ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚಿನ ಸಂಚಲನಕ್ಕೆ ಕಾರಣರಾದ ಬೌಲರ್‌ಗಳು

Last Updated 4 ಫೆಬ್ರುವರಿ 2011, 17:35 IST
ಅಕ್ಷರ ಗಾತ್ರ


ಬೆಂಗಳೂರು: ಕ್ರಿಕೆಟ್ ಆಟದಲ್ಲಿ ಬ್ಯಾಟ್ಸ್‌ಮನ್‌ಗಳಂತೆ ಬೌಲರ್‌ಗಳ ಜವಾಬ್ದಾರಿಯೂ ದೊಡ್ಡದು. ಬೌಲರ್‌ಗಳು ದುರ್ಬಲರಾಗಿದ್ದರೆ ಪಂದ್ಯವೇ ಕೈತಪ್ಪಿ ಹೋಗುವ ಅಪಾಯ ಎದುರಾಗುತ್ತದೆ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಬೌಲರ್‌ಗಳು ಹೇಗೆ ದಾಳಿ ನಡೆಸಿದರು ಎನ್ನುವುದಕ್ಕೂ ಮಹತ್ವ.

ವಿಶ್ವಕಪ್ ಇತಿಹಾಸದ ಪುಟಗಳಲ್ಲಿ ಬೌಲರ್‌ಗಳ ಅಬ್ಬರ ಹಾಗೂ ದುರ್ಬಲ ದಾಳಿಯ ಪರಿಣಾಮಗಳು ಎದ್ದು ಕಾಣಿಸುತ್ತವೆ. ಬೌಲಿಂಗ್ ಬಲದಿಂದಲೇ ಪಂದ್ಯಗಳನ್ನು ಗೆದ್ದ ಸಾಕ್ಷಿಗಳೂ ಸಿಗುತ್ತವೆ. ಕೆಟ್ಟ ಬೌಲರ್‌ನಿಂದಾಗಿ ಪಂದ್ಯ ತಂಡಗಳು ಸೋಲಿನ ಕಹಿಯುಂಡ ಘಟನೆಗಳೂ ಸಾಕಷ್ಟಿವೆ. ಅಂತ ಕೆಲವು ಅಂಕಿ-ಅಂಶಗಳ ವಿವರ ಇಲ್ಲಿದೆ.

* ವಿಶ್ವಕಪ್ ಕ್ರಿಕೆಟ್‌ನಲ್ಲಿ ವೈಯ ಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದು ಆಸ್ಟ್ರೇಲಿಯಾದ ಗ್ಲೇನ್ ಮೆಕ್‌ಗ್ರಾ. ನಮೀಬಿಯಾ ವಿರುದ್ಧ ಪೋಚೆ ಸ್ಟ್ರೋಮ್‌ನಲ್ಲಿ (27ನೇ ಫೆಬ್ರುವರಿ 2003) ಅವರು ಕೇವಲ 15 ರನ್ ನೀಡಿ ಏಳು ವಿಕೆಟ್ ಕಬಳಿಸಿದ್ದರು. ವಿವಿಧ ಬೌಲರ್‌ಗಳು ವಿಶ್ವಕಪ್ ಪಂದ್ಯಗಳಲ್ಲಿ ಮೂವತ್ತು ಬಾರಿ ಐದು ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್ ಗಳನ್ನು ಪಡೆದು ಗಮನ ಸೆಳೆದಿದ್ದಾರೆ. ಆದರೆ ಏಳು ವಿಕೆಟ್ ಪಡೆದಿದ್ದು ಕಾಂಗರೂಗಳ ನಾಡಿನ ಮೆಕ್‌ಗ್ರಾ (15ಕ್ಕೆ7), ಇದೇ ತಂಡದ ಆ್ಯಂಡಿ ಬಿಕೆಲ್ (20ಕ್ಕೆ7; ಇಂಗ್ಲೆಂಡ್ ವಿರುದ್ಧ, ಪೋರ್ಟ್ ಏಲಿಜಬೆತ್; 2003) ಹಾಗೂ ವೆಸ್ಟ್ ಇಂಡೀಸ್‌ನ ವಿನ್‌ಸ್ಟನ್ ಡೇವಿಸ್ (51ಕ್ಕೆ7; ಆಸ್ಟ್ರೇಲಿಯಾ ಎದುರು, ಲೀಡ್ಸ್; 1983) ಮಾತ್ರ. ನಾಲ್ಕು ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಿತ್ತ ಬೌಲರ್‌ಗಳ ಪಟ್ಟಿ ದೊಡ್ಡದಿದೆ.

* ನಾಲ್ಕು ಹಾಗೂ ಅದಕ್ಕಿಂತ ಅಧಿಕ ವಿಕೆಟ್‌ಗಳನ್ನು ಹೆಚ್ಚು ಸಾರಿ ಕಬಳಿಸಿದ ದಾಖಲೆಯು ಆಸ್ಟ್ರೇಲಿ ಯಾದ ಶೇನ್ ವಾರ್ನ್ ಹೆಸರಲ್ಲಿದೆ. ನಾಲ್ಕು ಬಾರಿ ಅವರು ಪ್ರಭಾವಿ ಬೌಲಿಂಗ್‌ನಿಂದ ಈ ಮಟ್ಟದ ಸಾಧನೆಯ ಶ್ರೇಯ ಪಡೆದಿದ್ದಾರೆ. ಜಿಂಬಾಬ್ವೆ ವಿರುದ್ಧ ನಾಗ್ಪುರದಲ್ಲಿ (34ಕ್ಕೆ4), ವೆಸ್ಟ್ ಇಂಡೀಸ್ ಎದುರು ಮೊಹಾಲಿಯಲ್ಲಿ (36ಕ್ಕೆ4), ದಕ್ಷಿಣ ಆಫ್ರಿಕಾ ವಿರುದ್ಧ ಬರ್ಮಿಂಗ್ ಹ್ಯಾಮ್‌ನಲ್ಲಿ (29ಕ್ಕೆ4) ಹಾಗೂ ಪಾಕಿಸ್ತಾನದ ಎದುರು ಲಾರ್ಡ್ಸ್‌ನಲ್ಲಿ (33ಕ್ಕೆ4) ಅವರು ಸ್ಪಿನ್ ಮೋಡಿ ಯಿಂದ ಎದುರಾಳಿ ಪಡೆಯ ಬ್ಯಾಟ್ಸ್ ಮನ್‌ಗಳನ್ನು ಕಾಡಿದ್ದರು. ಪಾಕಿಸ್ತಾನ ದ ಅಬ್ದುಲ್ ಖಾದೀರ್ ಮತ್ತು ವಾಸೀಮ್ ಅಕ್ರಮ್ ಹಾಗೂ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರು ನಾಲ್ಕು ವಿಕೆಟ್‌ಗಳನ್ನು ತಲಾ ಮೂರು ಬಾರಿ ಕೆಡವಿದ್ದಾರೆ. ಐದು ಮತ್ತು ಅದಕ್ಕಿಂತ ಅಧಿಕ ವಿಕೆಟ್‌ಗಳನ್ನು ಎರಡು ಬಾರಿ ಕಬಳಿಸಿದ್ದು ಕಾಂಗರೂಗಳ ನಾಡಿನ ಮೆಕ್‌ಗ್ರಾ ಮತ್ತು ಗ್ಯಾರಿ ಗಿಲ್ಮೋರ್ ಹಾಗೂ ಕೆರಿಬಿಯನ್‌ನ ವೆಸ್ಬರ್ಟ್ ಡ್ರೇಕಸ್.

* 128 ಬಾರಿ ಬೌಲರ್‌ಗಳು ಇನಿಂಗ್ಸ್ ಒಂದರಲ್ಲಿ ನಾಲ್ಕು ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್ ಕೆಡವಿದ ಘಟನೆಗಳಿಗೆ ವಿಶ್ವಕಪ್ ಇತಿಹಾಸ ಸಾಕ್ಷಿಯಾಗಿದೆ. 107 ಬಾರಿ ಬಲಗೈ ಬೌಲರ್‌ಗಳು ಹಾಗೂ 21 ಬಾರಿ ಎಡಗೈ ಬೌಲರ್‌ಗಳು ಈ ಸಾಧನೆ ಮಾಡಿದ್ದಾರೆ. ಬಲಗೈ ಬೌಲರ್‌ಗಳಲ್ಲಿ ಗ್ಲೇನ್ ಮೆಕ್‌ಗ್ರಾ ಅವರು ನಮೀಬಿಯಾ ವಿರುದ್ಧ 15ಕ್ಕೆ7 ವಿಕೆಟ್ ಪಡೆದಿದ್ದು ಉತ್ತಮ ಪ್ರದರ್ಶನ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ ಪಂದ್ಯದಲ್ಲಿ ಗ್ಯಾರಿ ಗಿಲ್ಮೋರ್ ಅವರು 14ಕ್ಕೆ6 ವಿಕೆಟ್ ಕಬಳಿಸಿದ್ದು ಎಡಗೈ ಬೌಲರ್‌ಗಳಲ್ಲಿನ ಶ್ರೇಷ್ಠ ಸಾಧನೆಯಾಗಿದೆ. ವೇಗದ ಬೌಲರ್‌ಗಳು 103 ಸಾರಿ ಹಾಗೂ ಸ್ಪಿನ್ನರ್‌ಗಳು 25 ಬಾರಿ ಈ ಮಟ್ಟದಲ್ಲಿ ಪ್ರಭಾವಿಯಾಗಿದ್ದಾರೆ. ಈ ಅಂಶದಲ್ಲಿಯೂ ಮೆಕ್‌ಗ್ರಾ ಅವರೇ ವೇಗಿಗಳ ಪಟ್ಟಿಯಲ್ಲಿ ಎತ್ತರದಲ್ಲಿದ್ದಾರೆ. ಜಿಂಬಾಬ್ವೆ ಹಾಗೂ ಕೀನ್ಯಾ ನಡುವಣ ಪಂದ್ಯದಲ್ಲಿ ಪಿ.ಎ.ಸ್ಟ್ರಾಂಗ್ (27ನೇ ಫೆಬ್ರುವರಿ 1996) ಅವರು 21ಕ್ಕೆ5 ವಿಕೆಟ್ ಕಬಳಿಸಿದ್ದು ಸ್ಪಿನ್ ಬೌಲರ್‌ಗಳಲ್ಲಿನ ಶ್ರೇಷ್ಠ ಪ್ರದರ್ಶನ.

* ಬೌಲರ್‌ಗಳು ವೈಯಕ್ತಿಕವಾಗಿ ಒಂದೇ ಇನಿಂಗ್ಸ್‌ನಲ್ಲಿ ಎದುರಾಳಿಗಳಿಗೆ 80ಕ್ಕೂ ಅಧಿಕ ರನ್‌ಗಳನ್ನು ನೀಡಿದ್ದ ಘಟನೆಗಳು ವಿಶ್ವಕಪ್ ಇತಿಹಾಸದಲ್ಲಿ ಹದಿನಾರು ಬಾರಿ ದಾಖಲಾಗಿವೆ. ನೂರು ರನ್ ನೀಡಿದ್ದಂಥ ಘಟನೆ ನಡೆ ದಿದ್ದು ಒಮ್ಮೆ ಮಾತ್ರ.

ನ್ಯೂಜಿಲೆಂಡ್‌ನ ಎಂ.ಸಿ.ಸ್ನೆಡನ್ ಅವರು ಓವಲ್‌ನಲ್ಲಿ 9 ಜೂನ್ 1983ರಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಭಾರಿ ದುಬಾರಿ ಎನಿಸಿದ್ದರು. ಅವರು 105 ರನ್ ನೀಡಿದ್ದರು. ಕೆಡವಿದ್ದು ಕೇವಲ 2 ವಿಕೆಟ್. ವಿಶ್ವಕಪ್‌ನಲ್ಲಿ ಅತ್ಯಂತ ದುಬಾರಿಯಾದ ಬೌಲರ್ ಎನ್ನುವ ‘ದಾಖಲೆ’ಯೂ ಸ್ನೆಡನ್ ಅವರದ್ದಾಗಿದೆ. ಶ್ರೀಲಂಕಾದ ಅಶ್ಕತ್ ಡಿ ಮೆಲ್ (97ಕ್ಕೆ1; ವಿಂಡೀಸ್ ವಿರುದ್ಧ, ಕರಾಚಿ; 1987), ಬರ್ಮುಡಾದ ಲೆವೆರಾಕ್ (96ಕ್ಕೆ1; ಭಾರತದ ಎದುರು, ಪೋರ್ಟ್ ಆಫ್ ಸ್ಪೇನ್; 2007) ಹಾಗೂ ನಮೀಬಿಯಾದ ರುಡಿ ವಾನ್ ವುರೇನ್ (ವಿಕೆಟ್ ಇಲ್ಲದೆಯೇ 92 ರನ್; ಆಸ್ಟ್ರೇಲಿಯಾ ವಿರುದ್ಧ, ಪೋಚೆಸ್ಟ್ರೋಮ್; 2003) ಅವರು 90ಕ್ಕೂ ಹೆಚ್ಚು ರನ್‌ಗಳನ್ನು ನೀಡಿದ ಬೌಲರ್‌ಗಳು.

* ಭಾರತದ ಹದಿನಾರು ಬೌಲರ್‌ಗಳು ವಿಶ್ವಕಪ್ ಪಂದ್ಯಗಳಲ್ಲಿ ಒಟ್ಟಾರೆಯಾಗಿ ಹತ್ತು ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಶ್ರೇಯ ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಕರ್ನಾಟಕದವರಾದ ಜಾವಗಲ್ ಶ್ರೀನಾಥ್ (34 ಪಂದ್ಯಗಳಲ್ಲಿ 44 ವಿಕೆಟ್) ಅವರು ಅಗ್ರಸ್ಥಾನದಲ್ಲಿದ್ದಾರೆ. ವಿಶೇಷವೆಂದರೆ ಈ ಪಟ್ಟಿಯ ಎರಡನೇ ಸ್ಥಾನದಲ್ಲಿಯೂ ಕರ್ನಾಟಕದವರೇ ಆದ ಅನಿಲ್ ಕುಂಬ್ಳೆ (31 ವಿಕೆಟ್) ಇದ್ದಾರೆ. ಕಪಿಲ್ ದೇವ್ (28 ವಿಕೆಟ್) ಅವರು ಮೂರನೇ ಸ್ಥಾನ ಪಡೆದಿದ್ದಾರೆ.

* ವಿಶ್ವಕಪ್‌ನಲ್ಲಿ ಭಾರತದ ಪರ ವಿಕೆಟ್ ಕೀಪರ್ ಜವಾಬ್ದಾರಿಯನ್ನು ಹೊತ್ತು ಅತಿ ಹೆಚ್ಚು ವಿಕೆಟ್‌ಗಳ ಪತನಕ್ಕೆ ಕಾರಣರಾದವರಲ್ಲಿ ಕಿರಣ್ ಮೋರೆ (18) ಅವರು ಮೊದಲ ಸ್ಥಾನದಲ್ಲಿದ್ದಾರೆ. ಹತ್ತಕ್ಕೂ ಹೆಚ್ಚು ಬ್ಯಾಟ್ಸ್‌ಮನ್‌ಗಳ ನಿರ್ಗಮನಕ್ಕೆ ಕಾರಣರಾದವರಲ್ಲಿ ಮೋರೆ ಅವರಲ್ಲದೇ ರಾಹುಲ್ ದ್ರಾವಿಡ್ (16), ನಯನ್ ಮೋಂಗಿಯಾ (16) ಹಾಗೂ ಸಯ್ಯದ್ ಕಿರ್ಮಾನಿ (14) ಅವರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT