ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನಿನೂರಿನ ಧನುಷ್ ‘ಮೆನು’

Last Updated 24 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬಿ. ಸುರೇಶ್ ನಿರ್ದೇಶನದ, ‘ಪ್ರೀತಿ ಪ್ರೇಮ’ ಸರಣಿ ಕಿರುಚಿತ್ರ ಉದಯ ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತದೆ. ಮೊನ್ನೆ ಭಾನುವಾರದ ಸಂಚಿಕೆಯಲ್ಲಿ ನಾಯಕನ ಪಾತ್ರದಲ್ಲಿ ಕುಡಿಮೀಸೆಯ ತರುಣ ಧನುಷ್ ಕಾಣಿಸಿಕೊಂಡರು. ಸೀಮಿತ ಅವಕಾಶದಲ್ಲಿ ಉತ್ತಮ ಅಭಿನಯ ತೋರಿದ ಧನುಷ್, ಕನ್ನಡದ ಪ್ರತಿಭೆಗಳ ಸಾಲಿನಲ್ಲಿ ಭರವಸೆ ಹುಟ್ಟಿಸುವ ನಟ ಎಂಬುದನ್ನು ನಿರೂಪಿಸಿದರು.

ಧಾರಾವಾಹಿಗಳಲ್ಲಿ ಅವಕಾಶ ಬಂದರೂ ಚಿತ್ರರಂಗವನ್ನೇ ತಮ್ಮ ತುತ್ತಿನ ಬಾಬತ್ತು ಮಾಡಿಕೊಳ್ಳುವ ಮಹತ್ವಕಾಂಕ್ಷಿ ತರುಣ ಧನುಷ್. ಹನುಮಂತನಗರದ ‘ಅಭಿನಯ ತರಂಗ’ದಲ್ಲಿ ತರಬೇತಿ ಪಡೆದು, ಉತ್ತಮ ನಟ ಪ್ರಶಸ್ತಿಗೂ ಪಾತ್ರರಾದವರು. ರಂಗಭೂಮಿಯಲ್ಲೂ ಪಳಗಿ ಬೆಳ್ಳಿತೆರೆಯತ್ತ ದೃಷ್ಟಿ ನೆಟ್ಟಿರುವ ಕನಸುಗಾರ.

ಬಹುಮುಖಿ ಪ್ರತಿಭೆ
ಈ ಬಹುಮುಖಿ ಪ್ರತಿಭೆ ಛಾಪು ಮೂಡಿಸಿರುವ ಕ್ಷೇತ್ರಗಳು ಒಂದೆರಡಲ್ಲ. ಪೂರ್ಣಚಂದ್ರ ತೇಜಸ್ವಿ ಅವರ ‘ಚಿದಂಬರ ರಹಸ್ಯ’ (ಪ್ರಕಾಶ್ ಬೆಳವಾಡಿ) ಹಾಗೂ ಬಿ.ಸುರೇಶ್ ಅವರ ‘ಕಾಲೆಂಬ ಕಂಬವು’ ನಾಟಕಗಳಲ್ಲಿ ರಂಗಶಂಕರ ಹಾಗೂ ಇತರೆಡೆ ಅಭಿನಯಿಸಿರುವುದು, ಏರ್‌ಟೆಲ್ ಮತ್ತು ರಿಲಯನ್ಸ್ ಕಂಪೆನಿಗಳ ಸೇವೆಗಳಿಗೆ ಹಿನ್ನೆಲೆ ಧ್ವನಿ ನೀಡಿರುವುದು, ನೂರಾರು ಬೀದಿನಾಟಕಗಳಲ್ಲಿ ನಟನೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕಾರ್ಟೂನ್ ಧಾರಾವಾಹಿಯ 600 ಕಂತಿಗೆ ಹಿನ್ನೆಲೆ ಧ್ವನಿಯಾದದ್ದು... ಹೀಗೆ ಪಟ್ಟಿ ಬೆಳೆಯುತ್ತದೆ.

ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಹಾಗೆ ಕಾದದ್ದು ಒಂದಿಷ್ಟು ಫಲ ಕೊಟ್ಟಿದೆಯೆನ್ನುವ ಸಮಾಧಾನವೂ ಧನುಷ್‌ಗಿದೆ. ‘ಒರಟ ಐ ಲವ್ ಯೂ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಧನುಷ್, ಇದೀಗ ‘ದಿಲ್‌ವಾಲಾ’ದಲ್ಲಿ ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಅಕ್ಟೋಬರ್ 12ರಂದು ಬಿಡುಗಡೆಯಾಗಲಿರುವ ‘ದಿಲ್‌ವಾಲಾ’ದಲ್ಲಿ ಪ್ರಮುಖ ಪಾತ್ರ ಅಲ್ಲದಿದ್ದರೂ ಸಿನಿಮಾ ರಂಗದಲ್ಲಿ ಸಿಗುವ ಆಫರ್‌ಗಳನ್ನು ನಿರಾಕರಿಸಬಾರದು ಎಂಬ ಲೆಕ್ಕಾಚಾರದ ಜಾಣ.

‘‘ಪ್ರೀತಿ ಪ್ರೇಮ ಸರಣಿಯಲ್ಲಿ ಮೂರು ಬಾರಿ ಕಾಣಿಸಿಕೊಂಡಿದ್ದೇನೆ. ‘ಒರಟ’ ಚಿತ್ರದ ನಂತರ ಕಸ್ತೂರಿ ವಾಹಿನಿಯಲ್ಲಿ 200 ಕಂತು ಪ್ರಸಾರವಾದ ‘ಮುಂಗಾರಿನ ಕನಸು’ ಧಾರಾವಾಹಿಯಲ್ಲಿ ನಾಯಕನ ಪಾತ್ರ ಮಾಡಿದೆ. ಅದರಲ್ಲಿನ ಅಭಿನಯ ಮೆಚ್ಚಿ ಕೆಲವು ಧಾರಾವಾಹಿಗಳಲ್ಲಿ ಅವಕಾಶಗಳು ಬಂದವು’’ ಎಂದು ಹೇಳುತ್ತಾರೆ.

ಅಂಗಸೌಷ್ಠವವೆಂದರೆ...
‘ಯಾರು ಎಷ್ಟು ತಿನ್ನಬೇಕು, ಯಾರ ದೇಹಕ್ಕೆ ಎಷ್ಟೆಷ್ಟು ಪೌಷ್ಟಿಕಾಂಶಗಳು ಅಗತ್ಯ ಎಂಬ ಸಾಮಾನ್ಯಜ್ಞಾನವಿದ್ದರೆ ಬೊಜ್ಜು ಎಂಬ ತಲೆನೋವು ಬರುವುದೇ ಇಲ್ಲ’ ಎಂಬ ಕಿವಿಮಾತಿನಿಂದಲೇ ಧನುಷ್ ಫಿಟ್‌ನೆಸ್, ಪಥ್ಯಾಹಾರದ ಬಗ್ಗೆ ಮಾತಿಗಿಳಿಯುತ್ತಾರೆ. ತಮಾಷೆಯೆಂದರೆ, ಈ ಎರಡೂ ವಿಷಯಗಳ ಬಗ್ಗೆ ಓದಿ ದಂಡಿ ದಂಡಿ ತಿಳಿದುಕೊಂಡಿದ್ದಾರೆ ಈ ತರುಣ. ‘ಭಾರತೀಯರ ಶರೀರ ಸ್ವಾಸ್ಥ್ಯದ ಬಗ್ಗೆ ಡಯಟಿಷಿಯನ್‌ ಒಬ್ಬರು ಬರೆದ ಪುಸ್ತಕವನ್ನು ಮೊನ್ನೆ ಓದಿದೆ. ನಮ್ಮ ದೇಹ ತೂಕದನ್ವಯ ಪ್ರತಿ ಕೆ.ಜಿಗೆ ತಲಾ ಒಂದು ಗ್ರಾಂನಷ್ಟು ಪ್ರೊಟೀನ್ ಪ್ರತಿದಿನ ನಾವು ಆಹಾರದ ಮೂಲಕ ದೇಹಕ್ಕೆ ಉಣಿಸಬೇಕು. 3 ಸಾವಿರ ಕ್ಯಾಲೊರಿಯಷ್ಟು ಏನು ಬೇಕಾದರೂ ತಿನ್ನಬಹುದು.

ಈ ಮಿತಿಯನ್ನು ಮೀರಿದರೆ ಅದನ್ನು ವ್ಯಾಯಾಮ/ ದೇಹದಂಡನೆ ಮೂಲಕ ಬರ್ನ್ ಮಾಡಬೇಕು. ಮತ್ತೊಂದು ವಿಷಯ ಗೊತ್ತಾ? ಅಸಲಿಗೆ ಹಾಲು ಕುಡಿಯೋದು ಕಡ್ಡಾಯವೇನಲ್ಲವಂತೆ. ಸೋಯಾ ಬೀನ್ ಅಥವಾ ಅದರ ಹಿಟ್ಟನ್ನು ಬಳಸಿದರೂ ಸಾಕಂತೆ. ನಾನು ಹೇಳಿದೇಂತ ಕೆಎಂಎಫ್‌ನೋರ್ಗೆ ಹೇಳ್ಬೇಡಿ ಮತ್ತೆ?’ ಅಂತ ನಗುತ್ತಾರೆ.

‘ಬರೀ ಕನಸು ಕಟ್ಟಿಕೊಂಡರೆ ಸಾಕಾ? ನೋಡಿದವರು ಸೈ ಅನ್ನೋ ಹಾಗೆ ಇರಬೇಕಲ್ವಾ? ಅದಕ್ಕೆ ಪ್ರತಿದಿನ ಜಿಮ್‌ಗೆ ಹೋಗುತ್ತೇನೆ. ವಾರದಲ್ಲಿ ಕೆಲವು ದಿನ ಪ್ರಾಣಾಯಾಮ, ವ್ಯಾಯಾಮ ಮಾಡ್ತೇನೆ. ಮೀನು ತಿನ್ನದಿದ್ದರೆ ಹುಟ್ಟೂರು ಕುಂದಾಪುರದ ಕಡಲಿಗೇ ಅವಮಾನ. ಅದಕ್ಕೆ ಪ್ರತಿದಿನ ಬೈಗಿ ಮೀನು ಮತ್ತು ಕೋಳಿ ಪದಾರ್ಥ, ಮೂರು ಮೊಟ್ಟೆ ತಿನ್ನುತ್ತೇನೆ. ಮೂರರ ಪೈಕಿ ಒಂದರಲ್ಲಿ ಮಾತ್ರ ಹಳದಿ ಭಾಗ ಬಳಸುತ್ತೇನೆ. ಬಲ್ಲವರು ಹೇಳುವಂತೆ ಬೆಳಗ್ಗಿನ ಉಪಾಹಾರ ಮಹಾರಾಜನಂತೆ. ತಲಾ ಒಂದು ಸೇಬು ಮತ್ತು ದಾಳಿಂಬೆ ಕಡ್ಡಾಯ. (ನಿಮ್ಗೆ ಗೊತ್ತಾ? ದಪ್ಪ ಇರೋರು ಖಾಲಿ ಹೊಟ್ಟೆಗೆ ಹಣ್ಣು ತಿಂದರೆ ಮತ್ತಷ್ಟು ದಪ್ಪ ಆಗ್ತಾರಂತೆ). ಯೋಗರ್ಟ್ ಒಂದು ಕಪ್. ಹಾಲು ಬಿಲ್‌ಕುಲ್ ಇಲ್ಲ.  ಮಧ್ಯಾಹ್ನದ ಊಟವನ್ನೂ ಚಕ್ರವರ್ತಿಯಂತೆ ಮಾಡಿದರೂ ರಾತ್ರಿ ಮಾತ್ರ ಚೂರುಪಾರು ತಿನ್ನುತ್ತೇನೆ’ ಎಂದು ವರದಿ ಒಪ್ಪಿಸುತ್ತಾರೆ ಧನುಷ್.

ಧನುಷ್ ಆದ ಧನ್‌ರಾಜ್
ಧನ್‌ರಾಜ್ ಆಗಿದ್ದ ಈ ಚೂಪು ನಗೆಯ ಯುವಕ ಈಗ ಧನುಷ್ ಆಗಿ ಬದಲಾಗಿದ್ದಾರೆ. ಯಾಕೆ ಈ ಬದಲಾವಣೆ ಎಂದರೆ, ನೆಗೆಟಿವ್ ಕ್ಯಾರೆಕ್ಟರ್‌ಗಳಿಗೆ ಈ ಹೆಸರು ಹೆಚ್ಚು ಬಳಕೆಯಾಗುತ್ತದೆ. ಸಾಗಬೇಕಾದ ಹಾದಿ ದೂರವಿದೆ, ಕಟ್ಟಿಕೊಂಡ ಕನಸುಗಳೂ ಇವೆ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರರಂಗದಲ್ಲೇ ಈಸಿ ಜೈಸಬೇಕು ಎಂಬುದು ನನ್ನ ಮಹತ್ವಾಕಾಂಕ್ಷೆ. ಅದಕ್ಕಾಗಿ ಆಕರ್ಷಕ ಹೆಸರೂ ಇರಲಿ ಎಂದು ಬದಲಾಯಿಸಿಕೊಂಡೆ’ ಎಂದು ಮುಗ್ಧವಾಗಿ ಹೇಳುತ್ತಾರೆ.
ಕುಂದಾಪುರದಿಂದ ಬೆಂಗಳೂರಿಗೆ ವಲಸೆ ಬಂದು ಜೆ.ಪಿ.ನಗರದಲ್ಲಿ ಉದ್ಯಮಿಯಾಗಿರುವ ತಂದೆ ಮಂಜು ಪೂಜಾರಿ ಅವರ ಉದ್ಯಮಕ್ಕೂ ನೆರವಾಗುವ ಧನುಷ್ ಕನಸುಗಳು ಸಾಕಷ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT