ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು: ರಾಜ್ಯಗಳ ಜತೆ ಸಮನ್ವಯಕ್ಕೆ ಸಿಂಗ್ ಸೂಚನೆ

Last Updated 23 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ:ದೇಶದೆಲ್ಲೆಡೆ ಮುಂಗಾರು ಮಳೆ ವಿಳಂಬವಾಗಿರುವುದರಿಂದ ಆತಂಕಗೊಂಡಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೇಂದ್ರದ ಎಲ್ಲ ಇಲಾಖೆಗಳು ಹಾಗೂ ಸಚಿವಾಲಯಗಳಿಗೆ ಈ ಸಂಬಂಧ ರಾಜ್ಯ ಸರ್ಕಾರಗಳ ಜತೆ ನಿರಂತರ ಸಂಪರ್ಕದಲ್ಲಿ ಇರುವಂತೆ ಸೂಚಿಸಿದ್ದಾರೆ.

ಮಳೆ ಮತ್ತಷ್ಟು ವಿಳಂಬವಾದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ನಿರ್ಧಾರ ಕೈಗೊಳ್ಳಲು ಅನುಕೂಲವಾಗುವಂತೆ ಪ್ರತಿ ವಾರವೂ ಮಳೆಯ ಪ್ರಮಾಣ ಪರಿಶೀಲಿಸುವಂತೆ ಪ್ರಧಾನಿ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ಕಳೆದ ವರ್ಷ ಇದೇ ಸಮಯಕ್ಕೆ ಹೋಲಿಸಿದಲ್ಲಿ ದೇಶದಲ್ಲಿ 80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿಲ್ಲ. ಮಳೆ ಅಭಾವ ಬೆಳೆಗಳ ಮೇಲೆ ಯಾವ ಪರಿಣಾಮ ಬೀರಿದೆ ಎಂಬುದಕ್ಕೆ ಇದು ಸೂಚನೆಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಬತ್ತ ಬಿತ್ತನೆ ಪ್ರಮಾಣ ಕಡಿಮೆಯಾದರೂ ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಳ್ಳಬಹುದು. ಆದರೆ, ಇತರ ಧಾನ್ಯಗಳ ವಿಚಾರದಲ್ಲಿ ಹೀಗೆ ಹೇಳುವಂತಿಲ್ಲ ಎಂದುಪ್ರಕಟಣೆಯಲ್ಲಿ ಹೇಳಲಾಗಿದೆ.

ದೇಶದ ಕೆಲ ಭಾಗಗಳಲ್ಲಿ ಮಳೆ ಅಭಾವ ನೀಗಲು ಕೇಂದ್ರ ಸರ್ಕಾರ ವ್ಯಾಪಕ ಯೋಜನೆ ಸಿದ್ಧಪಡಿಸಿದೆ. ಜೂನ್ ಅಂತ್ಯದಲ್ಲಿ ಇದ್ದಷ್ಟು ನಿರಾಶಾದಾಯಕ ವಾತಾವರಣ ಈಗಿಲ್ಲ. ಆದರೆ, ಮುಂಬರುವ ವಾರಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಹಾಗೂ ರಾಜಸ್ತಾನದಲ್ಲಿ ಬೀಳುವ ಮಳೆ ಪ್ರಮಾಣವನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕಿದೆ ಎಂದು ಪ್ರಕಟಣೆ ತಿಳಿಸಿದೆ.

ಜುಲೈ 15ರ ವೇಳೆಗೆ ದೇಶದ ಎಲ್ಲೆಡೆ ಮಳೆ ಬಿದ್ದರೂ ಸರಾಸರಿ ಮಳೆ ಪ್ರಮಾಣ ಶೇ 22ರಷ್ಟು ಕಡಿಮೆಯಾಗಿದೆ. ಕರ್ನಾಟಕ, ಪಂಜಾಬ್, ಹರಿಯಾಣ, ರಾಜಸ್ತಾನಗಳಲ್ಲಿ ಈವರೆಗೆ ಅತಿ ಕಡಿಮೆ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT