ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಹಕ್ಕು: ಮರು ಪರಿಶೀಲನೆ ಇಲ್ಲ

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆರ್‌ಟಿಐ ಕಾಯಿದೆಯನ್ನು ಮರುಪರಿಶೀಲಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಭಾನುವಾರ ಸ್ಪಷ್ಟಪಡಿಸಿದ್ದಾರೆ.ಆದರೆ ಆರ್‌ಟಿಐ ಕಾಯಿದೆ ಕಾರಣದಿಂದ ಸರ್ಕಾರ ಮಾತ್ರವಲ್ಲದೆ ನ್ಯಾಯಾಂಗ ಕೂಡ `ಕಷ್ಟಗಳನ್ನು~ ಅನುಭವಿಸಿದೆ ಎಂದಿದ್ದಾರೆ.

`ಆರ್‌ಟಿಐ ಬಗ್ಗೆ ನಮಗೆ ಹೆಮ್ಮೆ ಇದೆ. ಈ ರಾಷ್ಟ್ರಕ್ಕೆ ನಾವು ಆರ್‌ಟಿಐ ನೀಡಿದ್ದೇವೆ  ಎಂದು ನಾವು ಸಂತೃಪ್ತಗೊಂಡಿದ್ದೇವೆ. ಈ ರಾಷ್ಟ್ರಕ್ಕೆ ಇದು ಕೆಲಮಟ್ಟಿಗೆ ಅನಾನುಕೂಲಗಳನ್ನು ಉಂಟು ಮಾಡಿದ್ದರೂ ಈ ಅನಾನುಕೂಲತೆಗಳನ್ನು ನಾವು ಸಹಿಸಿಕೊಳ್ಳುತ್ತೇವೆ.

ಆದರೆ ಒಟ್ಟಾರೆಯಾಗಿ ಸರ್ಕಾರದ ಸಾಮರ್ಥ್ಯ ಮತ್ತು ಕಾರ್ಯ ನಿರ್ವಹಣೆ ಸಶಕ್ತಗೊಂಡಿದೆ~ ಎಂದು ಅವರು ಇತ್ತೀಚೆಗೆ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.ಆರ್‌ಟಿಐ ಕಾಯಿದೆಯನ್ನು ಪರಿಷ್ಕರಿಸಲಾಗುವುದೇ ಎಂಬ ಪ್ರಶ್ನೆಗೆ ಅವರು, `ಕಾಯಿದೆ ಬಗ್ಗೆ ಪುನರ್‌ಪರಿಶೀಲನೆಯ ಪ್ರಸ್ತಾವ ಇಲ್ಲ~ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

`ಇಂದು ನಾವು ಆರ್‌ಟಿಐನ ಅನುಭವವನ್ನು ಅರಿಯುತ್ತಿದ್ದೇವೆ. ಕೆಲ ಕಾಲಗಳ ನಂತರ ಈ ಅನುಭವಗಳನ್ನು, ಬೇಡಿಕೆಗಳನ್ನು ಮತ್ತು ಈ ಕುರಿತ ಚರ್ಚೆಗಳನ್ನು ಪರಿಶೀಲಿಸಿ ನಾವು ಯಾವುದೇ ಮಾರ್ಪಾಡು ಮಾಡಬಹುದು ಅಥವಾ ಮಾಡದೇ ಇರಬಹುದು. ಇದನ್ನು ಇಂದು ನಾನು ಹೇಳಲು ಸಾಧ್ಯವಿಲ್ಲ~ ಎಂದೂ ಖುರ್ಷಿದ್ ಹೇಳಿದ್ದಾರೆ.

`ಕಾಯಿದೆಯಲ್ಲಿ ಯಾವುದೇ ಮೂಲಭೂತ ಬದಲಾವಣೆಗಳನ್ನು ಮಾಡುತ್ತೀರಾ ಎಂದು ಕೇಳಿದರೆ, ಉತ್ತರ ಇಲ್ಲ ಎಂದಾಗಿರುತ್ತದೆ. ಆರ್‌ಟಿಐ ಬಗ್ಗೆ ನಮಗೆ ಹೆಮ್ಮೆ ಇದೆ~ ಎಂದಿದ್ದಾರೆ.
 
ಆರ್‌ಟಿಐ ಮಾಹಿತಿಯಿಂದಾಗಿ ಈಚೆಗೆ 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವಾಲಯವು ಪ್ರಧಾನಿ ಕಚೇರಿಗೆ ಕಳುಹಿಸಿದ ಟಿಪ್ಪಣಿ ಉಂಟು ಮಾಡಿದ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ಆರ್‌ಟಿಐ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ನ್ಯಾಯಾಂಗ `ಕೆಲವು ಸಂಕಷ್ಟಗಳನ್ನು~ ಎದುರಿಸಿವೆ ಎಂದು ಪ್ರತಿಕ್ರಿಯಿಸಿದ್ದಾರೆ.

`ನಮಗೆ ಖಚಿತವಾಗಿ ತಿಳಿದಿದೆ, ನಾವು (ಸರ್ಕಾರ) ಎಂದರೆ ನಾವಷ್ಟೆ ಅಲ್ಲ. ಸರ್ಕಾರ ಎಂದರೆ ರಾಜಕೀಯ ಸರ್ಕಾರ, ಕೇವಲ ಒಬ್ಬರೇ ಕೆಲ ಸಂಕಷ್ಟ ಅನುಭವಿಸಿಲ್ಲ. ಅಧಿಕಾರಶಾಹಿ, ನ್ಯಾಯಾಲಯಗಳೂ ಕಷ್ಟ ಅನುಭವಿಸಿವೆ~ ಎಂದು ವಿವರಿಸಿದ್ದಾರೆ.

ಆರ್‌ಟಿಐ ಕಾಯಿದೆಯಲ್ಲಿ ಹೊಸ ವಿನಾಯಿತಿಗಳನ್ನು ಸೇರಿಸಲು ಇದು ಸಕಾಲವೇ ಎಂದು ಕೇಳಿದ್ದಕ್ಕೆ, `ಇದನ್ನು ಎಲ್ಲರೂ ಸೇರಿ ನಿರ್ಧರಿಸಬೇಕು. ಸಮಾಜ, ಸಂಸತ್ತಿನಿಂದ ಈ ಅಭಿಪ್ರಾಯ ಬರಬೇಕು~ ಎಂದಿದ್ದಾರೆ.

ಸಚಿವರು ಮತ್ತು ಪ್ರಧಾನಿ ನಡುವಣ ಪತ್ರ ವ್ಯವಹಾರವನ್ನು ಆರ್‌ಟಿಐ ವ್ಯಾಪ್ತಿಯಿಂದ ಹೊರಗಿಡಬೇಕೇ ಎಂಬ ಪ್ರಶ್ನೆಗೆ ಖುರ್ಷಿದ್ ಅವರು, ಗೋಪ್ಯ ಕಾಯ್ದುಕೊಳ್ಳುವುದಾಗಿ ಸಚಿವರು ತೆಗೆದುಕೊಳ್ಳುವ ಪ್ರಮಾಣವಚನದ ಬಗ್ಗೆ ಪ್ರಸ್ತಾಪಿಸಿದರು.

`ಆರ್‌ಟಿಐ ರೂಪಿಸುವಾಗ ಯಾರೂ ಈ ಪ್ರಮಾಣವಚನದ ಬಗ್ಗೆ ಗಮನಿಸಲಿಲ್ಲ ಎನಿಸುತ್ತದೆ. ಈಗ ನಾನು ಏನೇ ಮಾಡಿದರೂ ಅದು ಗುಮಾಸ್ತನಿಂದ ನಿಮಗೆ ಬಹಿರಂಗವಾಗುತ್ತದೆ.

ಆಗ ಇಂತಹ ಪ್ರಮಾಣವಚನ ತೆಗೆದುಕೊಳ್ಳುವುದರಲ್ಲಿ ಅರ್ಥವೇನಿದೆ? ಈ ಪ್ರಮಾಣವಚನವನ್ನು ನಾವು ಬದಲಾಯಿಸಬೇಕು~ ಎಂದು ವಾದಿಸಿದ್ದಾರೆ.ಒಳಿತಿಗಾಗಿ ಕೆಲವು ವಿಷಯಗಳನ್ನು ಗೋಪ್ಯವಾಗಿ ಇಡಲಾಗುತ್ತದೆ ಅಷ್ಟೆ ಎಂದೂ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT