ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನಿ ರಣಾಂಗಣವಾಯ್ತು ಸಭೆ!

Last Updated 20 ಜನವರಿ 2011, 9:50 IST
ಅಕ್ಷರ ಗಾತ್ರ

ಕೋಲಾರ: ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾದ ಐದು ತಿಂಗಳ ಬಳಿಕ ಮೊದಲ ಸಾಮಾನ್ಯ ಸಭೆಗೆ ಸಿದ್ಧವಾಗಿದ್ದ ನಗರಸಭೆ ಸಭಾಂಗಣ ಬುಧವಾರ ಮಿನಿ ರಣಾಂಗಣವೇ ಆಗಿ ಹೋಯಿತು. ವಿರೋಧ ಪಕ್ಷದ ಸದಸ್ಯರು ಟೇಬಲ್‌ಗಳನ್ನು ಎತ್ತಿ ಕುಕ್ಕಿದರು. ಎದುರಿಗಿದ್ದ ಸದಸ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಒಪ್ಪವಾಗಿ ಜೋಡಿಸಿದ್ದ ಟೇಬಲ್‌ಗಳನ್ನು ಹಿಗ್ಗಾಮುಗ್ಗಾ ಎಳೆದಾಡಿದರು.
 
ಬೇಕೆನಿಸಿದಾಗೆಲ್ಲ ಏಕವಚನ ಬಳಸಿದರು. ಮುನಿಸಿಪಲ್ ಕಾಯ್ದೆ ಪುಸ್ತಕ, ಸಭೆಯ ನಡಾವಳಿ ಪುಸ್ತಕವನ್ನು ಮುಲಾಜಿಲ್ಲದೆ ಎಸೆದರು. ಸಭೆ ನಡೆಸಲು ಅವಕಾಶ ಕೊಡಿ ಎಂದು ಅಧ್ಯಕ್ಷೆ ನಾಜಿಯಾ ಅವರು ಪದೇಪದೇ ಮಾಡಿದ ಮನವಿಗೆ ಕವಡೆ ಕಿಮ್ಮತ್ತೂ ಕೊಡಲಿಲ್ಲ. ಆಡಳಿತ ಪಕ್ಷದ ಸದಸ್ಯರೂ ತಾವೂ ಕಡಿಮೆಯಿಲ್ಲ ಎಂಬಂತೆಯೇ ವರ್ತಿಸಿದರು.ಇಂಥ ಸನ್ನಿವೇಶದ ನಡುವೆಯೇ ಅಧ್ಯಕ್ಷೆ ನಾಜಿಯಾ ಹೊಸದಾಗಿ ಸ್ಥಾಯಿ ಸಮಿತಿಗೆ ಚುನಾವಣೆ ನಡೆಸಿ ರಘು ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.

ಚುನಾವಣೆಯೇ ಅಕ್ರಮ ಎಂದು ಆರೋಪಿಸಿ ವಿ.ಕೆ.ರಾಜೇಶ್ ನೇತೃತ್ವದಲ್ಲಿ 13 ಸದಸ್ಯರು ಸಭೆಯಿಂದ ಹೊರಬಂದು ಧರಣಿ ನಡೆಸಿದರು. ‘ಅವರ ಗೂಂಡಾಗಿರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಉಪಾಧ್ಯಕ್ಷ ಎಸ್.ಆರ್.ಮುರಳಿಗೌಡ ಗುಡುಗಿದರು.ಹಲವು ಜನಪರ ಮತ್ತು ಆಡಳಿತಾತ್ಮಕ ವಿಷಯಗಳ ಕುರಿತು ಯಾವುದೇ ಚರ್ಚೆಯೇ ನಡೆಯದೆ ಅನುಮೋದನೆ ಪಡೆಯಲಾಯಿತು. ಗೊಂದಲಗಳ ನಡುವೆಯೇ ಸಭೆ ಅರ್ಧಕ್ಕೇ ಮುಕ್ತಾಯವಾಯಿತು.

ಐದು ತಿಂಗಳ ಹಿಂದೆ ಹೊಸ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಮೂಲಕ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಶಾಸಕ ವರ್ತೂರು ಪ್ರಕಾಶರ ನಡುವೆ ಏರ್ಪಟ್ಟ ರಾಜಕೀಯ ವೈಮನಸ್ಯಕ್ಕೂ ಸಭೆ ಸಾಕ್ಷಿಯಾಯಿತು.ಶಾಸಕ ವರ್ತೂರು ಪ್ರಕಾಶ್ ಬಣದ ಸದಸ್ಯರಾದ ವಿ.ಕೆ.ರಾಜೇಶ್, ವಿ.ಪ್ರಕಾಶ್, ಸೋಮಶೇಖರ್ ಮತ್ತಿತರರು ಸಭೆಯ ಆರಂಭದಲ್ಲೆ ‘ಆಯಕ್ತರು ಬರದ ಹೊರತು ಸಭೆ ಆರಂಭಿಸಬಾರದು. ಸಭೆ ಮುಂದೂಡಬೇಕು’ ಎಂದು ಆಗ್ರಹಿಸಿದರು. ಆಯುಕ್ತರ ಅನುಪಸ್ಥಿತಿಯಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಂದ್ರಶೇಖರ್ ಸಭೆ ನಡೆಸಲು ಮುಂಬರುತ್ತಿದ್ದಂತೆಯೇ ಅವರನ್ನು ತಡೆದರು.

ಅಧ್ಯಕ್ಷ, ಉಪಾಧ್ಯಕ್ಷರ ಉಪಸ್ಥಿತಿಯಲ್ಲಿ ಪ್ರಭಾರಿ ಆಯುಕ್ತರು ಸಭೆ ನಡೆಸಬಹುದು ಎಂದು ಮುನ್ಸಿಪಲ್ ಕಾಯ್ದೆ ಹೇಳುತ್ತದೆ ಎಂದು ಕಾಯ್ದೆ ಪುಸ್ತಕವನ್ನು ಪ್ರದರ್ಶಿಸಿದ ಸದಸ್ಯ ಖಲೀಲ್ ಅಹ್ಮದ್ ಅವರಿಂದ ಪುಸ್ತಕ ಕಿತ್ತುಕೊಂಡ ಸದಸ್ಯ ಸೋಮಶೇಖರ್ ಅದನ್ನು ಬಿಸಾಡಿದರು. ನಡಾವಳಿ ಪುಸ್ತಕಕ್ಕೂ ಅದೇ ಗತಿಯಾಯಿತು. ಅಲ್ಲಿಂದ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಪರಸ್ಪರ ನಿಂದನೆಗಳಲ್ಲೆ ಸಮಯ ಕಳೆದರು.

ಅವರೆಲ್ಲರಿಂದ ದೂರಕ್ಕೆ, ತಮ್ಮ ಕುರ್ಚಿ ಮುಂದೆ ‘12ನೇ ವಾರ್ಡಿಗೆ ತಾರತಮ್ಯ ಮಾಡದೆ ನೀರು ಕೊಡಿ’ ಎಂದು ಫಲಕ ಅಂಟಿಸಿ ಕುಳಿತಿದ್ದ ಸದಸ್ಯ ರವೀಂದ್ರ ಅವರೂ ತಾಳ್ಮೆ ಮೀರಿ ಉಪಾಧ್ಯಕ್ಷ ಮುರಳಿಗೌಡರೊಡನೆ ವಾಗ್ವಾದಕ್ಕಿಳಿದರು. ಸದಸ್ಯರ ಗುಂಪುಗಳ ನಡುವೆ ಜೋರು ದನಿಯ ಜಗಳದಿಂದ ಸಭೆ ಗದ್ದಲದಗೂಡಾಯಿತು. ಅದೇ ವೇಳೆ, ಸ್ಥಾಯಿ ಸಮಿತಿ ರಚನೆ ಮತ್ತು ಸಮಿತಿ ಅಧ್ಯಕ್ಷರ ಚುನಾವಣೆಯೂ ನಡೆಯಿತು. ಸದಸ್ಯರ ಪಟ್ಟಿ ಹೇಳಿದ ಅಧ್ಯಕ್ಷೆ ಕೈ ಎತ್ತುವಂತೆ ಸಂಜ್ಞೆ ಮಾಡಿದರು. ಯಾವುದಕ್ಕೆ ಕೈ ಎತ್ತಬೇಕು ಎಂಬ ಗೊಂದಲದಲ್ಲಿಯೇ ಹಲವು ಸದಸ್ಯರು ಕೈ ಎತ್ತಿದರು.

ರಘು ಅಧ್ಯಕ್ಷರಾಗಿ ಆಯ್ಕೆಯಾದರು ಎಂದು ಅವರು ಘೋಷಿಸಿದರು. ಕೂಡಲೇ ಅವರನ್ನು ಭುಜದ ಮೇಲೆ ಹೊತ್ತುಕೊಂಡ ಸದಸ್ಯ ಚಾಂದ್‌ಪಾಷಾ ಜೈಕಾರ ಹಾಕುತ್ತಾ ಹೊರಗೆ ನಡೆದರು. ಚುನಾವಣೆ ಅಕ್ರಮ ಎಂದು ರಾಜೇಶ್ ನೇತೃತ್ವದ ಸದಸ್ಯರು ಧಿಕ್ಕಾರ ಕೂಗಿದರು. ಸಭೆ ಅನಿರೀಕ್ಷಿತವಾಗಿ ಕೊನೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT