ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀರಲಾಗದ ತಾತ್ವಿಕ ಸರಹದ್ದು

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಸಾಹಿತ್ಯ ವಸ್ತು ತನ್ನ ಸಮಕಾಲೀನ ಆಗುಹೋಗುಗಳಲ್ಲಿ ಆಕೃತಿಗಳನ್ನು ನಿರ್ಮಿಸಿಕೊಳ್ಳುತ್ತದೆ. ಭಾಷೆ, ಶೈಲಿ, ನಿಲುವುಗಳೂ ಕೂಡ ತಮ್ಮ ಕಾಲದ ಚೌಕಟ್ಟಿನಲ್ಲಿಯೇ ತಾಳಬೇಕಾಗುವುದು.

ಬರಹಗಾರನೊಬ್ಬನ ಉತ್ಕಟತೆ ಮತ್ತು ಉಲ್ಲಂಘನೆಗಳು ಎಷ್ಟರಮಟ್ಟಿಗೆ ತಮ್ಮ ಸಂದರ್ಭದ ಹಂಬಲಗಳಿಗೆ ಈಡಾಗುತ್ತವೆ ಇಲ್ಲವೇ ವಿಸ್ತರಿಸುತ್ತವೆ ಎಂಬುದೇ ಬರಹದ ಶಕ್ತಿಯ ಮುಖ್ಯ ನಿರ್ಧಾರಕವಾಗಿದ್ದು, ಅದರ ನಿರ್ಣಯ ಸಾಮರ್ಥ್ಯವೂ ಈಡಾಗುವ ಇಲ್ಲವೇ ವಿಸ್ತರಿಸುವ ಗುಣ ಹೊಂದಿರಬೇಕು.

ನವ್ಯದ ಕೃತಿಗಳು ಶೋಧಿಸಿದ ಅನಾಥಪ್ರಜ್ಞೆ ಮತ್ತು ಭಾವಿಸಿಕೊಂಡ ಸಾಮಾಜಿಕ ತಿಳಿವಳಿಕೆಗಳಾಗಲೀ, ದಲಿತ ಬಂಡಾಯಗಳು ಒಳಗೊಂಡ ಶೋಷಣೆಯ ಪರಿಕಲ್ಪನೆ ಮತ್ತು ಸಾಮಾಜಿಕ ಪ್ರಜ್ಞೆಯಾಗಲೀ ಹೊಸ ಶತಮಾನದ ಒಂದು ದಶಕ ಮುಗಿದಿರುವ ಈ ಸಂದರ್ಭದಲ್ಲಿ ಬದಲಾದ ಸ್ವರೂಪದಲ್ಲಿಯೇ ಚಿತ್ರಿತವಾಗಬೇಕು. ಇಲ್ಲವಾದಲ್ಲಿ ಆ ಬರಹ ಎಷ್ಟೇ ಪ್ರಾಮಾಣಿಕವಾದುದಾದರೂ ಹಳೆಯಸೂತ್ರ ಮತ್ತು ಸರಂಜಾಮುಗಳ ಕ್ಷೀಣ ಬೆಳಕಿನಲ್ಲಿ ಮಸುಕಾಗಿಬಿಡುವುದು.

ಒಂದು ಕಾಲದ ಸಂವೇದನೆಯನ್ನು ರೂಪಿಸಿದ ಇಲ್ಲವೇ ಅಲುಗಾಡಿಸಿದ ಅಂಶಗಳು ಇನ್ನೊಂದು ಕಾಲದಲ್ಲೂ ಹಾಗೇ ವರ್ತಿಸಲಾರವು. ಬಹಳವೆಂದರೆ ಕೃತಿಗೆ ಓದಿಸಿಕೊಂಡು ಹೋಗುವ ಗುಣ ಪ್ರಾಪ್ತವಾಗಬಹುದೇ ವಿನಾ ಕೃತಿಯೇ ಹಂಬಲಿಸುವ ಮಹತ್ವಾಕಾಂಕ್ಷೆಯನ್ನು ತೂಗಿಸಲಾರವು. ಪ್ರಸ್ತುತ ಕಮಲಾ ನರಸಿಂಹರ `ಹದ್ದು~ ಕಾದಂಬರಿ ಇಂಥ ವಿಶಿಷ್ಟ ಸಮಸ್ಯೆಯನ್ನು ತನ್ನ ಪ್ರಯತ್ನದ ಬಲದಿಂದಲೇ ಆಹ್ವಾನಿಸಿಕೊಂಡಿದೆ.

`ಹದ್ದು~ ಕಮಲಾ ನರಸಿಂಹರ ಮೂರನೆಯ ಕಾದಂಬರಿ. `ಭೂಗರ್ಭ~, `ಆಪೋಶನ~ ಮೊದಲ ಎರಡು ಕಾದಂಬರಿಗಳು. ಅತ್ಯಂತ ಆತ್ಮವಿಶ್ವಾಸದಿಂದ, ದಿಟ್ಟವಾಗಿ ಮತ್ತು ಸರಳವಾಗಿ ಬರೆಯುವ ಲೇಖಕಿ ಕಾದಂಬರಿಗಾಗಿ ವಿಶಾಲ ಭೂಮಿಕೆಯನ್ನು ಸಿದ್ಧಮಾಡಿಕೊಂಡಿದ್ದಾರೆ. 

ಎಳೆ ವಯಸ್ಸಿನಲ್ಲಿ ವೈಧವ್ಯ ಒಪ್ಪಿಕೊಳ್ಳಬೇಕಾದ ಬ್ರಾಹ್ಮಣ ಹೆಣ್ಣುಮಗಳೊಬ್ಬಳು ಪರಿಸ್ಥಿತಿಯ ವ್ಯಂಗ್ಯ, ಕ್ರೌರ್ಯವನ್ನು ಸಮಚಿತ್ತದಿಂದ ಸ್ವೀಕರಿಸಿ ಸಾಮಾಜಿಕವಾಗಿ ಬೆಳೆದು ಶಾಸಕಿಯಾಗುವವರೆಗಿನ ಕಥೆ ಇದರಲ್ಲಿದೆ. ಹಾಗೆ ಸಾಮಾಜಿಕಗೊಂಡ ಸಂದರ್ಭದಲ್ಲೇ ತನ್ನ ವೈಯಕ್ತಿಕತೆಯ ಆಳಕ್ಕೆ ಇಳಿಯುವ ಒಳಶೋಧವೂ ಜರುಗುತ್ತದೆ.

ಹೊರಗೆ ನೂರಾರು ಜನರಿಗೆ ಆಸರೆಯಾಗುವ ನಾಯಕಿ ಸಾವಿತ್ರಿ ತನ್ನ ಆಸರೆಗಾಗಿ ಪರಿತಪಿಸುವ ವಿಷಾದ ಇಲ್ಲಿದೆ. ಅನೇಕ ಕುಟುಂಬಗಳನ್ನು ಕಟ್ಟಿಕೊಟ್ಟ ಆಕೆ ತನ್ನ ಹಾಗೂ ತನ್ನ ಮಕ್ಕಳ ಕುಟುಂಬದ ಶಿಥಿಲ ಪಾಯದ ಮೇಲೆ ವಿಹ್ವಲಗೊಳ್ಳುತ್ತಾಳೆ. ಈ ಯಾವ ಸಂದರ್ಭದಲ್ಲೂ ಆಕೆ ಅಧೀರಳಾಗದೆ ತನ್ನ ಗುರಿಗಳ ಕಡೆಗೆ ಸ್ಥೈರ್ಯದಿಂದ ಮುನ್ನಡೆಯುತ್ತಾಳೆ ಎಂಬುದರ ಮೂಲಕ ಕಾದಂಬರಿಯ ಸ್ತ್ರೀಪರ ಮತ್ತು ಜೀವಪರ ಧೋರಣೆಗಳು ದಾಖಲಾಗುತ್ತವೆ.

ಇದಕ್ಕಾಗಿ ಕಮಲಾ ಅವರು ನಿರ್ಮಿಸುವ ವಸ್ತು ಪರಿಕರಗಳು ಸಮೃದ್ಧವೂ ಕುತೂಹಲಕರವೂ ಆಗಿವೆ.

1. ವೈಧವ್ಯದ ಕಾರಣದಿಂದಾಗಿ ತಾರುಣ್ಯದಲ್ಲೇ ತಲೆ ಬೋಳಿಸಿಕೊಂಡು, ಕೆಂಪುಸೀರೆಯುಟ್ಟು ಮಡಿ ಹೆಂಗಸಾಗುವ ತಲ್ಲಣ.
2. ಸಂಪ್ರದಾಯಸ್ಥ ಬ್ರಾಹ್ಮಣರ ಕುಟುಂಬದ ಶಾರದಾ ಎಂಬ ಯುವತಿ ಅದೇ ಊರಿನ ಮುಸ್ಲಿಂ ಯುವಕನೊಬ್ಬನನ್ನು ಪ್ರೇಮಿಸಿ ಮದುವೆಯಾಗುವುದರಿಂದ ಉಂಟಾಗುವ ಜಾತಿ ಮತ್ತು ಧರ್ಮೀಯ ಪ್ರಶ್ನೆಗಳು ಮತ್ತು ಮತೀಯಗಲಭೆ.
3. ಅಂತರ ಧರ್ಮೀಯ ವಿವಾಹವಾದ ಮಗಳನ್ನು ಘಟಶ್ರಾದ್ಧದ ಮೂಲಕ ನೀಗಿಸಿಕೊಳ್ಳುವ ಅಪ್ಪ.
4. ಬಿಸಿಯೂಟ, ವಿದ್ಯಾರ್ಥಿನಿಲಯಗಳ ಮೂಲಕ ಹಿಂದುಳಿದವರನ್ನು ಒಳಗೊಂಡು ಬೆಳೆಯಗೊಡುವ ಸಮಾನತೆಯ ಕನಸುಗಳು.
5. ಹರಿಜನರನ್ನು, ಹಿಂದುಳಿದವರನ್ನು ಊರ ದೇವಾಲಯದ ರಥೋತ್ಸವದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಸಂಘರ್ಷ.
6. ಜಾತ್ರೆಯ ಹೆಸರಲ್ಲಿ ಪ್ರಾಣಿ ಬಲಿ ತಪ್ಪಿಸಲು ನಡೆಸುವ ಸಾಹಸ.
7. ಮಗನ ಅಂತರದೇಶೀಯ, ಮಗಳ ಅಂತರ ಜಾತೀಯ ವಿವಾಹ ಹಾಗೂ ತನ್ನ ಅಂತರಜಾತೀಯ ಒಳ ಸಂಬಂಧದ ಮೂಲಕ ಪ್ರಕಟಗೊಳ್ಳುವ ಸಂಸ್ಕೃತಿ ಸಂಕರದ ಉತ್ಸಾಹ.
8. ಸ್ತ್ರೀ ಕೇಂದ್ರಿತ ನೆಲೆಯಲ್ಲಿ ಕೌಟುಂಬಿಕ ಹಾಗು ಸಾಮಾಜಿಕ ಶಕ್ತಿಯನ್ನು ಕಾಣುವ ಹಂಬಲ.

ಹೀಗೆ ಹಲವು ಮಹತ್ವಪೂರ್ಣ ಅಂಶಗಳನ್ನು ಕೇವಲ ಇನ್ನೂರ ಐವತ್ತು ಪುಟಗಳಲ್ಲಿ ನಿರ್ವಹಿಸಿರುವುದರಿಂದ ಇಡೀ ಕೃತಿ `ಮಿನಿಯೇಚರ್~ನಂತೆ ಕಾಣುತ್ತದೆ. ಇಲ್ಲಿಯ ಬಹುಮುಖ್ಯ ಅಂಶಗಳು ಕನ್ನಡ ಕಥನ ಪ್ರಪಂಚದಲ್ಲಿ ಈಗಾಗಲೇ ಗಂಭೀರವಾಗಿ ಚರ್ಚೆಗೊಳಗಾಗಿರುವುದರಿಂದ ಹೊಸತನ್ನು ನಿರೀಕ್ಷಿಸುವ ಮನಸ್ಸುಗಳಿಗ ಹೊಸತೇನೂ ಪ್ರಾಪ್ತವಾಗದ ಅನುಭವವಾಗುತ್ತದೆ.

ಎಂ.ಕೆ.ಇಂದಿರಾ ಅವರ `ಫಣಿಯಮ್ಮ~, ಭೈರಪ್ಪನವರ `ದಾಟು~, ಅನಂತಮೂರ್ತಿಯವರ `ಭಾರತೀಪುರ~ , `ಘಟಶ್ರಾದ್ಧ~ ಹೀಗೆ ಎಲ್ಲವನ್ನೂ ನೆನಪಿಸುತ್ತಾ ಸಾಗುವ ಬರವಣಿಗೆ ಯಾವುದನ್ನೂ ಕೇಂದ್ರವಾಗಲು ಬಿಡುವುದಿಲ್ಲ.

ಈಗಾಗಲೇ ರೂಢಿಯಾಗಿರುವ ಕನ್ನಡ ಸಾಹಿತ್ಯದ ಕೆಲವು ಸಂಗತಿಗಳು ರೂಢಿಗೊಳಗಾದ ಸಮೀಕರಣಗಳಲ್ಲಿ ಮತ್ತೆ ಮತ್ತೆ ಚರ್ಚಿತವಾಗುತ್ತಿರುವ ಉದಾಹರಣೆಯಂತೆ ಇದು ತೋರುತ್ತದೆ.

ಬದಲಾದ ಸಾಮಾಜಿಕ, ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ಸಮಸ್ಯೆಯ ಸ್ಥಿತ್ಯಂತರಗಳನ್ನು ಗುರುತಿಸುವ ಉಪಕ್ರಮ ಇಲ್ಲಿ ಪ್ರಧಾನವಾಗಿಲ್ಲ. ಹೀಗಾಗಿ ಪ್ರಸ್ತುತತೆ ಮತ್ತು ಸಮಕಾಲೀನತೆಯನ್ನು ಇಲ್ಲವಾಗಿಸಿಕೊಳ್ಳುವ ವಸ್ತು ಅದೆಷ್ಟೇ ಮುಖ್ಯವೆನಿಸಿದರೂ ಸಾಹಿತ್ಯಕವಾಗಿ ಬಾಳುವುದು ಕಷ್ಟ. 

ಇದು ಬರವಣಿಗೆಯ ತಾತ್ವಿಕ ಮಿತಿ. ಇಂತಹ ತಾತ್ವಿಕ ಮಿತಿ ಕೇವಲ ಕಮಲಾ ನರಸಿಂಹ ಅವರದ್ದು ಮಾತ್ರವೇ ಅಲ್ಲ ಎಂದೂ ಇಲ್ಲಿ ಹೇಳಬೇಕು. ಈ ಹಲವು ಹತ್ತು ಅಂಶಗಳನ್ನು ಕಾದಂಬರಿಯಾಗಿಸುವ ಆಯ್ಕೆಯೇ ಅವರ ಶಕ್ತಿ, ಸಾಂಪ್ರದಾಯಿಕ ಒಳ ವಿವರಗಳನ್ನು ನಿರೂಪಿಸುವಲ್ಲಿ ಅವರು ತೋರಿರುವ ಶ್ರದ್ಧೆ ಮೆಚ್ಚುವಂತಹುದು.
 
ಕೃತಿ ಸಾಮಾಜಿಕಗೊಳ್ಳುತ್ತ ಹೋದಾಗಲೂ ವಿಚಲಿತವಾಗದ ಬರವಣಿಗೆ ಅವರದು. ವೈಯಕ್ತಿಕ ಕಾಮನೆಯ ವಿವರಗಳನ್ನು ಹೇಳುವಾಗ ಕನ್ನಡದ ಮಟ್ಟಿಗೆ ಅಪರೂಪವೆನಿಸಬಹುದಾದ ಧೈರ್ಯವನ್ನು ಅವರು ತೋರಿದ್ದಾರೆ. ಸಬಲ ಮತ್ತು ಸ್ವಾಯತ್ತ ಬಾಳಿನ ಸಮರ್ಥ ಸ್ಫೂರ್ತಿಯೆಂಬಂತೆ ಕಥಾನಾಯಕಿ ಸಾವಿತ್ರಿಯನ್ನು ಅವರು ರೂಪಿಸಿದ್ದಾರೆ.

ಕಮಲಾ ಅವರ ಸಾಮರ್ಥ್ಯ ಮತ್ತು ಸಮಸ್ಯೆಯ ಶಕ್ತ ರೂಪದಂತಿರುವ ಈ ಕಾದಂಬರಿ ಅವರ ಮುಂದಿನ ಮುಖ್ಯ ಬರವಣಿಗೆಯ ಪೂರ್ವ ತಾಲೀಮಿನಂತಿದೆ.

ಹದ್ದು
ಲೇ: ಕಮಲಾ ನರಸಿಂಹ
ಪು: 260; ಬೆ: ರೂ. 200
ಪ್ರ: ಸುಮುಖ ಪ್ರಕಾಶನ, ಬೆಂಗಳೂರು - 23

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT