ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಮುನ್ಸೂಚನೆ

`ಹನಿ ಹಿಡಿಯಿತು, ತೋಟದ ಕೆಲಸ ಆಗಿಲ್ಲ...'
Last Updated 4 ಜೂನ್ 2013, 6:30 IST
ಅಕ್ಷರ ಗಾತ್ರ

ಸಿದ್ದಾಪುರ: ತಾಲ್ಲೂಕಿನಲ್ಲಿ ಸೋಮವಾರ ಇಡೀ ದಿನ ಮೋಡಕವಿದ ವಾತಾವರಣ ಕಂಡುಬಂದಿದ್ದು, ಮುಂಗಾರು ಮಳೆಯ ಆಗಮನದ ಮುನ್ಸೂಚನೆ ಕಾಣಿಸತೊಡಗಿದೆ.

ಸೋಮವಾರ ಬಹುತೇಕ ಅವಧಿಯಲ್ಲಿ ಸೂರ್ಯ ಮೋಡದ ಹಿಂದೆ ಮರೆಯಾಗಿರುವುದರೊಂದಿಗೆ ತಾಲ್ಲೂಕಿನ ಕೆಲವೊಂದು ಪ್ರದೇಶದಲ್ಲಿ ಅಲ್ಪ ಪ್ರಮಾಣದ ತುಂತುರು ಮಳೆ ಕೂಡ ಸುರಿಯಿತು. ಈ ಮಧ್ಯೆ ಮುಂಗಾರು ಮಳೆಯ ಆಗಮನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ರೈತ ಸಮುದಾಯ ಮತ್ತು ಗ್ರಾಮೀಣ ಭಾಗದ ಜನರಲ್ಲಿ ಮಳೆಯ ಪೂರ್ವದ ಅಗತ್ಯ ಕೆಲಸಗಳನ್ನು ಮುಗಿಸುವ ಧಾವಂತ ಕಂಡು ಬಂದಿದೆ.

`ಹನಿ ಹಿಡಿಯಿತು ತೋಟದ ಕೆಲಸ ಆಗಿಲ್ಲ' ಎಂದು ಬಹುತೇಕ ಅಡಿಕೆ ಬೆಳೆಗಾರರು ಅಲವತ್ತುಗೊಳ್ಳುತ್ತಿದ್ದುದು ತಾಲ್ಲೂಕಿನಾದ್ಯಂತ ಈಗ ಕೇಳಿಬರುವ ಮಾತುಗಳು. ಆಗಸದಲ್ಲಿ ಮೋಡ ದಟ್ಟೈಸಿದ ಕಾರಣದಿಂದ ಮಳೆಗಾಲದ ಪೂರ್ವ ಸಿದ್ಧತೆಯ ಹಲವು ಕೆಲಸಗಳು ವೇಗ ಪಡೆದುಕೊಂಡವು. ಅಡಿಕೆ ತೋಟಕ್ಕೆ ದರಕು, ಸೊಪ್ಪು, ಕರಡ ಮುಚ್ಚುವ ಕೆಲಸವನ್ನು ಮುಗಿಸುವ ತರಾತುರಿ ರೈತರಲ್ಲಿ ಕಾಣಿಸಿಕೊಂಡಿದೆ.

ಕೂಲಿ ಕಾರ್ಮಿಕರ ಕೊರತೆಯಿಂದ ಅಡಿಕೆ ತೋಟದಲ್ಲಿ ಮುಚ್ಚಿಗೆಯ ಕೆಲಸವನ್ನು ಉಳಿಸಿಕೊಂಡಿರುವ ಅಡಿಕೆ ಬೆಳೆಗಾರರು ಕೃಷಿ ಕೂಲಿಕಾರರಿಗೆ ದುಂಬಾಲು ಬಿದ್ದು, ಹೇಗಾದರೂ ಅಗತ್ಯ ಕೆಲಸಗಳನ್ನು ಮುಗಿಸುವುದಕ್ಕೆ ಪ್ರಾಮುಖ್ಯ ನೀಡಿದ್ದಾರೆ. ತೋಟದ ಸಮೀಪ ದರಕು(ಒಣ ಎಲೆಗಳು) ಶೇಖರಣೆ ಮಾಡಿರುವವರು ಅದನ್ನು  ತೋಟಕ್ಕೆ ಸಾಗಿಸಿ, ಅಡಿಕೆ ಮರಗಳ ಬುಡದಲ್ಲಿ ಹರಡುವುದರಲ್ಲಿ ನಿರತರಾಗಿದ್ದಾರೆ.    

ಈ ಮಧ್ಯೆ ಗದ್ದೆಗಳಿಗೆ ಕೊಟ್ಟಿಗೆ ಗೊಬ್ಬರ(ಹಸಿರೆಲೆ ಗೊಬ್ಬರ) ಸಾಗಿಸುವುದರಲ್ಲಿ  ಭತ್ತ ಬೆಳೆಯುವ ರೈತರು ನಿರತರಾಗಿರುವ ದೃಶ್ಯವೂ ಸಾಮಾನ್ಯವಾಗಿ ಕಾಣತೊಡಗಿದೆ. ದೊಡ್ಡ ಮಳೆ ಆರಂಭವಾದ ನಂತರ ಗದ್ದೆಗಳು ಕೆಸರಾಗುವುದರಿಂದ ಗೊಬ್ಬರ ಸಾಗಿಸುವುದಕ್ಕೆ ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಮುಂಗಾರು ಮಳೆ ಅವರನ್ನೂ ಕೂಡ ಚುರುಕು ಮಾಡಿದೆ.  

ಹೆಂಚಿನ ಮನೆಗಳ ಮಾಡುಗಳನ್ನು ದುರಸ್ತಿ ಮಾಡುವುದು, ಅಂಗಳ ಮತ್ತು ರಸ್ತೆಗಳಲ್ಲಿ ನೀರು ಸರಾಗವಾಗಿ ಸಾಗುವುದಕ್ಕೆ ಅನುವು ಮಾಡಿಕೊಡುವುದು, ಕಟ್ಟಿಗೆ ಶೇಖರಣೆ, ಮನೆಗಳ ಹೊರಭಾಗದಲ್ಲಿ ಜಡಿತಟ್ಟಿ ಕಟ್ಟುವುದು, ತೋಟದ ಮತ್ತು ಜಮೀನುಗಳ ಕಾಲುವೆಗಳನ್ನು ಸುಸ್ಥಿತಿಯಲ್ಲಿಡುವುದು ಮತ್ತಿತರ ಕಾರ್ಯದಲ್ಲಿ ಗ್ರಾಮೀಣ ಭಾಗದ ಜನತೆ  ಬಿಜಿಯಾಗಿದ್ದು, ಇದು  ಮಳೆಗಾಲಕ್ಕೆ ಜನತೆ ಸಿದ್ಧರಾಗುತ್ತಿರುವುದನ್ನು ಎತ್ತಿ ತೋರಿಸುತ್ತಿದೆ.

ಕಳೆದ ಬಾರಿ ಜೂನ್ ತಿಂಗಳಲ್ಲಿ ಸರಿಯಾದ ಮಳೆ ಬಾರದೆ ತಾಲ್ಲೂಕಿನ ಕೃಷಿ ಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಆದರೆ ಈ ಬಾರಿ ಸಕಾಲಕ್ಕೆ ಮುಂಗಾರು ಆಗಮಿಸುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅದರೊಂದಿಗೆ ಆಗಸದಲ್ಲಿ ದಟ್ಟ ಮೋಡಗಳು ಕಾಣಿಸಿಕೊಳ್ಳುತ್ತಿರುವುದು ರೈತರ ಮನಸ್ಸಿನಲ್ಲಿ ಉತ್ತಮ ಮಳೆಯ ಆಶಾಭಾವನೆ ಮೂಡಲು ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT