ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚಿಸುವ ಮುನ್ನ ಒಮ್ಮೆ ಯೋಚಿಸಿ! (ಬೋರ್ಡ್ ರೂಮಿನ ಸುತ್ತಮುತ್ತ )

Last Updated 26 ಜೂನ್ 2012, 19:30 IST
ಅಕ್ಷರ ಗಾತ್ರ

ಒಮ್ಮೆ ಚಿಮ್ಮಿದರಾಯ್ತು ಮಾತಿಗಳಿವೆಲ್ಲಿಹುದು
ತಮ್ಮದೇ ನಿಟ್ಟಿನೊಳು ಜೀವರಸ ಪಡೆದು
ಸುಮ್ಮನೆಯೆ ಸಾಯದೆಯೆ ಮರಮರುಳಿ ನಮ್ಮೆಲ್ಲ
ನೆಮ್ಮದಿಯ ಗೆಡಹುವುದು - ನವ್ಯಜೀವಿ

ನಮ್ಮ ನಾಲಗೆಗೆ ಆ ಪಾಟಿ ಪ್ರಾಶಸ್ತ್ಯ ಏಕೆ?!ಏಕೆಂದರೆ, ಅದರಿಂದ ಹೊರಹೊಮ್ಮುವ ಮಾತಿಗೆ ಆ ತೂಕ ಇದೆ. ನಾಡನ್ನು ಕಟ್ಟುವ ಬಲ ಇದೆ. ಕಣ್ಣಿಗೆ ಕಾಣದಿರುವುದನ್ನೆಲ್ಲ ಸವಿಸ್ತಾರವಾಗಿ ಚಿತ್ರಿಸಬಲ್ಲ ಕಲೆ ಇದೆ. ಎಲ್ಲರೊಂದಿಗೆ ಒಲವನ್ನು ಬೆಸೆಯಬಲ್ಲ ಸೆಲೆ ಇದೆ.
ಆದರೆ ಮಾತಿನ ಇನ್ನೊಂದು ಮುಖವೂ ಅಷ್ಟೆ ಭಯಂಕರವಾದದ್ದು ಕೂಡ.

ಎಷ್ಟೋ ವರುಷಗಳ ಶ್ರಮದಿಂದ ಕಟ್ಟಿರುವ ಬಾಂಧ್ಯವ್ಯವನ್ನೆಲ್ಲ ಎರಡೇ ಮಾತಿನಲ್ಲಿ ಕೆಡವಿ ಬಿಡುತ್ತದೆ. ನಾಯಕನ ಪಟ್ಟದಲ್ಲಿರುವವನ ಕುಚೋದ್ಯದ ಒಂದೆರಡು ಮಾತುಗಳೇ ಅವನನ್ನು ತನ್ನ ನೆಚ್ಚಿನವರಿಂದ ದೂರ ಕೊಂಡೊಯ್ದು ಕಡೆಯಲ್ಲಿ ಅವನ ಅವನತಿಗೂ ಕಾರಣವಾಗಿ ಬಿಡುತ್ತವೆ.

`ಕುಂಬಾರನಿಗೊಂದು ವರುಷ, ದೊಣ್ಣೆಗೆ ಒಂದೇ ನಿಮಿಷ~ ಎಂಬ ಗಾದೆಯಂತೆಯೇ ನಾವು `ಕಟ್ಟಿ ಬೆಳೆಸುವುದಕ್ಕೆ ಒಂದು ವರುಷ, ಕುಟ್ಟಿ ಅಳಿಸುವುದಕ್ಕೆ ಒಂದೇ ನಿಮಿಷ~ ಎಂದು ಆ ಮಾತಿನ ಬಗ್ಗೆ ಹೊಸ ಗಾದೆಯೊಂದನ್ನು ಹುಟ್ಟುಹಾಕಬಹುದು.

ಒಮ್ಮೆ ನಾಲಗೆಗೂ, ಹಲ್ಲುಗಳಿಗೂ `ತಮ್ಮಲ್ಲಿ ಯಾರು ಮೇಲು?~ ಎಂಬ ಬಗ್ಗೆ ವಾದವಾಯಿತಂತೆ. ಹಲ್ಲು ಹೇಳಿತಂತೆ - `ನಾಲಗೆ, ನೀನು ಬರಿಯ ಮಾಂಸದ ಒಂದು ತುಣುಕು ಅಷ್ಟೆ. ನಾನೇನಾದರೂ ಮನಸ್ಸು ಮಾಡಿದರೆ ನನ್ನನ್ನು ನೀನು ಹಾಯುವ ಹೊತ್ತಲ್ಲಿ ನಿನ್ನನ್ನು ಕಡಿದು ತುಂಡಾಗಿಸಬಲ್ಲೆ. ನಾನು ಹಾಗೆ ಮಾಡದಿರುವುದರಿಂದಲೇ ನೀನಿನ್ನೂ ಜೀವಂತವಾಗಿರುವುದು!~

ಅದಕ್ಕೆ ನಾಲಗೆ ಉತ್ತರವಾಗಿ- `ಹಲ್ಲು ದೊರೆ, ನಾನು ಒಳ್ಳೆಯ ಮಾತುಗಳನ್ನು ಆಡುತ್ತಿದ್ದೇನೆ~ ಹಾಗೊಮ್ಮೆ ನಾನೇನಾದರೂ ಮನಸ್ಸು ಮಾಡಿ ಒಂದೆರಡು ಕೆಟ್ಟ ಮಾತುಗಳನ್ನು ಒಲ್ಲದ ಸಮಯದಲ್ಲಿ ಸಲ್ಲದ ಜನರೆದುರು ಆಡಿಬಿಟ್ಟೆನೆಂದರೆ, ಅವರೆಲ್ಲ ಸೇರಿ ನಿನ್ನ ಹಾಗೂ ಈ ನಿನ್ನ ಮೂವತ್ತೊಂದು ಸಂಗಾತಿಗಳನ್ನು ಹೊಡೆದು ಪುಡಿ ಪುಡಿ ಮಾಡಿಯಾರು. ಅಷ್ಟೇ ಏಕೆ ನಮ್ಮಿಬ್ಬರಿಗೂ ಇರಲು ಜಾಗ ಮಾಡಿಕೊಟ್ಟಿರುವ ಈ ದೇಹವನ್ನೇ ಧ್ವಂಸ ಮಾಡಿಯಾರು. ಏಕೆ ಈ ನಿಷ್ಪ್ರಯೋಜಕ ವಾದ?~ ಎನ್ನುತ್ತ ತನ್ನ ಮಾತನ್ನು ಮುಕ್ತಾಯಗೊಳಿಸಿತಂತೆ.

ಮಾತಿನ ಈ ಎರಡನೆಯ ಮುಖದಿಂದಲೇ ನಮ್ಮ ನಾಲಗೆಗೆ ಎಲ್ಲಿಲ್ಲದ ಮರ್ಯಾದೆ, ಅದರ ಬಗ್ಗೆ ಅಷ್ಟೊಂದು ಕಾಳಜಿ. ನಾಲಗೆ ಎಂದಿಗೂ ಒಳ್ಳೆಯ ಮಾತುಗಳನ್ನೇ ಆಡುತ್ತಿದ್ದರೆ ಯಾರೂ ಅದರ ಬಗ್ಗೆ ಇಷ್ಟೊಂದು ತಲೆಕೆಡಿಸಿ ಕೊಳ್ಳುತ್ತಿರಲಿಲ್ಲ.
 
`ಪಾಪ ಅದೊಂದು ಸಾಧು ಪ್ರಾಣಿ~ ಎನ್ನುತ್ತ ಮೂಲೆಯೊಂದರಲ್ಲಿ ಇರಿಸಿಬಿಡುತ್ತಿದ್ದರು. ಆದರೆ, ಎಚ್ಚರ ವಹಿಸದಿದ್ದಾಗ ನಾಲಗೆ ಕೆಟ್ಟದ್ದನ್ನು ನುಡಿಯುತ್ತದೆ. ಆಗ ಅದರಿಂದ ಒದಗುವ ಸಂಕಷ್ಟಗಳು ಸಹಿಸಲಾರದಷ್ಟು ದುಃಖ ತರಬಲ್ಲವು ಎಂದು ಅರಿತಿರುವುದರಿಂದಲೇ ಅದಕ್ಕೆ ಎಗ್ಗಿಲ್ಲದ ಗೌರವ!

ನಮ್ಮ ವೈಯಕ್ತಿಕ ಸಂಬಂಧಗಳಲ್ಲಿ ಅಥವಾ ಸ್ನೇಹಿತರ ಸಂಗದಲ್ಲಿಯಾದರೂ ನಾಲಗೆ ಎಡವಿದಾಗ ಅದನ್ನು ಒಪ್ಪಿಕೊಳ್ಳಲು ಅಥವಾ ತಪ್ಪನ್ನು ತಿದ್ದಿಕೊಂಡು ಕ್ಷಮೆ ಕೇಳಲು ಎರಡನೆಯ ಅವಕಾಶ ಸಿಗುತ್ತದೆ. ಕೆಲವು ಸಂಬಂಧಗಳಲ್ಲಂತೂ ಕೆಟ್ಟ ಮಾತುಗಳ ಕೆಟ್ಟ ಚಾಳಿಯವನನ್ನು ಅನೇಕರು ಕಾರಣಾಂತರಗಳಿಂದ ವಿಧಿ ಇಲ್ಲದೆ ಸಹಿಸಿಕೊಳ್ಳುತ್ತಾರೆ ಕೂಡ. ಅವರ ಮಾತುಗಳನ್ನು ಕಷ್ಟಪಟ್ಟು ನುಂಗಿಕೊಳ್ಳುತ್ತಾರೆ.
 
ವಾಚಾಳಿಯಾದ ಹೆಂಡತಿಯರ ಬಹುತೇಕ ಗಂಡಂದಿರೆಲ್ಲ ಕಿವುಡರಾಗಿರುವುದೇ ವಾಸ್ತವವಲ್ಲವೆ?!

ಆದರೆ ಈ ವಾಸ್ತವ ಬೋರ್ಡ್‌ರೂಮಿನ ಸುತ್ತಮುತ್ತ ಎಲ್ಲೆಡೆಯೂ ಎಲ್ಲ ಸಮಯಗಳಲ್ಲೂ ಕಂಡು ಬರುವುದಿಲ್ಲ. ಅಲ್ಲೆಲ್ಲ ಮಾತು ಮುಗ್ಗರಿಸಿದಾಗ ಕ್ಷಮೆಯೊಮ್ಮೆ ದೊರೆತರೂ ದೊರೆಯಬಹುದು. ಆದರೆ ಮತ್ತೊಮ್ಮೆ ಮುಗ್ಗರಿಸಿದರೆ ತಲೆಯೇ ಹೋಗುತ್ತದೆ!
ಬಾಸ್ ಆದವನು ಕೂಡ ತನ್ನ ಮಾತಿನ ಮೇಲೆ ಹತೋಟಿ ತೋರದಿದ್ದರೆ ಅವನ ಕೆಳಗೆ ಕೆಲಸ ಮಾಡುವ ಯಾರೂ ಅವನಿಗೆ ನಿಜದಲ್ಲಿ ಗೌರವ ತೋರುವುದಿಲ್ಲ. ಸಮಯ ಸಿಕ್ಕಾಗ ಅವನ ಕಾಲನ್ನು ಎಳೆಯದೇ ಬಿಡುವುದಿಲ್ಲ. ಹಾಗೊಮ್ಮೆ ಹಳ್ಳದಲ್ಲಿ ಬಿದ್ದರಂತೂ ಅದನ್ನು ಸಿಮೆಂಟ್ ಹಾಕಿ ಮುಚ್ಚಿಬಿಡುವುದು ಗ್ಯಾರಂಟಿ!

ನಮ್ಮ ಮಾತುಗಳಿಗೆ ಇನ್ನೊಂದು ಅತಿಮುಖ್ಯವಾದ ವಿಶೇಷತೆ ಉಂಟು. ಅದೆಂದರೆ `ಮಾತಿಗಳಿವಿಲ್ಲ~ ಎಂಬ ಸಾರ್ವತ್ರಿಕ ಸತ್ಯ! ಅಂದರೆ, ನಾವಾಡುವ ಮಾತು ನಮ್ಮಿಂದ ಹೊರಬಿದ್ದಾಗ ಅದು ತಕ್ಷಣವೇ ಸಾಯುವುದಿಲ್ಲ. ಇನ್ನಾರದೋ ಕಿವಿಯನ್ನು ಹೊಕ್ಕು ಅವರ ಮನಸ್ಸಿನಲ್ಲಿ ಮನೆ ಮಾಡುತ್ತದೆ.
 

ಅವರ ಪ್ರೀತ್ಯಾದರಗಳಿಗೆ ಅಥವಾ ಕೊಪೋದ್ರೇಕಗಳಿಗೆ ಕಾರಣವಾಗುತ್ತದೆ. ಅಲ್ಲಿಂದ ಅದು ಮತ್ತೆ ಪುನರ್ಜನ್ಮ ಪಡೆದು ಇನ್ನಾವುದೋ ರೂಪದಲ್ಲಿ ಮತ್ತಾರದೋ ಕಿವಿ ಸೇರುತ್ತದೆ. ಹಾಗಾಗಿ ಅಂದದನ್ನು ಆಡಿದ ಹೊತ್ತೇ ನಾವು ಮರೆತುಬಿಟ್ಟರೂ ಜಗತ್ತು ಅದನ್ನು ಮರೆಯುವುದಿಲ್ಲ. ಹೀಗಾಗಿಯೇ `ಮಾತಿಗಳಿವಿಲ್ಲ~ ಎಂಬ ಪದಪ್ರಯೋಗ ಬಳಕೆಯಲ್ಲಿರುವುದು.

ಆದರೂ ನಾವಾಡುವ ಮಾತಿಗೆ `ನೆನಪು~ ಎಂಬ ಒಂದು ಬೇಲಿ ಇದೆ. ಆದ್ದರಿಂದ ನಮ್ಮ ಮಾತನ್ನಾಲಿಸುವವರೂ ಕೂಡ ಕಾಲಕ್ರಮೇಣ ಅದನ್ನು ಮರೆಯಬಹುದು. ಕೆಲವೊಮ್ಮೆ ನಾವೇ `ಆ ಮಾತನ್ನು ನಾನು ಆಡಲೇ ಇಲ್ಲವಲ್ಲ!~ ಎಂದು ದಬಾಯಿಸಿಬಿಡಬಹುದು. ಸಾಕ್ಷ್ಯ ಸಮೇತವಾಗಿ ಕೋರ್ಟಿನ ಕಟಕಟೆಯಲ್ಲಿ ನಿಂತು ಸಾಬೀತು ಮಾಡಿಬಿಡಬಹುದು.

ಆದರೆ, ನಾವು ಬರೆಯುವ ಪದಗಳಿಗೆ ಅಥವಾ ಮಾತುಗಳಿಗೆ ಈ ಅನುಕೂಲವಿಲ್ಲ. ಒಮ್ಮೆ ಬರೆದು ಸಹಿ ಹಾಕಿಬಿಟ್ಟರೆ, ಅದು ಅನಂತಕಾಲ ನಿಂತು ಬಿಡುತ್ತದೆ. ನಮ್ಮ ನಂತರವೂ ಕೂಡ!

ಆಧುನಿಕ ಯುಗದ ಬೋರ್ಡ್‌ರೂಮಿನ ಸುತ್ತಮುತ್ತಲ ಜಗತ್ತಿನಲ್ಲಿ ಅಂತರ್ಜಾಲ ಎಸಗಿರುವ ಅನೇಕ ಅದ್ಭುತಗಳಲ್ಲಿ `ಮಿಂಚೆ~ ಅತಿಮುಖ್ಯವಾದದ್ದು.

ಅಂದ ಹಾಗೆ, ಇ-ಮೇಲ್‌ಗೆ ಮಿಂಚೆ, ಅಂದರೆ `ಮಿಂಚಿನಂತಹ ಅಂಚೆ~ ಎಂಬ ಸುಂದರ ಪದವನ್ನು ಹುಟ್ಟುಹಾಕಿದವರು ಬೆಂಗಳೂರಿನ ಬನವಾಸಿ ಬಳಗದ ಕನ್ನಡಭಿಮಾನದ ಯುವಕರು. ಆ ಪದವನ್ನು ಅವರಿಂದ ಕೇಳಿದಾಗಿನಿಂದ ಅದು ನನ್ನ ಬತ್ತಳಿಕೆಯಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿದೆ!

`ಮಿಂಚೆ~ ಅದೆಷ್ಟು ಬದುಕನ್ನು ಹಗುರಗೊಳಿಸಬಹುದೋ ಅಷ್ಟೇ ಗೊಂದಲಮಯ ವಾಗಿಸಬಹುದು ಕೂಡ. ಮಿಂಚೆಯಲ್ಲಿ ಏನು ಬರೆಯಬಹುದು, ಏನನ್ನು ಬರೆಯಬಾರದು, ಬರೆಯುವುದನ್ನು ಹೇಗೆ ಬರೆದರೆ ಚೆನ್ನ, ಮಿಂಚೆಯೆ ಮೂಲ ಉದ್ದೇಶವೇನು, ಅದನ್ನು ಹೇಗೆ ಬಳಸುವುದರಿಂದ ಅದು ನಮ್ಮ ಕೆಲಸಕ್ಕೆ ಪೂರಕವಾಗಬಹುದು ಎಂಬಿತ್ಯಾದಿ ವಿಷಯಗಳನ್ನೆಲ್ಲ ತಿಳಿಸಲು ಈ ಲೇಖನದ ಮಾಲೆ ಖಂಡಿತವಾಗಿಯೂ ಮಾಧ್ಯಮವಲ್ಲ. ಅದಕ್ಕೆ ಬೇರೆಯೊಂದು ಕಾರ್ಯಾಗಾರವನ್ನೇ ಮಾಡಬೇಕಾದೀತು.

ಆದರೆ ಮಿಂಚೆಯ ಬಗ್ಗೆ ತಿಳಿಸಲೇಬೇಕಾದ ಬಹುಮುಖ್ಯ ಅಂಶ ಒಂದಿದೆ. ನಮ್ಮ ಮಿಂಚೆಗೆ ಸಾವು ಎಂಬುವುದು ಇಲ್ಲವೇ ಇಲ್ಲ. ಒಮ್ಮೆ ನಾವು ಬರೆದು ಅದನ್ನು ನಮ್ಮ ಗಣಕಯಂತ್ರದಿಂದ ಕಳುಹಿಸಿಬಿಟ್ಟವೆಂದರೆ ಅದನ್ನು ಯಾವುದೇ ಟೆಕ್ನಾಲಜಿ ಬಳಸಿ ವಾಪಸ್ಸು ಪಡೆಯುವಂತಿಲ್ಲ.

ಹಾಗಾಗಿ ನಾವು ಈ ಮಿಂಚೆಯನ್ನು ಬರೆಯುವಾಗ ಮಾತನಾಡುವುದಕ್ಕಿಂತ ಹೆಚ್ಚು ಮುತುವರ್ಜಿ ಹಾಗೂ ಎಚ್ಚರಿಕೆ ವಹಿಸಬೇಕು. ವಸ್ತು ವಿಷಯವೊಂದನ್ನು ಮಿಂಚೆಯಲ್ಲಿ ಬರೆಯುವಾಗಲಂತೂ ಅದನ್ನು ಕಳುಹಿಸುವ ಮುನ್ನ ಮತ್ತೊಮ್ಮೆ, ಕೆಲವೊಮ್ಮೆ ಮಗದೊಮ್ಮೆ ಓದುವುದು ಹಾಗೂ ತಿದ್ದುವುದು ಉಚಿತವಾದೀತು. ಪರಿಷ್ಕರಿಸಿದಷ್ಟೂ ಮಿಂಚೆಗಳು ಇನ್ನೂ ಸುಂದರವಾಗಿ ಮೂಡಿಬರುವುದರಲ್ಲಿ ಸಂದೇಹವೇ ಇಲ್ಲ.

`ಕೋಪ ಬಂದಾಗ ಹತ್ತೆಣಿಸು~ ಎನ್ನುತ್ತದೆ ಉಕ್ತಿ. `ಕೋಪ ಬಂದಾಗ ಮಿಂಚಿಸುವ ಮುನ್ನ, ಒಮ್ಮೆ ಯೋಚಿಸಿ!~ ಎನ್ನುತ್ತೇನೆ ನಾನು. ಇದು ಸ್ವಂತ ಅನುಭವ ಕೂಡ! ಕೆಲಸದ ಭರದಲ್ಲಿ ಯಾವುದೋ ಸೈದ್ಧಾಂತಿಕ ವಿಷಯವಾಗಿ ಕೋಪಗೊಂಡಿದ್ದಾಗ, ಅದೇ ವಿಷಯವಾಗಿ ಬಾಸ್‌ನಿಂದ ಬಂದ ಮಿಂಚೆಗೆ ಬಹಳ ಖಾರವಾಗಿ, ಭಾವಪರವಶನಾಗಿ ಹಾಗೂ ಉದ್ರೇಕದಿಂದ ಮಿಂಚೆಯನ್ನು ಬರೆದು ಕಳುಹಿಸಿದ ನಂತರದಲ್ಲಿ, ಆ ಮಿಂಚೆಗಾಗಿ ಬಹಳ ಪರಿತಪಿಸಿದ್ದೇನೆ.

ಅಂದಿನಿಂದ ನಾನು ಕಂಡುಕೊಂಡ ಒಂದು ಪಾಠವೆಂದರೆ ಮನಸ್ಸಿನಲ್ಲಿ ತುಮಲವಿದ್ದಾಗ ಅಥವಾ ಕೋಪವಿದ್ದಾಗ ಅಥವಾ ಸ್ವಲ್ಪ ಮಟ್ಟಿಗಿನ ಅಹಂಕಾರವಿದ್ದಾಗ ಅಥವಾ ವಿಷಯವೊಂದಕ್ಕೆ ನೀವು ಅತ್ಯಂತ ಭಾವುಕರಾಗಿ ಸ್ಪಂದಿಸುವಂತಾದ್ದಾಗ ನೀವು ಮಿಂಚೆಯನ್ನು ಖಂಡಿತವಾಗಿಯೂ ಬರೆಯಬೇಕು. ಆ ಹೊತ್ತಿನಲ್ಲೇ ಬರೆದು ಮುಗಿಸಿಬಿಡಬೇಕು.
 
ಏಕೆಂದರೆ ಆಗಲೇ ನಿಮ್ಮ ಮನಸ್ಸಿನೊಳಗಿರುವ ನಿಜ ಭಾವನೆ ಮಿಂಚೆಯಲ್ಲಿ ವ್ಯಕ್ತವಾಗುತ್ತದೆ. ಆದರೆ ನೆನಪಿಟ್ಟುಕೊಳ್ಳಿ ಆ ಮಿಂಚೆಯನ್ನು ಆಗಿಂದಾಗಲೇ ಕಳುಹಿಸಿ ಬಿಡಬಾರದು. ಅದನ್ನು ಡ್ರಾಫ್ಟ್‌ನಲ್ಲಿಟ್ಟು ಮನಸ್ಸು ತಣ್ಣಗಾದ ಮೇಲೆ ಮತ್ತೊಮ್ಮೆ ಓದಬೇಕು. ಹೇಳಬೇಕೆಂಬ ವಿಷಯ ಸರಿಯೇ ಇದ್ದರೂ ಅದಕ್ಕೆ ನೀವು ಬಳಸಿರುವ ಭಾಷೆ ಆಗ ನಿಮಗೆ ಸರಿ ಎನಿಸಿರುವುದಿಲ್ಲ. ಅದನ್ನು ತಿದ್ದುತ್ತೀರಿ.

ಕೆಲವೊಮ್ಮೆ ವಾಕ್ಯಗಳನ್ನೇ ಸಂಪೂರ್ಣ ಬದಲಾಯಿಸುತ್ತೀರಿ. ಹೇಳಬೇಕೆಂದಿರುವ ಅದೇ ವಿಷಯವನ್ನೀಗ ಸಕಾರಾತ್ಮಕವಾಗಿ ಬಿಂಬಿಸುವ ಪ್ರಯತ್ನ ಮಾಡುತ್ತೀರಿ. ನೀವು ವೈಯಕ್ತಿಕ ಭಾವನೆಗಳನ್ನು ಹಾಗೂ ನಂಬಿಕೆಗಳನ್ನು ಪಕ್ಕಕ್ಕಿಟ್ಟು ಕಂಪೆನಿಯ ಹಿತಕ್ಕೆ ಅನ್ವಯಿಸುವ ಸತ್ಯಕ್ಕೆ ಹಾಗೂ ಅದರ ಆಚರಣೆಗಳಷ್ಟೇ ಈಗ ಬೆಲೆ ಕೊಡುತ್ತೀರಿ.
 
ಮತ್ತೊಮ್ಮೆ ಮಿಂಚೆಯನ್ನು ಆತುರದಲ್ಲಿ ಹಾಗೂ ಬಾವುಕರಾಗಿದ್ದಾಗ ಬರೆದು ಕಳುಹಿಸುವ ಹೊತ್ತಿನಲ್ಲಿ, ತಪ್ಪದೇ ನನ್ನ ಈ ಮಾತನ್ನು ನೆನಪಿಸಿಕೊಳ್ಳಿ. ನೀವಾಗ ಖಂಡಿತವಾಗಿಯೂ ನನಗೊಂದು ಧನ್ಯವಾದ ಮಿಂಚೆಯನ್ನು ಕಳುಹಿಸುವುದರಲ್ಲಿ ನನಗೆ ಎಳ್ಳಷ್ಟೂ ಸಂಶಯವಿಲ್ಲ!

ಲೇಖಕರನ್ನು 
satyesh.bellur@gmail.com  ಇ-ಮೇಲ್ ವಿಳಾಸಕ್ಕೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT