ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲು ಪಟ್ಟಿ: 108 ಆಕ್ಷೇಪಣೆ ಸಲ್ಲಿಕೆ

Last Updated 15 ಡಿಸೆಂಬರ್ 2012, 8:13 IST
ಅಕ್ಷರ ಗಾತ್ರ

ಗದಗ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಸಂಬಂಧ ಪ್ರಕಟಿಸಿರುವ  ಕರಡು ಮೀಸಲಾತಿ ಪಟ್ಟಿಗೆ ಜಿಲ್ಲೆಯಲ್ಲಿ 108 ಆಕ್ಷೇಪಣೆ ಸಲ್ಲಿಕೆಯಾಗಿವೆ.

ಗದಗ-ಬೆಟಗೇರಿ ನಗರಸಭೆಯಿಂದ 50 ಹಾಗೂ ಜಿಲ್ಲೆಯ ಗಜೇಂದ್ರಗಡ, ಮುಂಡರಗಿ, ನರಗುಂದ, ರೋಣ, ಲಕ್ಷೇಶ್ವರ ಪುರಸಭೆ ಮತ್ತು ನರೇಗಲ್, ಶಿರಹಟ್ಟಿ, ಮುಳಗುಂದ ಪಟ್ಟಣ ಪಂಚಾಯಿತಿ ಸೇರಿದಂತೆ ಒಟ್ಟು 58 ಆಕ್ಷೇಪಣೆಗಳು ಸಲ್ಲಿಕೆಯಾಗಿದೆ.

ನೂತನ ಮೀಸಲು ಪಟ್ಟಿಯಲ್ಲಿ ಮಹಿಳೆಯರಿಗೆ ಮೊದಲ ಬಾರಿಗೆ 17 ಸ್ಥಾನಗಳು ಮೀಸಲಾಗಿದ್ದು, ಅವುಗಳಲ್ಲಿ ಎಸ್‌ಸಿ, ಎಸ್‌ಟಿ ತಲಾ ಒಂದೊಂದು, ಬಿಸಿಎಂ (ಎ) ಐದು, ಬಿಸಿಎಂ (ಬಿ) ಒಂದು, ಸಾಮಾನ್ಯ ಮಹಿಳೆಯರಿಗೆ ಒಂಬತ್ತು ಸ್ಥಾನಗಳು ಮೀಸಲಿವೆ.

ಗದಗ-ಬೆಟಗೇರಿ ಅವಳಿ ನಗರಗಳ  35 ವಾರ್ಡ್‌ಗಳಿಂಂದ ಬಹುತೇಕ ಮಂದಿ ಪುನರಾಯ್ಕೆಯಾಗುವ ಅವಕಾಶ ಕಳೆದುಕೊಳ್ಳಲಿದ್ದಾರೆ. ಪ್ರಮುಖವಾಗಿ ಹಾಲಿ ಅಧ್ಯಕ್ಷ ಶಿವಣ್ಣ ಮುಳಗುಂದ, ಪ್ರತಿಪಕ್ಷದ ನಾಯಕ ಎಂ.ಎಂ.ಹಿರೇಮಠ, ಸದಸ್ಯರಾದ ಪರಶುರಾಮ ಹೆಬ್ಸುರ, ಲಕ್ಷ್ಮಣ ದೊಡ್ಡಮನಿ, ಚಂದಾವರಿ, ವಿಜಯಲಕ್ಷ್ಮೀ ಅಂಗಡಿ, ಸದಾನಂದ ಪಿಳೈ, ವಂದನಾ ವರ್ಣೇಕರ್ ಸೇರಿದಂತೆ ಸುಮಾರು 25 ಸದಸ್ಯರು ತಮ್ಮ ವಾರ್ಡ್‌ನಿಂದ ಮತ್ತೆ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ.

ಅಧ್ಯಕ್ಷ ಶಿವಣ್ಣ ಮುಳಗುಂದ ಅವರು ವಿಧಾನಸಭೆಗೆ ಸ್ಪರ್ಧಿಸುವ ಕುರಿತು ತಯಾರಿ ನಡೆಸುತ್ತಿರುವುದರಿಂದ ಮತ್ತೆ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಉಳಿದ ಸದಸ್ಯರು ಮತ್ತೊಮ್ಮೆ ಸ್ಪರ್ಧಿಸಬೇಕು ಎನ್ನುವ ಆಸೆಗೆ ಕರಡು ಮೀಸಲಾತಿ ಪಟ್ಟಿ ತಣ್ಣೀರೆರಚಿದೆ. ಮತ್ತೆ ಕೆಲವರು ಬೇರೆ ವಾರ್ಡ್ ಗಳಿಂದ ಸ್ಪರ್ಧಿಸಲು ಹಾಗೂ ಪತ್ನಿಯನ್ನು ಕಣಕ್ಕೆ ಇಳಿಸಲು ಚಿಂತನೆ ನಡೆಸುತ್ತಿದ್ದಾರೆ.

ಆಕ್ಷೇಪ: 2001ರ ಜನಗಣತಿ ಆಧರಿಸಿ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಮೀಸಲಾತಿ ಪಟ್ಟಿ ಅವೈಜ್ಞಾನಿಕವಾಗಿದೆ. 35 ವಾರ್ಡ್‌ಗಳ ಪೈಕಿ ವಾರ್ಡ್ ನಂಬರ್ 11, 22, 24, 33 ಮತ್ತು 35ರಲ್ಲಿ ಅಂದಾಜು ಎಂಟರಿಂದ ಹತ್ತು ಸಾವಿರ ಜನಸಂಖ್ಯೆ ಇದೆ. ಉದಾಹರಣೆಗೆ ವಾರ್ಡ್ ನಂಬರ್ 22 ಮತ್ತು 13ರಲ್ಲಿ 1,500 ರಿಂದ 2,000 ಜನಸಂಖ್ಯೆ ಇದೆ. ದೊಡ್ಡ ವಾರ್ಡ್‌ಗಳಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಜತೆಗೆ ಅನುದಾನವು ಸಮನಾಗಿ ಎಲ್ಲ          ವಾರ್ಡ್‌ಗಳಿಗೆ ಹಂಚಿಕೆಯಾಗುವುದರಿಂದ ಸೌಲಭ್ಯಗಳು ದೊರೆಯುವುದಿಲ್ಲ' ಎಂಬುದು ಸದಸ್ಯರ ತಕಾರರು.

`ದಶಕದಷ್ಟು ಹಳೆಯದಾದ ಜನಗಣತಿ ಇಟ್ಟುಕೊಂಡು ಮೀಸಲಾತಿ ಪಟ್ಟಿ ತಯಾರಿಸಿರುವುದರಲ್ಲಿ ಅರ್ಥವಿಲ್ಲ. ಆದ್ದರಿಂದ 2012ರ ಜನಗಣತಿ ಪ್ರಕಾರ ಮೀಸಲಾತಿ ಪಟ್ಟಿ ತಯಾರಿಸಿ ಬಿಡುಗಡೆ ಮಾಡಬೇಕು' ಎಂಬುದು ಸದಸ್ಯರ ಒತ್ತಾಯವಾಗಿದೆ.

ಮೀಸಲು ಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆ ವಾರ್ಡ್‌ಗಳ ಟಿಕೆಟ್‌ಗಾಗಿ ಒಂದೆಡೆ ಆಕಾಂಕ್ಷಿಗಳು ಪೈಪೋಟಿ ನಡೆಸಲು ಆರಂಭಿಸಿದ್ದಾರೆ. ತಮ್ಮ ಗಾಡ್ ಫಾದರ್‌ಗಳ ಮೂಲಕ ಒತ್ತಡ ಹೇರುವ ಕೆಲಸವೂ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT