶೇ 75ರಷ್ಟು ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ. ಮೇಲ್ಮನವಿ ಪ್ರಾಧಿಕಾರ ಯಾವುದು ಎಂಬುದು ಗೊತ್ತಿಲ್ಲ. ಇಲಾಖೆಗಳ ಮುಖ್ಯಸ್ಥರು ಆಗಾಗ ಸಭೆ ಕರೆದು ಪರಿಶೀಲಿಸಿ ಮಾರ್ಗದರ್ಶನ ನೀಡಬೇಕು. ಎಲ್ಲ ಹಂತಗಳಲ್ಲೂ ದೂರುಗಳು ತ್ವರಿತವಾಗಿ ಇತ್ಯರ್ಥವಾಗಬೇಕು.
ದೂರು ಬಂದ ನಂತರ 5-6 ಬಾರಿ ಸಂಬಂಧಪಟ್ಟವರನ್ನು ಕರೆದು ವಿಚಾರಣೆ ನಡೆಸಬೇಕು. ಇಲ್ಲವಾದರೆ ಆಯೋಗಕ್ಕೆ ಒಳ್ಳೆಯ ಹೆಸರು ಬರುವುದಿಲ್ಲ.ಕೆಳ ಹಂತದಲ್ಲಿ ಅರ್ಜಿ ಹಾಕಿದವರಿಗೆ ಮಾಹಿತಿ ಕೊಡಬೇಕು. ಒಂದು ವೇಳೆ ಕೊಡಲು ಆಗದಿದ್ದರೆ ಮೇಲ್ಮನವಿ ಪ್ರಾಧಿಕಾರಕ್ಕೆ ಬರೆಯಬೇಕು.

ಇಲ್ಲದಿದ್ದರೆ ಪರಿಣಾಮಕಾರಿಯಾಗಿ ಕಾಯ್ದೆಯ ಅನುಷ್ಠಾನವಾಗುವುದಿಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ (ಜನಸ್ಪಂದನ) ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದೇನೆ. ಹಳೆಯ ಪ್ರಕರಣಗಳ ಬಗ್ಗೆ ಮಾಹಿತಿ ಕೊಡಿ ಎಂದು ಕೇಳಿದ್ದೇನೆ. ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಆಯುಕ್ತರು, ಇಲಾಖೆಗಳ ಮುಖ್ಯಸ್ಥರು ಸಕ್ರಿಯರಾಗಿ  ಇದು ನಮ್ಮೆಲ್ಲರ  ಜವಾಬ್ದಾರಿ ಎಂದು ಭಾವಿಸಿದಾಗ ಮಾತ್ರ ಮಾಹಿತಿ ಹಕ್ಕು ಕಾಯ್ದೆಯ ಉದ್ದೇಶ ಈಡೇರುತ್ತದೆ. ಪ್ರತಿಯೊಂದು ಪ್ರಕರಣವನ್ನೂ ಆಯೋಗಕ್ಕೆ ತರುವುದು ಸರಿಯಲ್ಲ. ಕೆಳಹಂತದಲ್ಲಿ ನ್ಯಾಯ ಸಿಗದ
ಪ್ರಕರಣಗಳನ್ನು ಮಾತ್ರ ಆಯೋಗದ ಗಮನಕ್ಕೆ ತರಬೇಕು.

* ಎಷ್ಟು ಜನಕ್ಕೆ ಮಾಹಿತಿ ಹಕ್ಕು ಕಾಯ್ದೆಯ ಅರಿವಿದೆ?
 ಸಾಕಷ್ಟು ಜನರಿಗೆ ಅರಿವು ಇದೆ. ಮಾಹಿತಿ ಕೋರಿ ಸಲ್ಲಿಸುತ್ತಿರುವ ಅರ್ಜಿಗಳನ್ನು ನೋಡಿದರೆ ಗೊತ್ತಾಗುತ್ತದೆ. ಆದರೆ ಗ್ರಾಮೀಣ ಪ್ರದೇಶದಿಂದ ಹೆಚ್ಚಿನ ಅರ್ಜಿಗಳು ಬರುತ್ತಿವೆಯೊ, ನಗರ ಪ್ರದೇಶದಿಂದ ಬರುತ್ತಿವೆಯೊ ಎಂಬ ವಿಶ್ಲೇಷಣೆ ಮಾಡಬೇಕಿದೆ.

* ಕಾಯ್ದೆಯ ಬಗ್ಗೆ ಅರಿವು ಮೂಡಿಸಲು ಏನು ಕ್ರಮ ಕೈಗೊಂಡಿದ್ದೀರಿ?
ಇದು ಸರ್ಕಾರದ ಕೆಲಸ. ಸರ್ಕಾರ, ಸಾರ್ವಜನಿಕ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರಿಂದ ಬರುವ ಮೇಲ್ಮನವಿಗಳು, ದೂರುಗಳನ್ನು ಸ್ವೀಕರಿಸಿ ವಿಚಾರಣೆ ಮಾಡುವುದಷ್ಟೇ ಆಯೋಗದ ಕೆಲಸ.

* ಮಾಹಿತಿ ಹಕ್ಕು ಕಾಯ್ದೆಯ ದುರುಪಯೋಗ ಆಗುತ್ತಿದೆ ಎಂಬ ದೂರುಗಳಿವೆ. ನಿಮ್ಮ ಅಭಿಪ್ರಾಯವೇನು?
 ದುರುಪಯೋಗ ಆಗುತ್ತಿದೆ ಎಂದು ಕಾಯ್ದೆಯ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ದುರುಪಯೋಗ ಆಗುವುದನ್ನು ತಡೆಯಲು ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಸರ್ಕಾರ ಯೋಚಿಸಬೇಕು. ಸಾರ್ವಜನಿಕರಿಗೆ ಮಾಹಿತಿ ಸಿಗಬೇಕು ಎಂಬ ಉದ್ದೇಶದಿಂದ ಈ ಕಾಯ್ದೆ  ಅನುಷ್ಠಾನಕ್ಕೆ ತರಲಾಗಿದೆ. ಐದು ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ಯಾವ ರೀತಿ ದುರುಪಯೋಗ ಆಗುತ್ತಿದೆ, ಅದನ್ನು ತಡೆಯುವುದು ಹೇಗೆ ಎಂಬ ಬಗ್ಗೆ ಯೋಚಿಸಬೇಕು. ಕಾಯ್ದೆಯ ಉದ್ದೇಶ ಒಳ್ಳೆಯದು.

* ಅರ್ಜಿದಾರರಿಗೆ  ತಪ್ಪು ಮಾಹಿತಿ ನೀಡುವವರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ?
ಅರ್ಜಿದಾರರಿಗೆ ತಪ್ಪು ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲು ಅವಕಾಶವಿದೆ. ಆದರೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅರ್ಜಿದಾರರು ಸಾಬೀತುಪಡಿಸಬೇಕು. ಸರ್ಕಾರಿ ದಾಖಲೆಗಳಲ್ಲಿ ಇರುವ ಮಾಹಿತಿಯನ್ನು ನೀಡಲು ಸಾಧ್ಯವಿದೆ. ಉದ್ದೇಶ ಪೂರ್ವಕವಾಗಿ ತಪ್ಪು ಮಾಹಿತಿ ನೀಡಿದ್ದರೆ ಖಚಿತಪಡಿಸಿಕೊಂಡು ಅಂಥವರ ಮೇಲೆ  ಕ್ರಮಕೈಗೊಳ್ಳಬಹುದು. ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಆ ಕೆಲಸ ಮಾಡಬೇಕಾಗುತ್ತದೆ.

* ಆಯೋಗ ಎದುರು ಎಷ್ಟು ಪ್ರಕರಣಗಳು ಬಾಕಿ ಇವೆ?
ಹದಿನೈದು ಸಾವಿರ ಪ್ರಕರಣಗಳು ಆಯೋಗದಲ್ಲಿ ವಿಚಾರಣೆಗಾಗಿ ಕಾಯುತ್ತಿವೆ. ಮೇಲ್ಮನವಿ ಮತ್ತು ದೂರುಗಳು ಆಯೋಗದಲ್ಲಿ ದಾಖಲಾಗುತ್ತಿವೆ. ನಿತ್ಯ ಸುಮಾರು 150 ಹೊಸ ಪ್ರಕರಣಗಳು ಸೇರ್ಪಡೆಯಾಗುತ್ತವೆ.

* ಯಾವ ರಾಜ್ಯದಲ್ಲಿ ಈ ಕಾಯ್ದೆ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿದೆ?
ಖಚಿತವಾಗಿ ಹೇಳಲಾರೆ. ತಮಿಳುನಾಡು, ಆಂಧ್ರಪ್ರದೇಶ ಮಾಹಿತಿ ಆಯೋಗಗಳ ಮುಂದೆ ಅರ್ಜಿಗಳು ಜಾಸ್ತಿ ಇಲ್ಲ ಎಂದು ನನ್ನ ಸಹೋದ್ಯೋಗಿಗಳು ತಿಳಿಸಿದ್ದಾರೆ. ಅಲ್ಲಿ ಅರ್ಜಿ ಹಾಕುವವರ ಸಂಖ್ಯೆ ಕಡಿಮೆ ಇರಬಹುದು ಅಥವಾ ಅರ್ಜಿಗಳೆಲ್ಲ ತ್ವರಿತವಾಗಿ ಇತ್ಯರ್ಥವಾಗಿರಬಹುದು. ಬೇರೆ ರಾಜ್ಯಗಳಿಗೆ ಹೋಗಿ ಅಲ್ಲಿ ಕಾಯ್ದೆ ಹೇಗೆ ಅನುಷ್ಠಾನಕ್ಕೆ ಬಂದಿದೆ ಎಂಬುದನ್ನು ಅಧ್ಯಯನ ಮಾಡುತ್ತೇವೆ.

*ಇನ್ನಷ್ಟು ಪರಿಣಾಮಕಾರಿಯಾಗಿ ಕಾಯ್ದೆ ಅನುಷ್ಠಾನಕ್ಕೆ ಏನು ಕ್ರಮ ತೆಗೆದುಕೊಳ್ಳುತ್ತೀರಿ?
ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರಲ್ಲಿ ಸರ್ಕಾರದ ಪಾತ್ರ ಮಹತ್ವದ್ದಾಗಿದೆ. ಕಾಯ್ದೆಯ ಬಗ್ಗೆ ಏನೂ ಗೊತ್ತಿಲ್ಲದ ಮುಗ್ಧ ಅಧಿಕಾರಿಗಳು ನಮ್ಮಲ್ಲಿ ಇದ್ದಾರೆ. ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ತರಬೇತಿ ನೀಡುವ ಕೆಲಸ ಆಗಬೇಕು. ಇದು ಸರ್ಕಾರದ ಜವಾಬ್ದಾರಿ. ಜಿಲ್ಲಾ ಮಟ್ಟದ ತರಬೇತಿ ಸಂಸ್ಥೆಗಳಲ್ಲಿ ಮತ್ತು ಮೈಸೂರಿನಲ್ಲಿರುವ ತರಬೇತಿ ಸಂಸ್ಥೆಯಲ್ಲಿ ನಿರಂತರ ತರಬೇತಿ ನೀಡುವುದು ಸೂಕ್ತ.

* ಆಯೋಗಕ್ಕೆ ಬೇಕಾದ ಮೂಲ ಸೌಲಭ್ಯಗಳನ್ನು ಸರ್ಕಾರ ಒದಗಿಸಿದೆಯೇ?
ಸದ್ಯ ನಾಲ್ಕು ಕೋರ್ಟ್ ಹಾಲ್‌ಗಳಿವೆ. ಇನ್ನೂ ಮೂರು ಹಾಲ್‌ಗಳು ಮತ್ತು ಚೇಂಬರ್‌ಗಳ ಅಗತ್ಯವಿದೆ.  ಹೊಸ ಸದಸ್ಯರಿಗೆ ವಿಚಾರಣೆ ನಡೆಸಲು ಹಾಲ್‌ಗಳು ಮತ್ತು ಚೇಂಬರ್‌ಗಳ ವ್ಯವಸ್ಥೆ ಮಾಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಮನವಿ ಮಾಡಿಕೊಂಡಿದ್ದೇನೆ. ಆಯೋಗದಲ್ಲಿ ಸಿಬ್ಬಂದಿಗಿಂತ ಆಯುಕ್ತರ ಪಾತ್ರವೇ ಮುಖ್ಯವಾಗಿರುವುದರಿಂದ ಸಿಬ್ಬಂದಿ ಮೇಲೆ ಹೆಚ್ಚಿನ ಅವಲಂಬನೆ ಇರುವುದಿಲ್ಲ.

* ನೀವು ಈ ಕಾಯ್ದೆಯ ವಿರೋಧಿಗಳು ಎಂಬ ಟೀಕೆಗಳು ಕೇಳಿಬರುತ್ತಿವೆಯಲ್ಲ?
ಅದು ಸರಿಯಲ್ಲ. ಸರ್ಕಾರದ ಅಧಿಕಾರಿಯಾಗಿ ಯಾವುದೇ ವಿಷಯದ ಬಗ್ಗೆ ಮುಕ್ತವಾದ ಸಲಹೆಗಳನ್ನು ಕೊಡುವುದು ನನ್ನ ಜವಾಬ್ದಾರಿ. ಯಾವುದೇ ಕಾಯ್ದೆ, ನಿಯಮವಾಗಲಿ ಸರಳವಾಗಿರಬೇಕು ಎಂದು ಪ್ರತಿಪಾದಿಸಿದ್ದೆ. ನಿಯಮಪಾಲನೆ ಮಾಡುವಂತೆ ಅನೇಕರು ಒತ್ತಡ ಹಾಕುತ್ತಾರೆ. ಅದನ್ನು ಕೆಲವರು ತಡೆಯುತ್ತಾರೆ. ಕೆಲವರಿಗೆ ತಡೆಯಲು ಆಗುವುದಿಲ್ಲ. ಈ ರೀತಿ ಆಗಬಾರದು ಎಂಬ ಕಾರಣಕ್ಕೆ ಕಾಯ್ದೆ ಸರಳವಾಗಿರಬೇಕು ಎಂದು ಹೇಳಿದ್ದೆ ಅಷ್ಟೇ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT