ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನಿ ಇಂಡಿಯಾ

Last Updated 29 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾರತದ ಪ್ರಮುಖ ನಗರಗಳಲ್ಲಿ ಒಂದು. ಇದು ದುಡಿಯುವ ಜನರ `ಸ್ವರ್ಗ~. ದೇಶದ ಎಲ್ಲಾ ರಾಜ್ಯಗಳ ಜನರನ್ನೂ ತನ್ನತ್ತ ಸೆಳೆಯುವ ಮಾಂತ್ರಿಕ ಶಕ್ತಿ ಬೆಂಗಳೂರಿಗಿದೆ.

ಕರ್ನಾಟಕದ ವಿವಿಧ ಜಿಲ್ಲೆಗಳ ಉನ್ನತ ಶಿಕ್ಷಣ ಪಡೆದ ಯುವಜನರು ಉದ್ಯೋಗ ಹುಡುಕಿಕೊಂಡು ಬರುವುದು ಬೆಂಗಳೂರಿಗೇ. ಐಟಿ, ಬಿಟಿ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಇರುವುದರಿಂದ ಬೆಂಗಳೂರು ತೀವ್ರ ಸ್ವರೂಪದ ಅಭಿವೃದ್ಧಿಗೆ ತೆರೆದುಕೊಂಡಿದೆ.

ಐಟಿ, ಬಿಟಿ ಕ್ಷೇತ್ರಗಳೇ ಅಲ್ಲದೆ ನಾನಾ ಬಗೆಯ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು, ಖಾಸಗಿ ಕಂಪೆನಿಗಳ ಉದ್ಯೋಗಿಗಳು, ಸರ್ಕಾರಿ ನೌಕರರು, ದೇಶ, ವಿದೇಶಗಳಿಂದ ಬಂದವರು,

ಶ್ರೀಮಂತರು, ವಿವಿಧ ವೃತ್ತಿಗಳನ್ನು ಅವಲಭಿಸಿದ ಜನರು ಸೇರಿದಂತೆ ನಾನಾ ನಮೂನೆಯ ವ್ಯಾಪಾರಿಗಳು, ರೈತರು, ಉದ್ಯಮಿಗಳು, ಸಣ್ಣ ಪುಟ್ಟ ವ್ಯಾಪಾರಿಗಳು, ದಿನವಿಡೀ ದುಡಿದು ಹೊಟ್ಟೆ ಹೊರೆಯುವ ಲಕ್ಷಾಂತರ ಬಡವರೂ ಸೇರಿದಂತೆ ಎಲ್ಲಾ ವರ್ಗಗಳ ಜನರು ಬೆಂಗಳೂರಿನಲ್ಲಿದ್ದಾರೆ.

ದುಡಿಯುವ ಕೈಗಳಿಗೆ ಇಲ್ಲಿ ಕೆಲಸ ಸಿಗುತ್ತದೆ ಎಂಬ ನಂಬಿಕೆಯಿಂದ ನಿತ್ಯ ಸಾವಿರಾರು ಜನರು ಬೆಂಗಳೂರಿಗೆ ಬರುತ್ತಲೇ ಇದ್ದಾರೆ. ಹೀಗೆ ಬರುವವರನ್ನೆಲ್ಲ ತನ್ನ ತೆಕ್ಕೆಗೆ ಸೇರಿಸಿಕೊಳ್ಳುವುದು ಬೆಂಗಳೂರಿನ ಜಾಯಮಾನ. ಬೆಂಗಳೂರು ಕರ್ನಾಟಕದ ರಾಜಧಾನಿ ಮಾತ್ರವಲ್ಲ ಅದು ಮಿನಿ ಭಾರತದಂತೆ ಕಾಣಿಸುತ್ತದೆ.

ಬೆಂಗಳೂರು ಕರ್ನಾಟಕದ ರಾಜಧಾನಿ. ಸಚಿವಾಲಯ ಹಾಗೂ `ಶಕ್ತಿ~ ಕೇಂದ್ರ ಎಂದೇ ಪರಿಗಣಿತವಾಗಿರುವ ವಿಧಾನಸೌಧ ಇಲ್ಲಿದೆ. ಬೆಂಗಳೂರು ಶಿಕ್ಷಣ ಕೇಂದ್ರವೂ ಹೌದು. ಮೆಡಿಕಲ್, ಎಂಜಿನಿಯರಿಂಗ್ ಸೇರಿದಂತೆ ಹಲವು ಬಗೆಯ ಉನ್ನತ ಶಿಕ್ಷಣ ಪಡೆಯಲು ಲಕ್ಷಾಂತರ ವಿದ್ಯಾರ್ಥಿಗಳು ಬೆಂಗಳೂರಿಗೆ ಬರುತ್ತಾರೆ.
 
ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ರಾಜ್ಯದ ಅನೇಕ ಜಿಲ್ಲೆಗಳ ಜನರು ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಕನ್ನಡ ಸಿನಿಮಾ ನಿರ್ಮಾಣವೂ ಸೇರಿದಂತೆ ಬೆಂಗಳೂರಿನಲ್ಲಿ  ನಾನಾ ಬಗೆಯ ಉದ್ಯಮಗಳು ಹಾಗೂ ವ್ಯಾಪಾರ-ವಹಿವಾಟುಗಳಿಂದಾಗಿ ಬೆಂಗಳೂರು ದೇಶದ ಗಮನ ಸೆಳೆದಿದೆ.

ಕಳೆದ ಒಂದೆರಡು ದಶಕಗಳ ಅವಧಿಯಲ್ಲಿ ಬೆಂಗಳೂರು ಬದಲಾವಣೆಯ ಪ್ರಕ್ರಿಯೆಗೆ ದೊಡ್ಡ ಪ್ರಮಾಣದಲ್ಲಿ ತೆರೆದುಕೊಂಡಿದೆ. ಅತ್ಯಾಧುನಿಕವಾಗುವತ್ತ ದಾಪುಗಾಲು ಇಟ್ಟಿದೆ. ಇದರಿಂದಾಗಿ ಕರ್ನಾಟಕದ ಉಳಿದೆಲ್ಲ ನಗರಗಳಿಗಿಂತ ಬೆಂಗಳೂರು ಐವತ್ತು ವರ್ಷಗಳಷ್ಟು ಮುಂದಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ನಗರವೆಂದು ಹೆಸರಾದ ನಂತರ ಬೆಂಗಳೂರಿನ ಬದಲಾವಣೆಯ ವೇಗ ಹೆಚ್ಚಾಗಿದೆ. ವಿದೇಶಿ ಬಂಡವಾಳ ಬೆಂಗಳೂರಿನತ್ತ ಹರಿದು ಬರುತ್ತಿದೆ. ಹತ್ತಾರು ಸಾಫ್ಟ್‌ವೇರ್ ಕಂಪೆನಿಗಳು ಹಾಗೂ ಬಹುರಾಷ್ಟ್ರೀಯ ಕಂಪೆನಿಗಳು ಆರಂಭವಾದ ನಂತರ ಬೆಂಗಳೂರು ಜಗತ್ತಿನ ಗಮನ ಸೆಳೆದಿದೆ.

ನೂರಾರು ಕಂಪೆನಿಗಳ ಲಕ್ಷಾಂತರ ಉದ್ಯೋಗಿಗಳು ಇಲ್ಲಿ ನೆಲೆಸಲು ಆರಂಭಿಸಿದ ನಂತರ ಬೆಂಗಳೂರು ಹೊಸ ರೂಪ ಪಡೆಯುವ ಧಾವಂತದಲ್ಲಿದೆ. ಸಾವಿರಾರು ರೂಪಾಯಿ ವೇತನ ಪಡೆಯುವ ಐಟಿ ಬಿಟಿ ಕಂಪೆನಿಗಳ ಉದ್ಯೋಗಿಗಳೂ ಸೇರಿದಂತೆ ಶ್ರೀಮಂತರ ಅಗತ್ಯಗಳಿಗೆ ತಕ್ಕಂತೆ ಬೆಂಗಳೂರು ಬದಲಾಗುತ್ತಿದೆ. ಅತ್ಯಾಧುನಿಕ ಅಪಾರ್ಟ್‌ಮೆಂಟ್‌ಗಳು, ವಸತಿ ಸಮುಚ್ಛಯಗಳು ತಲೆ ಎತ್ತಿವೆ.

 ದೇಶದ ಹಲವು ರಾಜ್ಯಗಳಿಂದ ಬಂದವರು ಹಾಗೂ ವಿದೇಶಿ ಪ್ರಜೆಗಳ ಅಗತ್ಯ ಪೂರೈಸಲು ಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸುವ ಪ್ರಯತ್ನ ಹೆಚ್ಚಾದಂತೆ ಕನ್ನಡ ಸಂಸ್ಕೃತಿಯ ಲಕ್ಷಣಗಳೆಲ್ಲ ಕಣ್ಮರೆಯಾಗುತ್ತಿವೆ.

ಕೆಲವು ಪ್ರದೇಶಗಳಲ್ಲಿ ಕನ್ನಡದ ಮಾತೇ ಕೇಳಿಸುವುದಿಲ್ಲ. ಎಲ್ಲ ಭಾಷೆಗಳ ಜನರು ಇಲ್ಲಿದ್ದುಕೊಂಡು ಬದುಕುವ ಅನಿವಾರ್ಯತೆ ಹೆಚ್ಚಾದಂತೆ ಇಂಗ್ಲಿಷ್ ಪ್ರಮುಖ ಸಂಪರ್ಕ ಭಾಷೆಯಾಗಿ ಕನ್ನಡವನ್ನು ಹಿಂದಕ್ಕೆ ತಳ್ಳುತ್ತಿದೆ.

ಇದೆಲ್ಲದರ ಪರಿಣಾಮ ಬೆಂಗಳೂರು ಬಹು ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಿದೆ. ಸಹಜವಾಗಿಯೇ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸಂಖ್ಯೆ ಹೆಚ್ಚಾಗಿದೆ. ಕನ್ನಡಿಗರೂ ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುವ ಧಾವಂತದಲ್ಲಿದ್ದಾರೆ.

ಈ ಎಲ್ಲಾ ಬದಲಾವಣೆಗಳ ನಡುವೆಯೂ ಬೆಂಗಳೂರು ತನ್ನ ಮೂಲ ಗುಣಗಳನ್ನು ಇನ್ನೂ ಉಳಿಸಿಕೊಂಡಿದೆ. ಬಸವನಗುಡಿ, ಮಲ್ಲೇಶ್ವರ, ಉತ್ತರ ಕರ್ನಾಟಕದ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜಾಜಿನಗರ, ಬಸವೇಶ್ವರನಗರ ಇತ್ಯಾದಿ ಬಡಾವಣೆಗಳು, ಬೆಂಗಳೂರಿನ ಕರಗ, ಕಡಲೆಕಾಯಿ ಪರಿಷೆ.

ಅಲ್ಲಲ್ಲಿ ವರ್ಷವಿಡೀ ನಡೆಯುವ ಅಣ್ಣಮ್ಮ ದೇವಿಯ ಉತ್ಸವಗಳು ಇದಕ್ಕೆ ಸಾಕ್ಷಿ. ಅಷ್ಟೇ ಅಲ್ಲ ಇಲ್ಲಿರುವ ಆಂಧ್ರ, ತಮಿಳುನಾಡು, ಕೇರಳ, ಗುಜರಾತ್, ಬಂಗಾಳ, ಬಿಹಾರ ಮತ್ತಿತರ ರಾಜ್ಯಗಳಿಂದ ಉದ್ಯೋಗ ಹುಡುಕಿಕೊಂಡು ಬಂದ ಲಕ್ಷಾಂತರ ಜನರು ಇಲ್ಲಿದ್ದು ತಮ್ಮ ಭಾಷೆಗಳಲ್ಲಿ ವ್ಯವಹರಿಸುತ್ತ,ತಮ್ಮ ರಾಜ್ಯಗಳಲ್ಲಿನ ಪ್ರಮುಖ ಹಬ್ಬ ಉತ್ಸವಗಳನ್ನು ಇಲ್ಲಿ ಆಚರಿಸುತ್ತ ಕನ್ನಡ ಪರಿಸರವನ್ನು ಮಸುಕಾಗಿಸುತ್ತಿದ್ದಾರೆ.

ಬೆಂಗಳೂರು ಬಹು ಭಾಷೆ ಹಾಗೂ ಬಹು ಧರ್ಮಗಳ ಜನರಿರುವ ನಗರ.
ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಆಡಳಿತ ಕಾಲದಲ್ಲಿ ಬೆಂಗಳೂರು ಸುತ್ತ ಹತ್ತಾರು ಹಳ್ಳಿಗಳಿದ್ದವು.

ಈ ಹಳ್ಳಿಗಳ ಪೈಕಿ ಕೆಲವು ತಮ್ಮ ಮೂಲ ಹೆಸರುಗಳನ್ನು ಉಳಿಸಿಕೊಂಡು ಮಹಾನಗರದಲ್ಲಿ ಸೇರಿಕೊಂಡಿವೆ. ಆದರೂ ಕೆಲವು ಹಳ್ಳಿಗಳು ಬೆಂಗಳೂರಿನ ಒಳಗೇ ಇದ್ದರೂ ತಮ್ಮ ಮೂಲ ರೂಪ ಹಾಗೂ ಗುಣಗಳನ್ನು ಉಳಿಸಿಕೊಂಡಿವೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT