ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಳಿಗೆ ಕಾಯಿಲೆ: ಕಳವಳ

Last Updated 21 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಮಂಗಳೂರು: ರೋಗ ರಹಿತ ಮೀನುಗಳ ಸಾಕಾಣಿಕೆ ನಿಟ್ಟಿನಲ್ಲಿ ಹಲವು ಸಂಶೋಧನೆಗಳು, ಪ್ರಯೋಗಗಳು ನಡೆಯುತ್ತಿದ್ದರೂ ನೀತಿ ನಿರೂಪಕರಿಗೆ ಇದರ ಬಗ್ಗೆ ಮಾಹಿತಿಯೇ ಲಭಿಸುತ್ತಿಲ್ಲ. ಇದರಿಂದಾಗಿ ಮೀನು ಕೃಷಿಗೆ ಸಂಬಂಧಿಸಿದಂತೆ ಅತ್ಯುತ್ತಮ ಯೋಜನೆಗಳು ರೂಪುಗೊಳ್ಳುತ್ತಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.

ನಗರದಲ್ಲಿನ ಮೀನುಗಾರಿಕಾ ಕಾಲೇಜು ಆಶ್ರಯದಲ್ಲಿ ಮಿಲಾಗ್ರಿಸ್ ಸಭಾಂಗಣದಲ್ಲಿ ಸೋಮವಾರ ಆರಂಭವಾದ `ಏಷ್ಯಾದಲ್ಲಿ ಮೀನು ಕೃಷಿಯಲ್ಲಿ ಕಂಡುಬರುವ ಕಾಯಿಲೆಗಳು~ ಎಂಬ ವಿಷಯವಾಗಿ ನಡೆದ 8ನೇ ಅಂತರರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿದ ಕೇಂದ್ರದ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ತರುಣ್ ಶ್ರೀಧರ್ ಈ ವಿಷಯ ತಿಳಿಸಿದರು.

`ತಜ್ಞರು ತಮ್ಮ ಸಂಶೋಧನೆಗಳನ್ನು ಕೇಂದ್ರದೊಂದಿಗೆ ಹಂಚಿಕೊಳ್ಳದಿದ್ದರೆ ರಾಷ್ಟ್ರ ಮಟ್ಟದಲ್ಲಿ ಸೂಕ್ತ ನೀತಿಗಳು ಹೊರಬರುವುದು ಸಾಧ್ಯವಿಲ್ಲ. ದೆಹಲಿಯಲ್ಲಿ ಕುಳಿತ ನಾವು ಆಡಳಿತಗಾರರೇ ಹೊರತು ಮೀನುಗಾರಿಕಾ ತಜ್ಞರಲ್ಲ. ಉತ್ತಮ ನೀತಿಯಿಂದ ಮೀನು ಕೃಷಿಗೆ ಉತ್ತೇಜನ ಸಿಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಅಂತರ ನಿರಾರಿಸಲೇಬೇಕು~ ಎಂದು . ಕೇಳಿಕೊಂಡರು.

ಮೀನುಗಾರಿಕೆ ಮತ್ತು ಮೀನು ಕೃಷಿಯಲ್ಲಿ ವ್ಯತ್ಯಾಸವಿದೆ. ದೇಶದ ಮೀನು ಉತ್ಪಾದನೆಯಲ್ಲಿ ಮೀನು ಕೃಷಿಯ ಪಾತ್ರ ಶೇ 52ರಷ್ಟಿದೆ. ಸಮುದ್ರದಲ್ಲಿ ಮೀನುಗಳ ಲಭ್ಯತೆ ಕಡಿಮೆ ಆಗುತ್ತಿರುವುದರಿಂದ ಮೀನು ಕೃಷಿಯೇ ಮುಂದಿನ ದಿನಗಳಲ್ಲಿ ಬಹಳ ಮಹತ್ವ ಪಡೆಯಲಿದೆ. ಹೀಗಾಗಿ ಕೊಳಗಳಲ್ಲಿ ಮೀನು, ಸಿಗಡಿ ಕೃಷಿಯನ್ನು ಕಾಡುವ ಕಾಯಿಲೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕಿದೆ. ಮಾಲಿನ್ಯ, ತಾಪಮಾನ ಹೆಚ್ಚಳದಂತಹ ವಿಚಾರಗಳತ್ತಲೂ ಕಾಳಜಿ ವಹಿಸಬೇಕು ಎಂದು ಅವರು ಗಮನ ಸೆಳೆದರು.

ಬೀದರ್‌ನ ಪಶು ಸಂಗೋಪನೆ, ಪಶು ವಿಜ್ಞಾನ ಮತ್ತು ಮೀನುಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯ ಕುಲಪತಿ ಸುರೇಶ್ ಎಸ್.ಹೊನ್ನಪ್ಪಗೋಳ್ ಮಾತನಾಡಿ, ವಿವಿಧ ಬಗೆಯ ರೋಗಗಳಿಂದಾಗಿ ದೇಶದಲ್ಲಿ ಪ್ರತಿ ವರ್ಷ ್ಙ 10 ಸಾವಿರ ಕೋಟಿ ಮೌಲ್ಯದ ಮೀನುಗಳು ನಾಶವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಏಷ್ಯನ್ ಫಿಷರೀಸ್ ಸೊಸೈಟಿಯ ಮೀನು ಆರೋಗ್ಯ ವಿಭಾಗದ ಅಧ್ಯಕ್ಷೆ ಚು-ಫಂಗ್ ಲೊ, `ನಾಕಾ~ (ನೆಟ್‌ವರ್ಕ್ ಆಫ್ ಅಕ್ವಾಕಲ್ಚರ್ ಸೆಂಟರ್ಸ್‌ ಇನ್ ಏಷ್ಯಾ ಪೆಸಿಫಿಕ್) ಮಹಾ ನಿರ್ದೇಶಕ ಎ.ಇ.ಏಕನಾಥ್, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ (ಎಫ್‌ಎಒ) ಲಬ್‌ಸೆನ್ ಅಬಬುಚ್, ಕಾಲೇಜಿನ ಡೀನ್ ಕೆ.ಎಂ.ಶಂಕರ್ ಮತ್ತಿತರರು ಇದ್ದರು.

20 ದೇಶಗಳ 75 ತಜ್ಞರು ಹಾಗೂ ಭಾರತದ 125 ತಜ್ಞರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದಾರೆ.
ಮೂರು ವರ್ಷಗಳಿಗೊಮ್ಮೆ ಈ ರೀತಿಯ ವಿಚಾರ ಸಂಕಿರಣ ನಡೆಯುತ್ತಿದ್ದು, 1990ರಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ಮೊದಲ ವಿಚಾರ ಸಂಕಿರಣ ನಡೆದಿತ್ತು. ಫುಕೆಟ್, ಬ್ಯಾಂಕಾಕ್, ಫಿಲಿಪ್ಪೀನ್ಸ್‌ನ ಸೆಬು, ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್, ಕೊಲಂಬೊ, ತೈಪೆಗಳಲ್ಲಿ ಈ ಮೊದಲಿನ ವಿಚಾರ ಸಂಕಿರಣಗಳು ನಡೆದಿದ್ದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT