ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಶ್ರ ಮಾಧುರ್ಯದ ಜ್ಯೋತ್ಸ್ನಾ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಆಗ್ನೇಯ ಬ್ರಿಟನ್‌ನ ಕಡಲ ತಡಿಯ ಸಣ್ಣ ಊರು. ಅಟ್ಲಾಂಟಿಕ್ ಸಾಗರದ ಅಲೆಗಳು ಗೋಡೆಗೆ ಅಪ್ಪಳಿಸುವ ಪುಟ್ಟ ಸಭಾಂಗಣ. ಅಲ್ಲಿ ಸಂಗೀತಗಾರ್ತಿಯೊಬ್ಬಳು ಪಿಟೀಲು ನುಡಿಸುತ್ತಿದ್ದಳು. ಆ ಮಹಾಸಾಗರದ ಅಲೆಯ ಅಬ್ಬರ ಮೀರಿಸುವಂತೆ ಪಿಟೀಲಿನ ತಂತಿಯಿಂದ ಮಾಧುರ್ಯದ ಅಲೆ. ಸಭಿಕರ ಉಸಿರಿನ ಹೊರತಾಗಿ ಇಡೀ ಸಭಾಂಗಣದಲ್ಲಿ ದಿವ್ಯ ಮೌನ. ಮೂರು ಗಂಟೆಗಳ ಬಳಿಕ ಆ ಸಂಗೀತಗಾರ್ತಿ ಪಿಟೀಲು ಕೆಳಗಿಟ್ಟಾಗ ಮುಗಿಯದ ಕರತಾಡನ.

ಅದು ಬ್ರಿಟನ್‌ನ ಕಾರ್ನ್‌ವಾಲ್‌ನಲ್ಲಿ ನಡೆದ ಸಂಗೀತ ಕಛೇರಿ. ಪಿಟೀಲು ನುಡಿಸಿದ ಸಂಗೀತಗಾರ್ತಿ ಲಂಡನ್‌ನಲ್ಲಿ ನೆಲೆಸಿರುವ ಕನ್ನಡತಿ ಜ್ಯೋತ್ಸ್ನಾ ಶ್ರೀಕಾಂತ್. ನಮ್ಮ ಬೆಂಗಳೂರಿನ ನೆಲದಲ್ಲೇ ಆಡಿ ಬೆಳೆದ ಜ್ಯೋತ್ಸ್ನಾ ಬಾಲ ಪ್ರತಿಭೆ. ಈಗ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಪಿಟೀಲು ವಾದಕಿ. ದೇಶ, ವಿದೇಶಗಳ ಪ್ರತಿಷ್ಠಿತ ಸಭಾಂಗಣಗಳಲ್ಲಿ ಅವರ ಸಂಗೀತ ಕಛೇರಿ ನಡೆಯುತ್ತದೆ.

ಎಲ್ಲ ಸಂಗೀತಗಾರರಂತೆ ಆಗಿದ್ದರೆ ಜ್ಯೋತ್ಸ್ನಾ ಹತ್ತರಲ್ಲಿ ಹನ್ನೊಂದು ಪ್ರತಿಭಾವಂತ ಪಿಟೀಲು ವಾದಕರಲ್ಲಿ ಒಬ್ಬರಾಗಿರುತ್ತಿದ್ದರೇನೋ. ಅವರ ಸಾಧನೆ ಇನ್ನೂ ಮಹತ್ತರ. ನಮ್ಮ ದಕ್ಷಿಣಾದಿ ಸಂಗೀತವನ್ನು ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತದೊಂದಿಗೆ ಮಿಶ್ರ ಮಾಡಿ `ಫ್ಯೂಷನ್ ಸಂಗೀತ~ಕ್ಕೆ ಹೊಸ ಕೊಡುಗೆ ನೀಡಿದವರು ಅವರು.

ತಮ್ಮ `ಫ್ಯೂಷನ್ ಡ್ರೀಮ್ಸ~ ತಂಡದ ಮೂಲಕ ಕರ್ನಾಟಕ ಸಂಗೀತದ ಎಲ್ಲೆಯನ್ನು ಮತ್ತಷ್ಟು ವಿಸ್ತರಿಸಿದವರು. ಭಾರತದ ಶಾಸ್ತ್ರೀಯ ಸಂಗೀತ ಪ್ರಕಾರವೊಂದು ಪಾಶ್ಚಿಮಾತ್ಯ ಸಂಗೀತದ ಜತೆ ಹಾಲು ಸಕ್ಕರೆಯಂದದಿ ಬೆರೆಯಬಲ್ಲದು ಎಂದು ತೋರಿಸಿಕೊಟ್ಟವರು. 
ಜ್ಯೋತ್ಸ್ನಾ `ಫ್ಯೂಷನ್ ಸಂಗೀತ~ ಕಛೇರಿಗೆ ಬಂದವರೆಲ್ಲ ಮತ್ಯಾವಾಗ ಅವರು ಬರುತ್ತಾರೆ ಎಂದು ಕೇಳಲು ಮರೆಯುವುದಿಲ್ಲ.

ಇಂತಹ ಜ್ಯೋತ್ಸ್ನಾಗೆ ಸಂಗೀತ ಒಲಿದಿದ್ದು ಆಕಸ್ಮಿಕವಲ್ಲ. ಗಾಯಕಿಯಾಗಿದ್ದ ಅಮ್ಮ ರತ್ನ ಶ್ರೀಕಂಠಯ್ಯ ಅವರಿಂದ ಜೀನ್ಸ್ ಮೂಲಕ ಅದು ಬಂದಿತ್ತು. ನಾಲ್ಕು ವರ್ಷದವರಿದ್ದಾಗಲೇ ಪುಟ್ಟ ಕಂಠದಲ್ಲಿ ಹಾಡಲು ಆರಂಭಿಸಿದ್ದರು. ಐದು ವರ್ಷದವರಿದ್ದಾಗ ಕುನ್ನುಕುಡಿ ವೈದ್ಯನಾಥನ್ ಅವರ ಕಛೇರಿಯಿಂದ ಮರಳಿದ ಅವರು ಪೊರಕೆ ಕಡ್ಡಿ ಸೆಳೆದುಕೊಂಡು ಪಿಟೀಲಿನ ತಂತಿಯಂತೆ ಮೀಟಲು ಆರಂಭಿಸಿದ್ದರು. ನಂತರ ಪಿಟೀಲಿನತ್ತಲೇ ಅವರ ಚಿತ್ತ ಹರಿಯಿತು. ಒಂಬತ್ತು ವರ್ಷದವರಿದ್ದಾಗ ಮೊದಲ ಕಛೇರಿ. ಹದಿಹರೆಯದಲ್ಲೇ ಬಾಲಮುರಳಿ ಕೃಷ್ಣ ಅವರಂತಹ ಮೇರು ಗಾಯಕರಿಗೂ ಸಾಥ್ ನೀಡಿದ ಹೆಗ್ಗಳಿಕೆ.

ಪಿಯುಸಿಯಲ್ಲಿ ಏಳನೇ ರ‌್ಯಾಂಕ್ ಗಳಿಸಿದ್ದ ಜ್ಯೋತ್ಸ್ನಾ ನಂತರ ಬೆಂಗಳೂರು ಮೆಡಿಕಲ್ ಕಾಲೇಜು ಸೇರಿದರು. ಪೆಥಾಲಜಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಸಂಗೀತದ ತಾಲೀಮಿನ ಜತೆ ಮೆಡಿಸಿನ್ ಪ್ರಾಕ್ಟೀಸ್ ಸಹ ನಡೆಯುತ್ತಿತ್ತು. ಸಂಗೀತ ಪ್ರೇಮಿಯಾಗಿದ್ದ ಸಾಫ್ಟವೇರ್ ಎಂಜಿನಿಯರ್ ಶ್ರೀಕಾಂತ್ ಅವರನ್ನು ವರಿಸಿದ ಮೇಲೆ ಸಂಗೀತದ ಸಾಧನೆಗೆ ಮತ್ತಷ್ಟು ಬಲ ಬಂತು. ಸಂಗೀತ ಪ್ರೇಮದಿಂದಾಗಿ ಭಾರತದಿಂದ ಹೊರಗೆ ಹೋಗುವುದೇ ಇಲ್ಲ ಎಂದು ವಿದೇಶದಲ್ಲಿ ನೆಲೆಸಿದ್ದ ಗಂಡುಗಳನ್ನು ತಿರಸ್ಕರಿಸಿದ್ದ ಜ್ಯೋತ್ಸ್ನಾರನ್ನು ವಿಧಿ ಲಂಡನ್‌ನತ್ತ ಸೆಳೆದಿತ್ತು. ಪತಿ ಕಾರ್ಯನಿಮಿತ್ತ ಲಂಡನ್‌ಗೆ ಹೋದಾಗ ಅನಿವಾರ್ಯವಾಗಿ ಅಲ್ಲಿಗೆ ಹೋದರು. ಅದು ಅವರ ಕರ್ಮಭೂಮಿಯಾಯಿತು.

ಎಲ್ಲ ಕಲಾ ಪ್ರಕಾರಗಳಿಗೆ, ಸೃಜನಶೀಲರಿಗೆ ಪ್ರೋತ್ಸಾಹ ನೀಡುವ ಲಂಡನ್ ಜ್ಯೋತ್ಸ್ನಾ ಸಂಗೀತದ ಹರಿವು ಬದಲಿಸಿತು. ಜಾಜ್ ಜತೆ ತಮ್ಮ ಕರ್ನಾಟಕ ಪಿಟೀಲು ವಾದನದ ಸವಿ ಬೆರೆಸಿದರು. ವಿದೇಶಿ ವಾದ್ಯ ಸಂಗೀತಗಾರರನ್ನು ಒಳಗೊಂಡ  `ಫ್ಯೂಷನ್ ಡ್ರೀಮ್ಸ~ ತಂಡ ಕಟ್ಟಿದರು. ಬ್ರಿಟನ್‌ನ ಪುಟ್ಟ ಪಟ್ಟಣಗಳಲ್ಲೂ ಜ್ಯೋತ್ಸ್ನಾ ಕಛೇರಿ ಜನಪ್ರಿಯವಾಗತೊಡಗಿತು. ಭಾರತ ಸೇರಿದಂತೆ ಹಲವು ದೇಶಗಳಿಂದ ಕಾರ್ಯಕ್ರಮಕ್ಕೆ ಕರೆ ಬರತೊಡಗಿತು. 

ಸ್ಪರ್ಶ ಸಂಗೀತ
ಅಂದ ಹಾಗೆ ಈಗ ಜ್ಯೋತ್ಸ್ನಾ ಬೆಂಗಳೂರಿಗೆ ಬಂದಿದ್ದಾರೆ. ಈ ಶನಿವಾರ `ಫ್ಯೂಷನ್ ಮ್ಯೂಸಿಕ್~ ಸವಿಯನ್ನು ನಗರದ ಸಂಗೀತ ಪ್ರಿಯರಿಗೆ ಉಣಿಸಲಿದ್ದಾರೆ. ಕರ್ನಾಟಕ ಸಂಗೀತದ ದಿಗ್ಗಜ ಪದ್ಮ ವಿಭೂಷಣ ಡಾ. ಎಂ. ಬಾಲಮುರಳಿಕೃಷ್ಣ ಜ್ಯೋತ್ಸ್ನಾ ಜತೆ ಗಾನಸುಧೆ ಹರಿಸಲಿದ್ದಾರೆ.

ಇಂತಹ ಅಪರೂಪದ ಸಂಗೀತ ಸಂಜೆ `ಸ್ಪರ್ಶ ಪ್ರತಿಷ್ಠಾನ~ದ `ಸ್ಪರ್ಶ ವಚನ~ ಕಾರ್ಯಕ್ರಮದ ಸಹಾಯಾರ್ಥ ನಡೆಯಲಿದೆ. ಮೂಳೆ ದೋಷ, ಎಲುಬಿನ ವಿಚಿತ್ರ ಬೆಳವಣಿಗೆಯಿಂದ ಕಷ್ಟ ಪಡುತ್ತಿರುವ ಬಡ ಕುಟುಂಬದ 200 ಮಕ್ಕಳಿಗೆ `ಸ್ಪರ್ಶ ವಚನ~ದ ಮೂಲಕ ಪ್ರತಿಷ್ಠಾನ ಉಚಿತ ಶಸ್ತ್ರಚಿಕಿತ್ಸೆ ನಡೆಸಲಿದೆ.

ಈ ಕುರಿತು `ಮೆಟ್ರೊ~ ಜತೆ ಮಾತನಾಡಿದ ಜ್ಯೋತ್ಸ್ನಾ, `ಫ್ಯೂಷನ್ ಮ್ಯೂಸಿಕ್ ಅಂದರೆ ಬಾಲಮುರಳಿ ಕೃಷ್ಣ ಮೂಗು ಮುರಿಯುತ್ತಿದ್ದರು. ಫ್ಯೂಷನ್ ಹೆಸರಿನಲ್ಲಿ ಸಂಗೀತದ ಪರಿಶುದ್ಧತೆ ಕೆಡಿಸುತ್ತಾರೆ ಎಂಬ ಆತಂಕ ಅವರಿಗೆ ಇದ್ದೇ ಇದೆ. ಆದರೆ, ನನ್ನ ಸಂಗೀತದ ರೆಕಾರ್ಡಿಂಗ್ ಮತ್ತು ಸ್ಪರ್ಶ ಪ್ರತಿಷ್ಠಾನದ ಉದಾತ್ತ ಉದ್ದೇಶ ಕೇಳಿದ ಮೇಲೆ ಮರುಮಾತಿಲ್ಲದೇ ಕಛೇರಿಗೆ ಒಪ್ಪಿಕೊಂಡರು~ ಎಂದರು.  

ಸಂಗೀತ ಜೀವನದ ಅನುಭವದ ಬಗ್ಗೆ ಕೇಳಿದಾಗ, `ಸಂಗೀತ ಆಸ್ವಾದನೆಯ ವಿಚಾರ ಬಂದಾಗ ಭಾರತದಲ್ಲಿ ಚೆನ್ನೈಗೆ ಮೊದಲ ಸ್ಥಾನ. ಆದರೆ, ಜಾಗತಿಕ ಮಟ್ಟದಲ್ಲಿ ಎಲ್ಲ ಕಲೆಗಳಿಗೂ ಲಂಡನ್ ಮಣೆ ಹಾಕುತ್ತದೆ. ಕರ್ನಾಟಕ ಸಂಗೀತದಿಂದ ಆರಂಭಿಸಿದ ನಾನು ಪಾಶ್ಚಿಮಾತ್ಯ ಜಾಜ್, ಜಾನಪದ, ಆಫ್ರಿಕಾ, ಅರೇಬಿಯಾ ಸಂಗೀತ ಪ್ರಕಾರಗಳಲ್ಲಿ ಪ್ರಯೋಗ ಮಾಡಿದ್ದೇನೆ. ಲಂಡನ್ ಸಂಗೀತ ಪ್ರೇಮಿಗಳು ಎಲ್ಲವನ್ನೂ ಸ್ವೀಕರಿಸಿದ್ದಾರೆ. ಬೆನ್ನು ತಟ್ಟಿದ್ದಾರೆ~ ಎಂದು ಹೆಮ್ಮೆಯಿಂದ ನುಡಿಯುತ್ತಾರೆ ಜ್ಯೋತ್ಸ್ನಾ.

ಫ್ಯೂಷನ್ ಡ್ರೀಮ್ಸ
ಸ್ಪರ್ಶ ಪ್ರತಿಷ್ಠಾನ:
ಶನಿವಾರ ಡಾ. ಎಂ. ಬಾಲಮುರಳಿ ಕೃಷ್ಣ ಅವರಿಂದ ಕರ್ನಾಟಕ ಸಂಗೀತ ಮತ್ತು  ಪಿಟೀಲು ವಾದಕಿ ಡಾ. ಜ್ಯೋತ್ಸ್ನಾ ಶ್ರೀಕಾಂತ್ ಅವರಿಂದ ಭಾರತೀಯ, ಪಾಶ್ಚಿಮಾತ್ಯ ಫ್ಯೂಷನ್ ವಯಲಿನ್. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ: 6.30
5000, 3000, 2000, 1000 ಮತ್ತು 500 ರೂಪಾಯಿಗಳ ದೇಣಿಗೆ ಪಾಸ್‌ಗಳನ್ನು ಹೊಸೂರು ರಸ್ತೆಯ ಸ್ಪರ್ಶ ಆಸ್ಪತ್ರೆ, ಇನ್‌ಫಂಟ್ರಿ ರಸ್ತೆಯ ಸ್ಪರ್ಶ ಆಸ್ಪತ್ರೆ, ಮಲ್ಲೇಶ್ವರದ ಅನನ್ಯ ಮತ್ತು ಗಾಯನ ಸಮಾಜದಲ್ಲಿ ಪಡೆಯಬಹುದು.

ಆನ್‌ಲೈನ್ ಟಿಕೆಟ್‌ಗಾಗಿ www.indianstage.in, www.buzzintown.comವಿವರಗಳಿಗೆ ಡಾ. ಚಂದ್ರಶೇಖರ್ ಅವರನ್ನು 99809 09853 ಮೂಲಕ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT