ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಕದಿಯುವ ಠಕ್ಕರು...

Last Updated 21 ಡಿಸೆಂಬರ್ 2010, 11:10 IST
ಅಕ್ಷರ ಗಾತ್ರ

ಅಂತರ್ಜಾಲ ಮಾಹಿತಿಯ ತಂತ್ರಜ್ಞಾನದ ಹೆಬ್ಬಾಗಿಲನ್ನೇ ತೆರೆದಿಟ್ಟಿದೆ. ಹೀಗೆ ಮುಕ್ತವಾಗಿ ತೆರೆದುಕೊಂಡ ತಂತ್ರಜ್ಞಾನದ ಸಾಗರದಲ್ಲಿ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಬೇರೆಯವರು ಕದಿಯಲು ಸಹ ಅವಕಾಶ ಇದೆ ಎನ್ನುವುದನ್ನು ನಾವು ಮರೆಯಬಾರದು.ಈಗ  ಇ-ಮೇಲ್ ಹ್ಯಾಕ್ ಮಾಡುವಂತ ನೂರಾರು ತಂತ್ರಾಂಶಗಳು ಬಂದಿವೆ. ಒಮ್ಮೆ ಸುಮ್ಮನೆ ಗೂಗಲ್‌ನಲ್ಲಿ ಹುಡುಕಿ ನೋಡಿದರೂ ಇಂತಹ ನೂರಾರು ವೆಬ್ ತಾಣಗಳು ತೆರೆದುಕೊಳ್ಳುತ್ತವೆ. ಆದರೆ ಇದೆಲ್ಲಾ ಸುಳ್ಳು. ಅನಾಮಿಕರು ಎಲ್ಲರ ಪಾಸ್‌ವರ್ಡ್‌ಗಳನ್ನು ಕದಿಯುವುದು ಸುಲಭವಲ್ಲ ಎನ್ನುವುದು ಕೆಲವರ ಅಭಿಪ್ರಾಯ. ಆದರೂ ಸಾಫ್ಟ್‌ವೇರ್‌ಗಳಿಗಿಂತ ಸುಲಭವಾಗಿ ಪಾಸ್‌ವರ್ಡ್‌ಗಳನ್ನು ಭೇದಿಸುವ ಕುತಂತ್ರಗಳನ್ನು ಹ್ಯಾಕರ್‌ಗಳು ಕಂಡು ಕೊಂಡಿದ್ದಾರೆ ಎಂಬುದಂತು ಸತ್ಯ.

ಸಾಮಾಜಿಕ ಸಂಪರ್ಕ ತಾಣಗಳಾದ ಆರ್ಕುಟ್, ಫೇಸ್‌ಬುಕ್‌ಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮಾಹಿತಿ ನೀಡಿದವರ ಪಾಸ್‌ವರ್ಡ್‌ಗಳನ್ನು ಸುಲಭವಾಗಿ ಕದಿಯಬಹುದು. ಸಾಮಾಜಿಕ ತಾಣಗಳಲ್ಲಿ ಎಲ್ಲ ವಿಷಯಗಳನ್ನು ತಿಳಿಸುವುದರಿಂದ ರಾತ್ರೊ  ರಾತ್ರಿ ನಮ್ಮ ಖಾಸಗಿ ವಿಷಯಗಳನ್ನು ಇವು ಬಯಲು ಮಾಡುತ್ತವೆ ಎಂಬುದು ನೆನಪಿರಲಿ.  ಇದು ಒಂದು ರೀತಿ ಸಂತೆಯಲ್ಲಿ ಬಟ್ಟೆ ಬಿಚ್ಚಿ ನಿಂತಂತೆ.ಸಾಮಾನ್ಯವಾಗಿ ಹಲವರು ಹುಟ್ಟಿದ ದಿನಾಂಕ, ಹೆಸರು, ಬ್ಯಾಂಕ್ ಅಕೌಂಟ್ ನಂಬರ್‌ಗಳನ್ನೇ ತಮ್ಮ ಇ-ಮೇಲ್‌ಗಳ ಪಾಸ್‌ವರ್ಡ್‌ಗಳನ್ನಾಗಿ ಬಳಸುತ್ತಾರೆ.ಈ ರೀತಿಯದನ್ನೇ ಕಳ್ಳರು ಬಯಸುವುದು.

ಕಿಡಿಗೇಡಿಗಳು, ಮೋಸಗಾರರು ಇ-ಮೇಲ್ ಹ್ಯಾಕ್ ಮಾಡಿ, ನಿಮ್ಮ ಇ-ಮೇಲ್ ಮುಖಾಂತರವೇ ಸ್ನೇಹಿತರಿಗೆ ಸಂದೇಶ ಕಳುಹಿಸಿ, ಸಂಕಷ್ಟದಲ್ಲಿರುವುದಾಗಿ ಅವರ ಅಕೌಂಟಿಗೆ ಹಣ ಸಂದಾಯ ಮಾಡುವಂತೆ ಮನವಿ ಮಾಡುವಂತಹ ಸಂದೇಶಗಳನ್ನು ಕಳುಹಿಸಿರುವ ಅನುಭವ ನಿಮಗಾಗಿರುತ್ತದೆ. ಕೆಲವರು ಮೋಸ ಹೋಗಿರುವ ಪ್ರಕರಣಗಳನ್ನು ಸಹ ಕಾಣಬಹುದು.

ನೀವು ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದನಾ ಸಂಘಟನೆಯ ಸದಸ್ಯರೆಂದು ತಪ್ಪು ತಿಳಿದು ಪೊಲೀಸರು ನಿಮ್ಮ ಮನೆ ಬಾಗಿಲನ್ನು ತಟ್ಟಿದರೆ ನಿಮಗೆ ಹೇಗಾಗಿರಬೇಡ ಹೇಳಿ...ಇಂತಹ ಅನುಭವ ಮುಂಬೈ ನಿವಾಸಿಯೊಬ್ಬರಿಗೆ ಆಗಿದೆ. ಇತ್ತೀಚೆಗೆ ವಾರಣಾಸಿಯಲ್ಲಿ ಬಾಂಬ್ ಸ್ಫೋಟ ನಡೆಸಿದ್ದ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದನಾ ಸಂಘಟನೆಯು ಮುಂಬೈನ ಅಖಿಲ್ ಎಂಬುವರ ಇ-ಮೇಲ್ ಹ್ಯಾಕ್ ಮಾಡಿ, ಅವರ ಮೇಲ್ ಮೂಲಕ ಸ್ಫೋಟ ನಡೆಸಿರುವ ಬಗ್ಗೆ ಪೊಲೀಸರಿಗೆ ಸಂದೇಶ ಕಳುಹಿಸಿದ್ದರು.

ಬಳಿಕ ಪೊಲೀಸರು ಅಖಿಲ್ ಮನೆಯವ ವಿಳಾಸ ಪತ್ತೆ ಹಚ್ಚಿ ವಾರಣಾಸಿ ಬಾಂಬ್ ಸ್ಫೋಟಕ್ಕೆ ನೀವೇ ಕಾರಣ ಎಂದು ಬಂಧಿಸಿದರು. ಇದರಿಂದ ಅಖಿಲ್ ದಿಗ್ಭ್ರಮೆಗೊಂಡು, ಆಘಾತಗೊಳಗಾದರು. ಭಯೋತ್ಪಾದಕರು ಅಖಿಲ್ ಅವರ ಸುರಕ್ಷಿತವಲ್ಲದ ‘ವೈ ಫೈ’ ಸಂಪರ್ಕ ಬಳಸಿ ಸಂದೇಶ ಕಳುಹಿಸಿದ್ದರು.

ಅಖಿಲ್ ಮತ್ತು ಆತನ ಸಹೋದರನನ್ನು ಬಂಧಿಸಿದ ಪೊಲೀಸರು ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ಇ-ಮೇಲ್‌ಗಳನ್ನು ಹ್ಯಾಕ್ ಮಾಡಿ ಅವರ ಮೇಲ್‌ನಿಂದ ಬೇರೆಯವರಿಗೆ ಸಂದೇಶ ಕಳುಹಿಸಿ ಇ-ಮೇಲ್ ಹೊಂದಿರುವವರನ್ನು ಇಕ್ಕಟ್ಟಿಗೆ ಸಿಲುಕಿಸುವ ಘಟನೆಗಳು ನಡೆಯುತ್ತಲೇ ಇವೆ.

‘ಭಯೋತ್ಪಾದಕರು ಸಾಕಷ್ಟು ಸಮಯ ಅಥವಾ ಸದಾ ಒಬ್ಬನೇ ವ್ಯಕ್ತಿಯ ಪಾಸ್‌ವರ್ಡ್‌ಗಳನ್ನು ಬಳಸಿಕೊಂಡು ಇ-ಮೇಲ್ ಕಳುಹಿಸುವಂತಹ ಕೃತ್ಯ ನಡೆಸುವುದಿಲ್ಲ. ಏಕೆಂದರೆ ತಕ್ಷಣ ಪೊಲೀಸರು ತನಿಖೆ ನಡೆಸುತ್ತಾರೆ ಎಂಬ ಭಯ. ಆ ಕಾರಣದಿಂದ ಅವರು ಸುಲಭವಾಗಿ ಸಿಗುವ, ಪೊಲೀಸರನ್ನು ದಿಕ್ಕು ತಪ್ಪಿಸುವ ‘ವೈಫೈ’ ಸಂಪರ್ಕವನ್ನು ಬಳಸಿ ಇ-ಮೇಲ್ ಕಳುಹಿಸುತ್ತಾರೆ’ ಎಂದು ಮುಂಬೈ ಮೂಲದ ಸೈಬರ್ ತಜ್ಞ ಆಶಿಶ್ ಶರ್ಮಾ ತಿಳಿಸುತ್ತಾರೆ.

‘ಉಗ್ರರು ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳಿಗೆ ವೈಫೈ ಸಂಪರ್ಕ ಕಲ್ಪಿಸಿಕೊಂಡು ಮೇಲ್ ಕಳುಹಿಸುತ್ತಾರೆ. ಅವರು ತಮ್ಮದೇ ಆದ ಪಾಸ್‌ವರ್ಡ್‌ಗಳನ್ನು ಹೊಂದಿರುವುದಿಲ್ಲ. ಸೈಬರ್ ಕೇಂದ್ರಗಳಿಗೆ ತೆರಳುವ ಉಗ್ರರು ಬೇರೆಯವರ ಇ-ಮೇಲ್ ಐಡಿ ಸಂಗ್ರಹಿಸಿ ಆದಷ್ಟು ಬೇಗ ಸ್ಫೋಟ ಹಾಗೂ ಇನ್ನಿತರ ಸಂದೇಶಗಳನ್ನು ಕಳುಹಿಸಿ, ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ’ ಎಂದು ಅವರು ಹೇಳುತ್ತಾರೆ.

ಈ ರೀತಿಯ ಅನಾಹುತಗಳಿಗೆ ಕಾರಣ ‘ವೈಫೈ’ ಸಂಪರ್ಕದ ಭದ್ರತೆಯ ಲೋಪವೇ ಕಾರಣ. ಇದರಿಂದ ಮೊದಲು ತಮ್ಮ ವೈ-ಫೈ ಪಾಸ್‌ವರ್ಡ್‌ಗಳನ್ನು ರಕ್ಷಿಸಿಕೊಳ್ಳಬೇಕು. ಇತರರು ನಿಮ್ಮ ಕಂಪ್ಯೂಟರ್ ಬಳಸದಂತೆ ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ನೆಟ್‌ವರ್ಕ್‌ವುಳ್ಳ ಪ್ರದೇಶದಲ್ಲಿ ಯಾವುದೇ ಪ್ರಯಾಸವಿಲ್ಲದೇ  ನಿಮ್ಮ ಕಂಪ್ಯೂಟರ್‌ನ್ನು ಸುಲಭವಾಗಿ  ಪ್ರವೇಶಿಸುವ ಅಪಾಯವಿದೆ. ಆ ಕಾರಣದಿಂದ ನಿಮ್ಮ ವೈ-ಫೈ ಸಂಪರ್ಕವನ್ನು ರಕ್ಷಿಸಿಕೊಳ್ಳುವುದು ಉತ್ತಮ. ಇದನ್ನು ರಕ್ಷಿಸಿಕೊಳ್ಳಲು ‘ಫೈರ್‌ವಾಲ್’ ಎಂಬ ಸಾಫ್ಟ್‌ವೇರ್‌ನ್ನು ಅಳವಡಿಸಿಕೊಳ್ಳುವುದು ಒಳಿತು. ಈ ಸಾಫ್ಟ್‌ವೇರ್‌ವುಳ್ಳ ಕಂಪ್ಯೂಟರ್‌ನಿಂದ ಇ-ಮೇಲ್ ಹ್ಯಾಕ್ ಮಾಡುವುದು ಕಷ್ಟ. ನಿಮ್ಮ ಇ-ಮೇಲ್ ದುರ್ಬಳಕೆಯಾಗುತ್ತಿರುವುದು ಕಂಡುಬಂದಲ್ಲಿ ತಕ್ಷಣ ಸೈಬರ್ ಭದ್ರತಾ ತಜ್ಞರ ಮೂಲಕ ಸೇವೆಯನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದು.

ನಿಮ್ಮ ಇ-ಮೇಲ್ ಹ್ಯಾಕ್ ಆಗಿರುವ ತಕ್ಷಣ ಮೇಲ್ ಪಡೆದ ಸಂಸ್ಥೆಗಳಿಗೆ ದೂರು ನೀಡಿ, ಹ್ಯಾಕ್ ಆದ ವಿಳಾಸವನ್ನು ಸ್ಥಗಿತಗೊಳಿಸಬೇಕು.
ನೀವು ನೀಡುವ ಪಾಸ್‌ವರ್ಡ್‌ಗಳಲ್ಲಿ, ಅಕ್ಷರಗಳು, ಚಿಹ್ನೆಗಳು, ಅಂಕಿ ಸಂಖ್ಯೆಗಳು ಇರುವಂತೆ ನೋಡಿಕೊಳ್ಳಬೇಕು. ಈ ರೀತಿಯ ಪಾಸ್‌ವರ್ಡ್‌ಗಳನ್ನು ಯಾರೂ ಕದಿಯಲು ಸಾಧ್ಯವಿಲ್ಲ. ನಿಮ್ಮ ಬ್ಯಾಂಕ್ ಅಕೌಂಟ್ ಸಂಖ್ಯೆಯನ್ನು ಪಾಸ್‌ವರ್ಡ್‌ಗೆ ಬಳಸಿದರೆ, ಖಾತೆಯಲ್ಲಿನ ಹಣ ತಿರುಪತಿ ಹುಂಡಿಗೆ ಗ್ಯಾರಂಟಿ.

ಕಂಪ್ಯೂಟರ್ ಮತ್ತು ಅಂತರ್ಜಾಲದ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿ. ಉಚಿತ ಅಂತರ್ಜಾಲ ಸೇವೆ ದೊರೆಯುವಾಗ ನಿಮ್ಮ ಕಂಪ್ಯೂಟರ್, ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಿ. ಕಂಪ್ಯೂಟರ್ ಮಾಹಿತಿಯ ಹೆಬ್ಬಾಗಿಲನ್ನೇ ತೆರೆದಿಟ್ಟಿದೆ ಎಂಬುದೇನೋ ನಿಜ. ಬಾಗಿಲ ಮೂಲಕ ಸಜ್ಜನರೂ ಬರಬಹುದು, ಹಾಗೆಯೇ ದುರ್ಜನರು ಬರಲು ಸಹ ಅವಕಾಶವಿದೆ ಎಂಬುದರ ಬಗ್ಗೆ ಎಚ್ಚರವಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT