ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ ತಾಲ್ಲೂಕಿನಲ್ಲಿ ನಿಲ್ಲದ ಕಾಡಾನೆ ಹಾವಳಿ

Last Updated 12 ಅಕ್ಟೋಬರ್ 2012, 9:35 IST
ಅಕ್ಷರ ಗಾತ್ರ

ಮುಂಡಗೋಡ:  ತಾಲ್ಲೂಕಿನಾದ್ಯಂತ ಕಾಡಾನೆಗಳ ದಾಳಿ ಮುಂದುವರಿದಿದೆ. ಮಂಗಳವಾರ ರಾತ್ರಿ ತಾಲ್ಲೂಕಿನ ಚವಡಳ್ಳಿ ಸನಿಹ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು ಆ ಭಾಗದ ರೈತರಲ್ಲಿ ಆತಂಕ ಮನೆ ಮಾಡಿದೆ.

ಸುಮಾರು ಒಂದು ಡಜನ್‌ಗೂ ಹೆಚ್ಚು ಕಾಡಾನೆಗಳ ಹಿಂಡು ಎರಡು ಗುಂಪುಗಳಾಗಿ ಬೇರ್ಪಟ್ಟು ಹೊಲ, ಗದ್ದೆಗಳಿಗೆ ನುಗ್ಗುತ್ತಿವೆ. ಒಂದು ತಂಡ ಚವಡಳ್ಳಿ, ಬ್ಯಾನಳ್ಳಿ, ಮೈನಳ್ಳಿ, ಗುಂಜಾವತಿ ಭಾಗದಲ್ಲಿ ಮತ್ತೊಂದು ತಂಡ ಬೆಡಸಗಾಂವ, ಕೂರ್ಲಿ, ತೊಗ್ರಳ್ಳಿ ಭಾಗದಲ್ಲಿ ಸಂಚರಿಸುತ್ತಿರುವ ಬಗ್ಗೆ ರೈತರು ಮಾಹಿತಿ ನೀಡಿದ್ದಾರೆ.

`ಮಂಗಳವಾರ ರಾತ್ರಿ ತಾಲ್ಲೂಕಿನ ಚವಡಳ್ಳಿ ಸನಿಹದ ಅರಣ್ಯದಂಚಿನಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. 4-5 ಆನೆಗಳು ಸಂಜೆಯ ಸುಮಾರಿಗೆ ದಾಳಿ ಮಾಡಿ ಸುಮಾರು ಐದಾರು ಎಕರೆ ಬತ್ತದ ಗದ್ದೆಯನ್ನು ಹಾಳು ಮಾಡಿವೆ. ಗದ್ದೆಯ ಸಮೀದಲ್ಲಿದ್ದ ಮಾವಿನ ಗಿಡಗಳನ್ನೂ ಮುರಿದು ಹಾಕಿವೆ~ ಎಂದು ಸ್ಥಳೀಕ ಮಂಜುನಾಥ ಕಟಗಿ ತಿಳಿಸಿದ್ದಾರೆ.

ಕಾಡಾನೆಗಳ ದಾಳಿಯಿಂದ ಫಸಲು ಹಾಳಾಗುತ್ತದೆ ಎನ್ನುವ ದೃಷ್ಟಿಯಿಂದ ರೈತರು ಹಗಲು-ರಾತ್ರಿ ಹೊಲದಲ್ಲಿ ಬೀಡುಬಿಟ್ಟು ಕಾವಲು ಕಾಯುತ್ತಿದ್ದಾರೆ. ಪ್ರತಿವರ್ಷ ಕಾಡಾನೆಗಳು ದಾಳಿ ಮಾಡುವುದು ಮಾಮೂಲು. ಆದರೆ ಈ ಬಾರಿ ಬೆಳೆ ಕೊಯ್ಲಿಗೆ ಮುನ್ನವೇ ದಾಳಿ ಮಾಡುತ್ತಿರುವುದು ರೈತರ ಆತಂಕಕ್ಕೆ ಇಮ್ಮಡಿಯಾಗುವಂತೆ ಮಾಡಿದೆ.

ತಾಲ್ಲೂಕಿನ ಲಕ್ಕೊಳ್ಳಿ, ಮೈನಳ್ಳಿ ಹಾಗೂ ಕಲಕೇರಿ ಭಾಗದ ಅರಣ್ಯದಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು ಮತ್ತೆ ಬತ್ತದ ಗದ್ದೆಗಳಿಗೆ ಮರಳಿ ಬರುವ ಸಂಭವವಿದೆ ಎಂದು ರೈತರು ಆತಂಕಗೊಂಡಿದ್ದಾರೆ. ಹಗಲಿನಲ್ಲಿ ಕಾಡಿನಲ್ಲಿಯೇ ಬಿಡಾರ ಹೂಡುವ ಕಾಡಾನೆಗಳ ಹಿಂಡು ಸಂಜೆಯಾಗುತ್ತಿದ್ದಂತೆ ಅರಣ್ಯದ ಸಮೀಪವಿರುವ ಬತ್ತದ ಗದ್ದೆಗಳಿಗೆ ದಾಳಿ ಮಾಡಿ ಫಸಲು ತಿಂದು ಬೆಳಗಿನ ಜಾವ ಹಿಂತಿರುಗುತ್ತಿವೆ.

ಅರಣ್ಯ ಇಲಾಖೆಯವರು ರೈತರ ಜೊತೆಗೂಡಿ ಕಾಡಾನೆಗಳನ್ನು ಮರಳಿ ಅರಣ್ಯದತ್ತ ಓಡಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಆನೆಗಳು ಮಾತ್ರ ತಾಲ್ಲೂಕಿನ ಗಡಿ ದಾಟಿ ಮುಂದೆ ಹೋಗುತ್ತಿಲ್ಲ. ಮಳೆಯ ಅವಕೃಪೆಯ ನಡುವೆಯೂ ಅಲ್ಪಸ್ವಲ್ಪ ಬೆಳೆದ ಬೆಳೆಯನ್ನು ರಕ್ಷಿಸಲು ರೈತರು ಹಗಲು ರಾತ್ರಿ ಎನ್ನದೇ ಹೊಲ-ಗದ್ದೆಗಳನ್ನು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT