ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಪ್ರತಾಪ: ಮನೆಗೆ ನುಗ್ಗಿದ ನೀರು

Last Updated 8 ಜೂನ್ 2011, 10:40 IST
ಅಕ್ಷರ ಗಾತ್ರ

ಮಂಗಳೂರು: ಮತ್ತೆ ಯಥಾಸ್ಥಿತಿ. ಹೂಳು ತುಂಬಿದ ಚರಂಡಿ, ಚರಂಡಿಯಿಲ್ಲದ ರಸ್ತೆ. ತೋಡುಗಳಲ್ಲಿ ಕಸಕಡ್ಡಿ, ಮಣ್ಣು. ಪರಿಣಾಮ ಮಳೆ ನೀರು ಮನೆಗೆ...

ಮಂಗಳೂರಿನಲ್ಲಿ ಮುಂಗಾರು ಮಳೆ ಆರಂಭದಲ್ಲೇ ತನ್ನ ಪ್ರತಾಪ ತೋರಿದೆ. ಪ್ರತಿ ವರ್ಷದ ಮಳೆಗಾಲದಂತೆ ಈ ಬಾರಿಯೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನ ಮತ್ತೆ ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಸೋಮವಾರ ಸುರಿದ ಧಾರಾಕಾರ ಮಳೆಗೆ ಹೂಳು ತುಂಬಿದ ತೋಡು, ಚರಂಡಿಗಳಿಂದ  ನಗರದ ವಿವಿಧೆಡೆ ಮನೆಗೆ ನೀರು ನುಗ್ಗಿದೆ.

ನಗರದ ವಿವಿಧೆಡೆ ಸೋಮವಾರ ರಾತ್ರಿ ಮನೆಗೆ ನೀರು ನುಗ್ಗಿದ ಬಗ್ಗೆ ಮಂಗಳವಾರ ಬೆಳಿಗ್ಗೆ ಪಾಲಿಕೆಗೆ ಒಟ್ಟು 22 ದೂರುಗಳು ಬಂದಿವೆ. ಅತ್ತಾವರ ಉಮಾ ಮಹೇಶ್ವರ ದೇವಳ ಬಳಿಯ ಅಶೋಕ ಬಿಲ್ಡಿಂಗ್ ಬಳಿ ರಸ್ತೆಗೆ ಚರಂಡಿ ನಿರ್ಮಿಸದೇ ಇರುವುದರಿಂದ ಅರ್ಧ ಕಿ..ಮೀ. ದೂರ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಹತ್ತಿರದ ಮನೆಗಳಿಗೆ ಸೋಮವಾರ ರಾತ್ರಿ ನೀರು ನುಗ್ಗಿದೆ ಎಂದು ಸ್ಥಳೀಯ ನಿವಾಸಿ ಗೀತಾ ಸುವರ್ಣ ಪಾಲಿಕೆಗೆ ದೂರು ನೀಡಿದ್ದಾರೆ.

ಮರಕಡ ಐಬಿಪಿ ಪೆಟ್ರೋಲ್ ಪಂಪ್ ಎದುರಿನ ಮನೆಗೆ, ಮಣ್ಣಗುಡ್ಡೆ ದುರ್ಗಾಮಹಲ್ ಹೋಟೆಲ್ ಎದುರು ಇರುವ ಕಿರಣ್ ಬ್ಯಾಟರಿ ಅಂಗಡಿಗೆ, ಅಳಕೆ ಗಂಗಾಧರ ಶೆಟ್ಟಿ ಎಂಬವರ ಮನೆಗೆ, ಮಣ್ಣಗುಡ್ಡೆ ಮುಖ್ಯರಸ್ತೆ ಬಳಿಯ ಮನೆಗಳಿಗೆ, ಬೋಳೂರು ರಾಜರಾಜೇಶ್ವರಿ ಭವನದ ಎದುರು ಇರುವ ಮನೆಗಳಿಗೆ, ಪಂಜಿಮೊಗರು ಶಾಲೆ ಬಳಿಯ ರವೀಂದ್ರ ಎಂಬವರ ಮನೆಗೆ ನೀರು ನುಗ್ಗಿದೆ.

ಕೋಡಿಯಾಲ್‌ಬೈಲ್ ಶ್ರೀದೇವಿ ಕಾಲೇಜು ರಸ್ತೆ, ಪಾಂಡೇಶ್ವರ ಕಟ್ಟೆ ಹರಿಜನ ಕಾಲೊನಿ, ಕೋಡಿಕಲ್ ಕ್ರಾಸ್ ಬಳಿ, ಕೊಟ್ಟಾರ ಚೌಕಿ, ವಿವೇಕಾನಂದ ನಗರ ಕರಾವಳಿ ಕಾಲೇಜು ಬಳಿ ತೋಡಿನಿಂದ ರಸ್ತೆಗೆ ನೀರು ನುಗ್ಗಿದೆ.

ಚರಂಡಿ ಮತ್ತು ತೋಡುಗಳ ಹೂಳು ತೆಗೆಯದೇ ಇರುವುದು, ರಸ್ತೆ ನಿರ್ಮಾಣ, ವಿಸ್ತರಣೆ ಸಂದರ್ಭ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸದೇ ಇರುವುದರಿಂದಮಳೆನೀರು ತಗ್ಗು ಪ್ರದೇಶಗಳ ಮನೆಗಳಿಗೆ ನುಗ್ಗುತ್ತಿದೆ. ನಗರದ ಕೆಲವೆಡೆ ತೋಡು, ಚರಂಡಿಗಳ ಹೂಳು ತೆಗೆಯುವ ಕೆಲಸ ನಡೆದಿದೆಯಾದರೂ `ಕಾಟಾಚಾರಕ್ಕೆ ಎಂಬಂತೆ ಈ ಕೆಲಸ ಮಾಡಲಾಗಿದೆ~. `ಒಂದು ದಿನ ಹೂಳು ತೆಗೆದು ಹೋದವರು ಮತ್ತೆ ಈ ಕಡೆ ತಲೆ ಹಾಕಿಲ್ಲ~ ಎಂಬುದು ನಾಗರಿಕರ ಆರೋಪ.

ತುಂಡಾದ ವಿದ್ಯುತ್ ಕಂಬ: ನಗರದ ಮಂಗಳಾದೇವಿಯ ಮಂಕಿಸ್ಟ್ಯಾಂಡ್ ಬಳಿ ಸೋಮವಾರ ರಾತ್ರಿ ಎರಡು ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. ಇದರಿಂದಾಗಿ ಮಂಗಳವಾರ ಸಂಜೆಯವರೆಗೆ ಈ ಭಾಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಪಂಜಿಮೊಗರಿನಲ್ಲಿ 110ಕೆ.ವಿ. ವಿದ್ಯುತ್ ಟವರ್ ಮುರಿದು ಬಿದ್ದಿದೆ. ಆರ್ಯ ಸಮಾಜ ರಸ್ತೆಯಲ್ಲಿ ಸೋಮವಾರ ಮರ ಬಿದ್ದು ವಿದ್ಯುತ್ ಕಂಬ ತುಂಡಾದ ಕಾರಣ ಮಂಗಳವಾರವೂ ಈ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT