ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರ‌್ಯಾಗ ಹೋದದ್ದು, ಹಿಂಗಾರ‌್ಯಾಗರೇ ಬರ‌್ಲಿ

Last Updated 24 ಸೆಪ್ಟೆಂಬರ್ 2011, 8:05 IST
ಅಕ್ಷರ ಗಾತ್ರ

ಯಾದಗಿರಿ: ಮುಂಗಾರ‌್ಯಾಗ ಮಳಿ ಕೈಕೊಟ್ಟಿತು. ಬಿತ್ತಾಕ ಹೊಲ ಸಜ್ಜ ಮಾಡಿದ್ರು, ಬಿತ್ತದ್ಹಂಗ ಆಗಿ ಹೋತು. ಮಳೀನ ಇಲ್ದಕ್ಕ, ಬೆಳಿನ ಬರ‌್ಲಿಲ್ರಿ. ಅಷ್ಟಿಷ್ಟ ಹೆಸರ ಬಂದ್ರು, ಹಾಕಿದ ರೊಕ್ಕಕ ಸಮಾ ಆತು. ರೈತರು ದುಡದದ್ದ ಅಷ್ಟ ಬಂತ ನೋಡ್ರಿ. ಮುಂಗಾರ‌್ಯಾಗ ಹೋಗಿದ್ದು, ಹಿಂಗಾರ‌್ಯಾಗರೇ ಬರ‌್ಲಿ ಅನ್ನೋದ ನಮ್ಮ ಆಸೆ ನೋಡ್ರಿ”

ಜಿಲ್ಲೆಯ, ಅದರಲ್ಲೂ ಕಾಲುವೆ ನೀರಿನ ಸೌಲಭ್ಯವಿಲ್ಲದ ಪ್ರದೇಶದ ರೈತರ ಹೇಳುವ ಮಾತಿದೆ. ಮುಂಗಾರು ಹಂಗಾಮು ಮುಗಿದು ಹೋಗಿದ್ದು, ಹಿಂಗಾರು ಹಂಗಾಮಿನ ಬಿತ್ತನೆಗೆ ಸಿದ್ಧತೆಗಳು ಭರದಿಂದ ಆರಂಭವಾಗಿವೆ. ನಷ್ಟದ ಕರಿಛಾಯೆಯಲ್ಲೂ, ಹಿಂಗಾರು ಹಂಗಾಮು ಒಳ್ಳೆಯ ಫಸಲು ನೀಡಬಹುದೆಂಬ ನಿರೀಕ್ಷೆ ರೈತರಲ್ಲಿ ಉತ್ಸಾಹ ತುಂಬಿದೆ.

ಮುಂಗಾರು ಹಂಗಾಮಿನ ಆರಂಭದಲ್ಲಿಯೇ ಮಳೆ ಕೈಕೊಟ್ಟಿದ್ದರಿಂದ ಈ ಭಾಗದ ಪ್ರಮುಖ ಬೆಳೆಯಾದ ಹೆಸರು ಬಿತ್ತನೆ ಮಾಡಲು ಬಹುತೇಕ ರೈತರಿಗೆ ಸಾಧ್ಯವಾಗಲಿಲ್ಲ. ಬೋರವೆಲ್, ಕೆರೆಗಳಿಂದ ನೀರಾವರಿ ಸೌಲಭ್ಯ ಹೊಂದಿರುವ ಕೆಲವೇ ರೈತರು ಹೆಸರು ಬಿತ್ತನೆ ಮಾಡಿದ್ದು, ಒಳ್ಳೆಯ ಬೆಲೆಯನ್ನೂ ಪಡೆಯುವಂತಾಯಿತು. ಆದರೆ ಬಿತ್ತನೆ ಮಾಡಲಾಗದೇ ನಷ್ಟ ಅನುಭವಿಸಿದ ರೈತರ ಸಂಖ್ಯೆಯೇ ಹೆಚ್ಚಾಗಿದೆ.
ಇಂತಹ ಸಂದರ್ಭದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆಗೆ ಮತ್ತೊಮ್ಮೆ ಭೂಮಿಯನ್ನು ಸಿದ್ಧತೆ ಮಾಡಿಕೊಳ್ಳುವ ಕಾಲ ಬಂದಿದ್ದು, ರೈತರು ಸಾಲಸೋಲ ಮಾಡಿ, ಬಿತ್ತನೆ ಬೀಜಗಳನ್ನು ಖರೀದಿಸುತ್ತಿದ್ದಾರೆ. ಇದರ ಜೊತೆಗೆ ಭೂಮಿಯಲ್ಲಿ ನೇಗಿಲು ಹೊಡೆಯುವ ಕಾರ್ಯದಲ್ಲೂ ಮಗ್ನರಾಗಿದ್ದಾರೆ.

ಶಹಾಪುರ ತಾಲ್ಲೂಕಿನ ದೋರನಳ್ಳಿ, ನಾಯ್ಕಲ್, ಖಾನಾಪುರ, ತಡಿಬಿಡಿ, ಹುಂಡೇಕಲ್, ಹಯ್ಯಾಳ, ಐಕೂರು, ವಡಗೇರಾ, ಉಳ್ಳೆಸುಗೂರು, ಕುರಕುಂದಾ, ಚಟ್ನಳ್ಳಿ, ಇಬ್ರಾಹಿಂಪೂರ, ಗುಲಸರಂ ಮುಂತಾದ ಗ್ರಾಮಗಳ ರೈತರು ಬಿಡುವಿಲ್ಲದೇ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಬಹುತೇಕ ಹೊಲದ ಉಳುಮೆ ಪೂರ್ಣಗೊಂಡಿದ್ದು, ಮಳೆಯ ಆಗಮನಕ್ಕೆ ರೈತರು ಕಾಯುತ್ತಿದ್ದಾರೆ.

ಈ ಭಾಗದ ಪ್ರಮುಖ ಹಿಂಗಾರಿ ಬೆಳೆಯಾದ ಜೋಳದ ಬಿತ್ತನೆಗೆ ರೈತರು ಮುಂದಾಗಿದ್ದಾರೆ. ಇನ್ನೊಂದೆಡೆ ಶೇಂಗಾ ಬಿತ್ತನೆಯನ್ನೂ ಮಾಡಲು ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

“ಕಳದ ವರ್ಷ ಚಳಿ ಮತ್ತು ಇಬ್ಬನಿ ಹೆಚ್ಚ ಇದ್ದದ್ದಕ್ಕ ಒಳ್ಳೆ ಜೋಳ ಬಂತ ನೋಡ್ರಿ. ಈ ಸಲಾನೂ ಹಂಗ ಬೆಳಿ ಬರಬೇಕು ಅಂತ ಅನ್ನೋದ ರೈತರ ಆಸೆ. ಮುಂಗಾರ‌್ಯಾಗ ಏನೂ ಸಿಗದ್ಹಂಗ ಆತು. ಇನ್ನ ಹಿಂಗಾರ‌್ಯಾಗರೇ ಜ್ವಾಳ ಕೈ ಹಿಡದೀತು ಅಂತ ಕಾಯಕತ್ತೇವ ನೋಡ್ರಿ” ಎನ್ನುತ್ತಾರೆ ನಾಯ್ಕಲ್ ಗ್ರಾಮದ ರೈತ ಹಣಮಂತ ಮೂಲಿಮನಿ.

“ಮಳಿ ಬರ‌್ಲಿ ಅಂತ ಕಾಯಕತ್ತೇವ್ರಿ. ಒಂದು ಮಳಿ ಆತು ಅಂದ್ರ ಜ್ವಾಳ ಬಿತ್ತಿ ಬಿಡ್ತಿವಿ. ಆಮ್ಯಾಕ ಇಬ್ಬನಿ ಬಿದ್ಹಂಗ ಜ್ವಾಳ ಬೆಳಿತೈತಿ ಎಂದು ರೈತ ಮಲ್ಲಪ್ಪ ಹೇಳುವ ಮಾತು.

ಈ ಭಾಗದಲ್ಲಿ ಊಟಕ್ಕೆ ಅಗತ್ಯವಾದ ರೊಟ್ಟಿ ತಯಾರಿಸಲು ಜೋಳ ಬೇಕು. ಹೀಗಾಗಿ ಜೋಳಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾಗಿ ಜೋಳವನ್ನು ಬಿತ್ತನೆ ಮಾಡಲಾಗುತ್ತಿದೆ. ಕಳೆದ ವರ್ಷದಂತೆ ಈ ಸಾರಿಯೂ ಒಳ್ಳೆಯ ಫಸಲು ಬರಲಿ ಎಂಬ ನಿರೀಕ್ಷೆ ರೈತರದ್ದಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT