ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನಿನ ಪೆಡಿಕ್ಯೂರ್ ಮೋಡಿ

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಅದೊಂದು ವಿಸ್ಮಯ ಜಗತ್ತು. ಮಬ್ಬು ತುಂಬಿದ ಕೋಣೆಯಲ್ಲಿ ಬಣ್ಣಬಣ್ಣದ ಗಾಜಿನ ಟಬ್‌ಗಳು, ಅದರೊಳಗೆ ಚೋಟುದ್ದ ಮೀನುಗಳ ಜಿಗಿದಾಟ., ಸರಭರ ಓಡಾಟ. ಮೇಲಿಂದ ಕೆಳಗೆ, ಎಡದಿಂದ ಬಲಕ್ಕೆ ಅದೇನನ್ನೊ ಹುಡುಕುವ ಸಂಭ್ರಮದಲ್ಲಿರುವ ನೂರಾರು ಪುಟಾಣಿ ಮೀನುಗಳು...


ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ `ಡಾ. ಫಿಶ್ ಪೆಡಿಕ್ಯೂರ್~ ಕೇಂದ್ರದಲ್ಲಿ ರೋಗಿಗಳಾಗಿ ಬಂದವರಿಗೆ  ಚಿಕಿತ್ಸೆ ಕೊಡುವುದು ಮೀನು ವೈದ್ಯರು!
ಕೇಂದ್ರದೊಳಗೆ ಹೊಕ್ಕುತ್ತಲೇ 3-4 ಟಬ್‌ಗಳಲ್ಲಿ ಈಜಿಕೊಂಡಿರುವ ಮೀನುಗಳು ಸಡಗರಿಂದ ಅಲ್ಲಿಯೇ ಒಂದು ಸುತ್ತು ಹಾಕುವ ಮೂಲಕ ಸ್ವಾಗತಿಸುತ್ತವೆ. ಮುಂದಿನದು ಚಿಕಿತ್ಸೆಯ ಸರದಿ.

ಮೀನು ವೈದ್ಯರು ಮಾಡುವುದೇನು?
ಟಬ್‌ನಲ್ಲಿ ಕಾಲು ಇಳಿಬಿಟ್ಟು ಕುಳಿತ ಕೂಡಲೇ ಮೀನುಗಳು ಕಾಲಿಗೆ ಮುತ್ತಿಗೆ ಹಾಕಿದವೆಂದರೆ ನಮಗೆ ಕಚಗುಳಿಯೋ ಕಚಗುಳಿ. ಮಸಾಜ್ ಶುರುವಾಗುವುದು ಆಗಲೇ. ಅಷ್ಟೇ ಅಲ್ಲ, ಇವು ನಮ್ಮ ದೇಹದ ಉಷ್ಣಾಂಶವನ್ನು ಹೀರಿಕೊಳ್ಳುತ್ತವೆ.
 
ಒಣಗಿದ ಚರ್ಮ (ಡೆಡ್ ಸ್ಕಿನ್) ತೆಗೆದುಹಾಕುತ್ತವೆ, ಪಾದಗಳ ಬಿರುಕುಗಳನ್ನೂ ಸ್ವಚ್ಛಗೊಳಿಸಿ ಮೃದು ಮತ್ತು ನುಣುಪಾಗಿಸುತ್ತವೆ, ಬೆರಳು ಮತ್ತು ಅಂಗಾಲಿನ ಸೂಕ್ಷ್ಮ ಭಾಗಗಳಲ್ಲಿ ಸಾಮಾನ್ಯವಾಗಿ ಮನೆಮಾಡುವ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಾಣುಗಳನ್ನು ತಿಂದುಹಾಕುತ್ತವೆ. ಇದರಿಂದ ಈ ಸೀಳುಗಳಲ್ಲೂ ರಕ್ತ ಸಂಚಲನ ಸುಗಮಗೊಳ್ಳುತ್ತದೆ.

`ಈ ಮೀನುಗಳು ಮನುಷ್ಯನಿಗೆ ವೈದ್ಯರಂತೆ ಕೆಲಸ ಮಾಡುತ್ತವೆ. ಅರ್ಧ ಗಂಟೆ ಅವುಗಳಿಗೆ ಕಾಲು ಕೊಟ್ಟು ಕುಳಿತರೆ ನಿಮಗೆ ಅದರ ಅನುಭವ ಉಂಟಾಗುತ್ತದೆ~ ಎನ್ನುತ್ತಾರೆ, ಕೇಂದ್ರದ ಸ್ಥಾಪಕ ಸುಭಾಷ್‌ಚಂದ್ರ ಬೋಸ್.

ಅವರೇನೂ ವೈದ್ಯರಲ್ಲ. ಆಂಧ್ರ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸುಭಾಷ್ ಅವರಿಗೆ ಮೊದಲಿನಿಂದಲೂ ಮೀನುಗಳೆಂದರೆ ಅಕ್ಕರೆ. ಮೊದಲು ಮನೆಯಲ್ಲಿ ಹತ್ತಾರು ಬಗೆಯ ಅಕ್ವೇರಿಯಂ ಇಟ್ಟುಕೊಂಡು ಅವುಗಳೊಂದಿಗೆ ಸಮಯ ಕಳೆಯುತ್ತಿದ್ದರಂತೆ. ಈ ಫಿಶ್ ಮಸಾಜ್ ಬಗ್ಗೆ ತಿಳಿದುಬಂದಾಗ ತಮ್ಮ ನಿವೃತ್ತಿ ವೇತನವನ್ನೆಲ್ಲ ವಿನಿಯೋಗಿಸಿ `ಡಾ. ಫಿಶ್~ ಲೋಕವನ್ನು ಸೃಷ್ಟಿಸಿದ್ದಾರೆ.

`ಲಾಭದ ಉದ್ದೇಶದಿಂದ ನಾನಿದನ್ನು ಮಾಡಿಲ್ಲ. ಇದರಿಂದ ಇದರ ಖರ್ಚು-ವೆಚ್ಚ ಹೋಗುವಷ್ಟು ಬಂದರೆ ಸಾಕು. ಈ ಮೀನುಗಳು ನನಗೆ ಮಕ್ಕಳಿದ್ದಂತೆ. ಅವುಗಳ ಸೇವೆಯನ್ನು ವ್ಯಾಪಾರದ ದೃಷ್ಟಿಯಿಂದ ಮಾಡಲು ಇಷ್ಟವಿಲ್ಲ. ಇಲ್ಲಿ ಅರ್ಧ ಗಂಟೆಗೆ 100 ರೂಪಾಯಿಯಂತೆ ಶುಲ್ಕ ಪಡೆಯಲಾಗುತ್ತದೆ. ಇನ್ನಷ್ಟು ಹೊತ್ತು ಚಿಕಿತ್ಸೆ ಪಡೆಯಬೇಕು ಎಂದಾದರೆ 200 ರೂಪಾಯಿ. ಬೆಂಗಳೂರಿನ ಕೆಲವು ಸ್ಪಾಗಳಲ್ಲಿ ಅರ್ಧ ಗಂಟೆಗೆ 4ರಿಂದ 5 ನೂರು ರೂಪಾಯಿ ವಸೂಲು ಮಾಡುತ್ತಿರುವುದು ಸರಿಯಲ್ಲ~ ಎಂದು ಅಭಿಪ್ರಾಯಪಡುತ್ತಾರೆ ಸುಭಾಷ್.

`ಮೊದಲೆಲ್ಲಾ ಈ ಮೀನುಗಳನ್ನು ಖರೀದಿಸುವುದು ಹಾಗೂ ಅವುಗಳನ್ನು ನಿರ್ವಹಿಸುವುದು ಸವಾಲಿನ ಸಂಗತಿಯಾಗಿತ್ತು. ಆದ್ದರಿಂದಲೇ ಹೆಚ್ಚಿನ ಪಾರ್ಲರ್ ಮತ್ತು ಸ್ಪಾಗಳಲ್ಲಿ `ಡಾ. ಫಿಶ್~ ನಿರ್ವಹಣೆ ಕಷ್ಟವಾಗುತ್ತಿದೆ. ಇಟ್ಟರೂ ಅವುಗಳ ಸೇವೆಗೆ ಅಪಾರ ಶುಲ್ಕ ಬೇಕಾಗುತ್ತಿತ್ತು. ಆದರೆ ಈಗ ಹಾಗೇನಿಲ್ಲ. ಸುಲಭ ತಂತ್ರಜ್ಞಾನಗಳು ಬಂದಿವೆ. ನಿರ್ವಹಣೆ ವೆಚ್ಚವೂ ಕಡಿಮೆಯಾಗಿದೆ. ಹಾಗೆಯೇ ಥಾಯ್ಲೆಂಡ್‌ನಿಂದ ಬರುವ ಮೀನಿನ ಔಷಧ ಮತ್ತು ಆಹಾರ, ಚೀನಾದಿಂದ ಬರುವ ಇತರ ಸಲಕರಣೆಗಳನ್ನೂ ಭಾರತದಲ್ಲಿಯೇ ಅಭಿವೃದ್ಧಿಪಡಿಸಿದರೆ ಈ ವ್ಯವಸ್ಥೆಯನ್ನು ಇನ್ನೂ ಜನಪ್ರಿಯಗೊಳಿಸಬಹುದು. ನಾನು ಈ ಮೀನುಗಳನ್ನು ಟರ್ಕಿಯಿಂದ ತರಿಸಿಕೊಳ್ಳುತ್ತೇನೆ.

ಮೀನು ಕಚ್ಚುವುದಿಲ್ಲ
ಈ ಮೀನುಗಳಿಗೆ ಹಲ್ಲಿರುವುದಿಲ್ಲ. ಆದ್ದರಿಂದ ಅವು ಕಚ್ಚುವುದಿಲ್ಲ. ಅವುಗಳ ಮೃದುವಾದ ವಸಡು ಕಾಲಿಗೆ ತಾಗುತ್ತಿದ್ದಂತೆ ಕಚಗುಳಿ ಇಟ್ಟಂತೆ ಭಾಸವಾಗುತ್ತದೆ. ಬೇರೆ ಬೇರೆ ನಮೂನೆಯ ರೋಗವಿರುವ ಜನರಿಗೆ ಕಚ್ಚುವುದರಿಂದ ಮೀನುಗಳ ಮೂಲಕ ಇತರರಿಗೆ ಕಾಯಿಲೆ ಹರಡುವ ಸಾಧ್ಯತೆಯಿದೆ ಎನ್ನುವುದು ತಪ್ಪು ಗ್ರಹಿಕೆ. ಅಂತಹ ಯಾವುದೇ ಪ್ರಕರಣ ಜಗತ್ತಿನ ಯಾವ ಮೂಲೆಯಲ್ಲಿಯೂ ಇಲ್ಲಿವರೆಗೂ ವರದಿಯಾಗಿಲ್ಲ ಎನ್ನುತ್ತಾರೆ ಸುಭಾಶ್‌ಚಂದ್ರ.

ಈ ಮೀನುಗಳ ಬಾಯಿಯಲ್ಲಿ ಡೈಥೊನಲ್ ಎನ್ನುವ ಔಷಧಿಯ ಎಂಜೈಮ್ ಇರುವುದರಿಂದ ಅದು ಡೆಡ್ ಸ್ಕಿನ್ ತೆಗೆದುಹಾಕಿ ಆ ಜಾಗದಲ್ಲಿ ಹೊಸ ಚರ್ಮ ಹುಟ್ಟಲು ಕಾರಣವಾಗುತ್ತದೆ.

ಯಾರಿಗೆ ಚಿಕಿತ್ಸೆ?
ಈ ಚಿಕಿತ್ಸೆಯನ್ನು ಪುರುಷರು, ಮಹಿಳೆಯರು ಮತ್ತು ಯಾವುದೇ ವಯಸ್ಸಿನ ಮಕ್ಕಳು ಪಡೆಯಹುದು. ಮಕ್ಕಳು ಮೊದಲು ಭಯಪಟ್ಟರೂ ನಂತರ ಮೋಜಿನಿಂದ ಕಾಲೊಡ್ಡಿ ಕೂರುತ್ತಾರೆ. ಯಾವುದೇ ಅಡ್ಡಪರಿಣಾಮ ಇಲ್ಲ.

ಈ ಮೀನುಗಳ ಆಯಸ್ಸು ಸಾಮಾನ್ಯವಾಗಿ ಏಳು ವರ್ಷ. ಆದರೆ ಪೌಷ್ಟಿಕ ಆಹಾರ ಮತ್ತು ಅಗತ್ಯ ಔಷಧೋಪಚಾರ ನೀಡುವ ಮೂಲಕ ಹೆಚ್ಚು ಕಾಲ ಅವುಗಳನ್ನು ಉಳಿಸಿಕೊಳ್ಳಬಹುದು.

ಜತೆಗೆ, ಟಬ್‌ನ ನೀರಿನಲ್ಲಿ ಅಮೋನಿಯ ಮತ್ತು ನೈಟ್ರೇಟ್‌ನ್ನು ತಡೆಗಟ್ಟಲು ಪ್ರತಿದಿನ ನೀರು ಬದಲಾಯಿಸಬೇಕು ಮತ್ತು ಫಿಲ್ಟರ್‌ಗಳನ್ನು ಸ್ವಚ್ಛ ಮಾಡಬೇಕು.
ಸುಭಾಶ್‌ಚಂದ್ರ ಅವರ ಸಂಪರ್ಕಕ್ಕೆ: 99809 28310.

-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT