ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀರ್‌ಸಾದಕ್‌ಗಳು ನನ್ನ ಕಾಲೆಳೆಯುತ್ತಿದ್ದಾರೆ - ಬಿ.ಎಸ್.ಯಡಿಯೂರಪ್ಪ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯದಲ್ಲಿ ನನ್ನ ಆಡಳಿತಾವಧಿಯಲ್ಲಿ ನಡೆದ ಅಭಿವೃದ್ಧಿಕಾರ್ಯಗಳನ್ನು ಸಹಿಸದ ವಿರೋಧ ಪಕ್ಷಗಳು ಮತ್ತು ನಮ್ಮಳಗೇ ಇರುವ ಮೀರ್‌ಸಾದಕ್ ಹಾಗೂ ಮಲ್ಲಪ್ಪಶೆಟ್ಟಿಗಳು ಸದಾ ನನ್ನ ಕಾಲೆಳೆಯುತ್ತಲೇ ಇದ್ದಾರೆ. ರಾಜ್ಯದಲ್ಲಿ ನನಗೆ ಕೊಟ್ಟಷ್ಟು ಕಿರುಕುಳ ಇನ್ನಾವುದೇ ರಾಜಕಾರಣಿಗೂ ಕೊಟ್ಟಿಲ್ಲ. ಆದರೂ ಇದರಿಂದ ನಾನು ಧೃತಿಗೆಟ್ಟಿಲ್ಲ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಭಾನುವಾರ ಹೇರೋಹಳ್ಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ 105ನೇ ವರ್ಷದ ಗುರುವಂದನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ಮೂರೂವರೆ ವರ್ಷಗಳ ನನ್ನ ಆಡಳಿತದಲ್ಲಿನ ಅಭಿವೃದ್ಧಿಯನ್ನು ಕಂಡು ವಿರೋಧಿಗಳಿಗೆ ಸಹಿಸಲಾಗಲಿಲ್ಲ. ನಾನು ಪೂರ್ಣಾವಧಿಗೆ ಅಧಿಕಾರದಲ್ಲಿ ಇದ್ದಿದ್ದರೆ ರಾಜ್ಯವನ್ನು ದೇಶದಲ್ಲಿಯೇ ಮಾದರಿ ರಾಜ್ಯವನ್ನಾಗಿ ಮಾಡುತ್ತಿದ್ದೆ. ಆದರೆ ಮಾಡದ ತಪ್ಪಿಗಾಗಿ ನಾನು ಅಧಿಕಾರ ಕಳೆದುಕೊಂಡೆ. ಬಹುಶಃ ಅಭಿವೃದ್ಧಿಯೇ ನಾನು ಮಾಡಿದ ದೊಡ್ಡ ಅಪರಾಧವೇನೋ. ಆದರೂ ರಾಜ್ಯದ ಅಭಿವೃದ್ಧಿಗಾಗಿ ನಾನು ಶಕ್ತಿ ಮೀರಿ ದುಡಿಯುತ್ತೇನೆ~ ಎಂದು ಅವರು ನುಡಿದರು.

`ರಾಜ್ಯದಲ್ಲಿ ನನ್ನ ಆಡಳಿತಕ್ಕೂ ಮುನ್ನ 39 ಅತ್ಯಂತ ಹಿಂದುಳಿದ, 40 ಅತಿ ಹಿಂದುಳಿದ ಹಾಗೂ 35 ಹಿಂದುಳಿದ ತಾಲ್ಲೂಕುಗಳಲ್ಲಿ 61 ಮಾತ್ರ ಮುಂದುವರೆದ ತಾಲ್ಲೂಕುಗಳಿದ್ದವು. ನನ್ನ ಅವಧಿಯಲ್ಲಿ 100 ತಾಲ್ಲೂಕುಗಳನ್ನು ಅಭಿವೃದ್ಧಿ ಪಡಿಸಲಾಯಿತು. ಐದು ವರ್ಷ ಅಧಿಕಾರ ಇದ್ದಿದ್ದರೆ ಎಲ್ಲಾ 175 ತಾಲ್ಲೂಕುಗಳನ್ನೂ ಮುಂದುವರೆದ ತಾಲ್ಲೂಕುಗಳನ್ನಾಗಿ ಅಭಿವೃದ್ಧಿ ಪಡಿಸುತ್ತಿದ್ದೆ. ಆದರೆ ನಾನು ಐದು ವರ್ಷ ಪೂರ್ತಿಯಾಗಿ ಆಡಳಿತ ನಡೆಸಲು ವಿರೋಧಿಗಳು ಬಿಡಲಿಲ್ಲ~ ಎಂದು ಅವರು ಕಿಡಿಕಾರಿದರು.

`ಕಳೆದ ಒಂದು ವಾರದಿಂದ ರಾಜ್ಯ ಪ್ರವಾಸದಲ್ಲಿ ತೊಡಗಿದ್ದೇನೆ. ರಾಜ್ಯದ ಜನತೆ ನನ್ನ ಬಗ್ಗೆ ಅಪಾರ ಬೆಂಬಲ ತೋರಿದ್ದಾರೆ. ಯಾರು ಏನೇ ಕಿರುಕುಳ ನೀಡಿದರೂ ಜನರ ಆಶೀರ್ವಾದ ನನ್ನ ಮೇಲಿದೆ. ಕೇವಲ ವೀರಶೈವರ ಉದ್ಧಾರ ಮಾತ್ರವಲ್ಲ. ಎಲ್ಲಾ ತಳ ಸಮುದಾಯಗಳ ಅಭಿವೃದ್ಧಿಯೂ ಆಗಬೇಕು ಎಂಬುದು ನಮ್ಮ ಆಶಯ. ಬಿಜೆಪಿ ಸರ್ಕಾರ ಹಜ್‌ಭವನ ನಿರ್ಮಾಣಕ್ಕೆ 40 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವುದೇ ಇದಕ್ಕೆ ಉದಾಹರಣೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಆಶಯವನ್ನು ಸಾಕಾರಗೊಳಿಸಲು ಪಕ್ಷದ ಎಲ್ಲರೂ ಶ್ರಮಿಸಬೇಕು~ ಎಂದು ಅವರು ಕರೆ ನೀಡಿದರು.

`ಜ್ಞಾನ ದಾಸೋಹ, ಅನ್ನ ದಾಸೋಹದ ಮಹಾ ಕಾರ್ಯ ಮಾಡಿದವರು ಶಿವಕುಮಾರ ಸ್ವಾಮೀಜಿ. ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಬದುಕಿನಲ್ಲಿ ಗೆಲುವಿಗಾಗಿ ಪರಿಶ್ರಮದ ಅಗತ್ಯವಿದೆ ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ನಿಜವಾಗಿಸಿದವರು ಅವರು. 21 ನೇ ಶತಮಾನ ಭಾರತೀಯರದ್ದು ಎಂಬುದನ್ನು ಅವರು ನಿಜವಾಗಿಸಿದ್ದಾರೆ. ಜನತೆ ನಡೆದಾಡುವ ದೇವರು ಎಂದೇ ನಂಬಿರುವ ಅವರ 125 ನೇ ಗುರುವಂದನೆಯೂ ನಡೆಯಬೇಕು~ ಎಂದು ಅವರು ಆಶಿಸಿದರು.

ಗುರುವಂದನೆ ಸ್ವೀಕರಿಸಿ ಮಾತನಾಡಿದ ಡಾ.ಶಿವಕುಮಾರ ಸ್ವಾಮೀಜಿ, `ಇಂದಿನ ವೈಜ್ಞಾನಿಕ ಯುಗದ ಜಗತ್ತಿನಲ್ಲಿ ಗೊಂದಲ ಹಾಗೂ ಅಶಾಂತಿ ಹೆಚ್ಚುತ್ತಿದೆ. ವಿಶ್ವಶಾಂತಿಗಾಗಿ ಭಕ್ತಿ ಮಾರ್ಗ ಹಾಗೂ ಕಾಯಕ ಮಾರ್ಗಗಳು ಅನಿವಾರ್ಯವಾಗಿವೆ. ಯುವ ಪೀಳಿಗೆಯಲ್ಲಿ ವೈಚಾರಿಕತೆ ಹಾಗೂ ಕ್ರಿಯಾಶೀಲತೆ ಹೆಚ್ಚಬೇಕು~ ಎಂದರು.

ಇಂಧನ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, `ಸಮಾಜದಲ್ಲಿ ನಮ್ಮ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರಗಳ ಬಗ್ಗೆ ಅಸಡ್ಡೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಯಡಿಯೂರಪ್ಪ ಮಠಗಳಿಗೆ ವಿಶೇಷ ಅನುದಾನಗಳನ್ನು ಕೊಟ್ಟರು. ಬಸವಣ್ಣನ ಕಾಯಕ ತತ್ವದ ಆಧಾರದ ಮೇಲೆ ಹಿಂದುಳಿದವರ ಏಳ್ಗೆಗಾಗಿ ಅವರು ಶ್ರಮಿಸಿದರು~ ಎಂದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್ `ವೀರಶೈವ ಧರ್ಮದರ್ಶಿ~ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್. ಪ್ರಭುದೇವ್ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಬೇಲಿಮಠದ ಶಿವರುದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಮೇಲಣಗವಿ ಮಠದ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಗೋಡೆಕೆರೆ ಮಠದ ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ, ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಚಂದ್ರವನ ಆಶ್ರಮದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಹೇರೋಹಳ್ಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಎಂ.ರುದ್ರಪ್ಪ ಪಾಲ್ಗೊಂಡಿದ್ದರು.

`ಭಿನ್ನಾಭಿಪ್ರಾಯವಿಲ್ಲ~
ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, `ಮುಖ್ಯಮಂತ್ರಿ ಸದಾನಂದಗೌಡ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇದೆಲ್ಲವೂ ಕೇವಲ ಮಾಧ್ಯಮಗಳ ಸೃಷ್ಟಿ. ಎಲ್ಲರೂ ಒಂದಾಗಿ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ~ ಎಂದರು.

ಇತರ ಪಕ್ಷಗಳಿಗೆ ಸಿನಿಮಾ ತಾರೆಯರು ಸೇರುತ್ತಿದ್ದಾರೆ. ಬಿಜೆಪಿಗೆ ಯಾರನ್ನಾದರೂ ಕರೆತರುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ನಮ್ಮ ಪಕ್ಷದಲ್ಲಿ ನಾವೇ ತಾರೆಗಳು. ಇದುವರೆಗೂ ಬಿಜೆಪಿಗೆ ಸೇರುವ ಸಿನಿಮಾ ತಾರೆಯರಿಗೆ ಬೇಡ ಎಂದಿಲ್ಲ. ಬಂದವರನ್ನು ತಿರಸ್ಕರಿಸುವುದೂ ಇಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT