ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಟರ್ ಅಳವಡಿಕೆಗೆ ಎಸ್.ಪಿ ಸೂಚನೆ

ಬೆಳಗಾವಿಯಲ್ಲಿ ರಸ್ತೆಗಿಳಿಯದ ಆಟೊರಿಕ್ಷಾ
Last Updated 3 ಆಗಸ್ಟ್ 2013, 6:53 IST
ಅಕ್ಷರ ಗಾತ್ರ

ಬೆಳಗಾವಿ: ಆಟೊ. ರಿಕ್ಷಾಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು ಎಂಬ ರಸ್ತೆ ಸಾರಿಗೆ ಪ್ರಾಧಿಕಾರ (ಆರ್‌ಟಿಎ) ಆದೇಶವನ್ನು ವಿರೋಧಿಸಿರುವ ಆಟೊರಿಕ್ಷಾ ಚಾಲಕರ ಮುಷ್ಕರ ಎರಡನೇ ದಿನವೂ ಮುಂದುವರಿದಿದ್ದು, ಶುಕ್ರವಾರ ನಗರದ ರಸ್ತೆಗಳಿಗೆ ಯಾವುದೇ ಆಟೊರಿಕ್ಷಾ ಇಳಿಯಲಿಲ್ಲ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ಅವರು ತಮ್ಮ ಕಚೇರಿಯ ಸಭಾಭವನದಲ್ಲಿ ಶುಕ್ರವಾರ ಆಟೊರಿಕ್ಷಾ ಮಾಲೀಕರ ಹಾಗೂ ಚಾಲಕರ ಸಂಘಟನೆಗಳ ಪದಾಧಿಕಾರಿಗಳ ಸಭೆ ನಡೆಸಿ, ಮೀಟರ್ ಅಳವಡಿಸಲೇಬೇಕು. ಕಾನೂನು ಉಲ್ಲಂಘನೆ ಮಾಡಬಾರದು ಎಂದು ಚಾಲಕರಿಗೆ ಸೂಚಿಸಿದರು.

ಪರವಾನಗಿ ಪತ್ರದ ನಿಯಮದಂತೆ ನಗರದ 16 ಕಿ.ಮೀ. ವ್ಯಾಪ್ತಿಯೊಳಗೆ ಮ್ಯಾಕ್ಸಿಕ್ಯಾಬ್, ಟ್ರ್ಯಾಕ್ಟ್, ಟಂಟಂ, ಮ್ಯಾಜಿಕ್, ಮಿನಿ ಡೋರ್ ವಾಹನಗಳು ಪ್ರಯಾಣಿಕರನ್ನು ಮಧ್ಯದಲ್ಲಿ ಇಳಿಸದೇ ಇರುವುದನ್ನು ಮೊದಲು ಜಾರಿಗೊಳಿಸಬೇಕು. ಈ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಿದ ನಂತರ ಮೀಟರ್ ಕಡ್ಡಾಯಗೊಳಿಸಬೇಕು ಎಂದು ಆಟೊರಿಕ್ಷಾ ಮಾಲೀಕರ, ಚಾಲಕರ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದರು.

ಪರವಾನಗಿ ಪತ್ರ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕೆ ಮೀಟರ್ ಅಳವಡಿಸುವುದಿಲ್ಲ ಎಂದು ಹೇಳುವುದು ಸರಿಯಲ್ಲ. ಕೂಡಲೇ ಮೀಟರ್ ಅಳವಡಿಸಿ ಆಟೊರಿಕ್ಷಾಗಳನ್ನು ಓಡಿಸಬೇಕು ಎಂದು ಚಂದ್ರಗುಪ್ತ ಹೇಳಿದರು.

ಮೀಟರ್ ಅಳವಡಿಕೆ ಕುರಿತು ಈಗಾಗಲೇ ಮೂರು ಬಾರಿ ದಿನಾಂಕಗಳನ್ನು ವಿಸ್ತರಿಸಲಾಗಿದೆ. ಇನ್ನು ಮುಂದೆ ಅವಧಿಯನ್ನು ವಿಸ್ತರಿಸುವುದು ಸಾಧ್ಯವಿಲ್ಲ. ನಗರದಲ್ಲಿ 6156 ಆಟೊಗಳು ನೋಂದಣಿಯಾಗಿದ್ದು, 5514 ಆಟೊಗಳು ಪರವಾನಗಿ ಹೊಂದಿವೆ. ಮೀಟರ್ ಅಳವಡಿಸಿದ್ದನ್ನು ಪರಿಶೀಲಿಸಿದ ನಂತರ ಈ ಆಟೊಗಳ ಪರವಾನಗಿಯನ್ನು ಪರಿಷ್ಕರಿಸಲಾಗುವುದು ಎಂದು ತಿಳಿಸಿದರು.

ಪರವಾನಗಿ ಪತ್ರ ಹೊಂದಿರುವ ಆಟೊಗಳ ಪೈಕಿ 2067 ರಿಕ್ಷಾಗಳಿಗೆ ಮೆಕ್ಯಾನಿಕಲ್ ಮೀಟರ್ ಮತ್ತು 1334 ಡಿಜಿಟಲ್ ಮೀಟರ್ ಹೊಂದಿವೆ. ಉಳಿದ ಆಟೊಗಳಿಗೂ ಮೀಟರ್ ಕಡ್ಡಾಯವಾಗಿ ಅಳವಡಿಸಬೇಕು. ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೆ ಪರಿಹರಿಸಲಾಗುವುದು. ಮೀಟರ್ ದರವನ್ನು ಆರ್‌ಟಿಎ ಸಮಿತಿ ನಿಗದಿಪಡಿಸಿದ್ದು, ಅದೇ ದರದಲ್ಲಿ ಆಟೊ ಓಡಿಸಬೇಕು ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ವಿ.ಕೆ. ಹೇಮಾದ್ರಿ, ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಎಸ್.ಆರ್. ಮಾಳಿ ಹಾಗೂ ಆಟೊರಿಕ್ಷಾ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

`ಮುಷ್ಕರ ಹಿಂದಕ್ಕೆ ಪಡೆಯುವುದರ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಆಟೊರಿಕ್ಷಾ ಮಾಲೀಕರ, ಚಾಲಕರ ಸಂಘಟನೆಗಳ ಪದಾಧಿಕಾರಿಗಳ ಬಗ್ಗೆ ಈ ಕುರಿತು ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗುವುದು' ಎಂದು ಸಂಘಟನೆಯ ಪದಾಧಿಕಾರಿ ಬಸವರಾಜ ಅವರೊಳ್ಳಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT