ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಮುಚ್ಚಿಟ್ಟರೆ ನಾಮಪತ್ರ ತಿರಸ್ಕರಿಸಬಹುದು: ಸುಪ್ರೀಂ

ನಾಮಪತ್ರದ ಅಂಕಣ ಖಾಲಿ ಬಿಡುವುದು ಮತದಾರರ ಹಕ್ಕಿನ ಉಲ್ಲಂಘನೆ
Last Updated 13 ಸೆಪ್ಟೆಂಬರ್ 2013, 10:58 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆಸ್ತಿಪಾಸ್ತಿಗಳು ಮತ್ತು ಅಪರಾಧಿ ಹಿನ್ನೆಲೆಯ ವಿವರಗಳನ್ನು ಮುಚ್ಚಿಡುವುದು ಮತ್ತು ಪ್ರಕಟಿಸದೇ ಇರುವ ಕಾರಣಕ್ಕಾಗಿ ಚುನಾವಣಾ ನಿರ್ವಚನಾಧಿಕಾರಿಯು ಅಭ್ಯರ್ಥಿಯ ನಾಮಪತ್ರಗಳನ್ನು ತಿರಸ್ಕರಿಸಬಹುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿತು.

ತಮ್ಮ ಅಭ್ಯರ್ಥಿಗಳ ಬಗ್ಗೆ ತಿಳಿದುಕೊಳ್ಳುವ ಮೂಲಭೂತ ಅಧಿಕಾರ ಮತದಾರರಿಗೆ ಇದೆ. ನಾಮಪತ್ರದ ಅಂಕಣಗಳನ್ನು ಖಾಲಿ ಬಿಡುವುದು ಮತದಾರರ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತು.

ನಾಮಪತ್ರಗಳನ್ನು ತಿರಸ್ಕರಿಸುವ ಚುನಾವಣಾ ನಿರ್ವಚನಾಧಿಕಾರಿಯ ಅಧಿಕಾರದ ಚಲಾವಣೆ ಆಗಬೇಕು ಎಂದು ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ನೇತೃತ್ವದ ಪೀಠವು ಹೇಳಿತು.

2008ರಲ್ಲಿ ಸರ್ಕಾರೇತರ ನಾಗರಿಕ ಹಕ್ಕುಗಳ ಸಂಘಟನೆ ರಿಸರ್ಜೆನ್ಸ್ ಇಂಡಿಯಾ ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ಸುಪ್ರೀಕೋರ್ಟ್ ಈ ತೀರ್ಪು ನೀಡಿತು. ತಮ್ಮ ಬಗೆಗಿನ ನಿರ್ಣಾಯಕ ಮಾಹಿತಿಗಳನ್ನು ನೀಡಬೇಕಾದ ಅಂಕಣಗಳನ್ನು ಅಭ್ಯರ್ಥಿಗಳು ಖಾಲಿ ಬಿಟ್ಟಿದ್ದುದನ್ನು ಪತ್ತೆ ಹಚ್ಚಿದ ಸರ್ಕಾರೇತರ ಸಂಘಟನೆ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು 2008ರಲ್ಲಿ ದಾಖಲಿಸಿತ್ತು.

ಇದಕ್ಕೆ ಮುನ್ನ ಸರ್ಕಾರೇತರ ಸಂಘಟನೆ ಪರವಾಗಿ ಹಾಜರಾಗಿದ್ದ ವಕೀಲ ಪ್ರಶಾಂತ ಭೂಷಣ್ ಅವರು ಯಾವುದೇ ಅಂಕಣವನ್ನು ಖಾಲಿ ಬಿಡುವುದು ಅಂದರೆ ಸುಪ್ರೀಂಕೋರ್ಟ್ ತೀರ್ಪಿನ ಪಾಲನೆ ಮಾಡದೇ ಇರುವುದು ಎಂದು ಅರ್ಥವಾಗುತ್ತದೆ ಎಂದು ವಾದಿಸಿದರು.

ಸರ್ಕಾರೇತರ ಸಂಘಟನೆಯ ಮನವಿಯನ್ನು ಬೆಂಬಲಿಸಿದ್ದ ಚುನಾವಣಾ ಆಯೋಗ ಕೂಡಾ 'ಮಾಹಿತಿ ನೀಡಬೇಕಾದ ಕೆಲವು ಅಂಕಣವನ್ನು ಖಾಲಿ ಬಿಡುವುದರಿಂದ ಮಾಹಿತಿಯನ್ನು ಮುಚ್ಚಿಟ್ಟಂತಾಗುತ್ತದೆ. ಇದರಿಂದಾಗಿ ಪರಿಪೂರ್ಣ ಪ್ರಮಾಣ ಪತ್ರವನ್ನು ಸಲ್ಲಿಸಿದಂತಾಗುವುದಿಲ್ಲ ಎಂದು ಹೇಳಿತ್ತು.
ಪ್ರಮಾಣ ಪತ್ರದಲ್ಲಿ ಕೆಲವು ಅಂಕಣಗಳನ್ನು ಖಾಲಿ ಬಿಟ್ಟು ಅಪೂರ್ಣ ಮಾಹಿತಿ ನೀಡುವ ಅಭ್ಯರ್ಥಿಯ ನಾಮಪತ್ರಗಳನ್ನು ತಿರಸ್ಕರಿಸಲು ಚುನಾವಣಾ ನಿರ್ವಚನಾಧಿಕಾರಿಗೆ ಅಧಿಕಾರ ನೀಡಬೇಕು ಎಂಬ ನಿಲುವನ್ನು ಚುನಾವಣಾ ಆಯೋಗ ವಹಿಸಿತ್ತು.

ಆದರೆ ಕೇಂದ್ರ ಪರ ವಕೀಲರು 'ಚುನಾವಣೆಗೆ ಸ್ಪರ್ಧಿಸುವ ಹಕ್ಕು ಶಾಸನಬದ್ಧ ಹಕ್ಕು, ಮಾಹಿತಿ ಮುಚ್ಚಿಟ್ಟ ಕಾರಣಕ್ಕಾಗಿ ನಾಮಪತ್ರ ತಿರಸ್ಕರಿಸುವಂತಿಲ್ಲ ಎಂಬುದಾಗಿ ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠವು ನೀಡಿದ ತೀರ್ಪು ಕೂಡಾ ಇದೆ  ಎಂದು ಅವರು ಪ್ರತಿಪಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT