ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರಿಕೆ ಬಂದರುಗಳ ಅಭಿವೃದ್ಧಿಗೆ ನೆರವು

Last Updated 18 ಫೆಬ್ರುವರಿ 2011, 16:30 IST
ಅಕ್ಷರ ಗಾತ್ರ

ಬೆಂಗಳೂರು: ‘ಈ ಬಾರಿ ಬಜೆಟ್‌ನಲ್ಲಿ ರಾಜ್ಯದ ಹತ್ತು ಮೀನುಗಾರಿಕೆ ಬಂದರುಗಳ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ರಾಜ್ಯ ಮೀನುಗಾರಿಕೆ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಹೈದರಾಬಾದ್‌ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ದಿ ಮಂಡಳಿ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಮತ್ಸ್ಯ ಮೇಳ 2011- ಕರ್ನಾಟಕ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮೀನುಗಾರಿಕೆ ಬಂದರುಗಳಿಗೆ ಅಗತ್ಯವಾದ ಮೂಲ ಸೌಕರ್ಯ ಒದಗಿಸುವ ಉದ್ದೇಶದಿಂದ ಬಜೆಟ್‌ನಲ್ಲಿ ಹಣ ಮೀಸಲಿರಿಸಲಾಗುತ್ತಿದೆ. ಅಲ್ಲದೇ ಕರಾವಳಿ ಮೀನುಗಾರರ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು ಒಳನಾಡಿನ ಮೀನುಗಾರರ ಏಳಿಗೆಗೆ ಕ್ರಮ ಕೈಗೊಳ್ಳಲಾಗುವುದು. ಮೀನುಗಾರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ಸರ್ಕಾರ ನೀಡಲಿದೆ’ ಎಂದು ಹೇಳಿದರು.

‘ಮೀನುಗಾರರ ಯಾಂತ್ರಿಕೃತ ದೋಣಿಗಳಿಗೆ 2008-09ರಲ್ಲಿ 70 ಸಾವಿರ ಕಿಲೋ ಲೀಟರ್, 2009- 10ನೇ ಸಾಲಿನಲ್ಲಿ 85 ಸಾವಿರ ಕಿ. ಲೀ ಹಾಗೂ 2010-11ರಲ್ಲಿ 95 ಸಾವಿರ ಕಿ.ಲೀ ಡೀಸೆಲ್ ಒದಗಿಸಲಾಗಿದೆ.  ಕರಾವಳಿ ಮೀನುಗಾರಿಕೆ ಅಭಿವೃದ್ಧಿ ನಿಗಮಕ್ಕೆ ಮೂರು ಪಟ್ಟು ಅನುದಾನ ನೀಡಲಾಗಿದೆ’ ಎಂದರು.

‘ಕಳೆದ ಬಜೆಟ್‌ನಲ್ಲಿ ಒಟ್ಟು 130 ಕೋಟಿ ರೂಪಾಯಿಗಳ ಅನುದಾನವನ್ನು ಮೀನುಗಾರಿಕಾ ಕ್ಷೇತ್ರಕ್ಕೆ ನೀಡಲಾಗಿದೆ. 1993-94ರಲ್ಲಿ 16 ಕೋಟಿ ಆದಾಯ ಗಳಿಸುತ್ತಿದ್ದ ಮೀನುಗಾರಿಕೆ ಕ್ಷೇತ್ರ ಈಗ 140 ಕೋಟಿ ರೂಪಾಯಿ ಲಾಭ ಗಳಿಸುತ್ತಿರುವುದು ಗಮನಾರ್ಹ ವಿಚಾರವಾಗಿದೆ’ ಎಂದು ತಿಳಿಸಿದರು.

‘ಕಾರಂಜ ಜಲಾಶಯ ಹಾಗೂ ಮೈಸೂರು ಜಿಲ್ಲೆಯಲ್ಲಿ ಮೀನುಮರಿ ಉತ್ಪಾದನಾ ಕೇಂದ್ರಗಳನ್ನು ತೆರೆಯಲಾಗಿದೆ. ಕರಾವಳಿ ಭಾಗದಲ್ಲಿ ಮಂಜುಗಡ್ಡೆ ಉತ್ಪಾದಿಸುವ ಕಾರ್ಖಾನೆಗಳಿಗೆ ಸಹಾಯಧನ ಒದಗಿಸುವ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ಹಮ್ಮಿಕೊಳ್ಳಲಾಗಿದೆ. ಮೀನುಗಾರರಿಗೆ ಹೊರೆಯಾಗದಿರಲಿ ಎಂಬ ಉದ್ದೇಶದಿಂದ ಮಂಜುಗಡ್ಡೆ ಉತ್ಪಾದನೆ ಮೇಲೆ ವಿಧಿಸಲಾಗಿದ್ದ ಶೇ 4ರಷ್ಟು ತೆರಿಗೆಯನ್ನು ಹಿಂಪಡೆಯಲಾಗಿದೆ’ ಎಂದು ಹೇಳಿದರು.

‘ಅಲಂಕಾರಿಕ ಮೀನು ಮರಿಗಳ ಉತ್ಪಾದನೆಗಾಗಿ ನಗರದ ಹೊರವಲಯದ ಹೆಸರಘಟ್ಟದಲ್ಲಿ ಆಕ್ವಾಪಾರ್ಕ್ ನಿರ್ಮಾಣಕ್ಕೆ 2 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ. ಮೀನುಗಾರರ ಕುಟುಂಬಗಳಿಗೆ 5 ಸಾವಿರ ರೂಪಾಯಿ ಮೌಲ್ಯದ ಮೀನುಗಾರಿಕೆ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಗಿದೆ’ ಎಂದರು.

ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ದಿ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಡಾ. ಪಿ. ಕೃಷ್ಣಯ್ಯ ಮಾತನಾಡಿ ‘ಹಸಿರು ಕ್ರಾಂತಿ ಕ್ಷೀರ ಕ್ರಾಂತಿಯನ್ನು ಕಂಡಿರುವ ದೇಶದಲ್ಲಿ ಈಗ ಮೀನುಗಾರಿಕೆ ಅಭಿವೃದ್ಧಿಯನ್ನು ಸಾರುವ ನೀಲಿಕ್ರಾಂತಿಗೆ ಮುಂದಾಗಬೇಕಿದೆ. ಮೀನುಗಾರಿಕೆ ಅಭಿವೃದ್ಧಿಗಾಗಿ ಮಂಡಳಿ 300 ಕೋಟಿ ರೂಪಾಯಿ ಅನುದಾನ ನೀಡುತ್ತಿದ್ದು ರಾಜ್ಯ ಅದರ ಸದುಪಯೋಗ ಪಡೆಯಬೇಕಿದೆ’ ಎಂದರು.

‘ರಾಜ್ಯ ಮೀನುಗಾರಿಕೆ ಇಲಾಖೆಯಲ್ಲಿ ಶೇ 35ರಷ್ಟು ಹುದ್ದೆಗಳು ಖಾಲಿ ಉಳಿದಿರುವುದು ಗಮನಕ್ಕೆ ಬಂದಿದೆ. ಯೋಜನೆಗಳು ವಿಫುಲವಾಗಿದ್ದರೂ ಮಾನವ ಸಂಪನ್ಮೂಲ ಕೊರತೆಯಿಂದಾಗಿ ಅವು ಫಲಾನುಭವಿಗಳಿಗೆ ದೊರೆಯದಂತೆ ಆಗಬಾರದು. ರಾಜ್ಯದ ಮೀನು ಮಾರುಕಟ್ಟೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕಿದೆ’ ಎಂದು ಮನವಿ ಮಾಡಿದರು.

ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ಮಾತನಾಡಿ ‘ಮೀನುಗಾರಿಕೆ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮೀನುಗಾರಿಕೆಗೆ ಮುಖ್ಯಮಂತ್ರಿಗಳು ಪ್ರತಿ ಬಜೆಟ್‌ನಲ್ಲಿಯೂ ವಿಶೇಷ ಒತ್ತು ನೀಡುತ್ತಿದ್ದಾರೆ. ಮೀನುಗಾರರ ಕುಟುಂಬಗಳಿಗೆ ಅನುಕೂಲವಾಗುವಂತಹ ಅನುದಾನವನ್ನು ಮುಂದಿನ ದಿನಗಳಲ್ಲಿ ನೀಡಲು ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದರು.

ಕರಾವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗರಾಜ ಶೆಟ್ಟಿ ಮಾತನಾಡಿ ‘ಆಂಧ್ರ ಪ್ರದೇಶ 50 ಲಕ್ಷ ಟನ್ ಮತ್ಸ್ಯ ಉತ್ಪಾದನೆಯಲ್ಲಿ ತೊಡಗಿದ್ದು ರಾಜ್ಯದಲ್ಲಿ ಕೇವಲ 4.5 ಲಕ್ಷ ಟನ್ ಉತ್ಪಾದನೆಯಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ  ಒಳನಾಡಿನ ಮೀನುಗಾರಿಕೆ ಅಭಿವೃದ್ಧಿಗೆ ಒತ್ತು ನೀಡಬೇಕಿದೆ’ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೀನುಗಾರಿಕೆ ಸಚಿವ ಜೆ. ಕೃಷ್ಣ ಪಾಲೇಮಾರ್ ಮಾತನಾಡುತ್ತಾ ‘ಮೀನುಗಾರರ ನೋವುಗಳಿಗೆ ಸ್ಪಂದಿಸಲು ಸರ್ಕಾರ ಬದ್ಧವಾಗಿದೆ. ಅಳಿವಿನಂಚಿನಲ್ಲಿರುವ ಮೀನು ತಳಿಗಳ ಸಂವರ್ಧನೆಗೆ ಶ್ರಮಿಸಲಾಗುವುದು’ ಎಂದು ಹೇಳಿದರು.

ಸಂಸದ ಡಿ.ವಿ.ಸದಾನಂದ ಗೌಡ, ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿ ಅಧ್ಯಕ್ಷ ಎನ್. ನಂಜೇಗೌಡ, ಕರ್ನಾಟಕ ಮೀನುಗಾರಿಕೆ ಅಭಿವೃದ್ದಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಂಡಳಿ ಅಧ್ಯಕ್ಷ ಯಶಪಾಲ ಸುವರ್ಣ, ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಳಿ ಅಧ್ಯಕ್ಷ ಗಣಪತಿ ಮಾಂಗ್ರೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೂರ್ತಿ ಚಿಕ್ಕದು ಕೀರ್ತಿ ದೊಡ್ಡದು...
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಮತ್ಸ್ಯಮೇಳದಲ್ಲಿ ಪ್ರದರ್ಶನವಾಗುತ್ತಿರುವ ಅರ್ಧ ಇಂಚು ಉದ್ದದ ಸೀಗಡಿಯೊಂದರ ಬೆಲೆ ಬರೋಬ್ಬರಿ 1 ಸಾವಿರ ರೂಪಾಯಿಗಳು.

ಬಿಳಿ ಮತ್ತು ಕೆಂಪು ಬಣ್ಣದಲ್ಲಿ ಕಂಗೊಳಿಸುವ ಈ ಸೀಗಡಿಯ ವೈಶಿಷ್ಟ್ಯ ಎಂದರೆ ಅದರ ಬಣ್ಣದ ದೇಹ ಹಾಗೂ ಪುಟಾಣಿ ಗಾತ್ರ. ದೊಡ್ಡದಾಗಿ ಬೆಳೆಯದೇ ಇರುವುದರಿಂದ ಆಕ್ವೇರಿಯಂಗಳಲ್ಲಿ ಇದನ್ನು ಬೆಳೆಸಲು ಅನುಕೂಲವಾಗುತ್ತದೆ ಎನ್ನುತ್ತಾರೆ ಮತ್ಸ್ಯ ಮಾರಾಟಗಾರರು.

ವಾಸ್ತುಮೀನು ಎಂದೇ ಪ್ರಸಿದ್ಧವಾಗಿರುವ ಫ್ಲವರ್ ಹಾರ್ನ್ ಹಾಗೂ 60 ಸಾವಿರದಿಂದ 1 ಲಕ್ಷ್ರರೂ ಬೆಲೆ ಬಾಳುವ ಅರೋವನಾ ಮೇಳದಲ್ಲಿ ಹೆಚ್ಚು ಜನರನ್ನು ಆಕರ್ಷಿಸುತ್ತಿರುವ ಮೀನುಗಳಾಗಿವೆ.

ಅಸಮಾಧಾನ
ಮೀನುಗಾರಿಕೆಯನ್ನೇ ಕುಲಕಸುಬಾಗಿರಿಸಿಕೊಂಡಿರುವ ಸಮುದಾಯಗಳನ್ನು ಹೊರತುಪಡಿಸಿ  ಕೇವಲ ಬಲಾಢ್ಯರಿಗೆ ಮೀನುಗಾರಿಕೆಗೆ ಅವಕಾಶ ಕಲ್ಪಿಸಲಾಗುತ್ತಿರುವ ಬಗ್ಗೆ ರಾಜ್ಯ ಗಂಗ ಮತಸ್ಥ ಕೋಲಿ ಬೆಸ್ತರ ಸಂಘ ಮೇಳದಲ್ಲಿ ಅಸಮಾಧಾನ ವ್ಯಕ್ತಪಡಿಸಿತು.

‘ರಾಜ್ಯ ಸರ್ಕಾರ ಈ ಹಿಂದೆ ಹೊರಡಿಸಿರುವ ಸುತ್ತೋಲೆ 139ರಲ್ಲಿ ಸಂಘ ಮಾಡಿಕೊಂಡವರಿಗೆ ಮಾತ್ರ ಮೀನುಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮೀನುಗಾರಿಕೆಯನ್ನೇ ಕುಲಕಸುಬನ್ನಾಗಿ ಮಾಡಿಕೊಂಡಿರುವ ಗಂಗ ಮತಸ್ಥರು ಅವಕಾಶ ವಂಚಿತರಾಗುತ್ತಿದ್ದಾರೆ’ ಎಂದು ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಮುಖ್ಯಮಂತ್ರಿಗಳ ಎದುರು ಆಕ್ಷೇಪ ವ್ಯಕ್ತಪಡಿಸಿದರು.ಸಚಿವ ಕೃಷ್ಣ ಪಾಲೇಮಾರ್ ಸಂಘದ ಸದಸ್ಯರೊಡನೆ ಮಾತುಕತೆಗೆ ಒಪ್ಪಿದ ನಂತರ ಪರಿಸ್ಥಿತಿ ತಿಳಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT