ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿದಾರರಿಗೆ 1 ಲಕ್ಷ ಬಹುಮಾನ

ನಕಲಿ ಮದ್ಯ ವಿತರಣೆ ತಡೆಗೆ ಅಬಕಾರಿ ಇಲಾಖೆ ಪ್ರಯತ್ನ
Last Updated 17 ಏಪ್ರಿಲ್ 2013, 11:17 IST
ಅಕ್ಷರ ಗಾತ್ರ

ಕೋಲಾರ: ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಆಮಿಷ ಒಡ್ಡುವ ಸಲುವಾಗಿ ಮದ್ಯ ವಿತರಣೆ, ಕಳ್ಳಬಟ್ಟಿ ಸಾರಾಯಿ ತಯಾರಿಕೆ, ನಕಲಿ ಮದ್ಯ ಹಂಚಿಕೆ, ಸಾಗಾಣಿಕೆ ಮತ್ತು ಮಾರಾಟ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ತಡೆಯಲು ಅಬಕಾರಿ ಇಲಾಖೆಯು ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದೆ.

ಇಂಥ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವ ಸಾರ್ವಜನಿಕರು, ಮತದಾರರಿಗೆ ಇಲಾಖೆ ವತಿಯಿಂದ ಬಹುಮಾನವನ್ನು ನೀಡುವ ವಿನೂತನ ಕಾರ್ಯಕ್ರಮ ಜಾರಿಯಾಗುತ್ತಿದೆ. ಮಾಹಿತಿ ನೀಡಿದವರಿಗೆ ಇನ್ನು ಮುಂದೆ ಕನಿಷ್ಠ ರೂ 5 ಸಾವಿರದಿಂದ 1 ಲಕ್ಷದವರೆಗೆ ನಗದು ಬಹುಮಾನ ನೀಡಲಾಗುವುದು.

ಅಕ್ರಮ ಮತ್ತು ನಕಲಿ ಮದ್ಯ ವಿತರಣೆಯನ್ನು ತಡೆಗಟ್ಟುವ ಇಲಾಖೆಯ ಕಾರ್ಯಾಚರಣೆಯು ಸಮುದಾಯ- ಸಾರ್ವಜನಿಕರು ನೀಡುವ ಮಾಹಿತಿಯನ್ನೂ ಆಧರಿಸಿರುವುದರಿಂದ ಮಾಹಿತಿ ನೀಡುವಲ್ಲಿ ಸಾರ್ವಜನಿಕರನ್ನು ಉತ್ತೇಜಿಸುವ ಸಲುವಾಗಿ ನಗದು ಬಹುಮಾನವನ್ನು ನೀಡಲಾಗುತ್ತಿದೆ.

ಸಾರ್ವಜನಿಕರು ನೀಡುವ ಮಾಹಿತಿ ಮತ್ತು ಅದನ್ನು ಆಧರಿಸಿ ನಡೆಸುವ ಕಾರ್ಯಾಚರಣೆಯಿಂದ ಇಲಾಖೆಗೆ ದೊರಕುವ ಆದಾಯವನ್ನು ಆಧರಿಸಿ ನಗದು ಬಹುಮಾನವನ್ನು ನಿರ್ಧರಿಸಲಾಗುತ್ತದೆ.

ಲಕ್ಷಗಟ್ಟಲೆ ಅಕ್ರಮ ಮದ್ಯ ಪತ್ತೆಗೆ ಮಾಹಿತಿ ನೀಡಿದರೆ ರೂ 50 ಸಾವಿರದವರೆಗೂ ಬಹುಮಾನ ನೀಡಲಾಗುತ್ತದೆ. ಇನ್ನೂ ದೊಡ್ಡಮೊತ್ತದ ಅಕ್ರಮವನ್ನು ಪತ್ತೆಹಚ್ಚಲು ಸಹಕರಿಸಿದರೆ 1 ಲಕ್ಷದವರೆಗೂ ಬಹುಮಾನ ನೀಡುವ ಅವಕಾಶವಿದೆ ಎನ್ನುತ್ತಾರೆ ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ಎಚ್.ಬಿ.ಬಾಲಗಂಗಾಧರ.

`ಪ್ರಜಾವಾಣಿ' ಪ್ರತಿನಿಧಿಯೊಡನೆ ಮಂಗಳವಾರ ಮಾತನಾಡಿದ ಅವರು, ಹಣದ ಆಸೆಯಿಂದ ಚುನಾವಣಾ ಸಂದರ್ಭದಲ್ಲಿ ಅಕ್ರಮವಾಗಿ ವಿಷಪೂರಿತ ಮತ್ತು ನಕಲು ಮದ್ಯವನ್ನು ಪೂರೈಸುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಚುನಾವಣಾ ವೇಳೆ ಮತದಾರರನ್ನು ಓಲೈಸಲು ಕೆಲವು ಶಕ್ತಿಗಳು ನಕಲು ಮದ್ಯ ಪೂರೈಸುವ ಸಾಧ್ಯತೆಗಳಿರುತ್ತವೆ.  ಅವುಗಳನ್ನು ತಡೆಗಟ್ಟಲು ಇಲಾಖೆಗೆ ನಾಗರಿಕರ ಸಹಕಾರವೂ ಅತ್ಯಗತ್ಯವಾಗಿರುವ ಹಿನ್ನೆಲೆಯಲ್ಲಿ ಇಂಥದೊಂದು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಗೌಪ್ಯತೆ: ನಕಲಿ, ಅಕ್ರಮ ಮದ್ಯ ಸೇವನೆಯಿಂದ ಪ್ರಾಣ ಹಾನಿ ಸಂಭವ ಹೆಚ್ಚಿರುತ್ತದೆ. ಸಾರ್ವಜನಿಕರು ಮಾಹಿತಿ ನೀಡುವುದರಿಂದ ಅವರಿಗೂ ದುಷ್ಕರ್ಮಿಗಳಿಂದ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ, ಮಾಹಿತಿದಾರರ ಸಂರಕ್ಷಣೆ ದೃಷ್ಟಿಯಿಂದ ಅವರ ಬಗೆಗಿನ ಮಾಹಿತಿ ಗೌಪ್ಯವಾಗಿಡಲಾಗುವುದು ಎಂದರು.

380 ದಾಳಿ: ಜಿಲ್ಲೆಯಲ್ಲಿ ಸ್ಥಾಪಿಸಿರುವ 10 ಚೆಕ್‌ಪೋಸ್ಟ್‌ಗಳಲ್ಲಿ ಮಾ.20ರಿಂದ ಆ.14ರವರೆಗೆ ಜಿಲ್ಲೆಯಲ್ಲಿ 9292 ವಾಹನಗಳನ್ನು ತಪಾಸಣೆ ಮಾಡಲಾಗಿದೆ. 380 ದಾಳಿ ನಡೆಸಲಾಗಿದೆ. 37 ಆರೋಪಿಗಳನ್ನು ಬಂಧಿಸಲಾಗಿದೆ. 3,5 ಸಾವಿರ ಲೀಟರ್ ಕಳ್ಳಭಟ್ಟಿ, 40 ಲೀ ಬೆಲ್ಲದ ಕೊಳೆ ಮತ್ತು 6 ವಾಹನಗಳೂ ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೆ ಒಟ್ಟಾರೆ ರೂ 4.48 ಲಕ್ಷ ಮೌಲ್ಯದ ಅಬಕಾರಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಎಂದು ಅವರು ಮಾಹಿತಿ ನೀಡಿದರು.

10 ಚೆಕ್‌ಪೋಸ್ಟ್: ಅಬಕಾರಿ ಇಲಾಖೆಯು ಅಕ್ರಮ ಮದ್ಯ ತಯಾರಿಕೆ, ಸಾಗಣೆ ಮತ್ತು ಮಾರಾಟವನ್ನು ತಡೆಗಟ್ಟಲು ಜಿಲ್ಲೆಯ ಗಡಿ ಪ್ರದೇಶಗಳಲ್ಲಿ 10 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿಯಲ್ಲಿರುವ ಜಿಲ್ಲೆಯ ಗ್ರಾಮಗಳ ಮೂಲಕವೇ ಅಕ್ರಮ ಮದ್ಯ ಸಾಗಣೆ ನಡೆಯುವುದರಿಂದ ಅಂಥ ಸ್ಥಳಗಳಲ್ಲಿಯೇ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ.

ಶ್ರೀನಿವಾಸಪುರ ತಾಲ್ಲೂಕಿನ ರಾಯಲ್‌ಪಾಡು, ಗೌನಿಪಲ್ಲಿ, ಸೋಮಯಾಜಲಪಲ್ಲಿ, ಮುಳಬಾಗಲು ತಾಲ್ಲೂಕಿನ ನಂಗಲಿ ಮತ್ತು ಹೆಬ್ಬಣಿ, ಬಂಗಾರಪೇಟೆ ತಾಲ್ಲೂಕಿನ ವಿ.ಕೋಟ, ಜಂಪಾಪುರ, ಕದುಮನಹಳ್ಳಿ, ಮಾಲೂರು ತಾಲ್ಲೂಕಿನ ಕೆಸರಗೆರೆ ಮತ್ತು ಸಂಪಂಗೆರೆಯಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ 24 ಗಂಟೆಯೂ ಸಿಬ್ಬಂದಿ ತಪಾಸಣೆ ಕಾರ್ಯದಲ್ಲಿ ನಿರತರಾಗಿರುತ್ತಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT