ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು: ದಕ್ಷಿಣದಲ್ಲಿ ಬಿರುಸು, ಉತ್ತರದಲ್ಲಿ ಕ್ಷೀಣ

Last Updated 2 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ದಕ್ಷಿಣ ಭಾಗದಲ್ಲಿ ಮುಂಗಾರು ಚುರುಕುಗೊಂಡಿದೆ. ಆದರೆ, ಉತ್ತರ ಕರ್ನಾಟಕದ ಹಲವು ಕಡೆ ಕ್ಷೀಣಿಸಿದೆ. ಶಿವಮೊಗ್ಗ. ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾದ ವರದಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನವಿಡಿ ಮಳೆಯಾಯಾಗಿದೆ. ಉತ್ತರ ಕರ್ನಾಟಕದ ಧಾರವಾಡ, ಹಾವೇರಿ, ಗದಗ, ಬೆಳಗಾವಿ ಜಿಲ್ಲೆಗಳಲ್ಲಿ ಜಿಟಿಜಿಟಿ ಮಳೆಯಾಗಿದೆ.

ಲಿಂಗನಮಕ್ಕಿ, ಹಾರಂಗಿ ಜಲಾಶಯಗಳ ಒಳಹರಿವು ಹೆಚ್ಚಳವಾಗಿದ್ದರೆ, ಆಲಮಟ್ಟಿ ಜಲಾಶಯದಲ್ಲಿ ಇಳಿಮುಖವಾಗಿದೆ. ಮಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ನಾಲ್ಕು ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಶಿವಮೊಗ್ಗ ವರದಿ: ಹೊಸನಗರ, ತೀರ್ಥಹಳ್ಳಿ ಮತ್ತು ಸಾಗರ ತಾಲ್ಲೂಕುಗಳಲ್ಲಿ ಮಂಗಳವಾರ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದೆ. ಲಿಂಗನಮಕ್ಕಿ ಜಲಾಶಯದ ಒಳಹರಿವು ಹೆಚ್ಚಾಗಿದೆ.

ಮಂಗಳೂರು ವರದಿ: ಮಂಗಳವಾರ ಬೆಳಿಗ್ಗೆ ವರೆಗೆ ಮಂಗಳೂರಿನಲ್ಲಿ (94.7 ಮಿ.ಮೀ) ಹಾಗೂ ಬೆಳ್ತಂಗಡಿಯಲ್ಲಿ (89.6) ಅತಿ ಹೆಚ್ಚು ಮಳೆ ದಾಖಲಾಗಿದೆ. ಸಂಜೆಯಿಂದ ಮತ್ತೆ ಮಳೆಯ ಅಬ್ಬರ ಜೋರಾಗಿದೆ.

ಉಡುಪಿ ವರದಿ: ಉಡುಪಿ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು ಮಂಗಳವಾರವೂ ಉತ್ತಮ ಮಳೆಯಾಗಿದೆ. ಕುಂದಾಪುರದಲ್ಲಿ 119.3 ಮಿ.ಮೀ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ.

ಕೊಡಗು ವರದಿ: ಜಿಲ್ಲೆಯಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ, ಮಂಗಳವಾರ ಪುನಃ ಪ್ರತ್ಯಕ್ಷನಾಗಿದ್ದಾನೆ. ಮಡಿಕೇರಿ, ಭಾಗಮಂಡಲ, ನಾಪೋಕ್ಲು, ಮೂರ್ನಾಡು, ವಿರಾಜಪೇಟೆ, ಗೋಣಿಕೊಪ್ಪಲು, ಸೋಮವಾರಪೇಟೆ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ.

ಬೆಳಿಗ್ಗೆಯಿಂದಲೇ ಚುರುಕಾಗಿದ್ದ ಮಳೆ ಮಧ್ಯಾಹ್ನದ ನಂತರ ಬಿರುಸಾಗಿ ಸುರಿದಿದೆ. ಕಾವೇರಿ ನದಿ ಉಗಮಸ್ಥಳವಾಗಿರುವ ತಲಕಾವೇರಿಯಲ್ಲೂ ಮಳೆ ಸುರಿದಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಸಂಚಾರ ವ್ಯವಸ್ಥೆಗೆ ತೊಂದರೆಯಾಗಿಲ್ಲ.
ಉತ್ತರ ಕರ್ನಾಟಕದ ಧಾರವಾಡ, ಹಾವೇರಿ, ಗದಗ, ಬೆಳಗಾವಿ ಜಿಲ್ಲೆಗಳಲ್ಲಿ ಮಂಗಳವಾರ ಜಿಟಿಜಿಟಿ ಮಳೆಯಾಗಿದೆ.

ಹೊನ್ನಾವರ (ಉ.ಕ. ಜಿಲ್ಲೆ): ಭಾನುವಾರ ನಗರಬಸ್ತಿಕೇರಿ ಗ್ರಾಮದ ಕಲ್ಕಟ್ಟೆ ಸೇತುವೆಯಿಂದ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದ ನಗರಬಸ್ತಿಕೇರಿಯ ಜಿಲಾರ್ ಸಾವೇರ್ ಸೋಜಾ (65) ಅವರ ಶವ ತಗ್ಗುಪಾಳ್ಯದ ಸಮೀಪ ಶರಾವತಿ ನದಿಯಲ್ಲಿ ಮಂಗಳವಾರ ಪತ್ತೆಯಾಗಿದೆ.

ಕಳೆದೆರಡು ದಿನಗಳಿಂದ ತಾಲ್ಲೂಕಿನಲ್ಲಿ ಮಳೆಯ ರಭಸ ಹೆಚ್ಚಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.ಮಳೆಯ ತೀವ್ರತೆಗೆ ಹಳ್ಳ- ಕೊಳ್ಳಗಳು ತುಂಬಿಕೊಂಡಿದ್ದು, ಹಳದೀಪುರದ ಸಮೀಪದ ಗುಡ್ನಕಟ್ಟು ಸೇತುವೆ ನೀರಿನಲ್ಲಿ ಮುಳುಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT