ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚಿದ ಯುಗಳ ವಾದನ

Last Updated 6 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ನಗರದ ಚೌಡಯ್ಯ ಸ್ಮಾರಕ ಸಭಾಂಗಣದ ಯಾಜಮಾನ್ಯ  ಹೊಂದಿರುವ `ಅಕಾಡೆಮಿ ಆಫ್ ಮ್ಯೂಸಿಕ್'ನ ಸುವರ್ಣ ಮಹೋತ್ಸವವು ವಾರ ಕಾಲ ಸಾಂಸ್ಕೃತಿಕ ಉತ್ಸವ ನಡೆಸುವುದರೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಕಿರಿಯರು-ಹಿರಿಯರ ಸಂಗೀತ, ವಾದ್ಯ-ಹಾಡುಗಾರಿಕೆ, ಕರ್ನಾಟಕ- ಹಿಂದುಸ್ತಾನಿ ಸಂಗೀತಗಳು ಮೇಳೈಸಿದವು.

ಉತ್ಸವದ ಕೊನೆಯ ಕಾರ್ಯಕ್ರಮ ಮಾಡಿದ ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್ ತನಿ ಪಿಟೀಲಿನಲ್ಲಿ ವಿಜೃಂಭಿಸಿದರು. ಈ ವರ್ಷದ ಚೌಡಯ್ಯ ಸ್ಮಾರಕ ಪ್ರಶಸ್ತಿ ಪುರಸ್ಕೃತರಾದ ಈ ಇಬ್ಬರು, ಇನ್ನೊಬ್ಬ ಪ್ರಶಸ್ತಿ ವಿಜೇತ ಡಾ. ಟಿ.ಕೆ. ಮೂರ್ತಿ (ಮೃದಂಗ) ಅವರೊಂದಿಗೆ ಯುಗಳ ಪಿಟೀಲು ನುಡಿಸಿದರು. ಅಭೋಗಿ ರಾಗವನ್ನು ಇಬ್ಬರೂ ಹಂಚಿಕೊಂಡು ಅರಳಿಸಿದ ಬಗೆಯೇ ರೋಚಕ. ತ್ರಿಸ್ಥಾಯಿಯಲ್ಲೂ ಸಂಚರಿಸುತ್ತಾ ಪ್ರಖರ ನಾದ  ಹೊಮ್ಮಿಸುತ್ತಾ ಆಲಾಪನೆಯನ್ನು ವಿನಿಕೆ ಮಾಡಿದರು. ಘನವಾದ ಸಭಾಪತಿ ಕೃತಿಯನ್ನು ಹಸನಾಗಿ ನಿರೂಪಿಸಿ, ಸ್ವರಗಳಿಂದ ಅಲಂಕರಿಸಿದರು. ಭಾಗಾಯನಯ್ಯ   ಕಿರಿದಾಗಿ ನುಡಿಸಿ, ಮುಂದಿನ ಕೃತಿಗೆ ಸರಿದರು.

ಬಿಂದುಮಾಲಿನಿ ರಾಗವು ಮಿತವಾಗಿ ಪಸರಿಸಿದರೂ ಲಾಲಿತ್ಯ ಪೂರ್ಣವಾಗಿತ್ತು. ಗಾಢ ಪ್ರಭಾವ ಬೀರಿತು. ಈ ರಾಗದಲ್ಲಿ ಪ್ರಸಿದ್ಧವಾಗಿರುವ ಏಕೈಕ ಕೃತಿ `ಎಂಥ ಮುದ್ದೊ ಎಂಥ ಸೊಗಸೊ' ಹೃದಯಂಗಮವಾಗಿ ಮೂಡಿತು. ಘನವಾದ ಕಲ್ಯಾಣಿ ರಾಗವನ್ನು ಹಂತಹಂತವಾಗಿ ವಿಸ್ತರಿಸುತ್ತಾ ರಾಗಕ್ಕೆ ಪೂರ್ಣತ್ವ ನೀಡಿದರು. ಅದರಲ್ಲೂ ಮಂದ್ರಸ್ಥಾಯಿಯಲ್ಲಿ ನುಡಿಸಿದ ಸಂಗತಿಗಳು ಮನ ಮಿಡಿದವಲ್ಲದೆ ಶ್ರುತಿ ಭೇದವೂ ರೋಚಕವಾಗಿತ್ತು. `ಏತವುನರಾ' ವಿಸ್ತರಿಸಿ ತನಿಗೆ ಸರಿದರು. ಒಟ್ಟಿನಲ್ಲಿ ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್ ವಾದ್ಯದ ಮೇಲಿನ ತಮ್ಮ ಪ್ರಭುತ್ವ, ಶುದ್ಧ ಶ್ರುತಿ, ಖಚಿತ ಲಯಗಳಿಂದ ಒಂದು ರಂಜನೀಯ ಕಛೇರಿ ಮಾಡಿದರು.

ಡಾ. ಟಿ.ಕೆ. ಮೂರ್ತಿ ಅವರು ಹಿರಿಯರಿಗೆ ತಕ್ಕ ಹಾಗೆ ಮೃದಂಗ ನುಡಿಸಿ ಮಾರ್ಗದರ್ಶನ ಮಾಡಿದರು. ಯುವ ಕಲಾವಿದರಾದ ಬಿ.ಸಿ. ಮಂಜುನಾಥ್ ಮತ್ತು ಉಳ್ಳೂರು ಗಿರಿಧರ ಉಡುಪ ಲಯವಾದ್ಯಗಳಲ್ಲಿ ಚೆನ್ನಾಗಿ ಅನುಸರಿಸಿ ನುಡಿಸಿದರು.

ಗೋಷ್ಠಿ ಗಾಯನ

ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಮುತ್ತುಸ್ವಾಮಿ ದೀಕ್ಷಿತರಿಗೆ (1776-1835) ಒಂದು ಘನವಾದ ಸ್ಥಾನವಿದೆ. ಅವರ ಕೃತಿಗಳಲ್ಲಿ ನವಗ್ರಹ ಕತಿಗಳು, ಷೋಡಶ ಗಣಪತಿ ಕೃತಿಗಳು, ನವಾವರಣ ಕೃತಿಗಳು, ಪಂಚಲಿಂಗ ಸ್ಥಳ ಇತ್ಯಾದಿಗಳಿಂದ ಕರ್ನಾಟಕ ಸಂಗೀತ ಭಂಡಾರವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ರಾಗಮಾಲಿಕೆ ಕೃತಿಗಳಲ್ಲಿ  `ವಿಶ್ವನಾಥಂ ಭಜೇಹಂ' ಗೆ ವಿಶಿಷ್ಟ ಸ್ಥಾನವಿದೆ.

14 ರಾಗಗಳಲ್ಲಿರುವ ಈ ಚತುರ್ದಶ ರಾಗಮಾಲಿಕೆಯು ಅದರ ರಾಗ, ಸಂಗೀತ ಹಾಗೂ ಅರ್ಥಗಳಿಂದ ಮೌಲಿಕವಾದುದು. ಈ ಕೀರ್ತನೆ ವಾದಿರಾಜ ಕಲಾ ಭವನದಲ್ಲಿ ಶತಕಂಠಗಳಿಂದ ಹೊರಟು ನಭೋಮಂಡಲ ಮುಟ್ಟಿತು. ಶ್ರೀಮದ್ ವಾದಿರಾಜ ಆರಾಧನಾ ಟ್ರಸ್ಟ್ ದೀಕ್ಷಿತರ ದಿನಾಚರಣೆ ಆಚರಿಸಿ, ಗುರುಗುಹನಿಗೆ ನಾದಾಂಜಲಿ ಸಲ್ಲಿಸಿ ಕಲಾವಿದರು ಆರ್. ಕೆ. ಪದ್ಮನಾಭ ಅವರ ನಿರ್ದೇಶನದಲ್ಲಿ ದೀಕ್ಷಿತರ ಆಯ್ದ ಕೃತಿಗಳನ್ನು ಏಕಕಂಠವಾಗಿ ಒಟ್ಟಿಗೆ ಹಾಡಿದರು.

ಆ ಮೊದಲು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ವೀಣೆ ಶೇಷಣ್ಣನವರ ಒಂದು ಭಾವಚಿತ್ರವನ್ನು ಅನಾವರಣಗೊಳಿಸಿದರು. ಗೋಷ್ಠಿ ಗಾಯನದಲ್ಲಿ ಏಕದಂತಂ ಭಜೇಹಂ (ಬಿಲಹರಿ), ಶ್ರೀರಂಜಿನಿಯಲ್ಲಿ ಪರ್ವತ ರಾಜಕುಮಾರಿ ಹಾಗೂ ಸುಮದ್ಯುತಿಯಲ್ಲಿ ಕಾಮಾಕ್ಷೀ ಕಾಮಕೋಟಿ - ಗಾನ ರೂಪದಲ್ಲಿ ಅರ್ಪಿತವಾಗಿ ದೀಕ್ಷಿತರಿಗೆ ನಮಿಸಿದರು.

ನೃತ್ಯ ನಂದನ

ಬೆಂಗಳೂರಿನ ಉಪನಗರಗಳಲ್ಲಿ ಒಂದಾದ ಯಲಹಂಕ ನ್ಯೂ ಟೌನ್‌ನಲ್ಲಿ ಭರತನಾಟ್ಯ ತರಗತಿಗಳನ್ನು ನಡೆಸುತ್ತಾ ಆ ಭಾಗದ ಕಲಾಸಕ್ತರ ಒಂದು ಅಗತ್ಯವನ್ನು ನೃತ್ಯ ನಂದನ ಶಾಲೆ ಪೂರೈಸುತ್ತಿದೆ. ಹಿರಿಯ ನೃತ್ಯ ಕಲಾವಿದೆ ಸೀಮಾ ಜವಹರ್ ಅವರ ಶಿಕ್ಷಣದಲ್ಲಿ ನೂರಾರು ಜನ ಕಿರಿಯರು ಭರತನಾಟ್ಯ ಕಲೆಯಲ್ಲಿ ಸಾಧನೆ ಮಾಡುತ್ತಿದ್ದಾರೆ. ಸಂಜಯನಗರ ಶಾಖೆಯಲ್ಲೂ ಕಲಿಯುವವರಿಗೆ ಏನೂ ಕಡಿಮೆ ಇಲ್ಲ. ಕಳೆದ ವಾರದ ನೃತ್ಯ ಕಾರ್ಯಕ್ರಮ - ಅವರ ಈ ಶಿಕ್ಷಣದ ಪ್ರತಿಫಲದಂತೆ ಕಾಣಿಸಿತು.

ಯಲಹಂಕದ ಜ್ಞಾನಜ್ಯೋತಿ ಸಂಸ್ಥೆಯ ವಿಶಾಲ ವೇದಿಕೆಯ ಮೇಲೆ ಮಕ್ಕಳು ಆಯ್ದ ರಚನೆಗಳನ್ನು ಸಂಭ್ರಮದಿಂದ ನರ್ತಿಸಿದರು. ನಾಟರಾಗದ ಮಲ್ಹಾರಿಯೊಂದಿಗೆ ಸಾಂಪ್ರದಾಯಿಕವಾಗಿ ಪ್ರಾರಂಭಿಸಿದರು. ಕನ್ನಡದ ಮೇರು ಕವಿ ಹರಿಹರನ ಕೃತಿಯನ್ನು ನೃತ್ಯ ಕ್ಕೆ ಅಳವಡಿಸಿದ್ದು ಶ್ಲಾಘನೀಯ. ಗಿಣಿ, ನವಿಲು ಮುಂತಾದ ಪ್ರಾಣಿಗಳಂತೆ ಮಕ್ಕಳು ನರ್ತಿಸಿದ್ದು ಆಕರ್ಷಕವಾಗಿತ್ತು. `ಗೋವಿಂದ ಸಲಹು ಸದಾ' ಎನ್ನ  ಪದದಲ್ಲಿ ವಿದ್ಯಾರ್ಥಿನಿಯರು ಪಾತ್ರಗಳನ್ನು ಕ್ಷಿಪ್ರವಾಗಿ ಬದಲಾಯಿಸಿಕೊಳ್ಳುತ್ತಾ ದಶಾವತಾರವನ್ನು ಅಭಿನಯಿಸಿದರು.

ಇನ್ನೊಂದು ಜನಪ್ರಿಯ ಭಕ್ತಿಗೀತೆ  `ಮಧುರಾನಗರಿಲೊ' ಹಿಂದಿನಿಂದಲೂ ಪ್ರಸಿದ್ಧವಾದುದೇ. ಮೀರಾಭಜನ್ ಜುಬತ್ ರಾಧೆ ನಂತರ ಫರ್ಜ್ ರಾಗದ ತಿಲ್ಲಾನದೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು. ಉತ್ಸಾಹ-ಗೆಲುವಿನಿಂದ ನರ್ತಿಸಿದ ಮಕ್ಕಳು ಪ್ರೌಢ ಶಿಕ್ಷಣ ಹಾಗೂ ಶ್ರದ್ಧೆಯ ಸಾಧನೆಗಳಿಂದ ಯಶಸ್ಸಿನ ಮುಗಿಲು ಮುಟ್ಟಬಹುದು! ಗಾಯನದಲ್ಲಿ ಭಾರತಿ ವೇಣುಗೋಪಾಲ್, ನಟುವಾಂಗದಲ್ಲಿ ಸ್ಫೂರ್ತಿ ಅರವಿಂದ್, ಮೃದಂಗದಲ್ಲಿ ಜನಾರ್ಧನ ಹಾಗೂ ಕೊಳಲಿನಲ್ಲಿ ಮಧುರಾ ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT