ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನಿ ವಿಧಾನಸೌಧದ ನೆರಳಿನಲ್ಲಿ ಕೊಳಚೆ ನೀರು!

Last Updated 10 ಜೂನ್ 2011, 10:05 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದ ತಾಲ್ಲೂಕು ಆಡಳಿತದ ಕೇಂದ್ರವಾದ ಮಿನಿ ವಿಧಾನಸೌಧದ ತಳ ಮಹಡಿಯಲ್ಲಿ ಕೊಳಚೆ ನೀರು ಸಂಗ್ರಹಗೊಂಡಿದ್ದು, ಸುತ್ತಮುತ್ತಲಿನ ಆವರಣಕ್ಕೂ ಹಬ್ಬು ವಾಸನೆ ಹರಡುತ್ತಿದೆ.

ನಾಲ್ಕು ಅಂತಸ್ತಿನ ಮಿನಿ ವಿಧಾನಸೌಧದಲ್ಲಿ, ನೆಲಮಟ್ಟದ ವಾಹನ ನಿಲುಗಡೆಗೆ ಇರುವ ಜಾಗದಲ್ಲಿ ಕೊಳಚೆ ನೀರು ಮಡುಗಟ್ಟಿದೆ. ತಿಂಗಳುಗಳ ಹಿಂದೆ ಬಿದ್ದ ಮಳೆಯ ನೀರು ಇಲ್ಲಿ ಸಂಗ್ರಹಗೊಂಡಿದೆ. ಅದನ್ನು ಖಾಲಿ ಮಾಡುವ ಕೆಲಸ ಮಾಡದ ಕಾರಣ ಈಗ ವಾಸನೆ ಬೀರುತ್ತಿದೆ. ಪಹಣಿ ಇತರ ದಾಖಲೆ ನೀಡುವ ಕೊಠಡಿಯ ಮಗ್ಗುಲಲ್ಲೇ ಈ ಅವ್ಯವಸ್ಥೆ ಉಂಟಾಗಿದೆ. ಇದರಿಂದಾಗಿ ಸುತ್ತಮುತ್ತಲ ಪರಿಸರದಲ್ಲಿ ಓಡಾಡುವವರು ಮೂಗು ಮುಚ್ಚಿ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಿನಿ ವಿಧಾನಸೌಧದ ಆವರಣದಲ್ಲಿ ಶೌಚಾಲಯ ಇಲ್ಲದ ಕಾರಣ ತಾಲ್ಲೂಕಿನ ವಿವಿಧೆಡೆಗಳಿಂದ ತಮ್ಮ ಕೆಲಸಗಳಿಗೆ ಇಲ್ಲಿಗೆ ಬರುವ ಜನರು ಕೆಳ ಮಹಡಿಯಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಕೊಳಚೆ ನೀರಿನ ಜತೆಗೆ ಪ್ಲಾಸ್ಟಿಕ್ ಇತರ ತ್ಯಾಜ್ಯಗಳು ಕೂಡ ಸೇರಿಕೊಂಡಿದೆ. ಮಿನಿ ವಿಧಾನಸೌಧದ ಬಳಿ ಶೌಚಾಲಯ ನಿರ್ಮಿಸುವಂತೆ ನಾಗರಿಕರು ತಹಸೀಲ್ದಾರರಿಗೆ ಹಲವು ಬಾರಿ ಮನವಿ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆ ಹಾಗೂ ಪುರಸಭೆಯತ್ತ ಬೊಟ್ಟು ಮಾಡುತ್ತಿದ್ದಾರೆ. ಮಿನಿ ವಿಧಾನಸೌಧದ ತಳ ಮಹಡಿಯಲ್ಲಿ, ತಾಲ್ಲೂಕು ಆಡಳಿತದ ಮೂಗಿನಡಿ ಇಂತಹ ಅವ್ಯವಸ್ಥೆ ಉಂಟಾಗಿದ್ದರೂ ಗಮನ ಹರಿಸದ ಕಾರಣಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯ ಶಿಕ್ಷಕರ ವಿರುದ್ಧ ಕ್ರಮ
ಶ್ರೀರಂಗಪಟ್ಟಣ: ತಾಲ್ಲೂಕಿನ ಗರಕಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ರಮೇಶ್ ವಿರುದ್ಧ ಶಾಲಾಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿ ಶಾಲೆಗೆ ಬೀಗ ಹಾಕಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಬಿ.ರಮೇಶ್ ಅವರನ್ನು ಗರಕಹಳ್ಳಿ ಶಾಲೆಯಿಂದ ವಿಮುಕ್ತಿಗೊಳಿಸಿ ಕ್ರಮ ಕೈಗೊಳ್ಳಲಾಗಿದೆ.

ತಾಲ್ಲೂಕಿನ ಹುಣಸನಹಳ್ಳಿ ಶಾಲೆಗೆ ಅವರನ್ನು ನಿಯೋಜನೆ ಮಾಡಲಾಗಿದೆ. ಶಿಕ್ಷಕರ ಅನಧಿಕೃತ ಗೈರು, ಬಿಸಿಯೂಟ ಸ್ಥಗಿತ ವಿರೋಧಿಸಿ ಪ್ರತಿಭಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಗರಕಹಳ್ಳಿ ಶಾಲೆಗೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಗದೀಶ್, ಬಿಆರ್‌ಸಿ ಬಿ.ಜಗದೀಶ್ ಗ್ರಾಮಸ್ಥರ ಅಹವಾಲು ಆಲಿಸಿದರು. ಮುಖ್ಯ ಶಿಕ್ಷಕರ ಬದಲಾವಣೆಗೆ ಜನರು ಪಟ್ಟು ಹಿಡಿದ ಕಾರಣಕ್ಕೆ ಮುಖ್ಯ ಶಿಕ್ಷಕರನ್ನು ಬೇರೆಡೆ ನಿಯೋಜನೆ ಮಾಡಿ,  ಕ್ರಮ ಕೈಗೊಳ್ಳಲಾಗಿದೆ ಎಂದು ಬಿಇಓ ಕೆ.ಜಗದೀಶ್ ತಿಳಿಸಿದರು. ಮೂಡಲಗಿರಿಯಪ್ಪ, ವೀರೇಶ್ ಲಿಂಬಿಕಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT