ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತ ನೀರು ಬಳಕೆಗೆ ಮಾದರಿ ಆಳ ಕೊಳವೆ ನೀರಾವರಿ

Last Updated 24 ಸೆಪ್ಟೆಂಬರ್ 2011, 8:10 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಅಂತರ್ಜಲ ಕೊರತೆಯಿಂದ ಬಳಲಿರುವ ಜಿಲ್ಲೆಗೆ ಆಳ ಕೊಳವೆ ನೀರಾವರಿ ಪದ್ಧತಿ ವರದಾನವಾಗಿದೆ. ಈ ಪದ್ಧತಿಯಲ್ಲಿ ಮಿತ ನೀರು ಬಳಸಿ ಗರಿಷ್ಠ ಪ್ರಮಾಣದ ಫಸಲನ್ನು ಪಡೆಯಬಹುದಾಗಿದೆ.

 ಶ್ರೀನಿವಾಸಪುರ ಸಮೀಪದ ರಾಮಪುರ ಗ್ರಾಮದಲ್ಲಿ ಪರಿಸರವಾದಿ ಎಸ್.ಅಶೋಕ್ ಕುಮಾರ್ ಎಂಬುವರು ಈ ಪದ್ಧತಿಯಲ್ಲಿ ಯಶ್ವಸಿಯಾಗಿದ್ದಾರೆ.

 ತಮ್ಮ ತೋಟದಲ್ಲಿ ಮಾವು ಹಾಗೂ ಸಪೋಟ ಗಿಡಗಳಿಗೆ ಈ ಪದ್ಧತಿಯಲ್ಲಿ ನೀರುಣಿಸಿ ಉತ್ತಮ ಫಸಲು ಪಡೆಯುತ್ತಿದ್ದಾರೆ. ಅಂತರ್ಜಲ ಕುಸಿದಂತೆ ಹಾಗೂ ಮಳೆ ಪ್ರಮಾಣ ಕಡಿಮೆಯಾದಂತೆ ಮಳೆ ಆಶ್ರಯದಲ್ಲಿ ಫಸಲು ನೀಡುತ್ತಿದ್ದ ಮಾವು, ಸಪೋಟ, ಸೀಬೆ ಮುಂತಾದ ಹಣ್ಣುಗಳ ಇಳುವರಿ ಕುಸಿದಿದೆ ಮತ್ತು ಗುಣಾತ್ಮಕ ಫಸಲು ಬರುತ್ತಿಲ್ಲ.

ಈ ಪರಿಸ್ಥಿತಿಯಿಂದ ಪಾರಾಗಲು ಲಭ್ಯವಿರುವ ನೀರನ್ನು ಪೋಲಾಗದಂತೆ ಬಳಸಿಕೊಳ್ಳುವುದು ಆಳ ಕೊಳವೆ ನೀರಾವರಿ ಪದ್ಧತಿಯ (ಡೀಪ್ ಪೈಪ್ ಇರಿಗೇಷನ್ ಮೆಥೆಡ್) ಉದ್ದೇಶವಾಗಿದೆ. ಈ ಪದ್ಧತಿಯಲ್ಲಿ ನೀರನ್ನು ಗಿಡದ ಬುಡಕ್ಕೆ ಬದಲಾಗಿ ನೇರವಾಗಿ ಬೇರಿಗೆ ತಲುಪಿಸಲಾಗುತ್ತದೆ. ಇದು ಈ ಪದ್ಧತಿಯ ವಿಶೇಷ.

ಈ ಪದ್ಧತಿ ಸುಲಭ ಹಾಗೂ ಕಡಿಮೆ ಖರ್ಚು. ಈ ಪದ್ಧತಿಯನ್ನು ಕೊಳವೆ ಬಾವಿ ಮಾತ್ರವಲ್ಲದೆ ಕೆರೆ, ಕುಂಟೆಗಳ ಆಶ್ರಯದಲ್ಲೂ ಅಳವಡಿಸಬಹುದು. ಎಸ್.ಆಶೋಕ್ ಕುಮಾರ್ ಹೇಳುವಂತೆ ಈ ಪದ್ಧತಿ ಮೂಲಕ ಯಾವುದೇ ನೂರು ಹಣ್ಣಿನ ಗಿಡಕ್ಕೆ ವಾರಕ್ಕೆ ಇನ್ನೂರು ಲೀಟರ್ ನೀರು ಕೊಟ್ಟರೆ ಸಾಕು. ಈ ಪದ್ಧತಿಯ ಅಳವಡಿಕೆಯೂ ಸುಲಭ.

ಜಮೀನಿಗೆ ಒಂದು ಮೀಟರ್ ಎತ್ತರದಲ್ಲಿ ಒಂದು ವೇದಿಕೆ ನಿರ್ಮಿಸಿ, ಅದರ ಮೇಲೆ 200 ಲೀಟರ್ ನೀರು ಹಿಡಿಸುವ ಪ್ಲಾಸ್ಟಿಕ್ ಡ್ರಮ್ ಇಡಬೇಕು. ಗಿಡಗಳ ಸಂಖ್ಯೆಗೆ ಅನುಗುಣವಾಗಿ ಡ್ರಮ್‌ನ ಗಾತ್ರ ಇರುತ್ತದೆ.

ಗಿಡಗಳಿಗೆ ಡ್ರಿಪ್ ಲೈನ್ ಅಳವಡಿಸಬೇಕು. ಗಿಡದ ಬುಡದಲ್ಲಿ ಅರ್ಧ ಮೀಟರ್ ಉದ್ದದ 40 ಎಂಎಂ ಪಿಯುಸಿ ಪೈಪ್‌ಗೆ ಅರ್ಧ ಅಡಿ ಬಿಟ್ಟು 1ಎಂಎಂ ಅಥವಾ 2ಎಂಎಂ ರಂಧ್ರ ನಿರ್ಮಿಸಬೇಕು. ಅದನ್ನು ಗಿಡದ ಬೇರಿನ ಸಮೀಪ ನೆಟ್ಟು ಪೈಪಿನ ಸುತ್ತಲೂ ಎರೆ ಗೊಬ್ಬರನ್ನು ತುಂಬಬೇಕು.

ಅದು ನೀರಿನ ಫಿಲ್ಟರ್‌ನಂತೆ ಕೆಲಸ ಮಾಡುತ್ತದೆ ಮತ್ತು ಬೇರಿಗೆ ಸತ್ವವನ್ನು ಒದಗಿಸುತ್ತದೆ. ಪೈಪ್‌ನ ಮೇಲ್ಭಾಗದಲ್ಲಿ ಮಾಡಲಾದ ಚಿಕ್ಕ ರಂಧ್ರದಿಂದ ಡ್ರಿಪ್ ಲೈನ್‌ನ ಲ್ಯಾಟ್ರಲ್ ಪೈಪ್ ಅನ್ನು ನೆಡಲಾದ ಪೈಪ್‌ನ ಒಳಭಾಗಕ್ಕೆ ಸರಿಸಬೇಕು.

ಇಷ್ಟಾದ ಮೇಲೆ ವೇದಿಕೆಯ ಮೇಲೆ ಇರಿಸಲಾದ ಡ್ರಮ್‌ಗೆ ನೀರು ತುಂಬಿ ಡ್ರಿಪ್ ಲೈನ್‌ಗೆ ಸಂಪರ್ಕ ಕೊಟ್ಟರೆ ಸಾಕು ನೀರು ನಿಧಾನವಾಗಿ ಚಲಿಸಿ ಪ್ರತಿ ಗಿಡದ ಬೇರನ್ನು ತೇವಗೊಳಿಸುತ್ತದೆ. ಗಿಡಕ್ಕೆ ಅಗತ್ಯ ಪ್ರಮಾಣದ ನೀರು ಲಭ್ಯವಾಗುತ್ತದೆ.

ಜಿಲ್ಲೆಯಲ್ಲಿ ಈಗೀಗ ಹನಿ ಹಾಗೂ ತುಂತುರು ನೀರಾವರಿ ಪದ್ಧತಿ ಹೆಚ್ಚು ಬಳಕೆಗೆ ಬರುತ್ತಿದೆ.
ಅದನ್ನು ತೋಟದ ಬೆಳೆಗಳನ್ನು ಬೆಳೆಯಲು ಬಳಸಲಾಗುತ್ತಿದೆ. ಮಾವು, ಸಪೋಟ, ಸೀಬೆ ಕಾಯಿ ತೋಟಗಳಿಗೂ ಹನಿ ನೀರಾವರಿ ಅಳವಡಿಸಲಾಗಿದೆ.

ಆಳ ಕೊಳವೆ ನೀರಾವರಿ ಪದ್ಧತಿಗೆ ಹೋಲಿಸಿದರೆ ಸಾಮಾನ್ಯ ಹನಿ ನೀರಾವರಿಗೆ ಹೆಚ್ಚು ನೀರಿನ ಅಗತ್ಯವಿದೆ. ಆದ್ದರಿಂದ ನೀರಿನ ಅಭಾವ ಎದುರಿಸುತ್ತಿರುವ ರೈತರು ಆಳ ಕೊಳವೆ ನೀರಾವರಿ ಪದ್ಧತಿಯಲ್ಲಿ ಹಣ್ಣಿನ ಗಿಡ ಬೆಳೆಸಿ ಉತ್ತಮ ಫಸಲು ಪಡೆಯಬಹುದಾಗಿದೆ ಎಂಬುದು ಎಸ್.ಅಶೋಕ್ ಕುಮಾರ್ ಅವರ ಸಲಹೆ.
-ಆರ್.ಚೌಡರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT