ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರಿಗೆ ಕಿರುಕುಳ ಆರೋಪ ಸುಳ್ಳು: ಫಾಲಾಕ್ಷ

Last Updated 23 ಸೆಪ್ಟೆಂಬರ್ 2011, 9:05 IST
ಅಕ್ಷರ ಗಾತ್ರ

ಹಾಸನ: `ವಾಟೆಹೊಳೆ ಜಲಾಶಯದಲ್ಲಿ ಮೀನುಗಾರರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಈಚೆಗೆ ಕೆಲವರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ವಾಸ್ತವವಾಗಿ ಅವರಿಗೆ ಯಾರೂ ಕಿರುಕುಳ ನೀಡಿಲ್ಲ. ಮೀನುಗಳನ್ನು ಕಳ್ಳತನದಿಂದ ಸಾಗಿಸುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕಾಗಿ ಅವರು ಪ್ರತಿಭಟನೆ ನಡೆ–ಸಿದ್ದಾರೆ~ ಎಂದು ಮೀನುಗಾರಿಕೆಯ ಗುತ್ತಿಗೆ ವಹಿಸಿಕೊಂಡಿರುವ ಸಿ.ಟಿ. ಫಾಲಾಕ್ಷ ಹಾಗೂ ಎಚ್.ಆರ್. ವಿಜಯಕುಮಾರ್ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದರು. `ಮೀನುಗಾರಿಕಾ ಮಹಾಮಂಡಳದವರು ಈ ಕೆರೆಯಲ್ಲಿ ಮೀನುಗಾರಿಕೆಯ ಗುತ್ತಿಗೆ ಪಡೆದಿದ್ದರು. ಬಳಿಕ ಸ್ಥಳೀಯರನ್ನು ಸೇರಿಸಿ ಒಂದು ಉಸ್ತುವಾರಿ ಸಮಿತಿ ರಚಿಸಿ, ಸುಮಾರು 8.36 ಲಕ್ಷ ರೂಪಾಯಿ ವೆಚ್ಚ ಮಾಡಿ ಜಲಾಶಯದಲ್ಲಿ ಮೀನು ಬಿತ್ತನೆ ಮಾಡಿದ್ದರು. ಈ ಕೆರೆಯಲ್ಲಿ ಸುಮಾರು ಎರಡು ವರ್ಷ ಮೂರು ತಿಂಗಳ ಕಾಲ ಮೀನುಗಾರಿಕೆ ಮಾಡಿರುವ ಈ ಸಮಿತಿಯವರು ಮಹಾಮಂಡಳಕ್ಕೆ ಕೇವಲ 1.93 ಲಕ್ಷ ರೂಪಾಯಿ ನೀಡಿದ್ದರು. ಮಾತ್ರವಲ್ಲದೆ ಸರಿಯಾದ ಲೆಕ್ಕಪತ್ರವನ್ನೂ ಕೊಟ್ಟಿ–ರಲಿಲ್ಲ. ಸಮಿತಿಯ ಕೆಲವರು ಮಧ್ಯವರ್ತಿಗಳ ಮೂಲಕ ಮೀನನ್ನು ಕದ್ದು ಮಾರಾಟ ಮಾಡುತ್ತಿದ್ದರು.

ಇದನ್ನು ಗಮನಿಸಿದ ಮಹಾಮಂಡಳ ಮೀನುಗಾರರ ಸಮಿತಿಯನ್ನು ವಜಾ ಮಾಡಿ ನಮಗೆ ಉಸ್ತುವಾರಿ ನೀಡಿದ್ದಾರೆ. 2012ರವರೆಗೆ ನಮ್ಮಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನಾವು ಗುತ್ತಿಗೆ ಹಣವಾಗಿ ಮಹಾಮಂಡಳಕ್ಕೆ 5.02ಲಕ್ಷ ರೂಪಾಯಿ ಪಾವತಿ ಮಾಡಿದ್ದೇವೆ. ಮಾತ್ರವಲ್ಲದೆ ಮೀನುಗಾರಿಕೆ ಕಸುಬು ಮಾಡುತ್ತಿರುವವರಿಗೆ 1.40ಲಕ್ಷ ರೂಪಾಯಿ ಸಾಲವಾಗಿ ನೀಡಿದ್ದೇವೆ. ಈ ಹಣವನ್ನು ಕೇಳಲು ಹೋದರೆ ಸಬೂಬು ಹೇಳುತ್ತಾರೆ ಎಂದು ಆರೋಪಿಸಿದರು.

`ಮಹಾಮಂಡಳದವರು ಎಲ್ಲ ಕಡೆ ಮೀನುಗಾರರಿಗೆ ಕೆ.ಜಿಗೆ 25 ರೂಪಾಯಿ ನೀಡುತ್ತಿದ್ದರೆ, ನಾವು ಸ್ಥಳೀಯರೆಂಬ ಕಾರಣಕ್ಕೆ 30 ರೂಪಾಯಿ ನೀಡುತ್ತೇವೆ. ಇದರ ಹೊರತಾಗಿಯೂ ಕೆಲವರು ಮೀನುಗಳನ್ನು ಕದ್ದು, ಬೈಕ್‌ನಲ್ಲಿ ಸಾಗಿಸಿ 80 ರಿಂದ 100 ರೂಪಾಯಿ ಬೆಲೆಗೆ ಮಾರಾಟ ಮಾಡುತ್ತಾರೆ. ನೂರು ಕೆ.ಜಿ. ಮೀನು ಹಿಡಿದರೆ ಹತ್ತು ಕೆ.ಜಿ ಲೆಕ್ಕ ಕೊಟ್ಟು ಉಳಿದವನ್ನು ಮಾರಾಟ ಮಾಡುತ್ತಾರೆ. ಅನೇಕ ಸಲ ಮಾಲು ಸಹಿತ ಪೊಲೀಸರಿಗೆ ದೂರು ನೀಡಿದ್ದೇವೆ. ಆದರೆ ಪ್ರತಿಬಾರಿ ಕ್ಷಮೆ ಕೇಳಿ ಹೊರಗೆ ಬರುತ್ತಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದನ್ನೇ ಇವರು ದೌರ್ಜನ್ಯ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ಫಾಲಾಕ್ಷ ಹಾಗೂ ವಿಜಯಕುಮಾರ್  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT