ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಶ್ರ ಬೆಳೆಗಳ ಸಮ್ಮಿಲನ

ಅಮೃತ ಭೂಮಿ 41
Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಇವರ ಹೊಲದಲ್ಲಿ ಜವಾರಿ ಜೋಳ, ಕಬ್ಬು ನಲಿದಾಡುತ್ತಿವೆ. ಇವುಗಳ ನಡುವೆ ಸೋಯಾಬೀನ್, ಹೆಸರು, ಅಲಸಂದೆ, ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ, ಮೆಣಸು ಸೇರಿದಂತೆ ಇನ್ನೂ ಹಲವು ಬೆಳೆಗಳು ಸಂತಸದಿಂದ ಬೀಗುತ್ತಿವೆ. ಬಾಳೆಹಣ್ಣು ಗೊನೆದುಂಬಿ ಬಾಗಿ ನಿಂತಿವೆ. ಇವೆಲ್ಲವುಗಳ ವಿಶೇಷವೆಂದರೆ ಎಲ್ಲವೂ ನೈಸರ್ಗಿಕ.

ಇಂಥದ್ದೊಂದು ನೈಸರ್ಗಿಕ ಬೆಳೆಗಳ ಮಹಾಪೂರ ಕಂಡುಬರುವುದು ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಎಲಿಮುನ್ನೋಳಿಯ ತಾತ್ಯಾಗೌಡ ಜಿನಗೌಡ ಮಲಗೌಡನವರ ಮತ್ತು ಕಲಗೌಡ ಶಂಕರಗೌಡ ಪಾಟೀಲ ಅವರ ಹೊಲದಲ್ಲಿ. ಎರಡು ದಶಕಗಳಿಂದ ನೈಸರ್ಗಿಕ ಕೃಷಿ ಮಾಡುತ್ತ ಭೂಮಿಯ ಸತ್ವವನ್ನು ಉಳಿಸುವುದರ ಜೊತೆಗೆ ನಿಸರ್ಗದತ್ತ ಬೆಳೆಗಳನ್ನು ಕೊಡುತ್ತ ಬಂದಿದ್ದಾರೆ ಈ ಇಬ್ಬರು ರೈತರು.

ವಿಜ್ಞಾನದಲ್ಲಿ ಪದವಿ ಮುಗಿಸಿದ ತಾತ್ಯಾಗೌಡ ಅವರು ಮೊದಲು ಎಲ್ಲರಂತೆ ರಾಸಾಯನಿಕ ಕೃಷಿಯತ್ತ ಮುಖ ಮಾಡಿದರು. ಎಷ್ಟೇ ದುಡಿದರೂ ಹಣ ಖರ್ಚಾಯಿತೇ ವಿನಾ ಕೃಷಿ ಉತ್ಪನ್ನ ಕಡಿಮೆಯಾಗತೊಡಗಿತು. ನಂತರ ನೈಸರ್ಗಿಕ ಕೃಷಿಯನ್ನು ಆರಿಸಿಕೊಂಡು ಇದರಲ್ಲಿಯೇ ಮುಂದುವರಿದರು. ತಾವು ಬೆಳೆದ ಬೆಳೆಯ ಜವಾರಿ ಜೋಳದ ಬೀಜಗಳನ್ನೇ ಬಳಸಿಕೊಳ್ಳುವ ಮೂಲಕ ಬಂಡವಾಳವನ್ನು ಶೂನ್ಯಕ್ಕೆ ತಂದಿದ್ದಾರೆ. `ನನ್ನ ಹೊಲದಲ್ಲಿ ದುಡಿಯುವುದಷ್ಟೇ ನನ್ನ ಬಂಡವಾಳ. ಇದನ್ನು ಬಿಟ್ಟರೆ ಬೇರೆ ಬಂಡವಾಳ ಇಲ್ಲ' ಎನ್ನುತ್ತಾರೆ ಹೆಮ್ಮೆಯಿಂದ.

ಮಿಶ್ರ ಬೆಳೆಗಳ ನೋಟ
ತಮ್ಮ ಹೊಲದಲ್ಲಿ ಜವಾರಿ ಜೋಳ, ಕಬ್ಬು ಅಥವಾ ಬೇರೆ ಯಾವುದೇ ಬೆಳೆ ಬೆಳೆದರೂ ಎರಡು ಸಾಲಿನ ಅಂತರದ ನಡುವೆ ಉಪಬೆಳೆಗಳಾದ ಸೋಯಾಬೀನ್, ಹೆಸರು, ಟೊಮೆಟೊ ಮತ್ತಿತರ ಅಲ್ಪಾವಧಿಯ ಬೆಳೆ ಬೆಳೆಯುತ್ತಾರೆ. ಮುಖ್ಯ ಬೆಳೆಯ ಆದಾಯದ ಜೊತೆಗೆ ಹೆಚ್ಚುವರಿ ಆದಾಯ ಪಡೆಯಲಾಗುವುದು ಎನ್ನುವುದು ಕಲಗೌಡರ ಅನಿಸಿಕೆ. ಕಬ್ಬಿನ ನಡುವೆ ಬಾಳೆ ಇವರ ವಿಶೇಷ.

ಬಾಳೆಯನ್ನು 10 ಅಡಿ ಅಂತರದಲ್ಲಿ ಮತ್ತು ಕಬ್ಬನ್ನು 4 ಅಡಿ ಅಂತರದಲ್ಲಿ ಬೆಳೆಯುವ ಅವರು, ಬಾಳೆ ಚಿಕ್ಕದಿದ್ದಾಗ ಸೆಣಬು, ಚೆಂಡುಹೂವು, ಅಲಸಂದೆ, ಮೆಣಸು ಮುಂತಾದುವುಗಳನ್ನು ಬೆಳೆದು ಅದರಲ್ಲೂ ಲಾಭ ಗಳಿಸುತ್ತಾರೆ.

ಬೀಜಗಳಿಗೆ ರೋಗ ಬರದಂತೆ ಗೋಮೂತ್ರ, ಸಗಣಿ ಮತ್ತು ಸುಣ್ಣ ಸೇರಿಸಿ ಲೇಪಿಸುತ್ತಾರೆ. ಏಕದಳ ಬೆಳೆಯ ಬೀಜವಿದ್ದರೆ ಒಂದು ಗಂಟೆ ಇವುಗಳಲ್ಲಿ ನೆನೆಸಿಡುತ್ತಾರೆ. ದ್ವಿದಳವಿದ್ದರೆ ಬೀಜ ಒಡೆಯುವ ಸಾಧ್ಯತೆ ಇರುವ ಕಾರಣ ಮಿಶ್ರಣದಲ್ಲಿ ಬೇಗನೆ ಅದ್ದಿ ತೆಗೆಯುತ್ತಾರೆ. ಹೀಗೆ ಮಾಡಿದರೆ ಬೀಜಗಳಿಗೆ ಯಾವುದೇ ರೋಗ ಬರುವುದಿಲ್ಲ ಮತ್ತು ಸುಣ್ಣದ ಅಂಶದ ಲೇಪನದಿಂದ ಬೀಜಕ್ಕೆ ಬರ ತಡೆಯುವ ಶಕ್ತಿ ಇರುವುದು ಎನ್ನುವುದು ತಾತ್ಯಾಗೌಡರ ಅಭಿಪ್ರಾಯ.

ಮಾರಾಟ ಸುಲಭ
ನೈಸರ್ಗಿಕವಾಗಿ ಬೆಳೆದ ಬಾಳೆಯನ್ನು ತೂಕದಂತೆ ಕೊಡದೆ ಗೊನೆಯಲ್ಲಿನ ಸಂಖ್ಯೆ ಆಧರಿಸಿ ಮಾರಾಟ ಮಾಡುತ್ತಾರೆ. ಒಂದು ಎಕರೆಗೆ ಸರಾಸರಿ ವಾರ್ಷಿಕ 1.40 ಲಕ್ಷ ರೂಪಾಯಿ ವರಮಾನ ಪಡೆಯುತ್ತಾರೆ. ಬಾಳೆಗೆ ಯಾವ ಗೊಬ್ಬರವನ್ನೂ ಹಾಕುವುದಿಲ್ಲ. ನಿರುಪಯುಕ್ತ ಎಲೆ, ಹಸಿರು ತಪ್ಪಲು, ರಾಶಿ ಚಟ್ಟ ಗೊಬ್ಬರವಾಗಿ ಬಳಸುವುದರಿಂದ ಭೂಮಿಯ ಸತ್ವವೂ ಹೆಚ್ಚುತ್ತದೆ ಎನ್ನುತ್ತಾರೆ ಈ ರೈತರು.

ಇವರು ಬೀಜ ಬಿತ್ತುವ ಪದ್ಧತಿಯೂ ವಿಶೇಷವೇ. ಹಿಂದಿನ ಕಾಲದಲ್ಲಿ ಜನಪ್ರಿಯವಾಗಿರುವ ಗಾದೆ ಮಾತಿನಂತೆ ಇವರ ಉಳುಮೆ. ಕಪ್ಪೆಯ ಕುಪ್ಪಳಿಕೆಯಷ್ಟು (ಜಿಗಿತದ ಅಂತರ) ಜೋಳ, ಜಿಂಕೆ ಜಿಗಿದಷ್ಟು ಸವತೆ, ಹೆಜ್ಜೆಯ ಗುರುತಿನಷ್ಟು ಹತ್ತಿ, ತೆಂಗು ಬಿದ್ದಂಗ ಹಚ್ಚುವುದು ಮತ್ತು ಬಗ್ಗಿ ಬಾಳೆ ಹಚ್ಚು ಹೀಗೆ ಇವರು ಬೆಳೆ ಬೆಳೆಯುತ್ತಾರೆ.

`ಹವಾಮಾನದ ವೈಪರೀತ್ಯದಿಂದ ಬೆಳೆಗೆ ರೋಗ ಬರುವ ಸಾಧ್ಯತೆ ಇದೆ. ಇದನ್ನು ತಡೆಯಲು ಮತ್ತು ಇಳುವರಿ ಹೆಚ್ಚಾಗಲು ಶೇಂಗಾ ಹಿಂಡಿ, ಹುಲಗಲ ಮತ್ತು ಬೇವಿನ ಎಣ್ಣೆ ಮಿಶ್ರಣ ಮಾಡಿ ಅದರ ಮೇಲಿನ ತಿಳಿನೀರನ್ನು (20 ಲೀ.ನೀರಿಗೆ ಆರು ಕೆ.ಜಿಯ ಮಿಶ್ರಣ) ಬೆಳೆಗೆ ಸಿಂಪಡಿಸಬೇಕು. ಇದು ಬೆಳೆಗೆ ಟಾನಿಕ್ ಕೊಟ್ಟಂತೆ. ಗೋಮೂತ್ರ ಸಿಂಪಡಿಸುವುದರಿಂದಲೂ ಬೆಳೆಗಳಿಗೆ ರೋಗ ತಡೆಗಟ್ಟಬಹುದು' ಎನ್ನುತ್ತಾರೆ ಇವರು.

`ರಾಸಾಯನಿಕ ಗೊಬ್ಬರದ ಬಳಕೆ ಮೂಲಕ ಇಳುವರಿ ಹೆಚ್ಚಿಸಿ ಎಂದು ಕೃಷಿ ಇಲಾಖೆ ಹೇಳುತ್ತಿರುವುದು ಬಹಳ ಶೋಚನೀಯ. ಇದರಿಂದಾಗಿಯೇ ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆಯಾಗಿ ರೈತರು ಚಿಂತೆಗೀಡಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ' ಎನ್ನುತ್ತಾರೆ ಇವರು. ಮಾಹಿತಿಗೆ 9972159805.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT