ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತಿ ಮೀರಿದ ಭಾರ: ಬಸವಳಿದ ಎತ್ತುಗಳು!

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಎತ್ತಿನ ಗಾಡಿಗೆ ಎರಡೂವರೆಯಿಂದ ಮೂರು ಟನ್ ಕಬ್ಬು ತುಂಬುವುದು ಸಾಮಾನ್ಯ ಸಂಗತಿ. ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದ ರೈತರೊಬ್ಬರು ತಮ್ಮ ಎತ್ತಿನ ಗಾಡಿಗೆ 8 ಟನ್ ಕಬ್ಬು ತುಂಬಿ 6 ಕಿ.ಮೀ ದೂರದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯವರೆಗೆ ಎಳೆಸಿದ ವಿಲಕ್ಷಣ ಪ್ರಸಂಗ ಸೋಮವಾರ ನಡೆಯಿತು.

ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದ ಸುರೇಂದ್ರ ಎಂಬ ರೈತರು, ತಮ್ಮ ಎತ್ತಿನ ಗಾಡಿಗೆ ಆಗಷ್ಟೇ ಕಡಿದ 8 ಟನ್ ಹಸಿ ಕಬ್ಬು ತುಂಬಿ ಎಳೆಸಿದರು. ಟ್ರ್ಯಾಕ್ಟರ್‌ಗೂ ತುಂಬದಷ್ಟು ಕಬ್ಬನ್ನು ಎಳೆಸಿ ತಂದರು. ಕೊರಕಲು ಹಾಗೂ ಉಬ್ಬುಗಳುಳ್ಳ ರಸ್ತೆಯಲ್ಲಿ ಎತ್ತುಗಳು ನಿಡುಸಿರು ಬಿಡುತ್ತಲೇ ಗಾಡಿ ಎಳೆದವು. ಹೆಚ್ಚು ಕಬ್ಬು ತುಂಬಿದ್ದರಿಂದ ಎತ್ತುಗಳು ಹೆಜ್ಜೆ ಹೆಜ್ಜೆಗೂ ನಿಂತು ಉಸಿರು ತೆಗೆದುಕೊಳ್ಳುತ್ತಿದ್ದವು. ಎತ್ತುಗಳಿಗೆ ಚಾವಟಿ, ಕಬ್ಬಿನ ಜಲ್ಲೆಯಿಂದ ಹೊಡೆದು ಹುರಿದುಂಬಿಸಿ ಎಳೆಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಕೂಡಲಕುಪ್ಪೆ ಗ್ರಾಮದ ಹಳ್ಳದಿಂದ ಗಣೇಶ ಗುಡಿ ತಿಟ್ಟು, ದರಸಗುಪ್ಪೆ ಬಾರೆ ಮಾರ್ಗದಲ್ಲಿ 6 ಕಿ.ಮೀ ದೂರ ಕ್ರಮಿಸಲು 6 ತಾಸು ಹಿಡಿಯಿತು. ಕತ್ತಿನ ಭಾಗಕ್ಕೆ ಅತಿಯಾದ ಭಾರ ಬಿದ್ದ ಪರಿಣಾಮ ಕಡೆಬಾಯಿ ಕೂಡಿದ, ಆಳೆತ್ತರದ ಎತ್ತುಗಳು ಹಿಂಸೆಯಿಂದಲೇ ಗಾಡಿ ಎಳೆದವು.

 `ಮೊದಲೊಮ್ಮೆ 5 ಟನ್ ಕಬ್ಬು ತುಂಬಿ ಎಳೆಸಿದ್ದೆ. ಇವತ್ತು ಗಾಡಿ ಸೇರಿ 8,730 ಕೆ.ಜಿ. ಕಬ್ಬು ಎಳೆಸಿದ್ದೇನೆ~ ಎಂದು ರೈತ ಸುರೇಂದ್ರ ~ಹೆಮ್ಮೆ~ಯಿಂದ ಹೇಳಿಕೊಂಡರು. ಆದರೆ, ಇದಕ್ಕೆ ರೈತರು ಅಸಹನೆ ವ್ಯಕ್ತಪಡಿಸಿದರು.

`ಪ್ರತಿಷ್ಠೆಗಾಗಿ ಮೂಕ ಪ್ರಾಣಿಗಳಿಗೆ ಆಗುವ ಹಿಂಸೆ ಲೆಕ್ಕಿಸದೇ ಮೂರು ಪಟ್ಟು ಕಬ್ಬು ತುಂಬಿ ಮೂಕ ಪ್ರಾಣಿ ಹಿಂಸಿಸಲಾಗಿದೆ~ ಎಂದು ಕ್ಯಾತನಹಳ್ಳಿ ರೈತ ಬಸವರಾಜು, ಕೆನ್ನಾಳು ರಾಜಶೇಖರ್ ಇತರ ರೈತರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT