ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಕಣಜದ ಸಿದ್ಧಗಂಗೆ ಜಾತ್ರೆ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಜಾತ್ರೆ ಎಂದಾಕ್ಷಣ ದೇವರ ಉತ್ಸವ, ಹೋಮ-ಹವನ, ವಿಶೇಷ ಪೂಜೆ, ಬ್ರಹ್ಮ ರಥೋತ್ಸವ, ಅನ್ನ ಸಂತರ್ಪಣೆ... ಕೆಲವೆಡೆ ಪ್ರಾಣಿ ಬಲಿ, ಬೇವಿನ ಉಡುಗೆ, ಹರಕೆ... ಒಟ್ಟಾರೆ ಶ್ರದ್ಧಾ ಭಕ್ತಿಯ ಸಂಗಮದ ಸ್ಥಳ.

ಇದರ ಜತೆ ನೆರೆದ ಭಕ್ತರ ಮನರಂಜನೆಗಾಗಿ ಆರ್ಕೆಸ್ಟ್ರಾ, ನಾಟಕ, ನೃತ್ಯ, ವಿಭಿನ್ನ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮ... ತಿಂಡಿ-ತಿನಿಸುಗಳ ಸಾಲು ಸಾಲು ಅಂಗಡಿ. ಮಕ್ಕಳಿಗಾಗಿಯೇ ವಿಭಿನ್ನ ಆಟಗಳು, ಆಟದ ಸಾಮಗ್ರಿಗಳ ಅಂಗಡಿ ಸಾಲು... ಎಲ್ಲವೂ ಒಂದರೆಕ್ಷಣದಲ್ಲಿ ನೆನಪಿನ ಸ್ಮೃತಿಪಟಲದಲ್ಲಿ ಹಾಯುತ್ತವೆ.

ಕೆಲವೆಡೆ ದೇವರ ಜಾತ್ರೆಗಿಂತ `ಜಾನುವಾರು~ ಜಾತ್ರೆಗೆ ಹೆಚ್ಚಿನ ಆದ್ಯತೆ. ಎರಡು- ಮೂರು ಲಕ್ಷ ರೂಪಾಯಿ ಮೌಲ್ಯದ ಎತ್ತುಗಳೆಲ್ಲ ಬರುತ್ತವೆ.  ಇದಕ್ಕೆ ಪೂರಕವಾಗಿ ರೈತಾಪಿ  ಸಲಕರಣೆಗಳು ಜಾತ್ರೆಗೆ ಮತ್ತಷ್ಟು ಮೆರುಗು ನೀಡುತ್ತವೆ. ಆದರೆ ಈಚಿನ ವರ್ಷಗಳಲ್ಲಿ ರಾಸುಗಳ ಜಾತ್ರೆ `ವೈಭವ~ ಮಬ್ಬು... ಬಹುತೇಕ ಜಾತ್ರೆಗಳ ಚಿತ್ರಣ ಈ ಮೇಲಿನ ವರ್ಣನೆಗಿಂತ ಭಿನ್ನ ಇರುವುದಿಲ್ಲ.

ಆದರೆ ತುಮಕೂರಿನ ಸಿದ್ಧಗಂಗೆಯಲ್ಲಿ ಜರುಗುವ `ಸಿದ್ಧಲಿಂಗೇಶ್ವರ ಸ್ವಾಮಿ~ ಜಾತ್ರಾ ಮಹೋತ್ಸವವೇ ವಿಭಿನ್ನ. ನೂರ ಎಂಟು ವರ್ಷ ಇತಿಹಾಸ ಹೊಂದಿರುವ ಜಾತ್ರಾ ಮಹೋತ್ಸವಕ್ಕೆ ನಾಡಿನ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಮಹಾಶಿವರಾತ್ರಿ ಮರುದಿನ ರಥೋತ್ಸವ (ಈ ಸಲ ಫೆ.21) ಆರಂಭದಿಂದಲೂ ನಡೆದು ಬಂದಿರುವ ಸಂಪ್ರದಾಯ.

ನೂತನ ಸ್ವರೂಪ
ಆರು ಶತಮಾನಗಳ ಐತಿಹ್ಯ ಹೊಂದಿರುವ ಸಿದ್ಧಗಂಗಾ ಮಠದಲ್ಲಿ 1905ರಲ್ಲಿ ಹತ್ತು ದಿನಗಳ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಆರಂಭದಿಂದ ಇಂದಿನ ತನಕ ಜಾತ್ರೆಯಲ್ಲಿ ಎತ್ತ ನೋಡಿದರೂ ರೈತ ಕಾಳಜಿ ಕಣ್ಣಿಗೆ ಕೋರೈಸುತ್ತದೆ. ಮೊದಲ ವರ್ಷದಿಂದಲೇ ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವದ ಜತೆ ರಾಸುಗಳ ಜಾತ್ರೆಗೂ ಚಾಲನೆ ಸಿಕ್ಕಿತ್ತು. ಇದಕ್ಕೆ ಕಾರಣ ಅಂದಿನ ಪೀಠಾಧಿಪತಿ ಉದ್ಧಾನ ಶಿವಯೋಗಿಗಳ ರೈತಪರ ನಿಲುವು.

ಧಾರ್ಮಿಕ ಕಾರ್ಯಕ್ರಮಕ್ಕೆ ನೀಡುವಷ್ಟೇ ಮುತುವರ್ಜಿ ರಾಸುಗಳ ಜಾತ್ರೆಗೂ ಇತ್ತು. ಅವುಗಳಿಗೆ ಮೇವು- ನೀರು- ನೆರಳಿನ ಸೂಕ್ತ ವ್ಯವಸ್ಥೆ, ಜತೆಯಲ್ಲಿ ಬರುವ ರೈತರಿಗೆ ಊಟ- ವಸತಿ; ಅಂದೂ-ಇಂದೂ ನಿರಾತಂಕ.

ಸುವರ್ಣ ಸಂಭ್ರಮ
ದಿನಗಳು ಉರುಳಿದಂತೆ ಬದಲಾವಣೆ ಸಾಮಾನ್ಯ. ಬದಲಾಗುವ ಪರಿಸ್ಥಿತಿಗೆ ಎಲ್ಲ ವರ್ಗದವರು ಹೊಂದಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಅವರಿಗೆಲ್ಲ ಸೂಕ್ತ ತರಬೇತಿ, ಮಾರ್ಗದರ್ಶನ ಆಯಾ ಕಾಲಮಾನಕ್ಕೆ ಸಿಕ್ಕುತ್ತದೆ. ಆದರೆ ರೈತ ಸಮೂಹಕ್ಕೆ ಬದಲಾವಣೆ ಎಂಬುದು ಕಗ್ಗಂಟು.

ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ಕ್ಷೇತ್ರದ ಈಗಿನ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ ಅವರ ಮೂಸೆಯಲ್ಲಿ ಅರಳಿದ ಕಲ್ಪನೆಯೇ `ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ~. ಇದನ್ನು ರೈತರಿಂದ ರೈತರಿಗಾಗಿ, ರೈತರ ಅನುಕೂಲಕ್ಕಾಗಿಯೇ ಜಾತ್ರೆ ಸಮಯದಲ್ಲಿ ಮಠದ ಆವರಣದಲ್ಲಿ ಹದಿನೈದು ದಿವಸ ನಡೆಸಲಾಗುತ್ತಿದೆ.

1964ರಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ವಸ್ತು ಪ್ರದರ್ಶನದ ಸ್ವರೂಪ ಈಗ ಬೃಹದಾಕಾರ. ಇನ್ನೂರಕ್ಕೂ ಹೆಚ್ಚು ಮಳಿಗೆಗಳು ಇಲ್ಲಿವೆ.  ಇದಕ್ಕಾಗಿಯೇ ಕಾಯಂ ವ್ಯವಸ್ಥೆ ಕಲ್ಪಿಸಲಾಗಿದೆ. ಇದರೊಳಗೆ ರೈತರಿಗೆ, ಸಣ್ಣ ಉದ್ದಿಮೆದಾರರಿಗೆ

ಪೂರಕವಾಗುವಂಥ ಮಾಹಿತಿ ಫಲಕ, ಪ್ರಾತ್ಯಕ್ಷಿಕೆ, ಜತೆಗೆ ಸಾಧಕರ ಚಿತ್ರಣ, ಪ್ರಗತಿ ಪಥದಲ್ಲಿರುವವರ ಸಿದ್ಧ ಮಾದರಿಗಳು, ಹೊಸ ಉತ್ಪನ್ನಗಳ ಮಾರುಕಟ್ಟೆ, ಮನರಂಜನೆಗೆ ನಾಟಕ-ನೃತ್ಯ, ಮಕ್ಕಳಿಗೆ ಅಮ್ಯೂಸ್‌ಮೆಂಟ್ ಪಾರ್ಕ್, ಹಸಿವಾದರೆ ವಿವಿಧ ಬಗೆಯ ಭಕ್ಷ್ಯ... ಎಲ್ಲವೂ ಇಲ್ಲಿವೆ.

ಕೃಷಿ, ಕೈಗಾರಿಕೆ, ಆರೋಗ್ಯ, ತೋಟಗಾರಿಕೆ, ಜಲಾನಯನ, ಅರಣ್ಯ, ರೇಷ್ಮೆ, ನೀರಾವರಿ, ಶಿಕ್ಷಣ, ಪಶುಪಾಲನೆ, ಮೀನುಗಾರಿಕೆ, ಪ್ರವಾಸೋದ್ಯಮ, ಕೃಷಿ ಉತ್ಪನ್ನ ಮಾರುಕಟ್ಟೆ, ಗ್ರಾಮೀಣ ಕೈಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಲ್ಲಿ ಈಚೆಗೆ ನಡೆದಿರುವ ಬದಲಾವಣೆ, ಸಾಧಿಸಿರುವ ಸಾಧನೆ, ಪ್ರಾತ್ಯಕ್ಷಿಕೆ, ವೈಜ್ಞಾನಿಕ ಕ್ಷೇತ್ರದಲ್ಲಿನ ಬೆಳವಣಿಗೆ, ವಿದ್ಯಾರ್ಥಿಗಳ ಸಿದ್ಧ ಮಾದರಿ ಎಲ್ಲವೂ ಇದರೊಳಗುಂಟು.

ಇದರ ಜತೆ ವಾಣಿಜ್ಯ ಬ್ಯಾಂಕುಗಳು ಸಹ ಮಳಿಗೆ ತೆರೆದಿವೆ.  ರಾಜ್ಯದ ನಾನಾ ಭಾಗಗಳ ಸ್ತ್ರೀಶಕ್ತಿ ಸಂಘಗಳು ಇಲ್ಲಿ ಮಳಿಗೆ ತೆರೆದು ತಮ್ಮ ಉತ್ಪನ್ನ ಮಾರುತ್ತವೆ. ಖಾದಿ ಗ್ರಾಮೋದ್ಯೋಗ ಮಂಡಳಿ ರಿಯಾಯ್ತಿ ದರದಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತದೆ.

ಇದಕ್ಕೆ ಪೂರಕ ಎಂಬಂತೆ ವಿವಿಧ ಸಂಘ-ಸಂಸ್ಥೆಗಳು ಸಹ ನೂತನ ಉತ್ಪನ್ನ ಪರಿಚಯಿಸುವ ಜತೆ ಮಾರಾಟ ನಡೆಸುತ್ತವೆ. ಸಾಕಷ್ಟು ವಹಿವಾಟುದಾರರಿಗೆ `ವಸ್ತು ಪ್ರದರ್ಶನ~ ಸೂಕ್ತ ವೇದಿಕೆ; ಬಹುತೇಕರಿಗೆ ಭರ್ಜರಿ ವಹಿವಾಟಿನ ಶಾಶ್ವತ ನೆಲೆಯಾಗಿದೆ.

ಜಾತ್ರೆಯಲ್ಲಿ ದಣಿದ ಮನಗಳಿಗೆ ನಿತ್ಯ ಸಂಜೆ ಸಾಂಸ್ಕೃತಿಕ ರಸದೌತಣ. ಸಾಮಾಜಿಕ-ಪೌರಾಣಿಕ ನಾಟಕ, ಜನಪದ ಸಂಭ್ರಮ, ಗಾಯನ-ನೃತ್ಯ ಎಲ್ಲವೂ ಇದೇ ಆವರಣದಲ್ಲಿ ಸಿಗುತ್ತವೆ. ನೀವೂ ಬನ್ನಿ, ಸಿದ್ಧಗಂಗೆ ಜಾತ್ರೆಯ ವೈಭವ ಕಣ್ತುಂಬಿಕೊಳ್ಳಿ.

 ಚಿತ್ರಗಳು: ಎಸ್.ಚಂದನ್

ರಥೋತ್ಸವ ಇಂದು
ಶತಮಾನದ ಐತಿಹ್ಯ ಹೊಂದಿರುವ ಸಿದ್ಧಗಂಗೆಯ ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಫೆ.21ರ ಮಂಗಳವಾರ ಮಧ್ಯಾಹ್ನ ನಡೆಯಲಿದೆ.

ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಫೆ.10ರಿಂದ ಆರಂಭವಾಗಿದ್ದು, 24ರವರೆಗೂ ಜರುಗಲಿದೆ. ಜಾನುವಾರು ಜಾತ್ರೆಗೆ ನಾಡಿನ ವಿವಿಧೆಡೆಯಿಂದ ಲಕ್ಷ ಲಕ್ಷ ರೂಪಾಯಿ ಕಿಮ್ಮತ್ತಿನ ರಾಸುಗಳು ಬಂದು ಸಿದ್ಧಗಂಗೆ ಆವರಣದಲ್ಲಿ ಬೀಡು ಬಿಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT