ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನ್ ಗಸಿ... ಡೆಂಜಿ ಫ್ರೈ... ವ್ಹಾವ್!

Last Updated 7 ಜೂನ್ 2012, 19:30 IST
ಅಕ್ಷರ ಗಾತ್ರ

ಪ್ರತಿ ಬಾರಿ ಹೊಸ ಹೊಸ ಖಾದ್ಯ ನಾಲಿಗೆಯನ್ನು ಸ್ಪರ್ಶಿಸುತ್ತಿದ್ದಂತೆ ಪಕ್ಕದ ಊಟದ ಮೇಜಿನಿಂದಲೂ ವ್ಹಾವ್... ಓಹ್... ಖಾರ... ಸ್ಪೈಸಿ ಅನ್ನೋ ಉದ್ಗಾರಗಳು ಈಚೆ ಮೇಜಿನವರ ಬಾಯಿ ಉರಿಯನ್ನು ಮರೆಸುತ್ತಿತ್ತು. ಅವರತ್ತ ನೋಡಿ ನಗುತ್ತಲೇ ಚೆಮ್ಮೀನು, ಕರಿಮೀನು, ಸಿಗಡಿ, ಏಡಿಯ ಸವಿ ಸವಿ ಖಾದ್ಯಗಳನ್ನು ಮತ್ತೆ ಚಪ್ಪರಿಸಿ ಖಾರ ಇದ್ರೇನೇ ಚಂದ ಅಲ್ವಾ ಅಂತ ಪಕ್ಕದವರನ್ನು ಉದ್ದೇಶಿಸಿ ತಮಗೇ ಸಾಂತ್ವನ ಹೇಳಿಕೊಳ್ಳುತ್ತಿದ್ದರು.
 

ರೆಸಿಡೆನ್ಸಿ ರಸ್ತೆಯಲ್ಲಿರುವ ಐಟಿಸಿ ರಾಯಲ್ ಗಾರ್ಡೆನಿಯ ಪಂಚತಾರಾ ಹೋಟೆಲ್‌ನ ಕಬ್ಬನ್ ಪೆವಿಲಿಯನ್‌ನಲ್ಲಿ ಮಾಧ್ಯಮಸ್ನೇಹಿತರು ಕಡಲೋತ್ಪನ್ನಗಳವೈವಿಧ್ಯಮಯ ಖಾದ್ಯಗಳನ್ನು ಸವಿಯುತ್ತಾ ಹೀಗೆ ಉದ್ಗಾರಗಳ ಮೂಲಕ ಆನಂದಿಸುತ್ತಿದ್ದರೆ ಬಾಣಸಿಗ ಹರೀಶ್ ಮುಗುಳ್ನಗುತ್ತಾ, ಕೃತಜ್ಞತಾಪೂರ್ವಕ ನಮಸ್ಕರಿಸುತ್ತಾ ಪ್ರತಿಸ್ಪಂದನ ವ್ಯಕ್ತಪಡಿಸುತ್ತಿದ್ದರು.

ಕಬ್ಬನ್ ಪೆವಿಲಿಯನ್‌ನಲ್ಲಿ ಜೂನ್ 10ರವರೆಗೆ ನಡೆಯಲಿರುವ `ಕೊಂಕಣ ಮತ್ತು ದಕ್ಷಿಣ ಕರಾವಳಿಯ ಕಡಲ ಉತ್ಪನ್ನಗಳ ಖಾದ್ಯ ಉತ್ಸವ~ದ ಪೂರ್ವಭಾವಿಯಾಗಿ `ಮೆನು~ ಪರಿಚಯಿಸುವ ಕಾರ್ಯಕ್ರಮ ಅದಾಗಿತ್ತು.

ಉತ್ಸವದ ವೇಳೆ ಎಲ್ಲಾ ಗ್ರಾಹಕರನ್ನು ವೈಯಕ್ತಿಕವಾಗಿ ಮಾತನಾಡಿಸಲು ಅವಕಾಶವಿರುವುದೋ ಇಲ್ಲವೋ ಎರಡು ಮೂರು ಮೇಜಿನ ಸುತ್ತ ಹಂಚಿಕುಳಿತಿದ್ದ ಒಬ್ಬೊಬ್ಬರನ್ನೂ `ಮೀನ್ ಗಸಿ~ ಹೇಗಿದೆ?, `ಡೆಂಜಿ ಕಾರವಾರ ಫ್ರೈ ಇಷ್ಟ ಆಯ್ತಾ?~, ಇದು ಸಿಗಡಿಯಿಂದ ಮಾಡಿದ ಕುಜಿತ್, ತುಂಬಾ ಸ್ಪೈಸಿಯಾಗಿದೆಯಾ?~ ಅಂತ ವಿಚಾರಿಸಿದರು ಹರೀಶ್. ಚೆನ್ನೈನ ಶೆರಟಾನ್ ಪಾರ್ಕ್ ತಾರಾ ಹೋಟೆಲ್‌ನಿಂದ ಇಲ್ಲಿಗೆ ಅವರು ಬಂದಿರುವುದೇ ತಮ್ಮ ನಳಪಾಕದ ಕೌಶಲ್ಯವನ್ನು ಇಲ್ಲಿನ ಮೀನುಪ್ರಿಯರಿಗೆ ಪರಿಚಯಿಸಲು.

ಅವರ ಬೆನ್ನಲ್ಲೇ ಬಂದ ಐಟಿಸಿ ಗಾರ್ಡೆನಿಯಾದ ಬಾಣಸಿಗ ರವಿದೀಪ್ ಧೂಪಿಯಾ ಕೂಡಾ ಯಾವ ಖಾದ್ಯದಲ್ಲಿ ಯಾವ ಕೊರತೆಯಿದೆ ಎಂದು ಕೇಳಿದರು.

ಖಡಕ್ ಮಸಾಲೆ...

ಹೇಳಿ ಕೇಳಿ ಕೊಂಕಣ ಮತ್ತು ದಕ್ಷಿಣ ಕರಾವಳಿಯ ಖಾದ್ಯೋತ್ಸವವಿದು. ಹೀಗಾಗಿ, ತುಳುವರ `ಮೀನ್ ಗಸಿ~ ಇಲ್ಲದಿದ್ದರೆ ಮಂಗಳೂರಿನ ಅರಬ್ಬಿ ಸಮುದ್ರಕ್ಕೇ ಅನ್ಯಾಯ ಮಾಡಿದಂತಾಗದೇ? ಮೀನ್ ಗಸಿಯನ್ನು ಅಲ್ಪಸ್ವಲ್ಪ ಸವಿಯುತ್ತಿದ್ದಂತೆ ಮಂಗಳೂರಿಗರ ಅಪ್ಪಟ `ಪುಳಿಮುಂಚಿ~ ತಿಂದಂತಾಯಿತು. ಉಪ್ಪು-ಹುಳಿ-ಕಾರ ಖಡಕ್!

ಅದರ ಬೆನ್ನಲ್ಲೇ ಸರ್ವ್ ಆದದ್ದು ಡೆಂಜಿ ಕಾರವಾರ ಫ್ರೈ. ಡೆಂಜಿ ಅಂದರೆ ಏಡಿ/ಕ್ರ್ಯಾಬ್ (ತುಳು). ಕೈಯಲ್ಲೆ ಸಿದ್ಧಪಡಿಸಿದ ಮಸಾಲೆ ಹಚ್ಚಿ ರವೆಯಲ್ಲಿ ಅದ್ದಿ ಎಣ್ಣೆಯಲ್ಲಿ ಕರಿದ ಏಡಿ ಸ್ಪೆಷಲ್ ಇದು. ಚರ್ಮವನ್ನು ಕೊರೆಯುವಂತೆ ಕಿರುಕುಳ ಕೊಡುತ್ತಿದ್ದ ಎ.ಸಿ.ಯ ಪ್ರತಾಪಕ್ಕೆ ವಿಚಲಿತರಾದವರನ್ನು ಹದ್ದುಬಸ್ತಿಗೆ ತಂದದ್ದು ಈ ಡೆಂಜಿ ಡೀಪ್ ಫ್ರೈ! ತಣ್ಣಗಿನ ಬಿಯರ್ ಆದರೂ ಇದ್ದಿದ್ದರೆ... ಎಂದು ಪಾನಪ್ರಿಯರು ಒಳಗೊಳಗೆ ಆಸೆಪಟ್ಟಿದ್ದರೆ ತಪ್ಪೇನಿಲ್ಲ ಬಿಡಿ.
ಹುಣಸೆಯ ಹುಳಿ, ಕೆಂಪು ಒಣಮೆಣಸಿನ ಗರಂ ಮತ್ತು ಮಲೆನಾಡಿನ ಸಂಬಾರಗಳಲ್ಲಿ ಅದ್ದಿತೆಗೆದಂತಿದ್ದ ಚೆಮ್ಮೀನ್ ಉಳಾರ್ತಿಯಟ್ಟು ರುಚಿಗೆ ಸೋತ ಒಬ್ಬಾಕೆ ಮತ್ತೊಂದು ಸರ್ವ್‌ಗೆ ಮನವಿ ಮಾಡಿಯೇಬಿಟ್ಟಳು!

ಸಿಗಡಿ ಮತ್ತು ಏಡಿಯ ರುಚಿಯನ್ನು ಬಲ್ಲವರೇ ಬಲ್ಲರು. ಕರಾವಳಿ ಭಾಗದಲ್ಲಿ ಸಸ್ಯಾಹಾರಕ್ಕೂ ಮಾಂಸಾಹಾರಕ್ಕೂ ತೆಂಗಿನಕಾಯಿ (ಕೊಬ್ಬರಿ) ತುರಿ ಇಲ್ಲವೇ ಅದರ ಹಾಲು ಹಾಕದೇ ಯಾವುದೇ ಪದಾರ್ಥ ತಯಾರಿಸುವುದನ್ನು ಊಹಿಸುವುದೂ ಸಾಧ್ಯವಿಲ್ಲ. ಹೀಗಿರುವಾಗ, ಬಾಣಸಿಗ ಹರೀಶ್ ಕೊಬ್ಬರಿ ಹಾಲನ್ನು ಮರೆತು ಸಿಗಡಿ, ಕೆಮ್ಮೀನು, ಚೆಮ್ಮೀನು ಖಾದ್ಯ ತಯಾರಿಸುವುದುಂಟೇ?

`ನುಗ್ಗೇಕಾಯಿಯ ಸಣ್ಣ ಸಣ್ಣ ತುಂಡು ಹಾಗೂ ಕರಾವಳಿ ಮಸಾಲೆಯಲ್ಲಿ ಹದವಾಗಿ ಬೇಯಿಸಿದ ಸಿಗಡಿ ಗಸಿಗೆ ರುಚಿ ಬಂದಿದ್ದೇ ಕೊಬ್ಬರಿ ಹಾಲು ಸೇರಿಸಿದ ನಂತರ ಎಂದು ಬೇರೆ ಹೇಳಬೇಕಿಲ್ಲ. ಇದೇ ಮಸಾಲೆಯಲ್ಲಿ ಬೆಂದ ಚೆಮ್ಮೀನಿನ ರುಚಿ ಹೆಚ್ಚಿಸಲು ಕಾಳುಮೆಣಸು ಪುಡಿ ಬೆರೆಸಿದ್ದೇನೆ~ ಎಂದರು ಹರೀಶ್. ಪೆಪ್ಪರ್ ಫ್ರೈಡ್ ರೈಸ್ ಕಭೀ ಖುಷ್ ಕಭೀ ಖಟ್ಟಾ ಎಂಬಂತಿತ್ತು. ಮೊದಲ ತುತ್ತು ಬಾಯಿಗೆ ಹೋಗುತ್ತಲೇ ಸ್ಪ್ರಿಂಕ್ಲರ್‌ನಿಂದ ನೀರು ಚಿಮ್ಮಿದಂತೆ ಜೊಲ್ಲುರಸ ಬಾಯ್ತುಂಬಿಕೊಂಡಿತು!

ಹೀಗೆ, ಕೊಂಕಣ ಮತ್ತು ದಕ್ಷಿಣ ಕರಾವಳಿಯ ಸೀಫುಡ್ ಉತ್ಸವದಲ್ಲಿ ಹತ್ತಾರು ಬಗೆಯ ಖಾದ್ಯಗಳು ಗ್ರಾಹಕರಿಗಾಗಿ ಕಾದಿವೆ. ಅದೇ ಸಿಗಡಿ, ಅದೇ ಏಡಿ, ಅದೇ ಮೀನು. ಆದರೆ ಪಾಕವಿಧಾನದಲ್ಲಿ ಪ್ರಾದೇಶಿಕತೆಯ ಛಾಪು ಇದೆ, ರುಚಿಯಲ್ಲಿ ವೈವಿಧ್ಯವಿದೆ. ಸಸ್ಯಾಹಾರಿಗಳಿಗೂ ಮಜಬೂತಾದ ಖಾದ್ಯಗಳು ಇವೆ. ಸ್ಟಾರ್ಟರ್‌ನಿಂದ ಹಿಡಿದು ಬಾದಾಮಿ ಹಲ್ವಾದ ಡೆಸರ್ಟ್‌ವರೆಗೆ ಪ್ರತಿಯೊಂದನ್ನೂ ಸಾವಕಾಶವಾಗಿ ಕಣಕಣವಾಗಿ ಆಸ್ವಾದಿಸುತ್ತಾ ಸುತ್ತಾ ಮೆಲ್ಲುವ ಸುಖ... ಯಾರಿಗುಂಟು ಯಾರಿಗಿಲ್ಲ...

ಈ ಸೀಫುಡ್ ಉತ್ಸವದಲ್ಲಿ ಮಧ್ಯಾಹ್ನದ ಭೋಜನ ಹಾಗೂ ರಾತ್ರಿಯೂಟಕ್ಕೆ ಈ ಮೆನುಗಳು ಲಭ್ಯ. ಒಂದು ವಿಶೇಷವೆಂದರೆ, ನಾಲ್ಕೂ ದಿನವೂ ಮೆನು ಬದಲಾಗುತ್ತಿರುತ್ತದೆ. ಸಾಂಪ್ರದಾಯಿಕ ಹಾಗೂ ಸಮಕಾಲೀನ ಸಸ್ಯಾಹಾರ, ಮಾಂಸಾಹಾರ ಪದಾರ್ಥಗಳನ್ನು ಸವಿಯಲು ನಾಲ್ಕೂ ದಿನ ಭೇಟಿ ಕೊಡುವ ಮನಸ್ಸಿದೆ ಅನ್ನುವವರಿಗೆ ಕೆಂಪುಹಾಸಿನ ಸ್ವಾಗತ ಕೋರುತ್ತದೆ ಕಬ್ಬನ್ ಪೆವಿಲಿಯನ್.

ಮಧ್ಯಾಹ್ನದ ಭೋಜನ 12.30ರಿಂದ, ರಾತ್ರಿಯೂಟ ಇಳಿಸಂಜೆ 7ರಿಂದ ಆರಂಭ. ಮುಂಗಡ ಕಾದಿರಿಸುವವರಿಗೆ ಸಂಪರ್ಕ ಸಂಖ್ಯೆ: 2211 9898.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT