ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ನೀಡದೇ ಕೃಷಿಕರನ್ನು ಸತಾಯಿಸದಿರಿ

ಮಾಸಿಕ ಪ್ರಗತಿ ಪರಿಶೀಲನಾ ಸಭೆ: ಅಧಿಕಾರಿಗಳ ವಿರುದ್ಧ ತಾಪಂ ಅಧ್ಯಕ್ಷರ ಅಸಮಾಧಾನ
Last Updated 10 ಜನವರಿ 2014, 6:52 IST
ಅಕ್ಷರ ಗಾತ್ರ

ಸವಣೂರ :  ‘ತಾಲ್ಲೂಕಿನ ಕೃಷಿಕರನ್ನು ದಾರಿ ತಪ್ಪಿಸುತ್ತಿರುವ ತೋಟಗಾರಿಕೆ ಇಲಾಖೆ, ಯೋಜನೆಗಳ ಸೌಲಭ್ಯಕ್ಕಾಗಿ ವೃಥಾ ಅಲೆದಾಡಿಸುತ್ತಿದೆ‘ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಅರಗೋಳ ಆಕ್ಷೇಪಿಸಿದರು.


ಸವಣೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದ ಅವರು, ಇಲಾಖೆಯ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಸರಕಾರದ ಯೋಜನೆಗಳ ಬಗ್ಗೆ ರೈತರಿಗೆ ಸಮರ್ಪಕವಾದ ತಿಳುವಳಿಕೆ ನೀಡಿ. ಯೋಜನೆಗಳ ಸೌಲಭ್ಯ ಕಲ್ಪಿಸಲು ಎಲ್ಲ ದಾಖಲೆಗಳನ್ನು ಪಡೆದು ಬಳಿಕ ನಿರಾಕರಿಸಬೇಡಿ. ಸೌಲಭ್ಯಗಳ ಲಭ್ಯತೆಯ ಬಗ್ಗೆ ಆರಂಭದಲ್ಲಿಯೇ ಸ್ಪಷ್ಟವಾಗಿ ತಿಳಿಸಿ’ ಎಂದು ತಿಳಿಸಿದರು. 

ಅರಣ್ಯ ಇಲಾಖೆಯೂ ಸಸಿಗಳ ವಿತರಣೆಯನ್ನು ಸಮರ್ಪಕವಾಗಿ ಕೈಗೊಳ್ಳುತ್ತಿಲ್ಲ. ಸಸಿಗಳ ಸಾಗಾಣಿಕೆ, ವಿತರಣೆಯ ಸಂದರ್ಭದಲ್ಲಿಯೇ ಬಹುತೇಕ ಸಸಿಗಳು ಹಾಳಾಗುತ್ತಿದ್ದು, ಯೋಜನೆಯ ಮೂಲ ಉದ್ದೇಶ ಈಡೇರುತ್ತಿಲ್ಲ ಎಂದು ರಮೇಶ ಅರಗೋಳ ಆಕ್ಷೇಪಿಸಿದರು.

ಸಸಿಗಳ ವಿತರಣೆ: ಸಂಶಯ

ರೈತರಿಗೆ 40 ಸಾವಿರ ಸಸಿಗಳು ಹಾಗೂ 20 ಸಾವಿರ ಜೈವಿಕ ಇಂಧನ ಸಸಿಗಳ ವಿತರಣೆಯಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಸಮಗ್ರ ಮಾಹಿತಿಯನ್ನು ನೀಡುವಂತೆ ಅವರು ಸೂಚಿಸಿದರು.

ಈ ಬಾರಿ ರೈತರ ಬೇಡಿಕೆಯ ಅನ್ವಯ ಸಸಿಗಳನ್ನು ಪೂರೈಸುವಂತೆ, ಪ್ರತಿ ಮನೆ, ಶಾಲೆಗಳಿಗೆ ಸಸಿಗಳ ವಿತರಣೆ ಮಾಡುವಂತೆ ಅವರು ತಿಳಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿನ ನೂ್ಯನತೆ ಪ್ರಸ್ತಾಪಿಸಿದ ಅವರು, ಕೇಂದ್ರಗಳಲ್ಲಿನ ಶೌಚಾಲಯದ ಸ್ಥಿತಿ–ಗತಿ, ವಿದ್ಯುತ್ ಲಭ್ಯತೆ, ಬಳಕೆಯಲ್ಲಿನ ದೋಷಗಳನ್ನು ಪರಿಶೀಲಿಸುವಂತೆ ಸೂಚಿಸಿದರು. ಅನುದಾನದ ಕೊರತೆಯಿಂದ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾರ್ಯ ಸ್ಥಗಿತಗೊಂಡಿರುವುದು ಸಭೆಯಲ್ಲಿ ಪ್ರಸ್ತಾಪವಾಯಿತು.

ಫಲಾನುಭವಿಗಳ ಆಯ್ಕೆಗೆ ಅಸಮಾಧಾನ
ಸಮಾಜ ಕಲ್ಯಾಣ ಇಲಾಖೆ ಅಡಿ ಮೂಲ  ಸೌಕರ್ಯಕ್ಕಾಗಿ ಲಭ್ಯವಾದ ಅನುದಾನದ ಬಳಕೆಯಾಗದ ಬಗ್ಗೆ, ಯೋಜನೆಗಳ ಫಲಾನುಭವಿಗಳ ಆಯ್ಕೆ ಮಾಡಲು ಅನುಸರಿಸಿದ ವಿಧಾನದ ಬಗ್ಗೆ ಅಧ್ಯಕ್ಷ ರಮೇಶ ಅಸಮಾಧಾನ ತೋರಿದರು.

ಪಶುಪಾಲನಾ ಇಲಾಖೆಯ ಲಸಿಕಾ ಕಾರ್ಯಕ್ರಮದ ಪ್ರಗತಿ ವಿಚಾರಿಸಿ, ಗ್ರಾಮೀಣ ಭಾಗದಲ್ಲಿ ದನಕರುಗಳಿಗಾಗಿ ನೀರಿನ ತೊಟ್ಟಿಗಳ ನಿರ್ಮಾಣ ಕೈಗೊಳ್ಳಬೇಕು ಎಂದು ಸೂಚಿಸಿದರು. ಗ್ರಾಮೀಣ ಭಾಗದಲ್ಲಿ ಕಲಿಕಾ ಕೇಂದ್ರ ಆರಂಭಿಸುವ ಬಗ್ಗೆ, ಮಹಿಳೆಯರಿಗೆ ಟೇಲರಿಂಗ್‌ ತರಬೇತಿ ನೀಡುವ ಬಗ್ಗೆ, ಗೌರವಧನ ವಿತರಣೆ ವಿಳಂಬವಾಗಿರುವ ಬಗ್ಗೆ ಸಾಕ್ಷರತಾ ಅಧಿಕಾರಿಗಳೊಂದಿಗೆ ಸಭೆ ಚರ್ಚಿಸಿತು.

ಪ್ರತಿ ಮನೆಗೂ ವಿದು್ಯತ್‌ ಸಂಪರ್ಕ
ತಾಲ್ಲೂಕಿನ ಪ್ರತಿಯೊಂದು ಮನೆಗಳಿಗೂ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ ಸಭೆ, ಸಾರ್ವಜನಿಕರ ದೂರುಗಳಿಗೆ ಸರಿಯಾದ ಸ್ಪಂದನೆ ನೀಡಿ ಎಂದು ಎಚ್ಚರಿಸಿತು.

ಪ್ರತಿಬಾರಿಯಂತೆ ಅಧಿಕಾರಿಗಳ ಗೈರು ಹಾಜರಿ, ಸಭೆಯ ಆರಂಭದಲ್ಲಿ ವಿಳಂಬ, ಇಲಾಖಾ ಪ್ರತಿನಿಧಿಗಳ ಹಾಜರಿ, ಮಾಹಿತಿಗಳ ಕೊರತೆ, ಸಭಾ ನಿರ್ಣಯಗಳ ಅನುಪಾಲನೆಯಲ್ಲಿ ನಿರ್ಲಕ್ಷ್ಯ ತೋರುವ ಪ್ರವೃತ್ತಿಯ ಬಗ್ಗೆ ಅಧ್ಯಕ್ಷರ ಅಸಮಾಧಾನ ಈ ಸಭೆಯಲ್ಲಿಯೂ ಮುಂದುವರಿಯಿತು.

ಪ್ರಗತಿಯ ವರದಿ, ಮಾಹಿತಿಗಳೂ ಇಲ್ಲದೆ ಸಭೆಗೆ ಪಾಲ್ಗೊಂಡಿದ್ದ ಪುರಸಭೆಯ ಪ್ರತಿನಿಧಿ ಎಚ್ಚರಿಕೆಯನ್ನು ಪಡೆದುಕೊಂಡರು.
ಉಪಾಧ್ಯಕ್ಷೆ ಪ್ರೇಮಾ ಶಿಗ್ಲಿ, ಕಾರ್ಯ ನಿರ್ವಾಹಕ ಅಧಿಕಾರಿ ಎಂ. ಎಸ್ ಕುರ್ತಕೋಟಿ ಉಪಸ್ಥಿತರಿದ್ದರು. ಸಹಾಯಕ ನಿರ್ದೇಶಕ ಟಿ. ವೆಂಕೋಬಪ್ಪ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT