ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಟರ್ ಮ್ಯಾಟರ್...

Last Updated 2 ಜುಲೈ 2013, 19:59 IST
ಅಕ್ಷರ ಗಾತ್ರ

ಆಟೊರಿಕ್ಷಾ ಪ್ರಯಾಣಿಕರಿಗೆ ಮೀಟರ್ ದರದಲ್ಲಿ ಪಾರದರ್ಶಕ ಸೇವೆ ನೀಡುವುದು ಮತ್ತು ಪ್ರಯಾಣಿಕರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುವ ಚಾಲಕರ ಉಪದ್ವ್ಯಾಪಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ನಗರದಲ್ಲಿ ಕಾರ್ಯಾರಂಭಗೊಂಡ ಮುಂಗಡ ದರ ನಿಗದಿ (ಪ್ರಿಫಿಕ್ಸ್) ಆಟೊ ಕೇಂದ್ರಗಳಲ್ಲಿ ವಿಧಿಸಿರುವ ದರ ದುಬಾರಿಯಾಗಿದೆ ಎಂಬ ವ್ಯಾಪಕ ಅಸಮಾಧಾನ ಮತ್ತೆ ವ್ಯಕ್ತವಾಗುತ್ತಿದೆ.

ಕೇವಲ ನಾಲ್ಕು ಪ್ರಿಫಿಕ್ಸ್ ಕೌಂಟರ್‌ಗಳೊಂದಿಗೆ ಈ ಸೇವೆ ಆರಂಭವಾಗಿತ್ತು. ಈಗ ಕೌಂಟರ್‌ಗಳ ಸಂಖ್ಯೆ 16ಕ್ಕೆ ಏರಿದೆ. ಇನ್ನಷ್ಟು ಕೌಂಟರ್‌ಗಳು ಬೇಕು ಎಂದು ವಿವಿಧ ಪ್ರದೇಶಗಳಿಂದ ಒತ್ತಡವಿದ್ದರೂ ಪೊಲೀಸ್ ಸಿಬ್ಬಂದಿ ಕೊರತೆ ಇರುವ ಹಿನ್ನೆಲೆಯಲ್ಲಿ ಅದು ಕಾರ್ಯರೂಪಕ್ಕೆ ಬಂದಿಲ್ಲ. ಆದರೆ, ಈಗ ಚಾಲ್ತಿಯಲ್ಲಿರುವ ಪ್ರಿಫಿಕ್ಸ್ ದರಗಳು ಅವೈಜ್ಞಾನಿಕವಾಗಿವೆ ಎಂಬ ದೂರು ಜನರಿಂದ ವ್ಯಕ್ತವಾಗುತ್ತಲೇ ಇದೆ.
ಖಾಲಿ ಬರ‌್ಬೇಕು, ಹೆಚ್ಚು ಕೊಡಿ!

ಪ್ರತಿನಿತ್ಯ ಬೆಳಿಗ್ಗೆ ಜೆ.ಪಿ.ನಗರ ಒಂಬತ್ತನೇ ಹಂತದ ತಮ್ಮ ಮನೆಯಿಂದ ಕೋರಮಂಗಲದಲ್ಲಿರುವ ಕಚೇರಿಗೆ, ಸಂಜೆ ಅಲ್ಲಿಂದ ಮನೆಗೆ ಆಟೊದಲ್ಲಿ ಪ್ರಯಾಣಿಸುವ ಸುಸ್ಮಿತಾ ಪವಾರ್‌ಗೆ ಬಸ್‌ನಲ್ಲಿ ನಿಂತುಕೊಂಡು ಪ್ರಯಾಣಿಸುವ ಕಷ್ಟಕ್ಕಿಂತ ದುಬಾರಿಯಾದರೂ ಆಟೊ ವಾಸಿ ಎಂಬ ಲೆಕ್ಕಾಚಾರ.

`ನಾನು ನಾಸಿಕ್‌ನಿಂದ ಇಲ್ಲಿಗೆ ನೌಕರಿಗಾಗಿ ಬಂದಿದ್ದೇನೆ. ಮನೆ ಮತ್ತು ಕಂಪೆನಿಯ ಆಸುಪಾಸಿನ ಕೆಲವು ಸ್ಥಳಗಳನ್ನು ಬಿಟ್ಟರೆ ಬೆಂಗಳೂರಿನ ಬಗ್ಗೆ ಏನೂ ತಿಳಿಯದು. ಫೋರಂ ಮಾಲ್ ಬಳಿ ಪ್ರಿಫಿಕ್ಸ್ ಕೌಂಟರ್ ಇದ್ದರೂ ನನ್ನ ಕಂಪೆನಿಗೆ ಅದು ದೂರದಲ್ಲಿದೆ. ಹಾಗಾಗಿ ಸಿಕ್ಕಿದ ಆಟೊ ಹತ್ತಿಬಿಡುತ್ತೇನೆ. ಬೆಳಿಗ್ಗೆ 200 ಕೊಟ್ಟರೆ, ಸಂಜೆ 240, 250 ರೂಪಾಯಿ ಕೊಟ್ಟರೂ ಚಾಲಕರಿಗೆ ಸಮಾಧಾನವಿಲ್ಲ. ಮೀಟರ್ ಹಾಕುವುದಿಲ್ಲ. ಅಷ್ಟು ಒಳಭಾಗದಲ್ಲಿ ಮನೆ ಮಾಡಿಕೊಂಡಿದ್ದೀರಿ. ವಾಪಸ್ ಬರುವಾಗ ಖಾಲಿ ಬರ‌್ಬೇಕು, ಸ್ವಲ್ಪ ಹೆಚ್ಚು ಕೊಡಿ ಎಂದು ಚಾಲಕರು ದಬಾಯಿಸುತ್ತಾರೆ. ಮೀಟರ್ ಕಡ್ಡಾಯ ಹಾಕುವಂತೆ ಪೊಲೀಸರೇ ಕ್ರಮ ಕೈಗೊಳ್ಳಬೇಕು' ಎಂಬುದು ಸುಸ್ಮಿತಾ ಒತ್ತಾಯ.

ಕೆಲವು ದಿನಗಳ ಹಿಂದೆ ಮಹಾತ್ಮ ಗಾಂಧಿ ರಸ್ತೆಯ ಪ್ರಿಫಿಕ್ಸ್ ಕೌಂಟರ್‌ನಿಂದ ರಾಮಕೃಷ್ಣ ಆಶ್ರಮಕ್ಕೆ ಆಟೊದಲ್ಲಿ ಪ್ರಯಾಣಿಸಿದ ಒಬ್ಬರ ಅನುಭವ ಹೀಗಿದೆ:  ಪ್ರಿಫಿಕ್ಸ್ ಕೌಂಟರ್‌ನಲ್ಲಿ ರೂ88 ಎಂದು ನಿಗದಿತ ದರದ ಚೀಟಿ ಪಡೆದರೂ ಚಾಲಕನಿಗೆ ಮೀಟರ್ ಹಾಕುವಂತೆ ವಿನಂತಿಸಿದರು. ಆಶ್ರಮದ ಮುಂದೆ ಇಳಿಯುವಾಗ ಮೀಟರ್ ರೂ75 ತೋರಿಸಿದ ಬಗ್ಗೆ ಚಾಲಕರ ಗಮನಕ್ಕೆ ತಂದಾಗ ಅವರು, `ನಾನು ಪ್ರಿಫಿಕ್ಸ್ ವ್ಯವಸ್ಥೆ ಮೂಲಕ ಬಂದಿದ್ದೇನೆ. ರೂ88 ಕೊಡಬೇಕು' ಅಂದರು. ವಾಗ್ವಾದಕ್ಕೆ ಅವಕಾಶ ಬೇಡವೆಂದು ಅಷ್ಟೇ ಪಾವತಿಸಿದರೂ ನಿಜ ದರ ಎಷ್ಟಿರಬಹುದು ಎಂಬ ಗೊಂದಲ ಅವರಲ್ಲಿ ಉಳಿದಿತ್ತು.

ಜಯನಗರದ ಲಕ್ಷ್ಮಣ ರಾವ್ ಪಾರ್ಕ್ ಬಳಿ ಕಾರ್ಯನಿರ್ವಹಿಸುತ್ತಿದ್ದ ಟ್ರಾಫಿಕ್ ಇನ್ಸ್‌ಪೆಕ್ಟರ್ ಷಣ್ಮುಗಪ್ಪ ಅವರ ಗಮನಕ್ಕೆ ಈ ವಿಷಯ ತರಲಾಗಿ, `ಎಂ.ಜಿ. ರಸ್ತೆಯಿಂದ ಆಶ್ರಮಕ್ಕೆ ಅಬ್ಬಬ್ಬಾ ಅಂದರೆ 60 ರೂಪಾಯಿ ಆದೀತು. ಎಪ್ಪತ್ತೈದೂ ಅಲ್ಲ ಎಂಬತ್ತೆಂಟೂ ಅಲ್ಲ' ಎಂದು ಸ್ಪಷ್ಟವಾಗಿ ಹೇಳಿದರು.

ಪ್ರಿಫಿಕ್ಸ್‌ಗೇ ಚಾಲಕರ ಒಲವು
ಮುಂಗಡ ದರ ನಿಗದಿಯಲ್ಲಿ ಇರುವ ದೋಷಗಳನ್ನು ಬಲ್ಲವರು ಪ್ರಿಫಿಕ್ಸ್ ಕೌಂಟರ್‌ನಿಂದ ಪ್ರಯಾಣಿಸುವಾಗಲೂ ಮೀಟರ್ ಹಾಕುವಂತೆ ಒತ್ತಾಯಿಸುತ್ತಾರೆ. ಆದರೆ ಬಹುತೇಕ ಚಾಲಕರು `ಕೌಂಟರ್‌ನಿಂದ ಹೋಗುವುದಾದರೆ ಮೀಟರ್ ಯಾಕೆ ಹಾಕಬೇಕು. ಮೀಟರ್ ಮೇಲೆ ಬಂದರೆ ನಮಗೆ ನಷ್ಟ' ಎಂದು ವಾದಿಸುತ್ತಾರೆ.

ಮೈಸೂರು ರಸ್ತೆ ನಾಯಂಡಹಳ್ಳಿಯ ಚಾಲಕ ಬಾಬು, `ಪ್ರಿಫಿಕ್ಸ್ ಕೌಂಟರ್‌ನಲ್ಲಿ ಬರೆದುಕೊಡುವ ಚೀಟಿ ಆಧಾರದಲ್ಲಿ ಎಲ್ಲಿ ಬೇಕಾದರೂ ಹೋಗುತ್ತೇವೆ. ಅಲ್ಲಿ ಬರುವುದಿಲ್ಲ, ಇಲ್ಲಿಯೇ ಇಳಿಯಿರಿ ಎಂದು ನಖರಾ ಮಾಡುವಂತಿಲ್ಲ. ಶುಲ್ಕದಲ್ಲಿ ನಮಗೆ ಸ್ವಲ್ಪ ಲಾಭವಿರುವುದು ನಿಜ. ನಾವೂ ಬದುಕಬೇಕಲ್ವಾ?' ಎನ್ನುತ್ತಾರೆ.

ಒಟ್ಟಿನಲ್ಲಿ ಮೀಟರ್ ಹಾಕಲೊಲ್ಲೆ ಎಂದು ಚಾಲಕ, ಅಷ್ಟು ದುಬಾರಿ ಶುಲ್ಕ ಪಾವತಿಸಲೊಲ್ಲೆ ಎಂದು ಪ್ರಯಾಣಿಕ ಇನ್ನೂ ಎಷ್ಟು ದಿನ ಜಗ್ಗಾಡಬೇಕೋ? ಈ ವಾದವನ್ನು ಒಪ್ಪಬಹುದಾದರೂ ಈ ಸರಾಸರಿ ಮೊತ್ತ ಹೊರೆಯಾಗಿರುವುದು ಪ್ರಯಾಣಿಕರಿಗೆ.

ಐದು ತಿಂಗಳಿಗೆ 2.5 ಕೋಟಿ ದಂಡ!

ಕರೆದ ಸ್ಥಳಕ್ಕೆ ಬಾರದಿರುವುದು, ಮೊದಲು ಒಪ್ಪಿಕೊಂಡರೂ ಮಾರ್ಗಮಧ್ಯೆಯೇ ಇಳಿಸಿ ಹೋಗುವುದು, ಪ್ರಿಫಿಕ್ಸ್‌ನಿಂದ ಬಂದಿದ್ದರೂ ಹೆಚ್ಚುವರಿ ಶುಲ್ಕಕ್ಕೆ ಒತ್ತಾಯಿಸುವ ಪ್ರಕರಣಗಳು ಪ್ರತಿದಿನ ದಾಖಲಾಗುತ್ತಲೇ ಇವೆ. ಈ ವರ್ಷ ಜನವರಿಯಿಂದ ಮೇ 31ರವರೆಗೆ ಇಂತಹ ವರ್ತನೆಗಾಗಿ ವಿಧಿಸಿದ ದಂಡ ಬರೋಬ್ಬರಿ 2.5 ಕೋಟಿ ರೂಪಾಯಿ! ದಾಖಲಾದ ಪ್ರಕರಣಗಳ ಸಂಖ್ಯೆ 2,43, 640! ಇಂತಹ ಪ್ರಕರಣಗಳು 2011ರಲ್ಲಿ ದಾಖಲಾಗಿರುವುದು 4,41,792 ಹಾಗೂ 2012ರಲ್ಲಿ 6,01,012.

ಅಂದಹಾಗೆ, ಸಾರ್ವಜನಿಕರು ಯಾವುದೇ ದೂರುಗಳನ್ನು 2558 8444 ಅಥವಾ 2558 8555ಗೆ ಕರೆ ಮಾಡಿ ಸಲ್ಲಿಸಬಹುದು. ನಿರಾಕರಣೆ ದೂರು AUTO REF AUTONO LOCATION TIME OF REFUSALಬರೆಯಬೇಕು. ಹೆಚ್ಚುವರಿ ಶುಲ್ಕ ಕುರಿತ ದೂರಿಗೆ ಆರ್‌ಇಎಫ್ ಬದಲು OVR ಎಂದು ಟೈಪ್ ಮಾಡಿ 52225ಗೆ ಸಂದೇಶ ಕಳುಹಿಸಿದರೆ ದೂರು ದಾಖಲಿಸಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಪ್ರತಿ ಪದದ ನಡುವೆಯೂ ಒಂದು ಸ್ಪೇಸ್ ಇರಬೇಕು. ಪ್ರಸಕ್ತ ಸಾಲಿನಲ್ಲಿ ಫೇಸ್‌ಬುಕ್ (www.bangaloretrafficpolice.gov.in)ಎಸ್‌ಎಂಎಸ್, ಪಬ್ಲಿಕ್ ಐ ಸೇರಿದಂತೆ ವಿವಿಧ ಮೂಲಗಳಿಂದ ಸಾರ್ವಜನಿಕರು 4069 ದೂರುಗಳನ್ನು ದಾಖಲಿಸಿದ್ದಾರೆ.

ಎಲ್ಲಾದರೂ ಇಳಿಯಿರಿ!
ಪ್ರಿಫಿಕ್ಸ್ ಕೌಂಟರ್‌ಗಳಲ್ಲಿ ನಿಗದಿಪಡಿಸಿರುವ ದರ ಅವೈಜ್ಞಾನಿಕವಾಗಿರುವುದು ನಿಜವೇ ಎಂದು ಕೇಳಿದರೆ ಸಂಚಾರ ವಿಭಾಗದ ಕೆಲವು ಇನ್ಸ್‌ಪೆಕ್ಟರ್‌ಗಳು ಹೀಗೆ ಹೇಳುತ್ತಾರೆ:

ಪ್ರಿಫಿಕ್ಸ್ ಕೌಂಟರ್‌ನಿಂದ ನಗರದ ಒಂದೊಂದು ಪ್ರದೇಶಕ್ಕೂ ಕರಾರುವಾಕ್ ದೂರವನ್ನು ಕಿ.ಮೀ. ಪ್ರಕಾರ ಅಳೆದು ದರ ನಿಗದಿಪಡಿಸುವುದು ಸಾಧ್ಯವಾಗದ ಮಾತು. ಉದಾಹರಣೆಗೆ, ಮಹಾತ್ಮ ಗಾಂಧಿ ರಸ್ತೆಯ ಕೌಂಟರ್‌ನಿಂದ ಜಯನಗರ ನಾಲ್ಕನೇ ಬ್ಲಾಕ್‌ಗೆ ಪ್ರಯಾಣಿಸಬೇಕು ಎಂದಿಟ್ಟುಕೊಳ್ಳಿ. ಪ್ರಿಫಿಕ್ಸ್‌ನಲ್ಲಿ ನಿಗದಿಯಾಗಿರುವುದುರೂ 88. ನೀವು ಜಯನಗರದ ಕೂಲ್ ಜಾಯಿಂಟ್ ಜಂಕ್ಷನ್‌ನಲ್ಲೋ, ಜೈನ ದೇವಾಲಯ ಬಳಿಯೋ ಅಥವಾ ನಾಲ್ಕನೇ ಬ್ಲಾಕ್‌ನ ಯಾವುದೇ ಸ್ಥಳದಲ್ಲಿ ಇಳಿದರೂ ಅಷ್ಟೇ ಮೊತ್ತ ಪಾವತಿಸಿದರಾಯಿತು.

ಸಾಮಾನ್ಯವಾಗಿ ಸಾರ್ವಜನಿಕರು ಪ್ರಿಫಿಕ್ಸ್ ಕೌಂಟರ್‌ಗೆ ಬಂದು ತಮಗೆ ಗೊತ್ತಿರುವ ಒಂದು ಸ್ಥಳವನ್ನು ಹೇಳುತ್ತಾರೆಯೇ ವಿನಾ ನಿಖರವಾಗಿ ವಿಳಾಸ ಹೇಳುವುದಿಲ್ಲ. ತಮಗಿಷ್ಟ ಬಂದ ಸ್ಥಳದಲ್ಲೇ ಅವರು ಇಳಿಯುತ್ತಾರೆ. ಒಮ್ಮೆ ಇಲ್ಲಿಂದ ಕಳುಹಿಸಿದ ಮೇಲೆ ಏನಾಗುತ್ತದೋ ನಮಗೆ ಗೊತ್ತಾಗುವುದಿಲ್ಲ. ಹೀಗೆ ಮೊದಲೇ ಹೇಳಿಕೊಂಡ ಜಾಗಕ್ಕಿಂತಲೂ ನಾಲ್ಕು ಕಿ.ಮೀ. ದೂರದಲ್ಲಿ ಇಳಿದರೂ ಚೀಟಿಯಲ್ಲಿ ಬರೆದಷ್ಟೇ ದುಡ್ಡು ಕೊಟ್ಟರೆ ಚಾಲಕನಿಗೆ ನಷ್ಟ. ನಾವು ಹೇಳಿದಲ್ಲಿಗೆ ಚಾಲಕ ಕರೆದುಕೊಂಡು ಹೋಗಿಲ್ಲ ಎಂದು ಪ್ರಯಾಣಿಕರು ದೂರಿದರೆ, ಪ್ರಿಫಿಕ್ಸ್ ಕೌಂಟರ್‌ನಲ್ಲಿ ನಾಲ್ಕನೇ ಬ್ಲಾಕ್ ಅಂದಿರೋದು. ಕೂಲ್ ಜಾಯಿಂಟ್ ಜಂಕ್ಷನ್‌ನಿಂದ ಮುಂದೆ ಹೋಗುವುದಾದರೆ ಹೆಚ್ಚುವರಿ ದರ ಪಾವತಿಸಲೇಬೇಕು ಎಂದು ಚಾಲಕರು ವಾದಿಸುತ್ತಾರೆ. ಇದನ್ನು ತಪ್ಪಿಸಲು ಸರಾಸರಿ ಮೊತ್ತ ನಿಗದಿಮಾಡಲಾಗಿದೆ, ಅಷ್ಟೆ'.

ಮೀಟರ್ ಚಾಲೂ ಕಡ್ಡಾಯ?
ಇದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಡಾ.ಎಂ.ಎ. ಸಲೀಂ ಅವರು ಇತ್ತೀಚೆಗೆ ನೀಡಿದ್ದ ಸ್ಪಷ್ಟ ನಿರ್ದೇಶನ.
ಸಾರಿಗೆ ಇಲಾಖೆ ಮತ್ತು ಸಂಚಾರ ಪೊಲೀಸ್ ವಿಭಾಗ ಜಂಟಿಯಾಗಿ ಈ ದರಗಳನ್ನು ನಿಗದಿಪಡಿಸಿದ್ದರೂ ಅದರ ಹಿಂದೆ ಒಂದು ತರ್ಕವಿದೆ. ಆಟೊ ಚಾಲಕನಿಗೂ ನಷ್ಟವಾಗಬಾರದು, ಪ್ರಯಾಣಿಕರಿಗೂ ಬಾಡಿಗೆ ವಿಚಾರದಲ್ಲಿ ಮೋಸಕ್ಕೆ ಅವಕಾಶವಿರಬಾರದು ಎಂಬ ಹಿನ್ನೆಲೆಯಲ್ಲಿ ಸರಾಸರಿ ಲೆಕ್ಕಾಚಾರದ ಮೇಲೆ ಈ ದರಗಳನ್ನು ನಿಗದಿಪಡಿಸಲಾಗಿದೆ.

ಅಂದರೆ ಕೌಂಟರ್‌ಗಳಲ್ಲಿ ನಿಗದಿಪಡಿಸಿರುವುದು ಗರಿಷ್ಠ ಅಂದಾಜು ದರವೇ ಹೊರತು ನಿಖರವಾದುದಲ್ಲ. ಹಾಗಾಗಿ ಕೌಂಟರ್‌ನಿಂದ ಪ್ರಯಾಣಿಸುವಾಗ ದರಪಟ್ಟಿಯಲ್ಲಿ ನಮೂದಿಸಿರುವ ಮೊತ್ತ ಏನೇ ಇದ್ದರೂ ಪ್ರಿಫಿಕ್ಸ್ ಕೌಂಟರ್‌ನಿಂದ ಪ್ರಯಾಣ ಶುರುವಾದ ತಕ್ಷಣ ಚಾಲಕರು ಮೀಟರ್ ಚಾಲೂ ಮಾಡುವುದು ಕಡ್ಡಾಯ. ಪ್ರಯಾಣಿಕರೂ ಮೀಟರ್ ಹಾಕುವಂತೆ ಒತ್ತಾಯಿಸಬೇಕು ಎಂದು ಅವರು ನೀಡಿದ್ದ ಸೂಚನೆ ಇನ್ನು ಮುಂದೆ ಪಾಲನೆಯಾಗುತ್ತದೋ ಇಲ್ಲವೋ ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT