ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಹಕ್ಕು ಕಾಯ್ದೆಯಡಿ ಎನ್‌ಎಸ್‌ಎಫ್

Last Updated 20 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಳಗೊಂಡಂತೆ ಎಲ್ಲ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ಉದ್ದೇಶಿತ `ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಮಸೂದೆ~ಯಡಿ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯೊಳಗೆ ಬರಲಿವೆ ಎಂದು ಕ್ರೀಡಾ ಸಚಿವ ಅಜಯ್ ಮಾಕೆನ್ ಹೇಳಿದರು.

ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಲ್ಲಿ (ಎನ್‌ಎಸ್‌ಎಫ್) ಹೊಣೆಗಾರಿಕೆ ಹಾಗೂ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಈ ಉದ್ದೇಶಿತ ಮಸೂದೆಯ ಗುರಿ ಎಂಬುದನ್ನು ಅವರು ಪುನರುಚ್ಚರಿಸಿದರು. ಅದರಲ್ಲೂ ಫೆಡರೇಷನ್‌ಗಳ ಹಣಕಾಸು ವ್ಯವಹಾರ ಮತ್ತು ಆಡಳಿತದಲ್ಲಿ ಪಾರದರ್ಶಕತೆ ತರುವುದು ಅಗತ್ಯ ಎಂದರು.

ಇಲ್ಲಿನ ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ)ದಲ್ಲಿ ಹೊಸದಾಗಿ ನಿರ್ಮಿಸಿದ ಶೂಟಿಂಗ್ ರೇಂಜ್‌ಅನ್ನು ಉದ್ಘಾಟಿಸಿದ ಬಳಿಕ ಮಾಕೆನ್ ಸುದ್ದಿಗಾರರ ಜೊತೆ ಮಾತನಾಡಿದರು. `ಉದ್ದೇಶಿತ ಮಸೂದೆಯೊಂದಿಗೆ ನಾವು ಮುಂದಿನ ಹೆಜ್ಜೆ ಇಡುವೆವು. ಮುಂಗಾರು ಅಧಿವೇಶನದಲ್ಲಿ ಅದನ್ನು ಸಂಸತ್ತಿನ ಮುಂದಿಡಬೇಕೆಂಬುದು ನನ್ನ ಬಯಕೆ~ ಎಂದು ಅವರು ತಿಳಿಸಿದರು.

ಹಾಕಿ ಆಡಳಿತದ ಬಗ್ಗೆ ಮಾತನಾಡಿದ ಅವರು, `ಹಾಕಿ ಇಂಡಿಯಾ ಸಂಸ್ಥೆಯು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ ಮಾನ್ಯತೆ ಪಡೆದಿದೆ. ಈ ಕಾರಣ ಚಾಂಪಿಯನ್ಸ್ ಟ್ರೋಫಿ ಮತ್ತು ಒಲಿಂಪಿಕ್ ಕೂಟದ ಅರ್ಹತಾ ಪಂದ್ಯಗಳನ್ನು ಆಯೋಜಿಸುವ ಅವಕಾಶವನ್ನು ಅವರಿಗೆ ನೀಡಿದ್ದೇವೆ. ಭಾರತದಲ್ಲಿ ಒಲಿಂಪಿಕ್ ಅರ್ಹತಾ ಪಂದ್ಯಗಳು ನಡೆಯುವುದರಿಂದ ನಮಗೆ ಲಾಭವಿದೆ. ಈ ಅವಕಾಶವನ್ನು ಕಳೆದುಕೊಳ್ಳುವುದು ಸರಿಯಲ್ಲ~ ಎಂದರು.

ಅತ್ಯಾಧುನಿಕ ಶೂಟಿಂಗ್ ರೇಂಜ್: ಕ್ರೀಡಾ ಸಚಿವರು ಸೋಮವಾರ ಉದ್ಘಾಟಿಸಿದ ಶೂಟಿಂಗ್ ರೇಂಜ್ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಸುಮಾರು 6.5 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. 50 ಮೀ. ಮತ್ತು 25 ಮೀ. ಶೂಟಿಂಗ್ ರೇಂಜ್‌ನಲ್ಲಿ ಕ್ರಮವಾಗಿ 25 ಹಾಗೂ 30 ಲೇನ್‌ಗಳಿವೆ. ಅದೇ ರೀತಿ 10 ಮೀ. ಶೂಟಿಂಗ್ ರೇಂಜ್ 30 ಲೇನ್‌ಗಳನ್ನು ಹೊಂದಿವೆ.

`ದೇಶದ ಅತ್ಯುತ್ತಮ ಶೂಟಿಂಗ್ ರೇಂಜ್‌ಗಳಲ್ಲಿ ಇದೂ ಒಂದು. ಸದ್ಯದಲ್ಲೇ ಇಲ್ಲಿ ರಾಷ್ಟ್ರೀಯ ಶಿಬಿರ ನಡೆಸಲಾಗುವುದು~ ಎಂದು ರಾಷ್ಟ್ರೀಯ ರೈಫಲ್ಸ್ ಸಂಸ್ಥೆ ಕಾರ್ಯದರ್ಶಿ ಡಿ.ಕೆ. ಶುಕ್ಲಾ ನುಡಿದರು. ಯೋಗ ಮತ್ತು ಫಿಟ್‌ನೆಸ್ ಸೆಂಟರ್ ಒಳಗೊಂಡಿರುವ ದೊಡ್ಡ ಹಾಲ್ ರೇಂಜ್‌ನ ವಿಶೇಷತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT