ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲು ದುರುಪಯೋಗ ಕ್ರಮಕ್ಕೆ ಆಗ್ರಹಿಸಿ ದೂರು

Last Updated 21 ಫೆಬ್ರುವರಿ 2011, 8:50 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡದ ‘ಮುಗೇರ’ ಸಮುದಾಯದ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಪರಿಶಿಷ್ಟ ಜಾತಿ ಮೀಸಲು ಸೌಲಭ್ಯದಡಿ ರಾಜ್ಯದ ವಿವಿಧೆಡೆ ಉದ್ಯೋಗ ಗಿಟ್ಟಿಸಿಕೊಂಡಿರುವವರನ್ನು ಸೇವೆಯಿಂದ ವಜಾಗೊಳಿಸವಂತೆ ಮಂಗಳೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಕಳೆದೊಂದು ವರ್ಷದಿಂದ 120ಕ್ಕೂ ಹೆಚ್ಚು ದೂರು ದಾಖಲಾಗಿವೆ.

2010ರ ಮೇ 22ರಂದು ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರ ಉತ್ತರ ಕನ್ನಡದ ಮೊಗೇರರು (ಮೊಗವೀರರು) ಹಾಗೂ ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ ಜಿಲ್ಲೆಯ ಮುಗೇರ ಸಮುದಾಯ ಬೇರೆ ಬೇರೆಯಾಗಿದ್ದು, ಮುಗೇರರಿಗೆ ನೀಡುವ ಪರಿಶಿಷ್ಟ ಜಾತಿ ಪ್ರಮಾಣಪತ್ರ ಮೊಗೇರರಿಗೆ ನೀಡದಂತೆ ಆಯಾ ಜಿಲ್ಲಾಡಳಿತಕ್ಕೆ ಸ್ಪಷ್ಟಪಡಿಸಿದೆ.

ವಿವಾದದ ಮೂಲ: ಮೊಲ ಬೇಟೆಯನ್ನೇ ಮೂಲ ಕಸುಬಾಗಿ ಹೊಂದಿರುವ ಮುಗೇರ ಸಮುದಾಯ ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನ ಕಾಡುಗಳಲ್ಲಿ ವಾಸವಿದ್ದು, ಇತ್ತೀಚೆಗೆ ಕೃಷಿ ಮಾಡುತ್ತಿದ್ದಾರೆ. 10 ಸಾವಿರದಷ್ಟು ಜನಸಂಖ್ಯೆ ಇರುವ ಇವರನ್ನು 1950ರಲ್ಲಿ ಜಾತೀವಾರು ಮೀಸಲು ವರ್ಗೀಕರಣ ವೇಳೆ ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿತ್ತು. ಮೀಸಲು ನಿಗದಿ ವೇಳೆ ಮುಗೇರರನ್ನು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಳ್ಳೇಗಾಲ ಭಾಗಕ್ಕೆ ಮಾತ್ರ ಸೀಮಿತಗೊಳಿಸಿ ಆದೇಶ ಹೊರಡಿಸಿತ್ತು. 1956ರಲ್ಲಿ ಈ ಪಟ್ಟಿ ಪರಿಷ್ಕೃತಗೊಂಡಾಗಲೂ ಕ್ಷೇತ್ರ ನಿರ್ಬಂಧ ಮುಂದುವರೆದಿತ್ತು. ಆದರೆ ಕೇಂದ್ರ ಸರ್ಕಾರ 1976ರಲ್ಲಿ ಮೀಸಲು ಪುನರ್ವಿಂಗಡಣೆ ವೇಳೆ ಸಾಮಾಜಿಕ, ಆರ್ಥಿಕ ಕಾರಣಕ್ಕೆ ಮುಗೇರರಿಗೆ ಮೊದಲಿದ್ದ ಕ್ಷೇತ್ರ ನಿರ್ಬಂಧನೆ ತೆಗೆದುಹಾಕಿತ್ತು.

ದುರುಪಯೋಗಕ್ಕೆ ದಾರಿ: ಮುಗೇರರ ಮೀಸಲಿಗೆ ಇದ್ದ ಗಡಿ ಮಿತಿ ಮುಕ್ತವಾಗಿ ಮೀಸಲು ಪಟ್ಟಿಯಲ್ಲಿ ಮುಗೇರ ಪದಕ್ಕೆ ಪರ್ಯಾಯವಾಗಿ ಆಂಗ್ಲಪದ ಞಟಜಛ್ಟಿ ಎಂದು ಉಲ್ಲೇಖಿಸಿದ್ದು ಮುಂದಿನ ಸಮಸ್ಯೆಗೆ ದಾರಿಯಾಯಿತು. ಅಲ್ಲಿಯವರೆಗೆ ಪ್ರವರ್ಗ-1ರಡಿ ಮೀಸಲು ಸೌಲಭ್ಯ ಪಡೆದಿದ್ದ ಉತ್ತರ ಕನ್ನಡ ಜಿಲ್ಲೆ ಭಟ್ಕಳ ಭಾಗದಲ್ಲಿ ಹೆಚ್ಚು ನೆಲೆಸಿರುವ ಮೊಗೇರರು(ಮೀನುಗಾರ ವೃತ್ತಿಯ ಮೊಗವೀರರು) ಕ್ಷೇತ್ರ ನಿರ್ಬಂಧ ಇಲ್ಲದೇ ಕೇಂದ್ರ ಸರ್ಕಾರ ಮುಗೇರರು ಎಂದು ಕರೆಯಲ್ಪಡುವ ಎಲ್ಲರನ್ನೂ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿದೆ ಎಂದು ಅರ್ಥೈಸಿಕೊಂಡು ಎಸ್‌ಸಿ ಪ್ರಮಾಣ ಪತ್ರ ಪಡೆಯತೊಡಗಿದರು.

ವಿರೋಧ: 1976ರಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯತೊಡಗಿದ ಉತ್ತರ ಕನ್ನಡದ ಮೊಗೇರರು ಮುಂದಿನ 25 ವರ್ಷ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅವಕಾಶ ಪಡೆದರು. ಇದು ಸ್ಥಳೀಯ ಮಟ್ಟದಲ್ಲಿ ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು. ಮುಂದೆ ಮೂಲ ಮುಗೇರರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಪ್ರೊ. ಎಚ್.ಕೆ.ಭಟ್ ಸಮಿತಿ: ಮುಗೇರ ಮೀಸಲು ವಿವಾದ ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತ ಸರ್ಕಾರ, ಮೈಸೂರು ವಿವಿ ಮಾನವ ಶರೀರಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಚ್.ಕೆ.ಭಟ್ ಅವರನ್ನು ಮುಗೇರ ಸಮುದಾಯ ಕುಲ ಶಾಸ್ತ್ರೀಯ ಅಧ್ಯಯನಕ್ಕೆ ಆದೇಶಿಸಿತು. ಮುಗೇರರ ಪೂರ್ವಜರ ವಿವರ, ಉತ್ತರ ಕನ್ನಡದ ಮೊಗೇರರೊಂದಿಗೆ ಅವರ ಸಂಬಂಧ ಕುರಿತು ವಿವರ ಅಧ್ಯಯನ ನಡೆಸಿ 2002ರಲ್ಲಿ ಸಮಿತಿ ವರದಿ ನೀಡಿತ್ತು. ಉತ್ತರ ಕನ್ನಡದ ಮೊಗೇರರು ಮೀನುಗಾರ ಸಮುದಾಯವಾಗಿದ್ದು, ಅವರಿಗೆ ಪರಿಶಿಷ್ಟ ಜಾತಿ ಮೀಸಲು ನೀಡಿಕೆ ಸಲ್ಲ. ಮುಗೇರರೊಂದಿಗೆ ಅವರಿಗೆ ಯಾವುದೇ ಸಂಬಂಧವಿಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಿತ್ತು.ಸರ್ಕಾರ ವರದಿ ಅಂಗೀಕರಿಸಿದ್ದು, ಈ ಸಂಬಂಧ 2010ರ ಮೇ 22ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದರು. ಉತ್ತರ ಕನ್ನಡ ಜಿಲ್ಲೆಯ ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡದಂತೆ ಸುತ್ತೋಲೆ ಹೊರಡಿಸಿದರು.

ಜಾರಿ ನಿರ್ದೇಶನಾಲಯಕ್ಕೆ ಗೊಂದಲ: ಸರ್ಕಾರ ಸುತ್ತೋಲೆ ಹೊರಡಿಸುತ್ತಿದ್ದಂತೆಯೇ ಎಸ್‌ಸಿ ಮೀಸಲು ದುರುಪಯೋಗಪಡಿಸಿಕೊಂಡು ಸರ್ಕಾರಿ ಹುದ್ದೆಯಲ್ಲಿರುವ ಮೊಗೇರರನ್ನು ಗುರ್ತಿಸಿ ಸೇವೆಯಿಂದ ವಜಾಗೊಳಿಸುವಂತೆ ಜಾರಿ ನಿರ್ದೇಶನಾಲಯದ ಎದುರು ದೂರು ದಾಖಲಾಗುತ್ತಿವೆ. ನಾವು ದೂರು ಸ್ವೀಕರಿಸಿ ವಿಚಾರಣೆಗೆ ನೊಟೀಸ್ ನೀಡುತ್ತಿದ್ದಂತೆಯೇ ಈಗಾಗಲೇ ಮೀಸಲು ಸೌಲಭ್ಯ ಪಡೆದವರು ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಿದ್ದಾರೆ ಎಂದು  ಜಾರಿ ನಿರ್ದೇಶನಲಾಯದ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಶುಕ್ರವಾರ ತಿಳಿಸಿದರು. ಇನ್ನು ಮುಂದೆ ಮೊಗೇರರಿಗೆ ಎಸ್‌ಸಿ ಪ್ರಮಾಣಪತ್ರ ನೀಡದಂತೆ ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿದ್ದರೂ ಈಗಾಗಲೇ ಮೀಸಲು ಪಡೆದಿರುವವರ ವಿರುದ್ಧ ದೂರು ಬಂದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟಪಡಿಸದಿರುವುದು ಈ ಗೊಂದಲಕ್ಕೆ ಕಾರಣ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT