ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಲಿಟರಿ ಕ್ಷಿಪ್ರ ಕ್ರಾಂತಿಯ ಭೀತಿಯಲ್ಲಿ ಪಾಕಿಸ್ತಾನ

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

ಪಾಕಿಸ್ತಾನ ಹುಟ್ಟಿನಿಂದಲೇ ಅಸ್ಥಿರತೆಯನ್ನು ಬೆನ್ನಿಗೆ ಕಟ್ಟಿಕೊಂಡಿದೆ. ತನ್ನ ಆರು ದಶಕಗಳಿಗೂ ಹೆಚ್ಚಿನ ಅಸ್ತಿತ್ವದಲ್ಲಿ ದೇಶ ನಾಲ್ಕು ಬಾರಿ ಮಿಲಿಟರಿ ಆಡಳಿತಕ್ಕೆ ಒಳಗಾಗಿದೆ. ಪ್ರಜಾತಂತ್ರ ಮಾದರಿಯಲ್ಲಿ ಅಸ್ತಿತ್ವಕ್ಕೆ ಬಂದ ಯಾವುದೇ ಸರ್ಕಾರ ಪೂರ್ಣಾವಧಿಯನ್ನು ಪೂರೈಸಲು ಸಾಧ್ಯವಾಗಿಲ್ಲ. ಸದಾ ಮಿಲಿಟರಿಯ ಭೀತಿಯಲ್ಲಿಯೇ ಆಡಳಿತ ನಡೆಸಬೇಕಾದಂಥ ಪರಿಸ್ಥಿತಿಯನ್ನು ಆಡಳಿತಗಾರರು ಎದುರಿಸುತ್ತ ಬಂದಿದ್ದಾರೆ. 

 ಈಗಲೂ ಅಂಥದೇ ಪರಿಸ್ಥಿತಿ ನಿರ್ಮಾಣವಾಗಿದೆ. ಮಿಲಿಟರಿ ಸರ್ವಾಧಿಕಾರಿ ಜನರಲ್ ಪರ್ವೇಜ್ ಮುಷರಫ್ ಆಡಳಿತದ ಅಂತ್ಯದಲ್ಲಿ ಪ್ರಜಾತಂತ್ರ ಮಾದರಿಯಲ್ಲಿ ಚುನಾವಣೆ ನಡೆದು ಅಧಿಕಾರಕ್ಕೆ ಬಂದಿದ್ದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ನೇತೃತ್ವದ ಸರ್ಕಾರ ತನ್ನ ಆಡಳಿತದ ಅವಧಿ ಪೂರೈಸಲು ಇನ್ನೂ ಒಂದು ವರ್ಷ ಬಾಕಿ ಇದೆ. ಆದರೆ ಅದನ್ನು ಪೂರೈಸಲು ಸಾಧ್ಯವಿಲ್ಲದಂಥ ಬೆಳವಣಿಗೆಗಳು ಆಗುತ್ತಿವೆ. ಮಿಲಿಟರಿ ಅಧಿಕಾರ ಕಬಳಿಸುವ ಸಾಧ್ಯತೆಗಳು ಸೃಷ್ಟಿಯಾಗಿವೆ. ಪಾಕಿಸ್ತಾನದ ದುರಂತ ಇದು.

 ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ದಿವಂಗತ ಬೆನಜೀರ್ ಭುಟ್ಟೊ ಅವರ ಪತಿ ಅಸೀಫ್ ಅಲಿ ಜರ್ದಾರಿ ದೇಶದ ಅಧ್ಯಕ್ಷರು. ಅದೇ ಪಕ್ಷದ ಹಿರಿಯ ನಾಯಕ ಯುಸೂಫ್ ರಜಾ ಗಿಲಾನಿ ಪ್ರಧಾನಿ. ಗಿಲಾನಿ ನೇತೃತ್ವದ ಸರ್ಕಾರ ನ್ಯಾಯಾಂಗ ಮತ್ತು ಮಿಲಿಟರಿಯ ಜೊತೆ ಸೌಹಾರ್ದಯುತ ಸಂಬಂಧ ಸಾಧಿಸಲು ವಿಫಲವಾಗಿ ಅವುಗಳ ಜೊತೆ ಸಂಘರ್ಷಕ್ಕೆ ಇಳಿದಿದ್ದರಿಂದ ಅಸ್ಥಿರ ರಾಜಕೀಯ ಸ್ಥಿತಿ ಉದ್ಭವವಾಗಿದೆ. ಹಿಂದಿನಂತೆ ಸುಲಭವಾಗಿ ಮಿಲಿಟರಿ ಕ್ಷಿಪ್ರಕ್ರಾಂತಿ ನಡೆಸಿ ಅಧಿಕಾರ ಕಬಳಿಸಲು ಸಾಧ್ಯವಿಲ್ಲ ನಿಜ. ಆದರೆ ಪಾಕ್ ಮಿಲಿಟರಿ ಇತಿಹಾಸ ನೋಡಿದರೆ ಅಂಥ ಬೆಳವಣಿಗೆ ನಡೆದರೆ ಆಶ್ಚರ್ಯಪಡಬೇಕಾಗಿಲ್ಲ.

ಆದರೆ ಈ ಬಾರಿ ಭಿನ್ನವಾದ ಸಬೂಬು ಮಿಲಿಟರಿಗೆ ಸಿಗಬಹುದು. ಅಧ್ಯಕ್ಷ ಜರ್ದಾರಿ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆ ನಡೆಸಲು ಸರ್ಕಾರ ನಿರಾಕರಿಸಿದ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಪ್ರಧಾನಿ ಗಿಲಾನಿಯವರನ್ನು ಅನರ್ಹಗೊಳಿಸಬಹುದು ಮತ್ತು ತನ್ನ ತೀರ್ಪನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಮಿಲಿಟರಿಗೆ ಒಪ್ಪಿಸಬಹುದು ಎನ್ನುವುದು ಒಂದು ಲೆಕ್ಕಾಚಾರ.
 
ಅಂಥ ಬೆಳವಣಿಗೆ ಆದರೆ ಅಧಿಕಾರ ಕಬಳಿಸಲು ಮಿಲಿಟರಿಗೆ ಅವಕಾಶ ಸಿಗಬಹುದು. ಮೆಮೊ ಗೇಟ್ ಪ್ರಕರಣದಲ್ಲಿ ಸರ್ಕಾರ ನ್ಯಾಯಾಂಗ ತನಿಖೆ ಅಗತ್ಯವಿಲ್ಲ ಎಂದು ಹೇಳುತ್ತಿದ್ದರೆ, ಆ ನಿಲುವಿಗೆ ವಿರುದ್ಧವಾಗಿ ಅಂಥ ತನಿಖೆ ನಡೆಸಬೇಕೆಂದು ಸುಪ್ರೀಂ ಕೋರ್ಟ್‌ಗೆ ತಿಳಿಸುವ ಮೂಲಕ ಮಿಲಿಟರಿ ಅಧಿಕಾರಿಗಳು ಸರ್ಕಾರದ ಜೊತೆ ಸಂಘರ್ಷಕ್ಕೆ ಇಳಿದಿದ್ದಾರೆ.
 
ಜರ್ದಾರಿ ವಿರುದ್ಧದ ಭ್ರಷ್ಟಾಚಾರ ಮತ್ತು ಮೆಮೊಗೇಟ್ ಪ್ರಕರಣಗಳ ತನಿಖೆ ಕುರಿತಂತೆ ವಿವಾದ ಮುಂದಿನ ವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಸರ್ಕಾರ ಯಾವ ನಿಲುವು ತಳೆಯಲಿದೆ ಮತ್ತು ಅದಕ್ಕೆ ಸುಪ್ರೀಂ ಕೋರ್ಟ್ ಯಾವ ಪ್ರತಿಕ್ರಿಯೆ ನೀಡುತ್ತದೆ ಎನ್ನುವುದರ ಮೇಲೆ ಸರ್ಕಾರದ ಭವಿಷ್ಯ ನಿಂತಿದೆ. 

 ಮಿಲಿಟರಿ ಮತ್ತು ನ್ಯಾಯಾಂಗದ ಜೊತೆ ಸಂಘರ್ಷ ಇಲ್ಲ ಎಂದು ಗಿಲಾನಿ ಅವರು ಶುಕ್ರವಾರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಹೇಳಿದ್ದಾರಾದರೂ ಅವರ ಮಾತಿನ ದಾಟಿ ಸಂಘರ್ಷ ಮುಂದುವರಿಸಲು ನಿರ್ಧರಿಸಿದಂತಿತ್ತು. ಸಂಸತ್ತೇ ಸಾರ್ವಭೌಮ.

ಮಿಲಿಟರಿ ಕೂಡಾ ಸಂಸತ್ತಿನ ನಿರ್ಧಾರಕ್ಕೆ ಬದ್ಧವಾಗಿರುವಂತೆ ಮಾಡಲಾಗಿದೆ. ಸಂಸತ್ತಿನ ಸಾರ್ವಭೌಮತ್ವವನ್ನು ಕಾಪಾಡಲು ಎಲ್ಲರೂ ಸಹಕಾರ ನೀಡಬೇಕೆಂದು ವಿರೋಧಿ ಸದಸ್ಯರಿಗೆ ಮನವಿ ಮಾಡಿಕೊಳ್ಳುವ ಮೂಲಕ ಗಿಲಾನಿ ಅವರು ಪ್ರಸಕ್ತ ಸಂಘರ್ಷವನ್ನು ಪ್ರಜಾತಂತ್ರ ಮತ್ತು ಮಿಲಿಟರಿ ಸರ್ವಾಧಿಕಾರದ ವಿರುದ್ಧದ ಹೋರಾಟ ಎಂಬಂತೆ ಬಿಂಬಿಸಿದ್ದಾರೆ. 

 ಜರ್ದಾರಿ ಮತ್ತು ಗಿಲಾನಿ ಅವರ ತಲೆಯ ಮೇಲೆ ಕತ್ತಿ ತೂಗುತ್ತಿರುವ ಸನ್ನಿವೇಶವನ್ನು ಎರಡು ಪ್ರಕರಣಗಳು ನಿರ್ಮಾಣ ಮಾಡಿವೆ. ಮೊದಲನೆಯದು ಅಧ್ಯಕ್ಷ ಜರ್ದಾರಿ ಅವರ ಮೇಲಿನ ಭ್ರಷ್ಟಾಚಾರದ ಆರೋಪಗಳು. ಮುಷರಫ್ ತಮ್ಮ ಅಧಿಕಾರದ ಕೊನೆಯ ದಿನಗಳಲ್ಲಿ ಚುನಾವಣೆ ನಡೆಸಿ ಜನಪ್ರತಿನಿಧಿ ಸರ್ಕಾರ ಸ್ಥಾಪಿಸಲು ಮುಂದಾದರು.

ಚುನಾವಣೆಗೆ ಮುನ್ನ ರಾಜಕೀಯ ಬಂಧಿತರು ಮತ್ತು ವಿವಿಧ ಕಾರಣಗಳಿಗಾಗಿ ಮೊಕದ್ದಮೆಗಳನ್ನು ಎದುರಿಸುತ್ತಿದ್ದ ಸಾವಿರಾರು ಜನರನ್ನು ಅವುಗಳಿಂದ ಮುಕ್ತ ಮಾಡಬೇಕಾಗಿ ಬಂತು. ಈ ಉದ್ದೇಶದಿಂದ ಮುಷರಫ್ ಸರ್ಕಾರ ಸುಗ್ರೀವಾಜ್ಞೆಯೊಂದನ್ನು ಹೊರಡಿಸಿತು.
 
ದೇಶದೊಳಕ್ಕೆ ಬರಲು ಅವಕಾಶ ನಿರಾಕರಿಸಿದ್ದರಿಂದಾಗಿ ಬ್ರಿಟನ್‌ನಲ್ಲಿ ನೆಲೆಸಿದ್ದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ (ಪಿಪಿಪಿ)ನಾಯಕಿ ಬೆನಜಿರ್ ಭುಟ್ಟೊ ಸ್ವದೇಶಕ್ಕೆ ಮರಳುವಂತೆ ಆಯಿತು. ಬೆನಜಿರ್ ಪ್ರಧಾನಿಯಾಗಿದ್ದ ಕಾಲದಲ್ಲಿ ಅವರ ಪತಿ ಜರ್ದಾರಿ ಅಪಾರ ಪ್ರಮಾಣದಲ್ಲಿ ಹಣ ಮಾಡಿ ಅದನ್ನು ಸ್ವಿಸ್ ಬಾಂಕುಗಳಲ್ಲಿ ಇಟ್ಟಿರುವ ಮತ್ತು ವಿದೇಶಗಳಲ್ಲಿ ಆಸ್ತಿ ಖರೀದಿಸಿದ ಆರೋಪಕ್ಕೆ ಒಳಗಾಗಿದ್ದರು.
 
ಆ ಸಂಬಂಧವಾಗಿ ಅವರು ಮೊಕದ್ದಮೆಗಳನ್ನೂ ಎದುರಿಸುತ್ತಿದ್ದರು. ಮುಷರಫ್ ಹೊರಡಿಸಿದ ಸುಗ್ರೀವಾಜ್ಞೆಯಿಂದಾಗಿ ಜರ್ದಾರಿ ಆರೋಪಮುಕ್ತರಾದರು. ಮುಷರಫ್ ಅಧಿಕಾರಲ್ಲಿದ್ದಾಗಲೇ ಈ ಸುಗ್ರೀವಾಜ್ಞೆ ವಿರುದ್ಧ ಕೆಲವರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈಗ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿರುವ ಇಫ್ತಿಕಾರ್ ಚೌಧರಿ (ಆಗಲೂ ಅವರು ಅದೇ ಸ್ಥಾನದಲ್ಲಿದ್ದರು) ವಿಚಾರಣೆ ನಂತರ ಸುಗ್ರೀವಾಜ್ಞೆಯನ್ನು ರದ್ದು ಮಾಡಿ ಮೊಕದ್ದಮೆಗಳ ವಿಚಾರಣೆ ಮುಂದುವರಿಸಲು ಸರ್ಕಾರಕ್ಕೆ ಆದೇಶ ನೀಡಿದ್ದರು. ಈ ಬೆಳವಣಿಗೆ ಮುಷರಫ್ ಅವರನ್ನು ಕೆರಳಿಸಿತ್ತು.
 
ನ್ಯಾಮೂ ಚೌಧರಿಯವರನ್ನೇ ವಜಾ ಮಾಡಿ ಬೇರೊಬ್ಬರನ್ನು ಅವರ ಸ್ಥಾನಕ್ಕೆ ನೇಮಿಸಿದ್ದರು. ಹೊಸ ನ್ಯಾಯಮೂರ್ತಿಗಳು ಸುಗ್ರೀವಾಜ್ಞೆಯನ್ನು ಎತ್ತಿ ಹಿಡಿದಿದ್ದರು.
ಚೌಧರಿ ಅವರ ವಜಾ ಪ್ರಕರಣ ಮುಂದೆ ದೊಡ್ಡ ಚಳವಳಿಯಾಗಿ ರೂಪುಗೊಂಡಿತು. ಆ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ವಕೀಲ ಸಮುದಾಯ ಪ್ರಜಾತಂತ್ರ ಪುನರ್‌ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿತು.
 
ದೇಶಕ್ಕೆ ಮರಳಿದ ಬೆನಜಿರ್ ಭುಟ್ಟೊ ಹತ್ಯೆ ಪಿಪಿಪಿ ಪರ ಅನುಕಂಪದ ಅಲೆ ಏಳಲು ಕಾರಣವಾಯಿತು. ಬೆನಜಿರ್ ಪತಿ ದೊಡ್ಡ ನಾಯಕರಾಗಿ ರೂಪುಗೊಂಡರು. ಜರ್ದಾರಿ ಅಧ್ಯಕ್ಷರಾದರು. ಮುಷರಫ್ ವಜಾ ಮಾಡಿದ್ದ ಮುಖ್ಯ ನ್ಯಾಯಮೂರ್ತಿಯವರನ್ನು ಮತ್ತೆ ಅದೇ ಸ್ಥಾನಕ್ಕೆ ನೇಮಿಸಬೇಕಾಗಿ ಬಂದಾಗ ಜರ್ದಾರಿ ಮೀನ ಮೇಷ ಎಣಿಸಿದರು. ಮರು ನೇಮಕಕ್ಕೆ ಒತ್ತಾಯಿಸಿ ನವಾಜ್ ಷರೀಫ್ ಪಕ್ಷ ದೊಡ್ಡ ಪ್ರದರ್ಶನ ನಡೆಸಿತು.
 
ಆನಂತರ ಎಲ್ಲರನ್ನೂ  ಮತ್ತೆ ಅದೇ ಸ್ಥಾನಗಳಿಗೆ ನೇಮಿಸಲಾಯಿತು. ಚೌಧರಿ ಮತ್ತೆ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸುಗ್ರೀವಾಜ್ಞೆ ವಿವಾದಕ್ಕೆ ಜೀವ ನೀಡಿ ಭ್ರಷ್ಟಾಚಾರ ಆರೋಪ ಹೊತ್ತವರ ವಿರುದ್ಧ ಕ್ರಮಕ್ಕೆ ಆದೇಶ ನೀಡಿದರು.

ಜರ್ದಾರಿ ವಿರುದ್ಧವೇ ಪ್ರಕರಣಗಳಿದ್ದುದರಿಂದ ಸರ್ಕಾರ ಸಬೂಬು ಹೇಳುತ್ತ ಬಂತು.
 ಕಳೆದ ವಾರ ಈ ಪ್ರಕರಣ ವಿಚಾರಣೆಗೆ ಬಂದಾಗ ಏನೂ ಕ್ರಮ ತೆಗೆದುಕೊಳ್ಳದ ಸರ್ಕಾರ ಮತ್ತು ಪ್ರಧಾನಿಗೆ ಚೌಧರಿ  ಛೀಮಾರಿ ಹಾಕಿದರು. ಗಿಲಾನಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸುವ ಮತ್ತು ಅನರ್ಹಗೊಳಿಸುವ ಕ್ರಮ ತೆಗೆದುಕೊಳ್ಳಬೇಕಾದೀತು ಎಂಬ ಎಚ್ಚರಿಕೆ ನೀಡಿದರು.
 
ಈ ವಿಚಾರವಾಗಿ ಆರು ಆಯ್ಕೆಗಳನ್ನು ಸುಪ್ರೀಂ ಕೋರ್ಟ್ ಸರ್ಕಾರದ ಮುಂದಿಟ್ಟಿದೆ. ಈ ವಿಚಾರದ ನಿರ್ಧಾರವನ್ನು ಸಂಸತ್ತಿಗೆ ಬಿಡಬಹುದು ಎನ್ನುವ ಸಲಹೆಯೂ ಇದೆ. ಕೋರ್ಟಿನ ಗೌರವ ಉಳಿಸಬೇಕೆಂಬ ಹಟಕ್ಕೆ ಸುಪ್ರೀಂ ಕೋರ್ಟ್ ಬಿದ್ದರೆ ಪ್ರಧಾನಿ ಗಿಲಾನಿ ಅವರನ್ನು ಅನರ್ಹಗೊಳಿಸಲು ಮತ್ತು ಜರ್ದಾರಿ ವಿರುದ್ಧ ಮೊಕದ್ದಮೆ ಹೂಡಲು ಆದೇಶ ನೀಡಬಹುದು.
ಅ ಮೂಲಕ ಅವರಿಬ್ಬರೂ ರಾಜೀನಾಮೆ ನೀಡುವಂತೆ ಮಾಡಬಹುದು. ತನ್ನ ಆದೇಶದ ಜಾರಿ ಜವಾಬ್ದಾರಿಯನ್ನು ಮಿಲಿಟರಿಗೆ ವಹಿಸಬಹುದು. ಈ ಅವಕಾಶವನ್ನು ಮಿಲಿಟರಿ ನಿರಾಕರಿಸುವ ಸಾಧ್ಯತೆ ಇಲ್ಲ. ಅಧಿಕಾರ ವಹಿಸಿಕೊಂಡದ್ದಕ್ಕೆ ಉತ್ತಮ ಸಮರ್ಥನೆ ಮಿಲಿಟರಿಗೆ ಸಿಕ್ಕಂತಾಗುತ್ತದೆ. ಆದರೆ ಸುಪ್ರೀಂ ಕೋರ್ಟ್ ತನ್ನ ತೀರ್ಪು ಜಾರಿಗಾಗಿ ಪ್ರಜಾತಂತ್ರ ವ್ಯವಸ್ಥೆಯನ್ನು ಬಲಿಕೊಡುತ್ತದೆ ಎಂದು ಅನಿಸುವುದಿಲ್ಲ. ಬಹುಶಃ ಸರ್ಕಾರ ರಾಜೀನಾಮೆ ನೀಡಿ ಹೊಸದಾಗಿ ಚುನಾವಣೆ ಘೋಷಿಸುವಂತಹ ಸನ್ನಿವೇಶ ನಿರ್ಮಾಣ ಮಾಡಬಹುದು.

 ಸರ್ಕಾರ ಮತ್ತು ಮಿಲಿಟರಿಯನ್ನು ಸಂಘರ್ಷದ ಅಂಚಿಗೆ ತಂದಿರುವ ಇನ್ನೊಂದು ಪ್ರಕರಣ ಮೆಮೋಗೇಟ್. ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕದ ವಿಶೇಷ ನೌಕಾಪಡೆಗಳು ರಹಸ್ಯವಾಗಿ ಪಾಕಿಸ್ತಾನದಲ್ಲಿಯೇ ಹತ್ಯೆಮಾಡಿದ ನಂತರ ಸರ್ಕಾರ ಉರುಳುವಂತಹ ವಾತಾವರಣ ನಿರ್ಮಾಣವಾಗಿತ್ತು. ಈ ಸನ್ನಿವೇಶ ಬಳಸಿಕೊಂಡು ಮಿಲಿಟರಿ ಅಧಿಕಾರ ಕಬಳಿಸಬಹುದಾದ ಸಾಧ್ಯತೆಗಳು ಕಾಣಲು ಆರಂಭಿಸಿದವು.
 
ಈ ಸಂದರ್ಭದಲ್ಲಿ ಮಿಲಿಟರಿ ಹಸ್ತಕ್ಷೇಪ ತಡೆಯಲು ಅಧ್ಯಕ್ಷ ಜರ್ದಾರಿ ಅವರು ಅಮೆರಿಕ ಸೇನೆಯ ಅಂದಿನ ಮುಖ್ಯಸ್ಥ ಮೈಕ್ ಮುಲನ್ ಅವರ ನೆರವು ಕೋರಿ ಪತ್ರವೊಂದನ್ನು ಕಳುಹಿಸಿದರೆಂಬ ಆರೋಪವೇ ಮೆಮೊ ಗೇಟ್. ಈ ಪತ್ರವನ್ನು ಸಿದ್ಧ ಮಾಡಿದವರು ಅಮೆರಿಕದಲ್ಲಿ ಅಂದಿನ ಪಾಕ್ ರಾಯಭಾರಿಯಾಗಿದ್ದ ಹುಸೇನ್ ಹಕ್ಕಾನಿ. ಅಮೆರಿಕ-ಪಾಕಿಸ್ತಾನದ ಉದ್ಯಮಿ ಮನ್ಸೂರ್ ಇಜಾಜ್ ಮೂಲಕ ಆ ಪತ್ರವನ್ನು ಮುಲನ್‌ಗೆ ತಲುಪಿಸಲಾಯಿತು ಎಂಬುದು ಆರೋಪ. ಅದು ಖಾಸಗಿ ಪತ್ರವಾಗಿತ್ತು. ಪಾಕಿಸ್ತಾನ ಸರ್ಕಾರದ  ಲೆಟರ್ ಹೆಡ್‌ನಲ್ಲಿ ಪತ್ರ ಬರೆದಿರಲಿಲ್ಲ. ಪತ್ರಕ್ಕೆ ಜರ್ದಾರಿ ಸಹಿ ಇರಲಿಲ್ಲ.
 
ಆದರೆ ಇಜಾಜ್ ಅವರೇ ಈ ಪತ್ರ ವ್ಯವಹಾರದ ಬಗ್ಗೆ `ಫೈನಾನ್ಷಿಯಲ್ ಟೈಮ್ಸ~ನಲ್ಲಿ ಲೇಖನ ಬರೆದಿದ್ದಾರೆ. ಪತ್ರ ತಲುಪಿಸುವ ಮೊದಲು ಅದು ಜರ್ದಾರಿ ಅವರ ಮನವಿಯೇ ಎಂಬುದನ್ನು ರಾಯಭಾರಿ ಮೂಲಕ ಖಚಿತಪಡಿಸಿಕೊಳ್ಳಲಾಗಿದೆ ಎಂದೂ ತಿಳಿಸಿದ್ದಾರೆ.
 
ಈ ಮೆಮೊ ಗೇಟ್‌ನಿಂದಾಗಿ ಪಾಕಿಸ್ತಾನದ  ಸೇನಾ ಮುಖ್ಯಸ್ಥ ಅಸ್ಫಾಕ್ ಪರ್ವೇಜ್ ಕಯಾನಿ ಮತ್ತು ಐಎಸ್‌ಐ ಮುಖ್ಯಸ್ಥ ಅಹಮದ್ ಶೂಜಾ ಪಾಶಾ ಕುಪಿತಗೊಂಡಿದ್ದಾರೆ. ಸರ್ಕಾರ ಮಿಲಿಟರಿ ಗೌರವಕ್ಕೆ ಕುಂದು ತಂದಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಮಾಡಿದ್ದಾರೆ.

ಸರ್ಕಾರ ಅಂಥ ಪತ್ರ ವ್ಯವಹಾರ ಸಾಧ್ಯತೆಯನ್ನು ನಿರಾಕರಿಸಿದೆ. ವಿರೋಧ ಪಕ್ಷಗಳ ಒತ್ತಾಯದ ಮೇರೆಗೆ ತನಿಖೆ ನಡೆಸುವುದಾಗಿ ಹೇಳಿದೆ. ಸರ್ಕಾರದ ತನಿಖೆಗೆ ಕಾಯದೆ ಮಿಲಿಟರಿ ಸ್ವತಂತ್ರವಾಗಿ ತನಿಖೆ ನಡೆಸುತ್ತಿದೆ. ಅಂಥ ಒಂದು ಪತ್ರ ವ್ಯವಹಾರ ನಡೆದಿದೆ ಎಂದು ಮಿಲಿಟರಿ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಮಧ್ಯೆ ನವಾಜ್ ಷರೀಫ್ ಅವರು ಈ ಹಗರಣದ ತನಿಖೆಗೆ ಆದೇಶಿಸಬೇಕೆಂದು ಕೋರಿ ಸುಪ್ರೀಂ ಕೋರ್ಟಿನಲ್ಲಿ ಮನವಿ ಸಲ್ಲಿಸಿದ್ದಾರೆ.

 ಈ ಕುರಿತಂತೆ ಸುಪ್ರೀಂ ಕೋರ್ಟ್ ಅಧ್ಯಕ್ಷ ಜರ್ದಾರಿ, ಸರ್ಕಾರ, ಮಿಲಿಟರಿ ಅಧಿಕಾರಿಗಳ ಅಭಿಪ್ರಾಯ ಕೇಳಿತ್ತು. ಸರ್ಕಾರ   ತನಿಖೆಯನ್ನು ಸಂಸತ್ತಿನ ಸಮಿತಿಯೊಂದಕ್ಕೆ ವಹಿಸುವ ಒಲವು ತೋರಿತ್ತು ಮತ್ತು ನ್ಯಾಯಾಂಗ ತನಿಖೆಯನ್ನು ವಿರೋಧಿಸಿತ್ತು. ಮಿಲಿಟರಿ ಅಧಿಕಾರಿಗಳು ನ್ಯಾಯಾಂಗ ತನಿಖೆ ನಡೆಸಬೇಕೆಂಬ ಸಲಹೆ ನೀಡಿದ್ದರು.
 
ಸರ್ಕಾರದ ರಕ್ಷಣಾ ಕಾರ್ಯದರ್ಶಿ (ಮಿಲಿಟರಿ ನೇಮಿಸಿದ್ದ) ಮೂಲಕ ನ್ಯಾಯಾಲಯಕ್ಕೆ ಅಭಿಪ್ರಾಯ ತಿಳಿಸಲಾಗಿತ್ತು. ತನ್ನ ಗಮನಕ್ಕೆ ತರದೆ ಸುಪ್ರೀಂ  ಕೋರ್ಟ್‌ಗೆ ಮಿಲಿಟರಿ ಅಧಿಕಾರಿಗಳು ಅಭಿಪ್ರಾಯ ತಿಳಿಸಿದ್ದು ನೀತಿ ನಿಯಮಗಳಿಗೆ ವಿರುದ್ಧ ಎಂದು ಸರ್ಕಾರ ರಕ್ಷಣಾ ಕಾರ್ಯದರ್ಶಿಯನ್ನು ವಜಾ ಮಾಡಿತು. ಅವರು ಕಯಾನಿಗೆ ಆಪ್ತರೂ ಆಗಿದ್ದುದರಿಂದ ಪ್ರಕರಣ ಈಗ ಪ್ರತಿಷ್ಠೆ ಪ್ರಶ್ನೆಯಾಗಿ ಸಂಘರ್ಷ ಸಿಡಿದಿದೆ. 

 ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿನಿಂದ ನಲುಗಿದೆ. ಸುನ್ನಿ-ಶಿಯಾ ಕಲಹ, ಭಯೋತ್ಪಾದನೆಯಿಂದಾಗಿ ದೇಶದಲ್ಲಿ ರಕ್ತದ ಕೋಡಿಯೇ ಹರಿಯುತ್ತಿದೆ. ಅಭಿವೃದ್ಧಿ ಕಡೆಗೆ ಸರ್ಕಾರ ಗಮನ ಕೊಡಲು ಸಮಯವಿಲ್ಲ. ಮತದಾರರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ.
 
ನ್ಯಾಯಾಂಗ, ಮಿಲಿಟರಿ ಮತ್ತು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ನಿಂತಿದ್ದಾರೆ. ಸರ್ಕಾರ ಏಕಾಂಗಿಯಾಗಿದೆ. ಸಂಘರ್ಷ ಮುಂದುವರಿಸಿದರೆ ದೇಶದಲ್ಲಿ ಅರಾಜಕ ಪರಿಸ್ಥಿತಿ ನಿರ್ಮಾಣವಾಗಬಹುದು. ಬಿಕ್ಕಟ್ಟಿನಿಂದ ಹೊರಬರಲು ಸರ್ಕಾರಕ್ಕೆ ಇರುವ ಒಂದೇ ದಾರಿ ಹೊಸದಾಗಿ ಚುನಾವಣೆ ಘೋಷಿಸುವುದಾಗಿದೆ. ಸರ್ಕಾರ ಈ ದಾರಿ ತುಳಿಯುವುದೇ ಅಥವಾ ಮಿಲಿಟರಿ ಅಧಿಕಾರ ಕಬಳಿಸಲು ದಾರಿ ಮಾಡಿಕೊಡುವುದೇ ಎಂಬುದನ್ನು ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT