ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಸ್ಡ್ ಕಾಲ್ ವೈಭವಿ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ರಾತ್ರಿ ನಿದ್ರೆ ಬಾರದೆ ಮಗ್ಗುಲು ಬದಲಿಸುತ್ತಿದ್ದೆ. ಎದ್ದು ಕುಳಿತು  ಹೊತ್ತು ಕಳೆಯಲು ಟೀವಿ ಹಚ್ಚಿದೆ. ಅದ್ಯಾವಾಗ ನಿದ್ರೆ ಬಂತೋ ಗೊತ್ತಾಗಲಿಲ್ಲ. ಎದ್ದಾಗ ಬೆಳಿಗ್ಗೆ ಹತ್ತು ಗಂಟೆಯಾಗಿತ್ತು. ಮೊಬೈಲ್ ನೋಡಿದರೆ ಆರೇಳು ಮಿಸ್ಡ್ ಕಾಲ್‌ಗಳಿದ್ದವು. ಯಾವುದೊ ಲ್ಯಾಂಡ್ ಲೈನ್ ನಂಬರ್.

ಮುಖ ತೊಳೆದು ಮೊಬೈಲ್ ತಗೊಂಡು ತಿಂಡಿ ತಿನ್ನಲು ಕ್ಯಾಂಟೀನ್‌ಗೆ ಹೊರಟೆ . ದಾರಿ ಮಧ್ಯೆ ಮೆಸೇಜ್ ನೋಡುತ್ತಿದ್ದಾಗ ಸ್ನೇಹಾ ಎರಡು ಮೆಸೇಜ್ ಕಳುಹಿಸಿದ್ದಳು.

ಸ್ನೇಹಾ ನನ್ನ ಮಿಸ್ಡ್ ಕಾಲ್ ಫ್ರೆಂಡ್. ಯಾವುದೋ ನಂಬರಿಗೆ ಕಾಲ್ ಮಾಡಲು ಹೋಗಿ ನನಗೆ ಕಾಲ್ ಮಾಡಿದ್ದಳು. ಗೊತ್ತಿಲ್ಲದ ನಂಬರ್‌ಗಳಿಂದ ಬರುವ ಕಾಲ್‌ಗಳನ್ನು ನಾನು ಸ್ವೀಕರಿಸುವುದಿಲ್ಲ, ಇಂಥ ಕಾಲ್‌ಗಳು ನನ್ನ ಮೂಡ್ ಆಫ್ ಮಾಡಿದ ಅನೇಕ ಉದಾಹರಣೆಗಳಿವೆ.

ಒಮ್ಮಮ್ಮೆ ನಾನೇ ಇಂಥ ನಂಬರ್‌ಗಳಿಗೆ ಕಾಲ್ ಮಾಡಿ ವಿಚಾರಿಸುತ್ತೇನೆ. ಆಗ ಸಿಕ್ಕಿದವಳೇ ಈ ಸ್ನೇಹಾ. ಹೀಗೆ ಸಿಕ್ಕ ಕೆಲ ಗೆಳತಿಯರಿದ್ದಾರೆ. ಅಚಾನಕ್ ಆಗಿ ಮಾತನಾಡಲು ತೊಡಗಿ ಹತ್ತಿರವಾಗುತ್ತಿದ್ದ ಇವರು ಇದ್ದಕ್ಕಿದ್ದಂತೆಯೇ ನಂಬರ್ ಬದಲಾಯಿಸಿಕೊಂಡು ಅದೃಶ್ಯರಾಗುತ್ತಿದ್ದರು. ನಾನೂ ಸುಳ್ಳು ಹೆಸರಿನಲ್ಲೇ ಅವರ ಜೊತೆ ಮಾತನಾಡುತ್ತಿದ್ದರೆ, ಅವರೂ ನನ್ನಂತೆಯೇ ಇರಬೇಕೆಂದುಕೊಂಡು ನಾನು ಅದೃಶ್ಯರಾದವರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.

ನನ್ನ ತಲೆ ಕೆಟ್ಟು ಹೋಗುವಂತಾಗುತ್ತಿದ್ದುದು ಈ ಮಿಸ್ಡ್ ಕಾಲ್ ಗೆಳತಿಯರು ಬೇರೆ ನಂಬರಿಂದ ಕಾಲ್ ಅಥವಾ ಮೆಸೇಜ್ ಮಾಡಿದಾಗ. ಅವರ ಹಳೆಯ ನಂಬರ್ ಸೇವ್ ಮಾಡುವಾಗ ನಾನು ಹೇಳಿದ ಸುಳ್ಳು ಹೆಸರನ್ನೂ ಸೇವ್ ಮಾಡಿಟ್ಟಿರುತ್ತಿದೆ.
 
ಅವರು ಕಾಲ್ ಮಾಡಿದಾಗಲೇ ನನ್ನ ಹೆಸರೂ ನೆನಪಾಗುವಂತೆ ಈ ವ್ಯವಸ್ಥೆ. ಬೇರೆ ನಂಬರ್‌ನಿಂದ ಮಾಡಿದರೆ ಅವರ‌್ಯಾರು ಎಂದು ತಿಳಿಯದೆ ನನ್ನ ಯಾವ ಹೆಸರನ್ನು ಹೇಳಬೇಕೆಂದು ಗೊಂದಲಕ್ಕೆ ಒಳಗಾಗುತ್ತಿದ್ದೆ.

ಆದರೆ ತೊಂದರೆ ಆಗಿದ್ದು ಇವತ್ತು ಬೆಳಿಗ್ಗೆ ಬಂದ 6 ಮಿಸ್ಡ್ ಕಾಲ್‌ಗಳಿಂದ. ಯಾವ ಲ್ಯಾಂಡ್ ಲೈನ್ ನಂಬರ್ ಇರಬಹುದೆಂದು  ಕರೆ ಮಾಡಿದರೆ ಆ ಕಡೆಯಿಂದ ಮಾತಾಡಿದ್ದು ಒಬ್ಬ ಪೋಲಿಸ್ ಅಧಿಕಾರಿ. ನಾನು ಹೆಸರು ಹೇಳಿದಾಕ್ಷಣ `ಪೊಲೀಸ್ ಸ್ಟೇಷನ್‌ಗೆ ಬನ್ನಿ~ ಅಂದರು.

ನಾನು `ಯಾಕೆ? ನಾನೇನು ಮಾಡಿದೆ?~ ಅಂದೆ. ಅದಕ್ಕಾತ `ಸುಮ್ಮನೆ ಬರ್ತೀಯ ಒದ್ದು ಕರೆದುಕೊಂಡು ಬರಬೇಕಾ ?~ ಎಂದು ಗದರಿದ. ನನಗೆ ಬೇರೆ ಮಾರ್ಗ ಉಳಿದಿರಲಿಲ್ಲ.

ಸ್ಟೇಷನ್‌ನಲ್ಲಿ ಮಧ್ಯ ವಯಸ್ಸಿನ  ದಂಪತಿ ಮತ್ತು ಅವರ ಕಣ್ಣಿನಲ್ಲಿ ಕೆಂಡ ಕಾರುತ್ತಾ ನಿಂತ ಯುವಕನಿದ್ದ. ಇನ್ಸ್‌ಪೆಕ್ಟರ್  ಎದುರಿನ ಕುರ್ಚಿಯಲ್ಲಿ ನಾನು ಕುಳಿತೆ. ಇನ್ಸ್‌ಪೆಕ್ಟರ್ ನನ್ನ ಕಣ್ಣಲ್ಲಿ ಕಣ್ಣಿಟ್ಟು `ವೈಭವಿ ಎಲ್ಲಿ ?~ ಎಂದರು.

`ಯಾವ ವೈಭವಿ~ ಎಂಬುದು ನನ್ನ ಪ್ರಶ್ನೆಯಾಗಿತ್ತು. ಆತ ಒಂಬತ್ತು ಸೊನ್ನೆ ಒಂದು ಒಂಬತ್ತು ಒಂಬತ್ತು ಆರು ಒಂಬತ್ತು ಒಂಬತ್ತು ಒಂಬತ್ತು ಸೊನ್ನೆ ನಿಂದೆ ನಂಬರಲ್ವಾ ಅಂತ ಕೇಳಿದ ನಾನು ಹೌದು ಅಂದೇ ನನಗೆ ಎಲ್ಲ ಅರ್ಥವಾಯಿತು.

ವೈಭವಿಯ ಮೊಬೈಲ್‌ನಲ್ಲಿ ನನ್ನ ಆರು ಸಾವಿರ ಮೆಸೇಜ್‌ಗಳಿದ್ದವು. ವೈಭವಿ  ಕಾಣೆಯಾಗಿದ್ದಳು. ಮೊಬೈಲನ್ನು ಅವಳ ಅಣ್ಣ ಪೊಲೀಸರಿಗೆ ತಂದು ಒಪ್ಪಿಸಿದ್ದ.
ಇನ್ಸ್‌ಪೆಕ್ಟರ್ ಧ್ವನಿ ಗಡುಸಾಯಿತು. ನನ್ನ ಬಳಿ ಉತ್ತರವಿರಲಿಲ್ಲ.

ನಾನು ಹೇಳಿದ ಕತೆ ಅವರು ನಂಬಲಿಲ್ಲ ಮತ್ತೊಮ್ಮೆ `ವೈಭವಿ ಎಲ್ಲಿ~ ಎಂಬ ಪ್ರಶ್ನೆಗೆ `ಗೊತ್ತಿಲ್ಲ~ ಎಂದುತ್ತರಿಸಿದಾಗ ಇನ್ಸ್‌ಪೆಕ್ಟರ್ ಎದುರಿಗಿದ್ದ ನೀರನ್ನು ನನ್ನ ಮುಖಕ್ಕೆ ಎರಚಿದ. ಥಟ್ಟನೆ ಕಣ್ಣು ಬಿಟ್ಟೆ, ನನ್ನ ರೂಂ ಮೇಟ್ ಟೀವಿ ಹಚ್ಚಿಕೊಂಡೆ ಮಲಗಿದ್ಯಲ್ಲ. ಆಫೀಸಿಗೆ ಹೋಗಲ್ವಾ ಅಂದ. ಮೊಬೈಲ್ ನೋಡಿದರೆ ಮೂರು ಮಿಸ್ಡ್ ಕಾಲ್ ಅಲರ್ಟ್‌ಗಳಿದ್ದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT