ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಟ್ಟೂರಿನ ಪಂಚಾಯತ್ ವಸಂತ

ಪಂಚಾಯತ್ ರಾಜ್ –20
Last Updated 19 ಜನವರಿ 2014, 19:30 IST
ಅಕ್ಷರ ಗಾತ್ರ

ನಮ್ಮ ಮುಖ್ಯ ಭಾಗೀದಾರರು ನಮ್ಮ ಪ್ರಜೆಗಳೇ. ನಾವು ಸತತವಾದ ಪ್ರಯತ್ನವನ್ನು ಮಾಡಿ ಪ್ರಜೆಗಳ ಅವಶ್ಯಕತೆ ಮತ್ತು ಉತ್ತಮ ಆಡಳಿತದಿಂದ ಉತ್ತಮ ಸೇವೆಯನ್ನು ಒದಗಿಸುವ ಗುರಿಯನ್ನು ಇಟ್ಟುಕೊಂಡಿದ್ದೇವೆ.

–ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಊರುಕುಂಟೆ ಮಿಟ್ಟೂರು (ಓ ಮಿಟ್ಟೂರು) ಗ್ರಾಮ ಪಂಚಾಯಿತಿಯ ಒಳಗೆ ಹೋದವರಿಗೆ ಮೊಟ್ಟಮೊದಲು ಕಾಣುವ ಫಲಕವಿದು.

ಪಂಚಾಯತ್ ರಾಜ್ ವ್ಯವಸ್ಥೆಯ, ಅಧಿಕಾರ ವಿಕೇಂದ್ರೀಕರಣದ ಸದಾಶಯಗಳನ್ನು ತಮ್ಮದೇ ಭಾಷೆಯಲ್ಲಿ ವಿವರಿಸಿಕೊಂಡಿರುವ ಇಂಥ ಕೆಲವು ಫಲಕಗಳ ಅಡಿಯಲ್ಲೇ ಕೆಲಸ ಮಾಡುವ ಈ ಪಂಚಾಯಿತಿಯ ಬಹುತೇಕ ಸದಸ್ಯರು ಅಧಿಕಾರ ರಾಜಕಾರಣದ ಮಿದುಳಿನ ಬದಲಿಗೆ ಕರುಳನ್ನು ಹೆಚ್ಚು ನೆಚ್ಚಿಕೊಂಡವರು. ಹೀಗಾಗಿಯೇ ಫಲಕದ ವಾಕ್ಯ ರಚನೆಯಲ್ಲಿರಬಹುದಾದ ವ್ಯಾಕರಣ ದೋಷ ಇಲ್ಲಿ ಲೆಕ್ಕಕ್ಕಿಲ್ಲ. ಜನಸೇವೆಯ ವ್ಯಾಕರಣವೇ ಇಲ್ಲಿ ಮುಖ್ಯ.

2010 ಮೇ 17ರಂದು ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟವಾದಾಗ ಆಯ್ಕೆಯಾದ ಎಲ್ಲ 13 (ಆರು ಮಹಿಳೆಯರು, ಏಳು ಪುರುಷರು) ಸದಸ್ಯರೂ ಅದುವರೆಗೂ ಪಂಚಾಯಿತಿಯ ಮುಖವನ್ನೇ ಕಾಣದವರು. ಅವರಲ್ಲಿ ಶಾಲೆ ಮೆಟ್ಟಿಲನ್ನೇ ಹತ್ತದವರು, ಎಸ್ಎಸ್ಎಲ್ಸಿ, ಪಿಯುಸಿ, ಬಿಎ, ಬಿಇಡಿ, ಶಿಕ್ಷಣವನ್ನು ಪಡೆದವರಿದ್ದರು. ಹಿರಿಯಪ್ಪ ಎಂಬ 50 ದಾಟಿದ ಹಿರಿಯರೊಬ್ಬರನ್ನು ಹೊರತುಪಡಿಸಿದರೆ ಎಲ್ಲರೂ 25–40ರ ಹರೆಯದವರು. ಅವರಲ್ಲಿ ಬಹುತೇಕರಿಗೆ ಪಂಚಾಯಿತಿ ಎಂದರೆ ಅರ್ಥವಾಗದ ಭಯ ಮತ್ತು ಹಿಂಜರಿಕೆ ಇತ್ತು. ಅದರಿಂದ ಈಚೆ ಬರಲು ಅವರು ಪಟ್ಟ ಪರಿಶ್ರಮ ಅಷ್ಟಿಷ್ಟೇನಲ್ಲ. ಅದು ಏಕಕಾಲಕ್ಕೆ ವೈಯಕ್ತಿಕ ಮತ್ತು ಸಾಮುದಾಯಿಕ ಬಿಡುಗಡೆಯ ಪ್ರಯತ್ನವೂ ಆಗಿರುವುದು ವಿಶೇಷ.

ಶಿಕ್ಷಣ ಮತ್ತು ಜಾತೀಯ ಗೋಡೆಗಳಾಚೆಗೆ ಅವರು ಪಂಚಾಯಿತಿಯನ್ನು ಪರಿಭಾವಿಸಿರುವುದರಿಂದಲೇ ಪಂಚಾಯಿತಿಯಲ್ಲಿ ಏನಾದರೂ ಬದಲಾವಣೆ ತರಬೇಕು. ಜನರಿಗೆ ಅನುಕೂಲವಾಗುವಂಥ ಒಳ್ಳೆಯ ಕೆಲಸ ಮಾಡಬೇಕು ಎಂಬ ಆಸೆ ಹಲವು ಎಡರು ತೊಡರುಗಳ ನಡುವೆ ಬತ್ತಿಲ್ಲ ಎಂಬುದನ್ನು ಗಮನಿಸಬೇಕು.

ಗ್ರಾಮ ವಿಕಾಸದ ದಾರಿ
ಮೂರು ಮುಕ್ಕಾಲು ವರ್ಷದ ಹಿಂದೆ, ಆಯ್ಕೆಯಾದ ಕೂಡಲೇ ಅವರೆಲ್ಲ ತಾಲ್ಲೂಕಿನ ಹೊನ್ನಶೆಟ್ಟಿಹಳ್ಳಿಯಲ್ಲಿರುವ ಗ್ರಾಮ ವಿಕಾಸ ಸಂಸ್ಥೆಯ ಮುಖ್ಯಸ್ಥರಾದ ಎಂ.ವಿ.ಎನ್.ರಾವ್ ಅವರನ್ನು ಸಂಪರ್ಕಿಸಿದ್ದು ಪಂಚಾಯಿತಿಯ ಚರಿತ್ರೆಯಲ್ಲಿ ದೊಡ್ಡ ತಿರುವು. ಪಂಚಾಯಿತಿ ಎಂದರೆ ಏನೆಂದು ತಿಳಿಯದವರು, ಅದನ್ನು ಸರಿಯಾದ ರೀತಿಯಲ್ಲಿ ತಿಳಿಯುವ ಪ್ರಯತ್ನಕ್ಕೆ ಈ ಭೇಟಿ ನಾಂದಿಯಾಯಿತು.

‘ಗ್ರಾಮ ವಿಕಾಸ’ವು ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಮಹಿಳಾ ಸಬಲೀಕರಣ, ಮಕ್ಕಳ ಸಮಗ್ರ ಅಭಿವೃದ್ಧಿ ಹಾಗೂ ಪರಿಸರದ ನಿರ್ವಹಣೆಯೊಂದಿಗೆ ಬಡ ಜನರ ಆಹಾರ ಭದ್ರತೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ.

ಪಂಚಾಯಿತಿ ಸಬಲೀಕರಣಕ್ಕೆ ಅಗತ್ಯವಾಗಿರುವ ಸದಸ್ಯರ ಸ್ವಪ್ರೇರಿತ ಉತ್ಸಾಹವನ್ನು ಕಂಡ ಅವರು ಕೂಡಲೇ, ಬೆಂಗಳೂರಿನಲ್ಲಿ ರೋಹಿಣಿ ನೀಲೇಕಣಿಯವರ ದತ್ತಿನಿಧಿಯೊಂದಿಗೆ ಸ್ಥಾಪನೆಗೊಂಡು 2001ರಿಂದ ಕಾರ್ಯನಿರ್ವಹಿಸುತ್ತಿರುವ ಅರ್ಘ್ಯಂ ಸಂಸ್ಥೆಯನ್ನು ಸಂಪರ್ಕಿಸಿದರು. ಅಲ್ಲಿಂದ ಶುರುವಾಯಿತು ಪಂಚಾಯಿತಿಯನ್ನು ಸದಸ್ಯರು ಸ್ವಯಂ ಆಡಳಿತ ಸಂಸ್ಥೆಯಾಗಿ ಪರಿವರ್ತಿಸುವುದು ಹೇಗೆ ಎಂಬ ಕಾರ್ಯಯೋಜನೆ.

ಪಂಚಾಯಿತಿ ಬರಿಯ ಸರ್ಕಾರದ ಯಂತ್ರವಾಗಿ ಸೇವೆ ಸಲ್ಲಿಸುವ ಕಟ್ಟಕಡೆಯ ಸಂಸ್ಥೆಯಲ್ಲ. ಬದಲಿಗೆ ತನ್ನ ಆದ್ಯತೆಗಳನ್ನು ತಾನೇ ಗುರುತಿಸಿಕೊಂಡು ಕಾರ್ಯನಿರ್ವಹಿಸುವ ಸ್ವಯಂ ಅಧಿಕಾರ ಹೊಂದಿರುವ ಸಂಸ್ಥೆ ಎಂಬ ತಿಳಿವಳಿಕೆಯನ್ನು ಸದಸ್ಯರಲ್ಲಿ ಬಿತ್ತುವ ಪ್ರಯತ್ನ ಮೊದಲಾಯಿತು. ಸದಸ್ಯರು ಮತ್ತು ಪಂಚಾಯಿತಿ ಸಬಲೀಕರಣಕ್ಕೆ ಬೇಕಾದ ಎಲ್ಲ ನೆರವನ್ನೂ ಅರ್ಘ್ಯಂ ಸಂಸ್ಥೆ ನೀಡುವ ಒಪ್ಪಂದದ ಮೂಲಕ, ಗ್ರಾಮ ಪಂಚಾಯಿತಿಯ ಸ್ಥಿತಿಯ ಅವಲೋಕನ, ಹೊಸ ಬಗೆಯ ಅಧ್ಯಯನ ಮತ್ತು ವ್ಯಾಖ್ಯಾನದ ವಿಸ್ತರಣೆಯ ಕೆಲಸವೂ ಶುರುವಾಯಿತು. ಗ್ರಾಮವಿಕಾಸ ಮಾರ್ಗದರ್ಶಿ ಸಂಸ್ಥೆಯಾಯಿತು.

ಪಂಚಾಯಿತಿಗಳಿಗೆ ಭೇಟಿ
ಈ ಸದಸ್ಯರು ರಾಮನಗರ ಜಿಲ್ಲೆಯ ಇಟ್ಟುಮಡುಗು, ಮಂಡ್ಯ ಜಿಲ್ಲೆಯ ಅಣ್ಣೂರು, ಕೇರಳದ ಕೀಲಾ ಗ್ರಾಮ ಪಂಚಾಯಿತಿಗೆ, ಮೈಸೂರಿನ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಅಧ್ಯಯನ ಪ್ರವಾಸ ನಡೆಸಿದ್ದು ಬದಲಾವಣೆಯ ಮೊದಲ ಹಂತ, ಮೂರು ಹಂತದ ಪಂಚಾಯಿತಿಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳು ರೂಪಿಸಿಕೊಂಡಿರುವ ಕಾರ್ಯಾಚರಣೆ, ಗ್ರಾಮ ಪಂಚಾಯಿತಿಯ ಯೋಜನೆಗಳ ಅನುಷ್ಠಾನಕ್ಕಾಗಿ ಇರುವ ಕಾರ್ಯತಂಡಗಳು, ರಾಜಕೀಯ ಮತ್ತಿತರೆ ಸಾಂಸ್ಥಿಕ ಸಂಘಟನೆಗಳು, ಸ್ವಸಹಾಯ ಗುಂಪುಗಳು, ಸ್ಥಳೀಯ ರಾಜಕೀಯ ಸಂಘಟನೆಗಳು, ಗ್ರಾಮ ಸ್ಥಾನಿಕ ಸಂಘಟನೆಗಳು, ಇತರೆ ಸರ್ಕಾರೇತರ ಸಂಸ್ಥೆಗಳನ್ನು ಕುರಿತ ಅಧ್ಯಯನ ಪರ್ವದಲ್ಲಿ ಎಲ್ಲ ಸದಸ್ಯರೂ ಸಕ್ರಿಯರಾದರು.

ಹೇಗಿತ್ತು..ಹೇಗಾಯಿತು?
ಈ ಮುಂಚೆ ನಮ್ಮಲ್ಲಿ ಗ್ರಾಮಸಭೆಯೇ ನಡೆಯುತ್ತಿರಲಿಲ್ಲ. ಅಧ್ಯಕ್ಷರ ಮನೆಯಲ್ಲೋ, ಮತ್ತೆಲ್ಲೋ ನಡೀತಿತ್ತು. ನಾವು ಆಯ್ಕೆಯಾದ ಮೇಲೆ 2011ರಲ್ಲಿ ನಡೆದ ಸಭೆಯಲ್ಲಿ 550 ಜನ ಭಾಗವಹಿಸಿದ್ದರು. 20 ವರ್ಷಗಳಿಂದ ಅಂಥದೊಂದು ಸಭೆ ನಡೆದೇ ಇರಲಿಲ್ಲ. ಈಗ ಜನ ಎಲ್ಲಿ, ಎಷ್ಟು ಹೊತ್ತಿಗೆ ಎಂದು ಹೇಳಿದರೆ ಅದೇ ಸಮಯಕ್ಕೆ ಸಭೆ ನಡೆಸುತ್ತೇವೆ. ಸಭೆಯ ನಿರ್ಣಯದ ಪ್ರತಿಗಳನ್ನೂ ಜನರಿಗೆ ಕೊಡ್ತೇವೆ. ಪ್ರಮುಖ ವಿಷಯಗಳ ನಿರ್ಣಯ ಕೈಗೊಳ್ಳುವ ಸಂದರ್ಭದಲ್ಲಿ ಮುಖಂಡರಿಗೆ ಪಂಚಾಯಿತಿಯಿಂದಲೇ ಪತ್ರ ಬರೆಯುತ್ತೇವೆ ಎನ್ನುತ್ತಾರೆ ಶಾಲೆ ಮೆಟ್ಟಿಲು ಹತ್ತದಿದ್ದರೂ ಆತ್ಮವಿಶ್ವಾಸದ ಗಣಿಯಂತೆ ಕಾಣುವ ಅಧ್ಯಕ್ಷೆ ವಿಜಯಮ್ಮ.

ಈ ಮೊದಲು, ಪರಿಶಿಷ್ಟ ಸಮುದಾಯದ ಯುವಜನರಿಗೆ ಕಂಪ್ಯೂಟರ್ ತರಬೇತಿ ನೀಡದೇ ಬೋಗಸ್ ಬಿಲ್‌ಗಳನ್ನು ಸೃಷ್ಟಿಸಿ ಹಣ ಲಪಟಾಯಿಸಲಾಗುತ್ತಿತ್ತು. ಅದನ್ನು ತಡೆಯಲೆಂದೇ  ಪಂಚಾಯಿತಿ ಕೇಂದ್ರದಲ್ಲೇ ಕಲಿಕಾ ಕೇಂದ್ರವನ್ನು ಶುರು ಮಾಡಿದ್ದೇವೆ. ಪಂಚಾಯಿತಿಯೇ ಕಂಪ್ಯೂಟರ್ ಕೇಂದ್ರವನ್ನು ನಡೆಸಲು ಅನುಮತಿ ಕೋರಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆದಿದ್ದೇವೆ. ನಮ್ಮ ಹಳ್ಳಿ ಮಕ್ಕಳು ಎಲ್ಲೋ ಹೋಗಿ ಕಲಿಯುವ ಬದಲು ಇಲ್ಲಿಯೇ ಕಲಿಯಲಿ ಬಿಡಿ ಎಂಬುದು ಸದಸ್ಯ ಅಮರನಾರಾಯಣಸ್ವಾಮಿಯವರ ಸ್ಪಷ್ಟ ನಿಲುವು.

ಇಡೀ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಪೈಕಿ, ನಮ್ಮ ಪಂಚಾಯಿತಿ ಮಹಿಳಾ ಸದಸ್ಯರು ಎಲ್ಲ ಸಭೆಗಳಲ್ಲೂ ಧೈರ್ಯವಾಗಿ ಎದ್ದು ನಿಂತು ಮಾತನಾಡುತ್ತಾರೆ. ನಮ್ಮ ಪಂಚಾಯಿತಿಯಲ್ಲಿ ಎರಡು ಬಾರಿ ಉದ್ಯೋಗ ಮೇಳವನ್ನು ನಡೆಸಿದ್ದೇವೆ. 25 ಮಂದಿಗೆ ಕೆಲಸ ಸಿಕ್ಕಿದೆ ಎಂದು ಕೆ.ವಿ.ಭಾರತಿ ಹುಮ್ಮಸ್ಸಿನಿಂದ ಹೇಳುತ್ತಾರೆ.

ಇಲ್ಲಿ ಮಂತ್ರಿಗಳಿದ್ದಾರೆ
ಈ ಪಂಚಾಯಿತಿ ಮತ್ತು ಸದಸ್ಯರ ವಿಶೇಷ ಎಂದರೆ, ಹಲವು ಸೌಕರ್ಯಗಳನ್ನು ಜನರಿಗೆ ತಲುಪಿಸುವಲ್ಲಿ, ಅವರ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಐವರು ಸದಸ್ಯರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಿ ಮುಖ್ಯಸ್ಥರ ಸ್ಥಾನ ನೀಡಿರುವುದು. ಒಂದು ಬಗೆಯಲ್ಲಿ ಇವರು ಈ ಗ್ರಾಮ ಸರ್ಕಾರದ ಸಚಿವರುಗಳಿದ್ದಂತೆ.

ಉದಾಹರಣೆಗೆ, ಕುಡಿಯುವ ನೀರು, ಸ್ವಚ್ಛತೆ, ರಸ್ತೆ, ಚರಂಡಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಜನ ಸೌಕರ್ಯ ಘಟಕದ ಮುಖ್ಯಸ್ಥೆ ವಸಂತಕುಮಾರಿ ಅವರನ್ನು ಸಂಪರ್ಕಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ. ಬೀದಿದೀಪ, ವಸತಿ, ಶಿಕ್ಷಣಕ್ಕೆ ವೆಂಕಟರಾಮಪ್ಪ, ಹಳ್ಳಿ ಹಸಿರೀಕರಣ, ಕೃಷಿ, ಪಂಚಾಯಿತಿಗೆ ಆದಾಯ ಹೆಚ್ಚಳ ಮತ್ತು ಉದ್ಯೋಗಖಾತ್ರಿ ಮುಖ್ಯಸ್ಥರು ನಾಗರಾಜ್, ಪೌಷ್ಟಿಕತೆ, ಪಡಿತರ ಚೀಟಿ, ದೂರುಗಳ ನಿರ್ವಹಣೆಗೆ ಭಾರತಿ, ವೆಂಕಟರಾಮಪ್ಪ, ಈ ಮುಖ್ಯಸ್ಥರಿಗೆ ಮತ್ತು ಸದಸ್ಯರ ಸಾಮರ್ಥ್ಯ ಅಭಿವೃದ್ಧಿ ಮಾಡುವ ಜವಾಬ್ದಾರಿ ಸದಸ್ಯ ಅಮರನಾರಾಯಣಸ್ವಾಮಿ ಅವರದು.

ಈ ಐವರು, ಅವರ ಮೊಬೈಲ್ ದೂರವಾಣಿ ಸಂಖ್ಯೆ ಹಾಗೂ ಅವರಿಗೆ ವಹಿಸಿರುವ ಜವಾಬ್ದಾರಿಗಳ ಮಾಹಿತಿಯುಳ್ಳ ದೊಡ್ಡ ಫಲಕಗಳನ್ನು ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳ ಪ್ರಮುಖ ಸ್ಥಳಗಳಲ್ಲೂ ದೊಡ್ಡದಾಗಿ ಕಾಣುವಂತೆ ಬರೆಯಲಾಗಿದೆ. ಹೀಗಾಗಿಯೇ ಇವರ ಫೋನುಗಳು ಸದಾ ಬ್ಯುಸಿಯಾಗಿರುತ್ತವೆ. ಗ್ರಾಮ ಸಮುದಾಯದ ಜೊತೆಗೆ ಈ ಪಂಚಾಯಿತಿ ಸದಸ್ಯರು ಹೀಗೆ ಸದಾ ಸಂಪರ್ಕದಲ್ಲೇ ಇರುತ್ತಾರೆ. ಸಂಪರ್ಕ ವ್ಯಾಪ್ತಿಯಿಂದ ದೂರ ಇರುವುದು ಬಹಳ ಕಡಿಮೆ. ಈ ಐವರು ಮುಖ್ಯಸ್ಥರು ಪ್ರತಿ ತಿಂಗಳೂ ಸಭೆ ಸೇರಿ ಆಗು–ಹೋಗುಗಳ ಕುರಿತ ಸಮಾಲೋಚನೆಯನ್ನೂ ನಡೆಸುತ್ತಾರೆ.

ಇಂಗ್ಲಿಷ್ ಕಲಿಕೆ
ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್ ವತಿಯಿಂದ ಕಂಪ್ಯೂಟರುಗಳನ್ನು ಕೊಡುಗೆಯಾಗಿ ಪಡೆದಿರುವ ಪಂಚಾಯಿತಿಯು ತಾನೇ ‘ಗ್ರಾಮ ಜ್ಞಾನಕೇಂದ್ರ’ವನ್ನು ಸ್ಥಾಪಿಸಿದೆ. ಪಂಚಾಯಿತಿ ವ್ಯಾಪ್ತಿಯ ಮಕ್ಕಳಿಗೆ, ಯುವಜನರಿಗೆ ಉಚಿತವಾಗಿ ಕಂಪ್ಯೂಟರ್ ಕಲಿಸುತ್ತಿದೆ. ಅಗತ್ಯ ಮಾಹಿತಿಗಳು, ಅರ್ಜಿಗಳು ಸೇರಿದಂತೆ ಹಲವು ಸೌಲಭ್ಯವನ್ನು ಪಂಚಾಯಿತಿ ಯುವಜನ ಉಚಿತವಾಗಿ ಪಡೆಯಲೂ ಅವಕಾಶವಿದೆ. ಇಂಗ್ಲಿಷ್ ಮಾತನಾಡುವುದನ್ನು ಕಲಿಸುವ ಉಚಿತ ತರಗತಿಗಳೂ ನಡೆಯುತ್ತಿರುವುದು ಇಲ್ಲಿನ ವಿಶೇಷ. 

ಬದಲಾವಣೆಯ ದಾರಿ
ಅಧ್ಯಯನ ಪ್ರವಾಸವನ್ನು ಕೈಗೊಂಡ ಬಳಿಕ ಈ ಸದಸ್ಯರು ಮಾಡಿದ ಮೊದಲ ಕೆಲಸವೆಂದರೆ, ಪಂಚಾಯಿತಿ ವ್ಯಾಪ್ತಿಯ ಸಣ್ಣ ರೈತರು, ದೊಡ್ಡ ರೈತರು, ನಿವೃತ್ತರು, ಶಾಲಾ ಮಕ್ಕಳು, ಗೃಹಿಣಿಯರು, ಸರ್ಕಾರಿ ಉದ್ಯೋಗಿಗಳು ಸೇರಿದಂತೆ ಹಲವರನ್ನು ಸೇರಿಸಿ ಸಭೆ ನಡೆಸಿ ನಿಮ್ಮ ಪಂಚಾಯಿತಿ ಹೇಗಿರಬೇಕು? ಎಂಬ ಪ್ರಶ್ನೆಯನ್ನು ಮುಂದಿಟ್ಟು ಸಲಹೆಗಳನ್ನು ಕೇಳಿದ್ದು. ಆಗ ಜನ ಮುಂದಿಟ್ಟಿದ್ದು ಕೇವಲ ದೂರುಗಳನ್ನು ಮಾತ್ರ. ಆ ದೂರುಗಳನ್ನು ಆಧರಿಸಿಯೇ ನಮ್ಮ ಪಂಚಾಯಿತಿ ಹೇಗಿರಬೇಕು ಎಂಬ ಕಲ್ಪನೆ ಮೂಡಿತು ಎನ್ನುತ್ತಾರೆ ಸದಸ್ಯರು.

ಈ ಪಂಚಾಯಿತಿಯಲ್ಲಿ ಪ್ರತಿ ತಿಂಗಳೂ ಸಾಮಾನ್ಯಸಭೆ ನಡೆಯುತ್ತದೆ. ಇಷ್ಟು ಉತ್ಸಾಹವುಳ್ಳ ಪಂಚಾಯಿತಿಯಲ್ಲಿ ಕಾರ್ಯದರ್ಶಿ ಹುದ್ದೆ ಭರ್ತಿಯಾಗಿಲ್ಲ. ಆದರೂ ನಮ್ಮ ಅಧಿಕಾರದ ಅವಧಿ ಮುಗಿಯುವುದರೊಳಗೆ ಕಂದಾಯ ಪರಿಷ್ಕರಣೆಯನ್ನು ಮಾಡಿಯೇ ತೀರುತ್ತೇವೆ ಎಂಬುದು ಸದಸ್ಯರ ಉತ್ಸಾಹದ ನುಡಿ.
ಗ್ರಾಮ ಪಂಚಾಯಿತಿ ಎಂದರೆ ಹೇವರಿಕೆ ಇತ್ತು. ಅಲ್ಲಿನ ರಾಜಕೀಯ, ಸಣ್ಣತನದ ವರ್ತನೆಗಳ ನಡುವೆ ಕೆಲಸ ಮಾಡುವುದು ಹೇಗಪ್ಪಾ ಎನಿಸಿತ್ತು. ಆದರೆ ಓ ಮಿಟ್ಟೂರು ಪಂಚಾಯಿತಿಗೆ ಬಂದಮೇಲೆ ಆ ಅಭಿಪ್ರಾಯ ಬದಲಾಯಿತು. ಪಂಚಾಯಿತಿ ಎಂದರೆ ಜನರಲ್ಲಿ ಇರುವ ನಕಾರಾತ್ಮಕವಾದ ಸಾಮಾನ್ಯ ಅಭಿಪ್ರಾಯಗಳಿಗಿಂತಲೂ ಭಿನ್ನವಾದ ವಾತಾವರಣ ಇಲ್ಲಿದೆ ಎನ್ನುತ್ತಾರೆ ಜನವಿಕಾಸ ಸಂಸ್ಥೆಯ ಶಿಕ್ಷಣ ಸಂಚಾಲಕ ಗಣೇಶ.
ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ನಿಂತು ನಿಮ್ಮ ಪಂಚಾಯಿತಿ ಹೇಗಪ್ಪಾ ಎಂದು ಕೇಳಿದರೆ, ಜನ ‘ಮೊದ್ಲಿಗಿಂತ್ಲೂ ಪರ್ವಾಗಿಲ್ಲ’ ಎಂಬ ಸಮಾಧಾನದ ಮಾತನಾಡಿ ಮುಂದೆ ಹೋಗುತ್ತಾರೆ.

ಆದಾಯದ ಹಾದಿ

ಪಂಚಾಯಿತಿಯ ಆದಾಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಂದಾಯ ಪರಿಷ್ಕರಣೆಗೂ ಈ ಸದಸ್ಯರು ಮುಂದಾಗಿರುವುದು ಹೊಸ ಬೆಳವಣಿಗೆ. 10, 20 ರೂಪಾಯಿಗಳ ಕಂದಾಯ ವಸೂಲಿಯಿಂದ ಪ್ರಯೋಜನ ಕಡಿಮೆ. ಕಾಲಕ್ಕೆ ತಕ್ಕಂತೆ ಅದನ್ನು ಹೆಚ್ಚಿಸಿದರೆ ಆದಾಯವೂ ಹೆಚ್ಚುತ್ತದೆ ಎಂಬುದು ಅವರ ಪ್ರತಿಪಾದನೆ. ಆದರೆ ಗ್ರಾಮ ಸಮುದಾಯದಲ್ಲಿ ಅದಕ್ಕೆ ಪ್ರತಿರೋಧವೂ ವ್ಯಕ್ತವಾಗಿದೆ. ಸರ್ವೆ ಕಾರ್ಯಕ್ಕೆ ಸಿಬ್ಬಂದಿ ಕೊರತೆಯ ಸಮಸ್ಯೆಯೂ ಎದುರಾಗಿದೆ. ‘ಎಲ್ಲ ಇದ್ದಂತೆಯೇ ಇರಲಿ. ನೀವೇಕೆ ಬದಲಿಸುತ್ತೀರಿ’ ಎನ್ನುವುದು ಹಲವು ಜನರ ಪ್ರಶ್ನೆ. ಆದರೆ, ನಾವು ಬದಲಾಗಿದ್ದೇವೆ. ಪಂಚಾಯಿತಿ ವ್ಯವಸ್ಥೆಯನ್ನೂ ಬದಲಿಸುತ್ತೇವೆ. ಅದಕ್ಕೆ ಸಹಕಾರ ಕೊಡಿ ಎಂಬುದು ಸದಸ್ಯರ ವಿನೀತ ಪ್ರತಿಕ್ರಿಯೆ.

ಗ್ರಾ.ಪಂ. ಸದಸ್ಯ ಮುಖ್ಯಮಂತ್ರಿ ಇದ್ದಂತೆ...
ಗ್ರಾಮ ಪಂಚಾಯಿತಿ ಸದಸ್ಯರು ಅವರ ವ್ಯಾಪ್ತಿಯ ಪ್ರದೇಶದಲ್ಲಿ ಮುಖ್ಯಮಂತ್ರಿ ಇದ್ದಂತೆ ಎಂಬ ಸ್ವಾಭಿಮಾನದ ಅರಿವು ಎಲ್ಲ ಸದಸ್ಯರಲ್ಲೂ ಮೂಡಬೇಕು. ಆಡಳಿತ, ಅನುದಾನ ಬಳಕೆ, ಆದಾಯ ಕ್ರೋಡೀಕರಣದಂಥ ವಿಷಯಗಳಲ್ಲಿ ಸದಸ್ಯರು ತಮ್ಮ ಮೇಲಿನ ಪಂಚಾಯಿತಿ, ಶಾಸಕರ ಮೇಲೆ ಅವಲಂಬನೆಯಾಗದ ಸನ್ನಿವೇಶ ನಿರ್ಮಾಣವಾಗಬೇಕು. ಯಾರ ಅನುಯಾಯಿಗಳೂ ಆಗದೇ ಸದಸ್ಯರು ತಮ್ಮ ಜವಾಬ್ದಾರಿ ನಿರ್ವಹಣೆ ಮಾಡಬೇಕು ಎಂಬ ಆಶಯದಲ್ಲಿ ಮಿಟ್ಟೂರು ಗ್ರಾಮ ಪಂಚಾಯಿತಿ ಸದಸ್ಯರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ.

-ಎಂ,ವಿಎನ್ ರಾವ್, ಗ್ರಾಮ ವಿಕಾಸ ಮುಖ್ಯಸ್ಥ

***
ಬರಹಗಳಿಗೆ ಸ್ವಾಗತ

ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಸಕ್ರಿಯ­ರಾಗಿ­ರು­ವ­ವರು, ಅಧ್ಯಯನ–-ಸಂಶೋಧನೆ­ಗಳಲ್ಲಿ ತೊಡಗಿ­ರುವ­ವರು, ಈ ಕ್ಷೇತ್ರದ ಕುರಿತ ಆಸಕ್ತಿ ಇರುವ ಎಲ್ಲರೂ ‘ಪಂಚಾಯತ್ ರಾಜ್–20’ ವಿಶೇಷ ಪುಟ­ದಲ್ಲಿ ನಡೆಯುವ ಚರ್ಚೆ, ವಿಶ್ಲೇಷಣೆಗಳಲ್ಲಿ ಭಾಗಿ­ಯಾ­ಗಬಹುದು. ನೀವು ಏನನ್ನು ಬರೆಯ­ಬಯಸು­ತ್ತೀರಿ ಎಂಬುದರ ಕುರಿತಂತೆ ಈ ಕೆಳಗಿನ ಇ–ಮೇಲ್ ವಿಳಾಸ ಅಥವಾ ಅಂಚೆ ವಿಳಾಸಕ್ಕೆ ಒಂದು ಸಂಕ್ಷಿಪ್ತ ಪ್ರಸ್ತಾವನೆಯನ್ನು ಕಳುಹಿಸಿದರೆ ನಮ್ಮ ಸಂಪಾದಕೀಯ ಬಳಗದ ಸದಸ್ಯರು ನಿಮ್ಮನ್ನು ಸಂಪರ್ಕಿ­ಸುತ್ತಾರೆ. ನಿಮ್ಮ ಪ್ರಸ್ತಾವನೆಗಳನ್ನು ಕಳುಹಿ­ಸ­­ಬೇಕಾದ ವಿಳಾಸ. ಸಂಪಾದಕರು, ಪಂಚಾಯತ್ ರಾಜ್-20, ಪ್ರಜಾವಾಣಿ, ನಂ.75, ಮಹಾತ್ಮಾ­ಗಾಂಧಿ ರಸ್ತೆ, ಬೆಂಗಳೂರು–560001, ಇ–ಮೇಲ್: panchayathraj20@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT